Karnataka Budget: ಏನಿಲ್ಲಾ ಏನಿಲ್ಲ ಸಿದ್ದರಾಮಯ್ಯ ಬಜೆಟ್‌ನಲ್ಲಿ ಏನಿಲ್ಲ: ವಿಧಾನಸೌಧದ ಮುಂದೆ ಬಿಜೆಪಿ ಪ್ರತಿಭಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 15ನೇ ಬಜೆಟ್ ಮಂಡನೆಯ ಆರಂಭದಲ್ಲೇ ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು. ತೆರಿಗೆ ಹಂಚಿಕೆಯಲ್ಲಿ ರಾಜ್ಯ ಸರ್ಕಾರಕ್ಕೆ ಅನ್ಯಾಯವಾಗಿದೆ ಎಂದು ಪನರುಚ್ಚರಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸುಳ್ಳು ಹೇಳಬೇಡಿ ಎಂದು ತರಾಟೆಗೆ ತೆಗೆದುಕೊಂಡರು. ಇದೀಗ ವಿಧಾನಸೌಧದ ಮುಂಭಾಗದಲ್ಲಿರುವ ಕೆಂಗಲ್ ಪ್ರತಿಮೆ ಬಳಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಪ್ರತಿಭಟನೆ ನಡೆಸುತ್ತಿದ್ದು, ಏನಿಲ್ಲಾ, ಏನಿಲ್ಲಾ ಸಿದ್ದರಾಮಯ್ಯ ಬಜೆಟ್‌ನಲ್ಲಿ ಏನಿಲ್ಲ ಎಂದು ಹಾಡು ಹೇಳಿ ಆಕ್ರೋಶ ಹೊರಹಾಕುತ್ತಿದೆ.
ಬೆಂಗಳೂರು, ಫೆ.16: ಏನಿಲ್ಲಾ.. ಏನಿಲ್ಲಾ… ಸಿದ್ದರಾಮಯ್ಯ ಬಜೆಟ್‌ನಲ್ಲಿ ಏನಿಲ್ಲ.., ಓಳು ಬರಿ ಓಳು ಅಂತ ಹಾಡು ಹೇಳುವ ಮೂಲಕ ವಿಧಾನಸೌಧದ ಮುಂಭಾಗದಲ್ಲಿರುವ ಕೆಂಗಲ್ ಪ್ರತಿಮೆ ಬಳಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೂ ಮುನ್ನ, ಸಿದ್ದರಾಮಯ್ಯ (Siddaramaiaih) ಅವರು ದಾಖಲೆಯ 15ನೇ ಬಜೆಟ್ ಮಂಡನೆಯ ಆರಂಭದಲ್ಲೇ ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ವೇಳೆ ಸದನದ ಒಳಗೆ ಬಿಜೆಪಿ (BJP Protest) ಸದಸ್ಯರು ಪ್ರತಿಭಟಿಸಿದ್ದದರು.
ವಿಧಾನಸಭೆ ಪ್ರವೇಶದ್ವಾರದಲ್ಲಿ ವಿಪಕ್ಷ ಬಿಜೆಪಿ ಜೆಡಿಎಸ್ ಪ್ರತಿಭಟನೆ ನಡೆಸುತ್ತಿದ್ದು, ಏನಿಲ್ಲಾ ಏನಿಲ್ಲಾ ಸಿದ್ದರಾಮಯ್ಯ ಬಜೆಟ್‌ನಲ್ಲಿ ಏನಿಲ್ಲ, ಓಳು ಓಳು ಬಜೆಟ್ ಬರೀ ಓಳು ಎಂದು ಘೋಷಣೆಗಳನ್ನು ಕೂಗಲಾಗುತ್ತಿದೆ. ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಭಾಗಿಯಾಗಿದ್ದಾರೆ.
ಏನಿಲ್ಲಾ ಏನಿಲ್ಲಾ ಬಜೆಟ್‌ನಲ್ಲಿ ಏನಿಲ್ಲ ಅಂತ ವ್ಯಂಗ್ಯವಾಡಿದ ಅಶೋಕ್, ಬಡವರಿಗೆ ಯುವಕರಿಗೆ ಮಹಿಳೆಯರಿಗೆ ಯಾವುದೇ ರೀತಿಯಾದ ಪ್ರಯೋಜನವಿಲ್ಲ. ಬಜೆಟ್‌ನಲ್ಲಿ ಏನಿಲ್ಲ ಅಂತ ಟೀಕಿಸಿದರು. ಬೆಂಗಳೂರಿಗೆ ಏನಿಲ್ಲ, ಬಡವರಿಗೆ ಏನಿಲ್ಲ, ಮಾಧ್ಯಮ ವರ್ಗದವರಿಗೆ ಏನಿಲ್ಲ, ಯುವಕರಿಗೆ ಏನಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಇದೊಂದು ದ್ವೇಷದ ಬಜೆಟ್. ಡಿಕೆ ಶಿವಕುಮಾರ್ ಮೇಲೆ ಇರುವ ದ್ವೇಷವನ್ನು ಸಿದ್ದರಾಮಯ್ಯ ಬಜೆಟ್‌ನಲ್ಲಿ ತೋರಿಸಿದ್ದಾರೆ. ಡಿಕೆ ಶಿವಕುಮಾರ್ ಮೇಲಿನ ದ್ವೆಷದಿಂದ ನೀರಾವರಿ ಮತ್ತೆ ಬೆಂಗಳೂರಿಗೆ ಯಾವುದೇ ಅನುದಾನ ಕೊಟ್ಟಿಲ್ಲ. ಇದೊಂದು ಸುಳ್ಳಿನ ಬಜೆಟ್ ಎಂದರು.
2019 ರಲ್ಲಿ ಹಣಕಾಸು ಆಯೋಗ ಬಂದಾಗ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ. ಆಗ ನಾನು ಸಿಎಂ ಆಗಿದ್ದೆ ಎಂದ ಪಕ್ಕದಲ್ಲಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದಾಗ ತಕ್ಷಣ ಸರಿಪಡಿಸಿಕೊಂಡ ಅಶೋಕ್, ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಎಂದರು.
ಸಿದ್ದರಾಮಯ್ಯ ಬಜೆಟ್ ವಿನಾಶ ಕಾಲ: ಕುಮಾರಸ್ವಾಮಿ
ವಿಧಾನಸೌಧದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಷಣ ಮಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ದೇಶದಲ್ಲಿ ಅಮೃತ ಕಾಲದ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಸಿದ್ದರಾಮಯ್ಯ ಬಜೆಟ್ ನೋಡಿದರೆ ಅಮೃತ ಅಲ್ಲ, ವಿಷ, ವಿನಾಶ ಕಾಲ ಅನ್ನೋದು ತಿಳಿಯುತ್ತಿದೆ. ಸಿದ್ದರಾಮಯ್ಯ ಬಜೆಟ್ ವಿನಾಶ ಕಾಲವಾಗಿದೆ. ಹಲವಾರು ಸುಳ್ಳುಗಳನ್ನು ರಾಜ್ಯಪಾಲರಿಂದ ಹೇಳಿಸಿದ್ದಾರೆ. ಬಜೆಟ್ ಕೂಡ ಸುಳ್ಳಿನಿಂದ ಕೂಡಿದೆ ಎಂದರು.
ಇದನ್ನೂ ಓದಿ: Karnataka Budget 2024: ವೃದ್ಧರಿಗೆ ಅನ್ನ ಸುವಿಧಾ ಘೋಷಿಸಿದ ಸಿದ್ದರಾಮಯ್ಯ: ಮನೆ ಬಾಗಿಲಿಗೆ ಬರಲಿದೆ ಆಹಾರ ಧಾನ್ಯ
ನಿನ್ನೆ ಪರಿಷತ್ತಿನಲ್ಲಿ ಸಿದ್ದರಾಮಯ್ಯ ಅವರು ನಾನು ಹೇಳುವುದೆಲ್ಲಾ ಸತ್ಯ ಅಂದಿದ್ದಾರೆ. ನೂರು ಬಾರಿ ಸುಳ್ಳು ಹೇಳಿ, ಸತ್ಯ ಮಾಡುತ್ತೇವೆ ಅಂತಾರೆ, ಹಾಗೆಯೇ ಮಾಡಿದ್ದಾರೆ. ಪ್ರತಿ ವಿಷಯದಲ್ಲೂ ನೀರಾವರಿ ವಿಚಾರದಲ್ಲಿ ಕೇಂದ್ರದ ಮುಂದೆ ಹೋಗುತ್ತೇವೆ ಅಂತಾರೆ. ಅಭಿವೃದ್ಧಿ ವಿಚಾರಕ್ಕೂ ಕೇಂದ್ರದ ಮುಂದೆ ಹೋಗುತ್ತೇವೆ ಅಂತಾರೆ. ಕಳೆದ ಮೂರು ವರ್ಷದ ಬಿಜೆಪಿ ಆಡಳಿತದಲ್ಲಿ ಯಾವ ಯೋಜನೆ ಹಾಕಿದ್ದರೋ ಅದೇ ಯೋಜನೆಯನ್ನೇ ಉಲ್ಲೇಖ ಮಾಡಿದ್ದಾರೆ. ಇವರ ಯಾವುದೇ ಹೊಸ ವಿಚಾರ, ಅಭಿವೃದ್ಧಿ ಯಾವುದೂ ಇಲ್ಲ ಎಂದರು.
ಹಿಂದಿನ ಸರ್ಕಾರದ ಕಾರ್ಯಕ್ರಮ ಹೇಳಿಕೊಂಡಿದ್ದಾರೆ ವಿನ, ಯಾವುದೇ ಹೊಸ ವಿಚಾರ ಇಲ್ಲ. ತೆಲಂಗಾಣ, ಅಂಧ್ರಪ್ರದೇಶ ಜೊತೆ ಸಮಾಲೋಚನೆ ಮಾಡುತ್ತೇವೆ ಅಂದರು, ಯಾವ ಚರ್ಚೆಯೂ ಆಗಲಿಲ್ಲ. ಮೇಕೇದಾಟಿಗೆ ಪಾದಯಾತ್ರೆ ಮಾಡಿದ್ದೇ ಮಾಡಿದ್ದು ಅಧಿಕಾರಕ್ಕೆ ಬಂದರೂ ಏನೂ ಮಾಡಲಿಲ್ಲ. ತಪ್ಪು ಮಾಡಿರೋದು ಇವರು. 15 ನೇವೇತನ ಆಯೋಗಕ್ಕೆ 3 ಸಾವಿರ ಕೋಟಿ ಅನುದಾನ ಇಟ್ಟಿದ್ದರು, ಕೊಡಲಿಲ್ಲ ಅಂತ ದೂರಿದ್ದಾರೆ. ಕೇಂದ್ರ ಹಣ ಕೊಡಲಿಲ್ಲ ಅಂತಾರೆ, ನಿಮ್ಮ ಕಾರ್ಯಕ್ರಮ ಏನು? ಪತ್ರಿಕೆ ತೆಗೆದರೆ ಐದು ಗ್ಯಾರಂಟಿ ಇವರ ಮುಖ ಇರಲೇಬೇಕು. ವಿನಾಶ ಕಾಲ ಏನಿದೆಯೋ ಅದು ಈ ಬಜೆಟ್‌ನಲ್ಲಿ ಇದೆ. 14 ಬಜೆಟ್ ಕೊಟ್ಟಿರುವ ಸಿದ್ದರಾಮಯ್ಯ, 15 ಬಜೆಟ್‌ನಲ್ಲಿ ಏನೂ ಇಲ್ಲ. ಇದನ್ನ ನೋಡಿದರೆ ಸಿದ್ದರಾಮಯ್ಯ ಅವರ ಬಜೆಟ್ ಅಲ್ಲ, ಬೇರೆಯವರ ಬಜೆಟ್ ಅನ್ನೋದು ಸ್ಪಷ್ಟವಾಗಿದೆ ಎಂದರು.
ಬಡವರ ಪರ ಇಲ್ಲ, ರೈತರ ಪರ ಇಲ್ಲದ ಬಜೆಟ್
ವಿಧಾನಸೌಧದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬಜೆಟ್ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಂಪೂರ್ಣ ವಿಫಲ ಆಗಿದೆ. ಎಲ್ಲಾ ಇಲಾಖೆಗಳಿಗೆ ಮೂಲಭೂತ ಸೌಕರ್ಯಗಳ ನೀಡಿಲ್ಲ. ಬಡವರ ಪರ ಇಲ್ಲ, ರೈತರ ಪರ ಇಲ್ಲದ ಬಜೆಟ್ ಅಂತ ಪ್ರೂವ್ ಮಾಡಿದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:41 pm, Fri, 16 February 24