ಕರ್ನಾಟಕ ಉಪಚುನಾವಣೆ: ಬಾಗಲಕೋಟೆ, ದಾವಣಗೆರೆ ದಕ್ಷಿಣಕ್ಕೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ, ಯಾರು ಗೊತ್ತಾ?

ಕರ್ನಾಟಕದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಏಪ್ರಿಲ್ 9ರಂದು ನಡೆಯುವ ಈ ಚುನಾವಣೆಗೆ ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ್ (ಲಿಂಗಾಯತ) ಹಾಗೂ ದಾವಣಗೆರೆ ದಕ್ಷಿಣಕ್ಕೆ ಶ್ರೀನಿವಾಸ್ ಟಿ. ದಾಸಕರಿಯಪ್ಪ (ವಾಲ್ಮೀಕಿ/ಎಸ್.ಟಿ) ಅವರನ್ನು ಕಣಕ್ಕಿಳಿಸಿದೆ. ಸಾಮಾಜಿಕ ಸಮತೋಲನ ಮತ್ತು ಮತದಾರರ ಮನವೊಲಿಸುವ ತಂತ್ರ ಇದರ ಹಿಂದಿದೆ. ಕಾಂಗ್ರೆಸ್​ಗೆ ಇನ್ನೂ ಅಭ್ಯರ್ಥಿ ಆಯ್ಕೆ ತಲೆನೋವಾಗಿದೆ.

ಕರ್ನಾಟಕ ಉಪಚುನಾವಣೆ: ಬಾಗಲಕೋಟೆ, ದಾವಣಗೆರೆ ದಕ್ಷಿಣಕ್ಕೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ, ಯಾರು ಗೊತ್ತಾ?
ಸಾಂದರ್ಭಿಕ ಚಿತ್ರ
Edited By:

Updated on: Mar 19, 2026 | 10:31 AM

ಬೆಂಗಳೂರು, ಮಾ.19: ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿರುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 9ರಂದು ನಡೆಯಲಿರುವ ಈ ಚುನಾವಣೆಗೆ ಬಿಜೆಪಿ ಹಳೆಯ ಹುಲಿ ಮತ್ತು ಹೊಸ ಮುಖಕ್ಕೆ ಅವಕಾಶ ನೀಡಿದೆ. ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿದೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ವೀರಣ್ಣ ಚರಂತಿಮಠ್ ಅವರಿಗೆ ಬಿಜೆಪಿ ಮತ್ತೆ ಮಣೆ ಹಾಕಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತಗಳ ಪ್ರಾಬಲ್ಯ ಹೆಚ್ಚಿರುವುದರಿಂದ ಬಿಜೆಪಿ ಈ ನಿರ್ಧಾರ ತೆಗೆದುಕೊಂಡಿದೆ. ಬಾಗಲಕೋಟೆಯಲ್ಲಿ ಮಾಜಿ ಶಾಸಕ ಎಚ್.ವೈ. ಮೇಟಿ ಅವರ ನಿಧನ ನಂತರ ಉಪಚುನಾವಣೆ ಘೋಷಣೆಯಾದ ನಂತರ ಕಾಂಗ್ರೆಸ್​​​​ನಲ್ಲಿ ಭಾರೀ ಗದ್ದಲ ಉಂಟಾಗಿದೆ. ಇದರ ನಡುವೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡುವ ಮೂಲಕ ರಾಜಕೀಯ ನೇರ ಪೈಪೋಟಿಗೆ ವೇದಿಕೆ ಸಿದ್ಧ ಮಾಡಿದೆ.

ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರ ಅಭ್ಯರ್ಥಿಯಾಗು ಬಿಜೆಪಿ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರಿಗೆ ಟಿಕೆಟ್​ ನೀಡಿದೆ. ಇಲ್ಲಿ ಬಿಜೆಪಿ ‘ವಾಲ್ಮೀಕಿ’ (ST) ಸಮುದಾಯಕ್ಕೆ ಆದ್ಯತೆ ನೀಡಿದೆ. ಎಸ್.ಟಿ ಮತಗಳನ್ನು ಸೆಳೆಯುವ ಉದ್ದೇಶದಿಂದ ಶ್ರೀನಿವಾಸ್ ದಾಸಕರಿಯಪ್ಪ ಅವರನ್ನು ಕಣಕ್ಕಿಳಿಸಲಾಗಿದ್ದು, ಕ್ಷೇತ್ರದಲ್ಲಿ ಸಾಮಾಜಿಕ ಸಮತೋಲನ ಕಾಪಾಡಲು ಬಿಜೆಪಿ ಪ್ರಯತ್ನಿಸಿದೆ ಎಂದು ಹೇಳಲಾಗಿದೆ. ಇಲ್ಲಿಯೂ ಕೂಡ ಈ ಹಿಂದೆ ಕಾಂಗ್ರೆಸ್​​​ ಪ್ರಬಲ್ಯ ಇತ್ತು. ಕಾಂಗ್ರೆಸ್​​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನವಾದ ನಂತರ ಇಲ್ಲಿಯೂ ಕೂಡ ಕಾಂಗ್ರೆಸ್​​​ಗೆ ಇಲ್ಲಿ ಅಭ್ಯರ್ಥಿ ಆಯ್ಕೆ ತಲೆನೋವಾಗಿದೆ. ಬಿಜೆಪಿ ನಾಯಕರು ಇಂದಿನಿಂದಲ್ಲೇ ಚುನಾವಣಾ ಪ್ರಚಾರವನ್ನು ಆರಂಭಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಜನತೆಗೆ ಕನ್ನಡದಲ್ಲೇ ಶುಭ ಕೋರಿದ ಪ್ರಧಾನಿ ಮೋದಿ; ಹೊಸ ವರ್ಷಕ್ಕೆ ನಮೋ ಹಾರೈಕೆ!

ದಾವಣಗೆರೆ ಕಾಂಗ್ರೆಸ್ ತೆಕ್ಕೆಯಲ್ಲಿ ಇತ್ತು. ಈ ಕಾರಣಕ್ಕೆ ಕಾಂಗ್ರೆಸ್​​ ಮತ್ತು ಬಿಜೆಪಿ ನಡುವೆ ಭಾರೀ ಜಿದ್ದಾಜಿದ್ದಿ ನಡೆಯಲಿದೆ. ಇಲ್ಲಿ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರಿಗೆ ಟಿಕೆಟ್​​ ನೀಡುವ ಮೂಲಕ ಬಿಜೆಪಿ ಹೊಸ ಪ್ರಯೋಗವೊಂದನ್ನು ಮಾಡಲು ಮುಂದಾಗಿದೆ. ತ್ರದಲ್ಲಿ ಎಸ್‌ಟಿ ಮತಗಳು ನಿರ್ಣಾಯಕವಾಗಿರುವುದರಿಂದ ಬಿಜೆಪಿ ಈ ತಂತ್ರ ಹೂಡಿದೆ ಎಂದು ಹೇಳಲಾಗಿದೆ. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದ ತಂಡ ಅಜಯಕುಮಾರ್ ಅವರಿಗೆ ಟಿಕೆಟ್ ಕೊಡಿಸಲು ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಠಿಕಾಣಿ ಹೂಡಿತ್ತು. ಆದರೆ, ಹೈಕಮಾಂಡ್ ರೇಣುಕಾಚಾರ್ಯ ಅವರ ಪ್ರಸ್ತಾವನೆಯನ್ನು ತಿರಸ್ಕರಿಸುವ ಮೂಲಕ ಅವರಿಗೆ ಭಾರಿ ಹಿನ್ನಡೆ ನೀಡಿದೆ.ಶ್ರೀನಿವಾಸ್ ದಾಸ ಕರಿಯಪ್ಪ ಅವರು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ದಾಸ ಕರಿಯಪ್ಪಗೆ ಟಿಕೆಟ್ ಸಿಕ್ಕಿರುವುದು ಸಿದ್ದೇಶ್ವರ ಬಣದ ಕೈ ಮೇಲಾದಂತಾಗಿದೆ. ದಾಸ ಕರಿಯಪ್ಪ ಪ್ರಸ್ತುತ ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದಾವಣಗೆರೆ ಕಾಂಗ್ರೆಸ್​​​ನಲ್ಲಿ ಗೊಂದಲ:

ಕಾಂಗ್ರೆಸ್​​​ನ ಅಭ್ಯರ್ಥಿ ಆಯ್ಕೆಯಲ್ಲಿ ಮುಸುಕಿನ ಗುದ್ದಾಟಗಳು ನಡೆಯುತ್ತಿವೆ. ಸಚಿವರಾದ ಜಮೀರ್ ಅಹಮ್ಮದ್ ಖಾನ್, ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರೆ ಇನ್ನೊಂದೆಡೆ ಎಸ್​​ಎಸ್​ ಮಲ್ಲಿಕಾರ್ಜುನ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಸಮಿತಿ ಸಹ ಎರಡು ಕಡೆಯವರನ್ನು ಕೂರಿಸಿ ಸಭೆ ಮಾಡಿದೆ. ಶಾಮನೂರು ಶಿವಶಂಕರಪ್ಪ ನಿಧನ ನಂತರ ಈ ಕ್ಷೇತ್ರದಲ್ಲಿ ತಮ್ಮದೇ ಬಲ ಸಾಧಿಸಬೇಕು ಎಂಬ ಹಂಬಲ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರದ್ದು, ಅದಕ್ಕಾಗಿ ತನ್ನ ಮಗನಿಗೆ ಟಿಕೆಟ್​​ ನೀಡಬೇಕು ಎಂದು ಹಠ ಹಿಡಿದಿದ್ದಾರೆ.

ಬಾಗಲಕೋಟೆಯಲ್ಲಿ ಅಭ್ಯರ್ಥಿ ಗೊಂದಲ:

ಬಾಗಲಕೋಟೆಯಲ್ಲಿ ಮಾಜಿ ಶಾಸಕ ಎಚ್.ವೈ. ಮೇಟಿ ಅವರ ನಿಧನದ ನಂತರ ತಮ್ಮ ಕುಟುಂಬದಲ್ಲೇ ಗೊಂದಲಗಳು ಶುರುವಾಗಿದೆ. ಮೇಟಿಯವರ ಹಿರಿಯ ಪುತ್ರ ಮಲ್ಲಿಕಾರ್ಜುನ, ಕಿರಿಯ ಪುತ್ರ ಉಮೇಶ, ಪುತ್ರಿಯರಾದ ಬಾಯಕ್ಕ, ಮಹಾದೇವಿ ಅವರು ನಮ್ಮ ಕುಟುಂಬಕ್ಕೆ ಟಿಕೆಟ್​​ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದರ ನಡುವೆ ಇಲ್ಲಿಯೂ ಕೂಡ ಜಾತಿ ಲೆಕ್ಕಚಾರಗಳು ಕೂಡ ನಡೆದಿದೆ. ಇದೀಗ ಈ ವಿಚಾರ ಕಾಂಗ್ರೆಸ್​​​ಗೆ ಭಾರೀ ತಲೆನೋವಾಗಿದೆ.

ನಾಯನೇಗಲಿ ಚೆಕ್​ಪೋಸ್ಟ್​ನಲ್ಲಿ 15.50 ಲಕ್ಷ ರೂ. ಜಪ್ತಿ:

ಜಿಲ್ಲೆಯಲ್ಲಿ ಉಪಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 15.50 ಲಕ್ಷ ರೂಪಾಯಿ ನಗದನ್ನು ನಾಯನೇಗಲಿ ಚೆಕ್​ಪೋಸ್ಟ್​ನಲ್ಲಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸ್ವಿಫ್ಟ್ ಕಾರಿನಲ್ಲಿ ಹಣ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ನಾಯನೇಗಲಿ ಚೆಕ್​ಪೋಸ್ಟ್​ನಲ್ಲಿ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಕಾರನ್ನು ತಡೆದು ತಪಾಸಣೆ ನಡೆಸಿದಾಗ ದೊಡ್ಡ ಮೊತ್ತದ ಹಣ ಪತ್ತೆಯಾಗಿದೆ.ಕಾರಿನಲ್ಲಿದ್ದ ವಿಜಯ್ ಮೇಲಗಡೆ ಮತ್ತು ಕುಮಾರ್ ಹಿರೇಮಠ ಎಂಬುವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಪೂರಕ ದಾಖಲೆಗಳನ್ನು ನೀಡದ ಕಾರಣ ಹಣವನ್ನು ಜಪ್ತಿ ಮಾಡಲಾಗಿದೆ.ಏಪ್ರಿಲ್ 9ರಂದು ಬಾಗಲಕೋಟೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಮತದಾರರಿಗೆ ಹಂಚಲು ಈ ಹಣವನ್ನು ಸಾಗಿಸಲಾಗುತ್ತಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

Published On - 10:09 am, Thu, 19 March 26

Follow Us