ದೆಹಲಿ: ಕರ್ನಾಟಕ ಸರ್ಕಾರದ ನೂತನ ಸಚಿವ ಸಂಪುಟಕ್ಕೆ (Cabinet) ಇಂದು ಅಂತಿಮ ರೂಪ ಸಿಗಲಿದೆ. ಯಾರು ಯಾರು ಸಚಿವ ಸ್ಥಾನವನ್ನು ಅಲಂಕರಿಸಲಿದ್ದಾರೆ. ಯಾರಿಗೆ ಅವಕಾಶ ತಪ್ಪಿಹೋಗಲಿದೆ ಎನ್ನುವುದು ಸಂಜೆಯ ವೇಳೆಗೆ ಗೊತ್ತಾಗಲಿದೆ. ಇಂದು ಸಂಜೆ ನೂತನ ಸಚಿವರ ಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರೇ ದೆಹಲಿ ಭೇಟಿಯ ನಂತರ ತಿಳಿಸಿದ್ದಾರೆ. ಸಂಪುಟ ರಚನೆ ಬಗ್ಗೆ ನಿನ್ನೆ ತಡರಾತ್ರಿ ತನಕವೂ ಜೆ.ಪಿ.ನಡ್ಡಾ ಮತ್ತು ಸಿಎಂ ಬೊಮ್ಮಾಯಿ ಚರ್ಚೆ ನಡೆಸಿದ್ದು, ಆ ಚರ್ಚೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡಾ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಸದರಿ ಸಭೆಯಲ್ಲಿ ಒಂದಷ್ಟು ಹೆಸರುಗಳು ಪ್ರಸ್ತಾಪವಾಗಿದ್ದು, ಕೆಲವರನ್ನು ಸಚಿವ ಸಂಪುಟದಿಂದ ದೂರವಿಡುವ ಸಾಧ್ಯತೆಯೂ ಇರುವುದರಿಂದ ಅವರೀಗ ದೆಹಲಿ ಮಟ್ಟದಲ್ಲಿ ಲಾಬಿ ಶುರುಮಾಡಿಕೊಂಡಿದ್ದಾರೆ.
ಈ ಬಾರಿ ಸಚಿವ ಸ್ಥಾನ ಆಕಾಂಕ್ಷಿಗಳ ಸಾಲಿನಲ್ಲಿ ಅರಗ ಜ್ಞಾನೇಂದ್ರ, ಎಂ.ಪಿ. ರೇಣುಕಾಚಾರ್ಯ, ಎಂ.ಪಿ ಕುಮಾರಸ್ವಾಮಿ, ಮುನಿರತ್ನ, ಜಿ.ಎಚ್. ತಿಪ್ಪಾರೆಡ್ಡಿ, ಹಾಲಪ್ಪ ಆಚಾರ್, ವೀರಣ್ಣ ಚರಂತಿಮಠ, ಪೂರ್ಣಿಮಾ ಶ್ರೀನಿವಾಸ ಮುಂಚೂಣಿಯಲ್ಲಿದ್ದಾರೆ. ಇವರುಗಳಿಗೆ ಸಚಿವ ಸ್ಥಾನ ಒಲಿಯುವುದು ಕೂಡಾ ಬಹುತೇಕ ಖಚಿತವಾಗಿದೆ. ಇಂದು ಸಂಜೆ ಬಿಡುಗಡೆಗೊಳಿಸುವ ಪಟ್ಟಿಯಲ್ಲಿ ಈ ಹೆಸರುಗಳಿರಲಿವೆ ಎಂದು ಮೂಲಗಳು ತಿಳಿಸಿವೆ. ಆದರೆ, ಇದೇ ಸಂದರ್ಭದಲ್ಲಿ ಸಚಿವ ಸಂಪುಟದಿಂದ ಹೊರಗುಳಿಯಲಿರುವವರ ಹೆಸರುಗಳೂ ಓಡಾಡುತ್ತಿದ್ದು, ಅದು ಹೊಸ ಬೆಳವಣಿಗೆಗಳಿಗೆ ಕಾರಣವಾಗಿದೆ.
ನೂತನ ಸಚಿವ ಸಂಪುಟದಿಂದ ಶಶಿಕಲಾ ಜೊಲ್ಲೆ, ಪ್ರಭು ಚೌಹಾಣ್, ಕೋಟ ಶ್ರೀನಿವಾಸ್ ಪೂಜಾರಿ, ಆನಂದ್ ಸಿಂಗ್, ಶ್ರೀಮಂತ್ ಪಾಟೀಲ್, ಆರ್. ಶಂಕರ್, ಸಿ.ಸಿ ಪಾಟೀಲ್ ಅವರ ಹೆಸರು ಇಲ್ಲ ಎನ್ನಲಾಗುತ್ತಿದೆ. ಗಮನಾರ್ಹ ಅಂಶವೆಂದರೆ ಈ ಹಿಂದೆ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಲಕ್ಷ್ಮಣ ಸವದಿ ಅವರ ಹೆಸರನ್ನೂ ಕೈ ಬಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಲಕ್ಷ್ಮಣ ಸವದಿ ಭಾರೀ ಕಸರತ್ತು ಶುರು ಮಾಡಿಕೊಂಡಿದ್ದು, ಮುಖ್ಯಮಂತ್ರಿಗಳ ಜತೆ ನಿನ್ನೆಯಿಡೀ ಸುತ್ತಾಡುವುದಲ್ಲದೆ ದೆಹಲಿಯಲ್ಲಿ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಸಚಿವ ಸಂಪುಟದ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂದು ಸಂಸತ್ ಭವನದಲ್ಲಿ ಮತ್ತೊಮ್ಮೆ ಚರ್ಚೆ ಮಾಡಲಾಗುತ್ತದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಜತೆ ಮಾತುಕತೆ ನಡೆಸಲಾಗಿದೆ. ನಾವು ಹಲವಾರು ವಿಚಾರಗಳನ್ನ ನಡ್ಡಾಗೆ ತಿಳಿಸಿದ್ದೇವೆ. ಒಳ್ಳೆ ತೀರ್ಮಾನ ಮಾಡಲಾಗುತ್ತದೆ ಎಂದು ನಮಗೆ ವಿಶ್ವಾಸ ಇದೆ. ಇಂದು ಸಂಜೆ ಬಹುತೇಕ ಸಂಪುಟ ರಚನೆ ಬಗ್ಗೆ ನಿರ್ಧಾರವಾಗಲಿದ್ದು, ಒಂದು ಪಟ್ಟಿ ಬಗ್ಗೆ ನಮ್ಮ ಮತ್ತು ನಡ್ಡಾ ನಡುವೆ ಚರ್ಚೆಯಾಗಿದೆ. ಎರಡು ಮೂರು ಪಟ್ಟಿಗಳನ್ನ ಕೊಟ್ಟಿದ್ದೇವೆ. ವಲಸಿಗರು ಯಾರೂ ಇಲ್ಲ ಎಲ್ಲರು ನಮ್ಮವರೇ. ಅವರು ಈಗ ಇಲ್ಲೇ ನೆಲೆಸಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಯಾರು ಸಚಿವರಾಗುತ್ತಾರೆ, ಯಾರು ಡಿಸಿಎಂ ಆಗುತ್ತಾರೆ ಎಂದು ನಾಳೆ ಗೊತ್ತಾಗುತ್ತೆ; ವರಿಷ್ಠರ ತೀರ್ಮಾನ ಅಂತಿಮ: ಬಸವರಾಜ ಬೊಮ್ಮಾಯಿ
(Karnataka Cabinet Expansion final list to be announced Tuesday evening here is the latest development details)