ಹಾಸನ, ಫೆ.24: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde), ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾ ಖಾನ್ ಅಂತ ಮತ್ತೆ ಕರೆದಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ (Siddaramaiah) ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಹೆಗಡೆ ವಿರುದ್ಧ ಕಿಡಿಕಾರಿದ್ದಾರೆ.
ಟ್ಯಾಕ್ಸ್ ಹಂಚಿಕೆ ವಿಚಾರದಲ್ಲಿ ಆಂಧ್ರಪ್ರದೇಶ, ಕೇರಳ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ, ಆದರೆ ರಾಜ್ಯ ಅಪಪ್ರಚಾರ ಮಾಡುತ್ತಿದೆ ಎಂಬ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ ಹೇಳಿಕೆ ವಿಚಾರವಾಗಿ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಗ್ರಾಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೇರಳದವರು ದೆಹಲಿಗೆ ಯಾಕೆ ಹೋಗಿದ್ದರು, ಅವರಿಗೆ ಬೆಂಬಲ ಮಾಡಿ ತಮಿಳುನಾಡಿನವರು ಏಕೆ ಹೋಗಿದ್ದರು ಎಂದು ಪ್ರಶ್ನಿಸಿದರು.
ಎಲ್ಲಾ ರಾಜ್ಯಗಳಿಗೂ ಅನ್ಯಾಯವಾಗಿದೆ. ನಮ್ಮ ದಕ್ಷಿಣದ ರಾಜ್ಯಗಳಿಗೆ ಹೆಚ್ಚು ಅನ್ಯಾಯ ಆಗಿದೆ. ನಾವು ಉತ್ತರದ ರಾಜ್ಯಗಳಿಗೆ ಕೊಡಬೇಡಿ ಅಂತ ಹೇಳಲ್ಲ. ಆದರೆ ನಮಗೆ ಅನ್ಯಾಯ ಮಾಡಿ ಅವರಿಗೆ ಕೊಡಬೇಡಿ. ಆದರೆ ನಮ್ಮ ಪಾಲಿನಲ್ಲಿ ಏಕೆ ಕಿತ್ತು ಅವರಿಗೆ ಕೊಡುತ್ತೀರಿ? ನೂರಕ್ಕೆ ಎಪ್ಪತ್ತು ರೂಪಾಯಿ ಅವರು ಇಟ್ಟುಕೊಳ್ಳುತ್ತಾರೆ, ಅದರಲ್ಲಿ ಕೊಡಿ. ನಮಗೆ ಬರುವ ಪಾಲಿನಲ್ಲಿ ಏಕೆ ಕಿತ್ತು ಕೊಡ್ತಿರಾ ಎಂದರು.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸಿದ್ದರಾಮುಲ್ಲಾ ಖಾನ್ ಬಳಿ ಹಣವಿಲ್ಲ: ಅನಂತಕುಮಾರ್ ಹೆಗಡೆ
ಕರ್ನಾಟಕದಲ್ಲಿ 100 ರೂಪಾಯಿ ಟ್ಯಾಕ್ಸ್ ಕಲೆಕ್ಟ್ ಮಾಡಿದರೆ ನಮಗೆ ವಾಪಾಸ್ ಬರುವುದು ಬರೀ 13 ರೂಪಾಯಿ. ನ್ಯಾಯನಾ ಇದು, ಸುಮ್ಮನಿರಬೇಕಾ ಹೇಳಿ? ರಾಜ್ಯದ ಬಿಜೆಪಿಯವರು ಕೇಂದ್ರ ಸರ್ಕಾರ ಅನ್ಯಾಯ ಮಾಡುವುದನ್ನೇ ಸಮರ್ಥನೆ ಮಾಡಿಕೊಂಡು ಕನ್ನಡಿಗರಿಗೆ ದ್ರೋಹ ಮಾಡುತ್ತಿದ್ದಾರೆ. ಪಕ್ಷ ರಾಜಕಾರಣಕ್ಕೋಸ್ಕರ ಕೇಂದ್ರ ಸರ್ಕಾರ ಮಾಡುವ ಅನ್ಯಾಯವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಪಕ್ಷ ರಾಜಕಾರಣಕ್ಕೋಸ್ಕರ ಕನ್ನಡಿಗರಿಗೆ ಕರ್ನಾಟಕದ ಬಿಜೆಪಿಯವರು ಅನ್ಯಾಯ ಮಾಡುತ್ತಿದ್ದಾರೆ ಎಂದರು.
ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸಿದ್ದರಾಮುಲ್ಲಾ ಖಾನ್ ಬಳಿ ಹಣವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೆಗಡೆ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾರಾದರೂ ಸಂಬಳ ಸಿಕ್ಕಿಲ್ಲ ಎಂದು ಹೇಳಿದ್ದಾರಾ? ಈ ಸರ್ಕಾರದಲ್ಲಿ ಸಂಬಳ ಸಿಕ್ಕಿಲ್ಲ ಎಂದು ಹೇಳಿದ್ದಾರಾ? ಹೆಗಡೆ ಸಂಸದನಾಗಲು ಯೋಗ್ಯನಾ ಎಂದು ಕಿಡಿಕಾರಿದರು. ಅಲ್ಲದೆ, ನನಗೆ ಸಿದ್ರಾಮುಲ್ಲಾ ಖಾನ್ ಎಂದು ಏಕೆ ಕರೆಯುತ್ತಾರೆ? ಅವರು ಅಲ್ಪಸಂಖ್ಯಾತರ ವಿರುದ್ಧ ಇದ್ದಾರೆ ಎಂದರು.
ಸಿದ್ದರಾಮಯ್ಯ ಸರಕಾರದಲ್ಲಿ ಅಧಿಕಾರಿಗಳಿಗೆ, ಶಾಸಕರಿಗೆ ಪಗಾರ ಕೊಡಲು ಹಣವಿಲ್ಲ ಎಂಬ ಹೆಗಡೆ ಆರೋಪ ವಿಚಾರವಾಗಿ ಹೂಲಗೇರಿ ಗ್ರಾಮದಲ್ಲಿ ಮಾತನಾಡಿದ ಸಚಿವ ಹೆಚ್ಕೆ ಪಾಟೀಲ್, ಯಾವ ಶಾಸಕರು ಪಗಾರ ಇಲ್ಲದೆ ಇದ್ದಾರೆ ಹೇಳಿ? ಮಾಜಿ ಶಾಸಕರು ಪಿಂಚಣಿ ಪಡೆಯುದ್ದಾರೆ. 2 ಸಾವಿರ ರೂಪಾಯಿ ಮಹಿಳೆಯರ ಖಾತೆಗೆ ಬೀಳುತ್ತಿದೆಯಲ್ಲ, ಅದನ್ನು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.
ಸಿದ್ರಾಮುಲ್ಲಾಖಾನ್ ಪದಬಳಕೆ ವಿಚಾರವಾಗಿ ಮಾತನಾಡಿದ ಪಾಟೀಲ್, ಸಮಾಧಾನ ಕೆದಕಿ ಅಗೌರವದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಅದು ನಿಮ್ಮ ಮೈಮೇಲೆ ಬರುತ್ತದೆ ಎಂಬ ಎಚ್ಚರಿಕೆ ಇರಲಿ. ಸಾರ್ವಜನಿಕ ಬದುಕಿನಲ್ಲಿರುವವರು ಇಂಥ ಭಾಷೆ ಬಳಸಬಾರದು ಎಂದರು.
ಪಂಜಾಬ್ ರೈತರು ಟೆರರಿಸ್ಟ್ಗಳು ಎಂಬ ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ಅನಂತ್ ಕುಮಾರ್ ಹೆಗಡೆ ಏನಾದರೂ ಅಲ್ಲಿಗೆ ಹೋಗಿ ನೋಡಿದ್ದಾರಾ? ಅವರು ಟೆರ್ರಿಸ್ಟ್ಗಳಾದರೆ ಕೇಂದ್ರ ಸಚಿವರು ಯಾಕೆ ಅವರ ಜೊತೆ ಸಭೆ ನಡೆಸಿದರು? ಆರಾರು ಮಂದಿ ಕೇಂದ್ರ ಸಚಿವರು ಮೂರ್ಮೂರು ಸಭೆ ಯಾಕೆ ಮಾಡಿದರು ಎಂದರಲ್ಲದೆ, ಇತ್ತೀಚೆಗೆ ಹೆಗಡೆ ಯಾಕೆ ಇತರ ಮಾತಾಡುತ್ತಿದ್ದಾರೋ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ವಿರುದ್ಧ ಹೆಗಡೆ ವಾಗ್ದಾಳಿ ವಿಚಾರವಾಗಿ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಮಾತನಾಡಿದ ಎಂಬಿ ಪಾಟೀಲ್, ಅನಂತಕುಮಾರ ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು. ಇವರು ಐದು ವರ್ಷ ಕಾಣೆಯಾಗಿದ್ದರು. ಎಲ್ಲಿಯೂ ಇರಲಿಲ್ಲ, ಮತದಾರರಿಗೆ ಮುಖ ತೋರಿಸಿರಲಿಲ್ಲ. ಚುನಾವಣೆ ಬಂದ ಕಾರಣ ಹಿಂದೂ ಮುಸ್ಲಿಂ ಹೇಳಿಕೆ ಕೊಡುವ ಮೂಲಕ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಬಯಸಿದ್ದಾರೆ. ಹಿಂದೆ ಸಂವಿಧಾನ ತಿರುಚಬೇಕೆಂದು ಹೇಳಿದ್ದರು. ಕೇಂದ್ರ ಸಚಿವರಾಗಿದ್ದ ಮಹಾಶಯರು ಹೇಳಿದ್ದರು. ಇಂಥವರ ಬಗ್ಗೆ ಬಹಳ ಮಾತನಾಡುವ ಅವಶ್ಯಕತೆಯಿಲ್ಲ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಲ್ಲ. ಇದು ಚುನಾವಣೆ ಗಿಮಿಕ್ ಎಂದರು.
ಅನಂತಕುಮಾರ ವಿರುದ್ಧ ಇಂಡಿ ಪಟ್ಟಣದಲ್ಲಿ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ, ದೀಪಾ ಆರುವ ಮುಂಚೆ ಜೋರಾಗಿ ಉರಿಯುತ್ತದೆ. ಹಾಗೇ ಅನಂತಕುಮಾರ ಹೆಗಡೆ ರಾಜಕೀಯವಾಗಿ ಕಳೆದು ಹೋಗುವ ಮುನ್ನ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿದ್ದಾರೆ. ತಮ್ಮ ಅಸ್ತಿತ್ವವನ್ನು ತಾವೇ ಕಳೆದುಕೊಳ್ಳುತ್ತಿರುವುದು ಪ್ರಾರಂಭವಾಗಿದೆ. ವಿನಾಶ ಕಾಲೇ ವಿಪರೀತ ಬುದ್ಧಿ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Sat, 24 February 24