ಸಿದ್ದರಾಮೋತ್ಸವಕ್ಕೆ ಎದಿರೇಟು ಕೊಡಲು ಸಜ್ಜಾದ ಬಿಜೆಪಿ: ಸಂಪುಟ ವಿಸ್ತರಣೆ ಮೂಲಕ ಮತಬ್ಯಾಂಕ್ ಉಳಿಸಿಕೊಳ್ಳಲು ಯತ್ನ
ಸಿದ್ದರಾಮೋತ್ಸವ ಕಾರ್ಯಕ್ರಮದ ಬಗ್ಗೆ ಕಾಂಗ್ರೆಸ್ನಲ್ಲಿಯೇ ಆಕ್ಷೇಪಗಳಿದ್ದರೂ ಅದರ ಸಂಭಾವ್ಯ ರಾಜಕೀಯ ಪರಿಣಾಮಗಳನ್ನು ಬಿಜೆಪಿ ನಿರ್ಲಕ್ಷಿಸಿಲ್ಲ.
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ಸಂಭಾವ್ಯ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಕಾಂಗ್ರೆಸ್ ನಾಯಕರು ದಾವಣಗೆರೆಯಲ್ಲಿ ‘ಸಿದ್ದರಾಮೋತ್ಸವ’ ಕಾರ್ಯಕ್ರಮ ಆಯೋಜಿಸಿದ್ದಾರೆ. ಈ ಕಾರ್ಯಕ್ರಮದ ಮೂಲಕ ಸಿದ್ದರಾಮಯ್ಯ ಅವರನ್ನು ಭಾವಿ ಮುಖ್ಯಮಂತ್ರಿ ಎನ್ನುವಂತೆ ಬಿಂಬಿಸುವುದು, ಸಿದ್ದರಾಮಯ್ಯನವರು ಈ ಹಿಂದೆ ಮಾಡುತ್ತಿದ್ದ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ವರ್ಗಗಳ ಮತಗಳನ್ನು ಕ್ರೋಡೀಕರಿಸುವುದು ಕಾಂಗ್ರೆಸ್ನಲ್ಲಿರುವ ಒಂದು ವರ್ಗದ ಪ್ರಯತ್ನ. ಕಾಂಗ್ರೆಸ್ನಲ್ಲಿಯೇ ಈ ಯತ್ನಕ್ಕೆ ಆಕ್ಷೇಪಗಳಿದ್ದರೂ ಅದರ ಸಂಭಾವ್ಯ ರಾಜಕೀಯ ಪರಿಣಾಮಗಳನ್ನು ಬಿಜೆಪಿ ನಿರ್ಲಕ್ಷಿಸಿಲ್ಲ.
ಹಿಂದುಳಿದ ಮತ್ತು ದಲಿತ ವರ್ಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಸಹ ತನ್ನದೇ ಆದ ಮತಬ್ಯಾಂಕ್ ರೂಪಿಸಿಕೊಂಡಿದೆ. ಈ ಸಮುದಾಯಗಳ ಮತಬ್ಯಾಂಕ್ ಕೈಜಾರದಂತೆ ತಡೆಯಲು ಬಿಜೆಪಿ ಸಹ ಪ್ಲಾನ್ ಮಾಡಿದೆ. ಸಚಿವ ಸಂಪುಟ ವಿಸ್ತರಣೆ ಮೂಲಕ ಮತಗಳನ್ನು ಹಿಡಿದಿಡಲು ಯತ್ನಿಸುತ್ತಿದೆ. ಆಗಸ್ಟ್ 3ರಂದು ನಡೆಯಲಿರುವ ಸಿದ್ದರಾಮೋತ್ಸವ ದಿನದಂದೇ ಸಂಪುಟ ವಿಸ್ತರಣೆಗೆ ಬಿಜೆಪಿ ಚಿಂತನೆ ನಡೆಸಿದೆ.
ಕುರುಬ ಸಮಾಜದ ಪ್ರಮುಖ ನಾಯಕರಾಗಿರುವ ಈಶ್ವರಪ್ಪ ಅವರನ್ನು ಸಂಪುಟಕ್ಕೆ ಮರು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಸಮುದಾಯದ ಪರವಾಗಿ ಪಕ್ಷ ಇದೆ ಎನ್ನುವ ಸಂದೇಶ ನೀಡಲು ಬಿಜೆಪಿ ಮುಂದಾಗಿದೆ. ವರಿಷ್ಠರು ಅನುಮತಿ ನೀಡಿದರೆ ಆಗಸ್ಟ್ 3ರಂದೇ ಈಶ್ವರಪ್ಪ ಮತ್ತು ಅವರ ಜೊತೆಗೆ ರಮೇಶ್ ಜಾರಕಿಹೊಳಿ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಬೆಳಗಾವಿ ಜಿಲ್ಲೆಯ ಗುತ್ತಿಗೆದಾರ ಸಂತೋಷ್ ಅವರು ಈಶ್ವರಪ್ಪ ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿ, ಆತ್ಮಹತ್ಯೆ ಮಾಡಿಕೊಂಡಿದ್ದರು. ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸೆಕ್ಸ್ ಸಿಡಿ ಹಗರಣದಲ್ಲಿ ಸಿಲುಕಿದ ನಂತರ ರಮೇಶ್ ಜಾರಕಿಹೊಳಿ ಸಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅತ್ಯಾಚಾರ ಪ್ರಕರಣದ ತನಿಖೆ ನಡೆಸಿದ್ದ ವಿಶೇಷ ಕಾರ್ಯಪಡೆ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿತ್ತು. ಇದೀಗ ಇವರ ವಿರುದ್ಧ ₹ 819 ಕೋಟಿ ಹಗರಣದ ಮತ್ತೊಂದು ಆರೋಪವನ್ನು ಕಾಂಗ್ರೆಸ್ ಮಾಡಿದೆ.
Published On - 8:53 am, Sat, 23 July 22