ಸಂಪುಟ ಸರ್ಜರಿ ಸಸ್ಪೆನ್ಸ್: ಸಿಎಂ ಸಿದ್ದರಾಮಯ್ಯ ಭೇಟಿಯಾದ ಸಾಲು ಸಾಲು ನಾಯಕರು
ಸಚಿವ ಸಂಪುಟ ಸರ್ಜರಿ ಮಾತುಕತೆಗಳ ಹಿನ್ನೆಲೆಯಲ್ಲಿ ಮುಖ್ಯಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ಸಿಎಂ ಪ್ರವಾಸಕ್ಕೂ ಮುನ್ನ ಮಂತ್ರಿ ಸ್ಥಾನದ ಆಕಾಂಕ್ಷಿಗಳು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು, ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರೊಂದಿಗಿನ ಪ್ರತ್ಯೇಕ ಮಾತುಕತೆ ಕುತೂಹಲ ಮೂಡಿಸಿದೆ. ಶಾಸಕ ವಿಜಯಾನಂದ ಕಾಶಪ್ಪನವರ್ ಕೂಡ ತಮಗೆ ಸಚಿವ ಸ್ಥಾನದ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ನವೆಂಬರ್ 17: ಸಚಿವ ಸಂಪುಟ ಸರ್ಜರಿ ವಿಚಾರ ಮುನ್ನೆಲೆಗೆ ಬಂದ ಹಿನ್ನಲೆ ರಾಜ್ಯ ಕಾಂಗ್ರೆಸ್ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಿಎಂ ಸಿದ್ದರಾಮಯ್ಯ ಇಂದು ದೆಹಲಿಗೆ ಹೊರಡುವ ಮುನ್ನ ಸಾಲು ಸಾಲು ಕಾಂಗ್ರೆಸ್ ನಾಯಕರು ಅವರನ್ನು ಭೇಟಿಯಾಗಿದ್ದಾರೆ. ಆ ಪೈಕಿ ಬಹುತೇಕರು ಮಂತ್ರಿ ಸ್ಥಾನದ ಆಕಾಂಕ್ಷಿಗಳು ಎನ್ನಲಾಗಿದೆ. ಇಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಭೇಟಿ ಮಾಡಲಿದ್ದಾರೆ.
ಶಾಸಕರಾದ ಪ್ರದೀಪ್ ಈಶ್ವರ್, ಅಶೋಕ್ ಪಟ್ಟಣ್, ಕಾಶಪ್ಪನವರ್, ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಮಾಜಿ ಸಚಿವರಾದ ಕೆ.ಎನ್. ರಾಜಣ್ಣ ಸೇರಿ ಹಲವು ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆ ಪೈಕಿ ಸಿಎಂ ಮತ್ತು ಕೆ.ಎನ್.ರಾಜಣ್ಣ ನಡುವೆ ಸುಮಾರು 20 ನಿಮಿಷ ಪ್ರತ್ಯೇಕ ಮಾತುಕತೆ ನಡೆದಿದೆ. ಸಿದ್ದರಾಮಯ್ಯ ಅವರು ದೆಹಲಿಗೆ ತೆರಳುವ ಮುನ್ನ K.N.ರಾಜಣ್ಣ ಚರ್ಚೆ ನಡೆಸಿರೋದು ಭಾರಿ ಕುತೂಹಲ ಮೂಡಿಸಿದೆ. ಮಂತ್ರಿ ಸ್ಥಾನದ ವಿಚಾರವಾಗಿ ಸಿದ್ದರಾಮಯ್ಯ ಜೊತೆ ರಾಜಣ್ಣ ಚರ್ಚೆ ನಡೆಸಿದ್ದಾರೆ. ಮಂತ್ರಿ ಸ್ಥಾನಕ್ಕಿಂತ ತಮ್ಮ ಕುರಿತು ಉಂಟಾಗಿರುವ ತಪ್ಪು ಅಭಿಪ್ರಾಯವನ್ನು ರಾಹುಲ್ ಗಾಂಧಿ ಅವರಿಗೆ ಮನವರಿಕೆ ಮಾಡಿ ಎಂದು ಈ ವೇಳೆ ರಾಜಣ್ಣ ತಿಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕ್ರಾಂತಿ ಕಿಚ್ಚಿನ ಮಧ್ಯೆ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿದ್ಯಾಕೆ? ಗುಟ್ಟುಬಿಚ್ಚಿಟ್ಟ ಡಿಸಿಎಂ ಡಿಕೆ ಶಿವಕುಮಾರ್
ತಮ್ಮ ಭೇಟಿಗೆ ಬಂದ ರಾಜಣ್ಣ ಬಳಿ ಬಾರಯ್ಯಾ ಡೆಲ್ಲಿಗೆ ಹೋಗಿ ಬರೋಣ ಎಂದು ಸಿಎಂ ಆಹ್ವಾನ ನೀಡಿದ ಪ್ರಸಂಗವೂ ನಡೆದಿದ್ದು, ಇಲ್ಲ ಸರ್.. ಹೈಕಮಾಂಡ್ ಎಲ್ಲಾ ಬೇಡ ನೀವು ಹೋಗಿ ಬನ್ನಿ ಎಂದು ರಾಜಣ್ಣ ತಿಳಿಸಿದ್ದಾರೆ. ಸಿಎಂ, ರಾಜಣ್ಣ ಮಾತುಕತೆ ವೇಳೆ ಆಗಮಿಸಿದ ಸಚಿವ H.C.ಮಹದೇವಪ್ಪ, ಏನು ಇಬ್ಬರೇ ಸಪರೇಟ್ ಸಭೆ ಮಾಡ್ತಾ ಇದ್ದೀರಿ ಎಂದು ಪ್ರಶ್ನಿಸಿದ್ದಾರೆ. ನನ್ನ, ರಾಜಣ್ಣ ನಡುವೆ ಒಳಗೊಂದು ಹೊರಗೊಂದು ಇಲ್ಲ ಎಂದು ಸಿಎಂ ನಗುತ್ತಲೇ ಉತ್ತರ ನೀಡಿದ್ದು, ದೆಹಲಿಗೆ ಹೋಗಿ ಮಾತನಾಡಿ ಬರ್ತೀನಿ ಎಂದಿದ್ದಾರೆ.
ಸಿಎಂ ಭೇಟಿ ಬಗ್ಗೆ ಪ್ರತಿಕ್ರಿಯಿಸಿರೋ ಶಾಸಕ ವಿಜಯಾನಂದ ಕಾಶಪ್ಪನವರ್, ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ.ಅದಕ್ಕಾಗಿಯೇ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ ಎಂದಿದ್ದಾರೆ. ಕಾಲ ಬಂದಾಗ ಮಾಡೋಣವೆಂದು ಸಿಎಂ ಹೇಳಿದ್ದು, ಸಲ್ಲಿಸಿದ ಸೇವೆ ಪರಿಗಣಿಸಿ ಎಂದು ಕೇಳಿದ್ದೇನೆ. ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ ಎಂದು ಶಾಸಕ ಕಾಶಪ್ಪನವರ್ ಹೇಳಿದ್ದಾರೆ. ಈ ಬಗ್ಗೆ ಸಿಎಂ, ಡಿಸಿಎಂ, ಕೆಸಿ ವೇಣುಗೋಪಾಲ್, ಸುರ್ಜೇವಾಲ ಸೇರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಮನವಿ ಮಾಡಿದ್ದೇನೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಮ್ಮ ದೇವರಾಗಿದ್ದು, ದೇವರು ಇಲ್ಲೇ ಇರಬೇಕಾದ್ರೆ ಬೇರೆ ಎಲ್ಲಿಗೆ ನಾನು ಹೋಗಲಿ ಎಂದವರು ತಿಳಿಸಿದ್ದಾರೆ.
ವರದಿ: ಈರಣ್ಣ ಬಸವ, Tv9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:29 pm, Mon, 17 November 25




