
ಬೆಂಗಳೂರು, ಜನವರಿ 22: ಸಿಎಂ ಕುರ್ಚಿ ವಿಚಾರವಾಗಿ ರಾಜ್ಯದಲ್ಲಿ ಪೈಪೋಟಿ ಮುಂದುವರಿದಿದ್ದು, ವಿಷಯವೀಗ ಹೈಕಮಾಂಡ್ ಅಂಗಳದಲ್ಲಿದೆ. ಈ ನಡುವೆ ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವರ್ಡ್ ಎಕನಾಮಿಕ್ ಫೋರಂನಲ್ಲಿ ಭಾಗಿಯಾಗಿರುವ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ತಮ್ಮ ನಾಯಕರು ತಮಗೆ ನಿರಾಸೆ ಮಾಡಲಾರರು ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಆ ಮೂಲಕ ದಾವೋಸ್ನಲ್ಲಿಯೂ ಕರ್ನಾಟಕದಲ್ಲಿನ ಅಧಿಕಾರ ಹಂಚಿಕೆ ವಿಚಾರ ಚರ್ಚೆಯಾದಂತಾಗಿದೆ.
ಹೌದು, ಎನ್ಡಿಟಿವಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಡಿಸಿಎಂ ಡಿಕೆಶಿ, ಎಲ್ಲ ವಿಚಾರಗಳ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದು ಮಾಧ್ಯಮಗಳಲ್ಲಿ ಚರ್ಚಿಸಬೇಕಾದ ವಿಷಯ ಅಲ್ಲ, ಇದು ನಮ್ಮಲ್ಲಿಯೇ ಆಗಬೇಕಾದ ಚರ್ಚೆ. ನಾನು ಸದಾ ಧನಾತ್ಮಕವಾಗಿದ್ದು, ಆಸೆಯ ಮೇಲೆಯೇ ಬದುಕುತ್ತೇನೆ. ಶ್ರಮಕ್ಕೆ ಯಾವಾಗಲೂ ಫಲ ಸಿಗುತ್ತದೆ ಎಂಬ ನಂಬಿಕೆ ನನಗಿದೆ. ನನ್ನ ನಾಯಕರು ಖಂಡಿತವಾಗಿಯೂ ನನ್ನನ್ನು ನಿರಾಶೆಗೊಳಿಸುವುದಿಲ್ಲ ಎಂಬ ಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ ಡಿಕೆ ಶಿವಕುಮಾರ್ ಬಣದಲ್ಲಿ ಹೆಚ್ಚಾಯ್ತು ಉತ್ಸಾಹ!
ಡಿಕೆಶಿ ಅವರು ಸಿಎಂ ಆಗಲು ಶಾಸಕರ ಬೆಂಬಲ ಇಲ್ಲವಂತಲ್ಲ ಎಂಬ ಪ್ರಶ್ನೆಗೂ ಉತ್ತರಿಸಿದ ಅವರು, ಹಾಗೆ ಹೇಳಿದ್ದು ಯಾರು? ಕೆಪಿಸಿಸಿ ಅಧ್ಯಕ್ಷನಾದ ತನಗೆ ಪಕ್ಷದ 140 ಶಾಸಕರ ಬೆಂಬಲವೂ ಇದೆ. ಹೀಗಾಗಿ ಸಂಖ್ಯೆಗಳ ಬಗ್ಗೆ ತೀರ್ಮಾನ ಬೇಕಿಲ್ಲ. ನಾವು ತಂಡವಾಗಿ ಕೆಲಸ ಮಾಡುತ್ತಿದ್ದು ಸಿದ್ದರಾಮಯ್ಯ ಮತ್ತು ತನಗೆ ಇಬ್ಬರಿಗೂ ಎಲ್ಲ ಶಾಸಕರ ಬೆಂಬಲ ಇದೆ. ನಾವು ಇಬ್ಬರೂ ಕೂತು ಚರ್ಚಿಸಿದ್ದು, ಎಲ್ಲವನ್ನೂ ಪಕ್ಷದ ನಾಯಕರ ತೀರ್ಮಾನಕ್ಕೆ ಬಿಟ್ಟಿದ್ದೇವೆ. ಸಿದ್ದರಾಮಯ್ಯ ಮತ್ತು ತಾನು ಇಬ್ಬರೂ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನವನ್ನು ಒಪ್ಪಿಕೊಳ್ಳುತ್ತೇವೆ ಎಂದು ಈಗಾಗಲೇ ಹೇಳಿದ್ದೇವೆ ಎಂದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.