ಕರ್ನಾಟಕ ಬಿಜೆಪಿ ಶಾಸಕಾಂಗ ಸಭೆ
ಬೆಂಗಳೂರು, (ಫೆಬ್ರವರಿ 12): ಇಂದಿನಿಂದ ಕರ್ನಾಟಕ ವಿಧಾನಮಂಡಲ ಅಧಿವೇಶನ (Karnataka Session) ಆರಂಭವಾಗಿದ್ದು, ಮೊದಲ ದಿನವೇ ವಿಪಕ್ಷ ಬಿಜೆಪಿ(BJP) ಸದಸ್ಯರು ಕೇಸರಿ ಶಾಲು ಹಾಕಿಕೊಂಡು ಜೈ ಶ್ರೀರಾಮ್.. ಜೈ ಶ್ರೀರಾಮ್ ಅನ್ನೋ ಘೋಷಣೆಗಳನ್ನು ಕೂಗಿ ರಾಮನ ಜಪ ಮಾಡಿದೆ. ಇನ್ನು ನಾಳೆಯಿಂದ (ಫೆಬ್ರವರಿ 13) ಅಧಿವೇಶನದಲ್ಲಿ ಯಾವೆಲ್ಲಾ ವಿಷಯಗಳನ್ನ ಪ್ರಸ್ತಾಪಿಸಿ ಸರ್ಕಾರವನ್ನು ಕಟ್ಟಿಹಾಕಬೇಕೆಂದು ಬಿಜೆಪಿ ಇಂದು ಶಾಸಕಾಂಗ ಸಭೆ (Karnataka BJP legislative party meeting) ನಡೆಸಿದ್ದು, ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಲೋಕಸಭೆ ಚುನಾವಣೆಯ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬೊಮ್ಮಾಯಿ. ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ್ ಸೇರಿದಂತೆ ಇನ್ನುಳಿದ ಶಾಸಕರು ಹಾಜರಿದ್ದರು. ಆದ್ರೆ, ಸಭೆಗೆ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಸ್.ಟಿ.ಸೋಮಶೇಖರ್, ಅರೆಬೈಲ್ ಶಿವರಾಮ್ ಹೆಬ್ಬಾರ್, ರಮೇಶ್ ಜಾರಕಿಹೊಳಿ ಗೈರಾಗಿದ್ದಾರೆ.
ಮುಂದೆ ಲೋಕಸಭಾ ಚುನಾವಣೆ ಇರುವುದರಿಂದ ಈ ಅಧಿವೇಶನವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲು ತೀರ್ಮಾನಿಸಿದ್ದು, ಸರ್ಕಾರದ ಲೋಷದೋಷಗಳನ್ನ ಸದನದಲ್ಲಿ ಚರ್ಚಿಸುವ ಮೂಲಕ ಜನರಿಗೆ ತಲುಪಿಸಲು ತೀರ್ಮಾನಿಸಿದೆ. ಇನ್ನು ಪಕ್ಷದಲ್ಲಿನ ಅಸಮಾಧಾನ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಚರ್ಚೆಗಳು ನಡೆದಿವೆ. ಅದರಲ್ಲೂ ಮುಖ್ಯವಾಗಿ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಆರೋಪಿಸಿರುವ ಕಮಿಷನ್ ದಂಧೆ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಹೋರಾಟ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿನ ನಿರ್ಧಾರಗಳು
- ಅಧಿವೇಶನದಲ್ಲಿ ಸಣ್ಣ ಪುಟ್ಟ ವಿಷಯಗಳಿಗೆ ಸದನದ ಬಾವಿಗೆ ಇಳಿಯುವುದು ಬೇಡ. ಸದನದಲ್ಲಿ ನಿರ್ಧಾರ ತೆಗೆದುಕೊಳ್ಳುವ ವೇಳೆ ವಿಪಕ್ಷ ನಾಯಕರು ಮತ್ತು ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿಯೇ ತೀರ್ಮಾನಿಸಬೇಕು.
- ಸಿಕ್ಕಾಪಟ್ಟೆ ವಿಷಯಗಳನ್ನು ಪ್ರಸ್ತಾಪ ಮಾಡಿ ಫಲಿತಾಂಶ ಇಲ್ಲದಂತೆ ಹೋಗುವ ಬದಲಾಗಿ ಫಲಿತಾಂಶ ಸಿಗುವ ನಿರ್ದಿಷ್ಟ ವಿಷಯಗಳನ್ನು ಮಾತ್ರ ಪ್ರಸ್ತಾಪಿಸಿ ಹೋರಾಟ ನಡೆಸಬೇಕು.
- ಲೋಕಸಭಾ ಚುನಾವಣೆ ಸಮೀಪವಿರುವ ಕಾರಣ ಈ ಅಧಿವೇಶನವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.
- ಶಾಸಕರು ಸುಮ್ಮನೆ ಮೊಗಸಾಲೆಯಲ್ಲೇ ಕುಳಿತುಕೊಳ್ಳಬಾರದು. ಸೂಕ್ಷ್ಮ ವಿಷಯಗಳ ಚರ್ಚೆಯ ವೇಳೆ ಮೊಗಸಾಲೆಯಲ್ಲಿ ಕೂರದೇ ಸದನದಲ್ಲಿ ಪಾಲ್ಗೊಳ್ಳಬೇಕು.
- ಬೆಂಗಳೂರು ಸೇರಿದಂತೆ ರಾಜ್ಯದ ಬಿಜೆಪಿ ಶಾಸಕರಿಗೆ ಅನುದಾನ ಬಿಡುಗಡೆ ಸಂಬಂಧ ಸಿಎಂ ಬಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಿಯೋಗ ತೆರಳಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
- ಲೋಕಸಭಾ ಚುನಾವಣೆ ಇರುವ ಕಾರಣ ಪಕ್ಷದಲ್ಲಿನ ಅಸಮಾಧಾನದ ಬಗ್ಗೆ ಬಹಿರಂಗ ಚರ್ಚೆಗೆ ಬ್ರೇಕ್ ಹಾಕಬೇಕು. ಚುನಾವಣೆ ಮುಗಿಯುವವರೆಗೂ ಅಸಮಾಧಾನಗಳನ್ನು ಪಕ್ಷದ ವೇದಿಕೆಯಲ್ಲೇ ಇಟ್ಟುಕೊಳ್ಳಬೇಕು.
- ಗುತ್ತಿಗೆದಾರರ ಸಂಘದ ಕಮಿಷನ್ ಆರೋಪವನ್ನು ಸಮರ್ಥವಾಗಿ ಸದನದಲ್ಲಿ ಪ್ರಸ್ತಾಪ ಮಾಡಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ತೀರ್ಮಾನ.
- ಕೇಂದ್ರ ಸರ್ಕಾರದ ವಿರುದ್ಧದ ರಾಜ್ಯ ಸರ್ಕಾರದ ಅನುದಾನ ಆರೋಪಕ್ಕೆ ಸದನದಲ್ಲಿ ತಿರುಗೇಟು ನೀಡಲು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಯಾಗಿದ್ದು, ಕೇಂದ್ರದಿಂದ ಬಿಡುಗಡೆಯಾಗಿರುವ ಅನುದಾನ ಮತ್ತು ರಾಜ್ಯ ಸರ್ಕಾರ ಕೊಟ್ಟಿರುವ ಅನುದಾನದ ಬಗ್ಗೆ ದಾಖಲೆಗಳೊಂದಿಗೆ ಸದನದಲ್ಲಿ ಚರ್ಚೆಗೆ ತೀರ್ಮಾನ.
- ಸದನದಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಸಹಕಾರ ಕೊಟ್ಟು ಮಾತನಾಡಬೇಕು. ಮಾಜಿ ಸಚಿವ ಗಂಡಸಿ ಶಿವರಾಂ ಸರ್ಕಾರದ ವಿರುದ್ಧ ಮಾಡಿರುವ ಕಮಿಷನ್ ಆರೋಪವನ್ನು ಸದನದಲ್ಲಿ ಟಾರ್ಗೆಟ್ ಮಾಡಬೇಕು.
- ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್ ಸಿ, ಎಸ್ಟಿ ಸಮುದಾಯಕ್ಕೆ 75 ಯುನಿಟ್ ಕರೆಂಟ್ ಕೊಟ್ಟಿದ್ದನ್ನು ಮುನ್ನೆಲೆಗೆ ತರಬೇಕು.
- ಭಾಗ್ಯ ಯೋಜನೆಗಳಿಗೆ ಎಸ್ ಸಿಪಿ ಟಿಎಸ್ ಪಿ ಹಣ ವರ್ಗಾವಣೆ ಮಾಡಿರುವುದನ್ನು ಟಾರ್ಗೆಟ್ ಮಾಡಬೇಕು.
- ನಮಗೆ ಕೂಡಾ ಮಾತನಾಡಬೇಕು ಅಂತಾ ಅನ್ನಿಸುತ್ತದೆ. ಆದರೆ ಚುನಾವಣಾ ಸಮಯದಲ್ಲಿ ಮಾತನಾಡುವುದು ಪಕ್ಷಕ್ಕೆ ಸಮಸ್ಯೆಯಾಗುತ್ತದೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ಬಹಿರಂಗ ಹೇಳಿಕೆಗಳಿಗೆ ಬ್ರೇಕ್ ಹಾಕಲೇಬೇಕು ಎಂದು ಶಾಸಕರು ತಮ್ಮ ನಾಯಕರಿಗೆ ಒತ್ತಾಯಿಸಿದ್ದಾರೆ.