ಚುನಾವಣೆಗೆ ರಣತಂತ್ರ ರೂಪಿಸುತ್ತಿರುವ ಬಿಜೆಪಿ: ಮೀಟಿಂಗ್ ಮೇಲೆ ಮೀಟಿಂಗ್, ಸಂತೋಷ್-ಬೊಮ್ಮಾಯಿ ಸುದೀರ್ಘ ಚರ್ಚೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 02, 2022 | 7:07 AM

ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಬೇಕು ಎಂದು ಬಿಜೆಪಿಯ ಕೇಂದ್ರ ನಾಯಕರು ನಿರ್ಧರಿಸಿದ್ದು, ಈಗಿನಿಂದಲೇ ಸಿದ್ಧತೆ ಚುರುಕುಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಚುನಾವಣೆಗೆ ರಣತಂತ್ರ ರೂಪಿಸುತ್ತಿರುವ ಬಿಜೆಪಿ: ಮೀಟಿಂಗ್ ಮೇಲೆ ಮೀಟಿಂಗ್, ಸಂತೋಷ್-ಬೊಮ್ಮಾಯಿ ಸುದೀರ್ಘ ಚರ್ಚೆ
ಬಿಜೆಪಿ ನಾಯಕರಾದ ಬಿ.ಎಲ್.ಸಂತೋಷ್ ಮತ್ತು ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಕರ್ನಾಟಕದ ವಿಧಾನಸಭೆಗೆ 2023ರಲ್ಲಿ ಚುನಾವಣೆ (Karnataka Assembly Elections 2023) ನಡೆಯಲಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ (BJP) ಅಧಿಕಾರದಲ್ಲಿರುವ ಏಕೈಕ ರಾಜ್ಯ ಕರ್ನಾಟಕ. ಇಲ್ಲಿ ಅಧಿಕಾರ ಉಳಿಸಿಕೊಳ್ಳಬೇಕು ಎಂದು ಬಿಜೆಪಿಯ ಕೇಂದ್ರ ನಾಯಕರು ನಿರ್ಧರಿಸಿದ್ದು, ಈಗಿನಿಂದಲೇ ಸಿದ್ಧತೆ ಚುರುಕುಗೊಳಿಸುವಂತೆ ಸೂಚನೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಯ ದಿಕ್ಸೂಚಿಯನ್ನಿಟ್ಟುಕೊಂಡು ಬಿಜೆಪಿಯ ಕರ್ನಾಟಕ ಘಟಕವು ಈಗಾಗಲೇ ರಣತಂತ್ರ ರೂಪಿಸುತ್ತಿದೆ. ಮಲ್ಲೇಶ್ವರದಲ್ಲಿರುವ ಬಿಜೆಪಿಯ ರಾಜ್ಯ ಕಚೇರಿಯಲ್ಲಿ ಕಮಲ ಪಾಳಯದ ಅತಿರಥ ಮಹಾರಥರ ದಂಡು ಸೇರಿಕೊಂಡು, ದೊಡ್ಡಮಟ್ಟದ ಗೇಮ್ ಪ್ಲಾನ್ ರೂಪಿಸಿತು. ಬಿಜೆಪಿ ನಾಯಕರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವೆಲ್ಲಾ ವಿಷಯ ಚರ್ಚಿಸಿದರು? ಅದರ ಸಂಭಾವ್ಯ ಪರಿಣಾಮಗಳೇನು ಎಂಬ ಬಗ್ಗೆ ಟಿವಿ9 ಪ್ರತಿನಿಧಿ ಶಿವರಾಜ್ ಕುಮಾರ್ ಅವರ ವಿಶ್ಲೇಷಣೆ ಇಲ್ಲಿದೆ.

ಕರ್ನಾಟಕ ರಾಜಕಾರಣದ ಬಗ್ಗೆ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಈ ಸಭೆಯಲ್ಲಿ ಬಿ.ಎಲ್.ಸಂತೋಷ್ ಸಹ ಪಾಲ್ಗೊಂಡಿದ್ದರು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಈ ಮಹತ್ವದ ಸಭೆಯಲ್ಲಿ ಮುಂದಿನ ಅವಧಿಗೂ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕುಟುಂಬ ರಾಜಕಾರಣಕ್ಕಿಂತ ವೈಯಕ್ತಿಕ ವರ್ಚಸ್ಸು, ಹೊಸ ಪ್ರತಿಭೆಗಳಿಗೆ, ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡುವ ಕುರಿತು ಬಿ.ಎಲ್.ಸಂತೋಷ್ ತಮ್ಮ ಆಲೋಚನೆಗಳನ್ನು ಪ್ರಸ್ತಾಪಿಸಿದರು. ಅಮಿತ್ ಶಾ ಅವರ ಬೆಂಗಳೂರು ಪ್ರವಾಸದ ಹಿನ್ನೆಲೆಯಲ್ಲಿ ಆಗಬೇಕಿರುವ ಸಿದ್ಧತೆಗಳ ಬಗ್ಗೆಯೂ ಚರ್ಚೆಗಳು ನಡೆದವು.

ಸಭೆ ಮುಕ್ತಾಯಗೊಂಡ ಬಳಿಕ ಮಾತನಾಡಿದ ಬಿಜೆಪಿ ಕೇಂದ್ರ ಘಟಕದ ನಾಯಕ ಮತ್ತು ಶಾಸಕ ಸಿ.ಟಿ.ರವಿ, ಪಕ್ಷ ಸೇರ್ಪಡೆ ಆಗುವವರ ಕುರಿತು ಹಾಗೂ ಪಕ್ಷ ಸಂಘಟನೆ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದರು. ಹಳೇ ಮೈಸೂರು, ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ಹಲವೆಡೆಗಳಿಂದ ಬಿಜೆಪಿಗೆ ಬರಲು ಸಿದ್ಧರಿರುವವರು ಇದ್ದಾರೆ ಎಂದು ರವಿ ಸಭೆಯಲ್ಲಿ ತಿಳಿಸಿದರು. ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಿಗೆ ಹೇಳಲು ಆಗದ ವಿಚಾರಗಳು ಸಾಕಷ್ಟು ಚರ್ಚೆಯಾಯಿತು.

ಬಿ.ಎಲ್.ಸಂತೋಷ್ ಅವರು ಬಿಜೆಪಿಯ ಪ್ರಯೋಗಶೀಲತೆ ಕುರಿತು ನೀಡಿದ ಹೇಳಿಕೆಗೆ ಸೀಮಿತ ಅರ್ಥ ಕಲ್ಪಿಸುವುದು ಬೇಡ ಎಂದ ರವಿ, ‘ಸಂತೋಷ್ ಅವರ ಹೇಳಿಕೆಯು ಇಡೀ ದೇಶಕ್ಕೆ ಸಂಬಂಧಿಸಿದ್ದು. ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ ಅವರಂಥವರು ಬೆಳಕಿಗೆ ಬಂದಿದ್ದು ಇಂಥ ಪ್ರಯೋಗಶೀಲತೆಯಿಂದಲೇ. ಪಕ್ಷದ ಸಿದ್ಧಾಂತಕ್ಕೆ ಬದ್ಧರಾದ ಕಾರ್ಯಕರ್ತರು ಯಾವ ಎತ್ತರಕ್ಕೆ ಬೇಕಾದರೂ ಹೋಗಬಹುದು. ಆದರೆ ಒಂದು ಕುಟುಂಬದ ಹಿನ್ನೆಲೆಯಿಂದ ಬಂದಿದ್ದೇವೆ ಎಂಬುದಷ್ಟೇ ಕಾರಣ ಆಗಲಾರದು ಎಂದು ಹೇಳಿದರು. ಸಿ.ಟಿ.ರವಿ ಅವರ ಈ ಹೇಳಿಕೆಯಲ್ಲಿ ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ನೀಡಿದ ಟಾಂಗ್ ಎಂದೇ ವಿಶ್ಲೇಷಿಸಲಾಗುತ್ತಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ನಡೆ ಹೇಗಿರಬಹುದು ಎಂಬ ಇಣುಕುನೋಟವನ್ನೂ ಸಭೆ ನೀಡಿರುವುದು ಸುಳ್ಳಲ್ಲ. ಬಿಜೆಪಿ ಜಯಗಳಿಸಲು ಏನೆಲ್ಲಾ ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆಸಿರುವ ಹಿರಿಯ ನಾಯಕರು ರಣತಂತ್ರ ರೂಪಿಸಲು ಮುಂದಾಗಿದ್ದಾರೆ. ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕುವುದು, ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡುವುದು ಬಿಜೆಪಿಯ ಆದ್ಯತೆಯಾಗಲಿದೆ. ಮುಂದಿನ ದಿನಗಳಲ್ಲಿ ಇದು ಏನೆಲ್ಲ ತಿರುವು ಪಡೆದುಕೊಳ್ಳುತ್ತದೆ ಎನ್ನುವ ಚರ್ಚೆ ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಆರಂಭವಾಗಿದೆ.

ವರದಿ: ಶಿವರಾಜ್ ಕುಮಾರ್, ಬೆಂಗಳೂರು

ಇದನ್ನೂ ಓದಿ: ನಾಯಕತ್ವ ಬದಲಾವಣೆಯೇ ಬಿಜೆಪಿಯ ಶಕ್ತಿ: ಬಿಎಲ್ ಸಂತೋಷ್

ಇದನ್ನೂ ಓದಿ: ಪ್ರಶಾಂತ್ ಕಿಶೋರ್​​ನ್ನು ಪಕ್ಷಕ್ಕೆ ಸೇರಿಲು ಕಾಂಗ್ರೆಸ್ ವಿಫಲ​​; ಮಾರಾಟಗಾರ ಎಷ್ಟೇ ಉತ್ತಮವಾಗಿರಲಿ ಉತ್ಪನ್ನ ಕೆಟ್ಟದಾಗಿದ್ದರೆ ಮಾರಾಟ ಮಾಡಲು ಸಾಧ್ಯವಿಲ್ಲ: ಬಿಜೆಪಿ ಲೇವಡಿ

Published On - 7:07 am, Mon, 2 May 22