KGF Babu: ಕೋಟಿ ಕುಬೇರ ಕೆಜಿಎಫ್ ಬಾಬುನನ್ನು ಪಕ್ಷದಿಂದ ಅಮಾನತು ಮಾಡಿದ ಕಾಂಗ್ರೆಸ್
ಪಕ್ಷ ವಿರೋಧಿ ಹೇಳಿಕೆ ಹಿನ್ನೆಲೆಯಲ್ಲಿ ಕೆಜಿಎಫ್ ಬಾಬು ಅವರನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಿ ಕೆಪಿಸಿಸಿ ಶಿಸ್ತು ಸಮಿತಿ ಆದೇಶ ಹೊರಡಿಸಿದೆ.
ಬೆಂಗಳೂರು: ಕೋಟಿ ಕುಬೇರ ಯೂಸುಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು (KGF Babu) ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿದೆ. ಪಕ್ಷ ವಿರೋಧಿ ಹೇಳಿಕೆ ಹಿನ್ನೆಲೆಯಲ್ಲಿ ಕೆಜಿಎಫ್ ಬಾಬು ಅವರನ್ನು ಅಮಾನತುಗೊಳಿಸಿ ಕೆಪಿಸಿಸಿ ಶಿಸ್ತು ಸಮಿತಿ(Karnataka congress disciplinary committee) ಇಂದು(ಜನವರಿ 06) ಆದೇಶ ಹೊರಡಿಸಿದೆ. ಕೆಜಿಎಫ್ ಬಾಬು ನಡೆಯಿಂದ ಈ ಹಿಂದೆ ನೀಡಲಾಗಿದ್ದ 3 ಶೋಕಾಸ್ ನೋಟಿಸ್ಗೆ ಉತ್ತರ ನೀಡಿರಲಿಲ್ಲ. ಇದೀಗ ಅಂತಿಮವಾಗಿ ಪಕ್ಷದಿಂದ ಅಮಾನತು ಮಾಡಿ ಕೆಪಿಸಿಸಿ ಶಿಸ್ತು ಸಮಿತಿ ಮುಖ್ಯಸ್ಥ ರಹಮಾನ್ ಖಾನ್ ಆದೇಶಿಸಿದ್ದಾರೆ.
ಕಾಂಗ್ರೆಸ್ ನವರು ಅತಿಯಾದ ಆತ್ಮವಿಶ್ವಾಸದಲ್ಲಿ ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 80 ಸೀಟ್ ಬರಲ್ಲ ಎಂದ ಕೆಪಿಸಿಸಿ ಕಚೇರಿಯಲ್ಲೇ ಕೆಜಿಎಫ್ ಬಾಬು ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಕೆಜಿಎಫ್ ಬಾಬು ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಆಕಾಂಕ್ಷಿಯಾಗಿರುವ ಕೆಜಿಎಫ್ ಬಾಬು ಹಾಗೂ ಕಾಂಗ್ರೆಸ್ ಮುಖಂಡ ಮನೋಹರ್ ನಡುವೆ ಕೆಪಿಸಿಸಿ ಕಚೇರಿಯಲ್ಲಿ ಜಟಾಪಟಿ ನಡೆದಿತ್ತು.
ಕೆ.ಜಿ.ಎಫ್ ಬಾಬು ಅಲಿಯಾಸ್ ಯೂಸುಫ್ ಶರೀಫ್. ಕಳೆದ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಅಭ್ಯರ್ಥಿ. ತನ್ನ ಆಸ್ತಿ 1,741 ಕೋಟಿ ಎಂದು ಘೋಷಿಸಿಕೊಂಡು ದೇಶಾದ್ಯಂತ ಸುದ್ದಿ ಮಾಡಿದ್ದ ವ್ಯಕ್ತಿ ಇವರು. ಆದರೆ ಇದೀಗ ಈ ಕುಬೇರ ಕಾಂಗ್ರೆಸ್ ಪಾಲಿಗೆ ತಲೆನೋವಾಗಿದ್ದಾರೆ. ಕಾರಣ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಪಾಲಿನ ಕಾಂಟ್ರವರ್ಸಿ ಕಿಂಗ್ ಆಗುತ್ತಿರುವ ಕೋಟಿ ಕುಬೇರ ಕೆಜಿಎಫ್ ಬಾಬು; ಡಿಕೆಶಿಗೆ ಮುಜುಗರ
ಕೆಜಿಎಫ್ ಬಾಬು ಮೂಲತಃ ಉದ್ಯಮಿ. ಐಶಾರಾಮಿ ಕಾರು ದಾಖಲೆ ವಿಚಾರವಾಗಿ ಅವರು ಮುನ್ನಲೆಗೆ ಬಂದಿದ್ದರು. ನಂತರದಲ್ಲಿ ಅವರ ಕಾರು ಶೋಕಿ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದಾದ ಬಳಿಕ ಇದೇ ಸಂದರ್ಭದಲ್ಲಿ ಅವರ ಕೌಟುಂಬಿಕ ವಿವಾದ ಮುನ್ನಲೆಗೆ ಬಂದಿತ್ತು. ಮಾಧ್ಯಮಗಳ ಮುಂದೆ ಅವರು ಕಣ್ಣೀರು ಹಾಕಿದ್ದರು.
ಈ ನಡುವೆ ಕೆಜಿಎಫ್ ಬಾಬು ಮನೆಗೆ ಜಾರಿ ನಿರ್ದೇಶನಾಲಯ ಇ.ಡಿ ದಾಳಿ ನಡೆಸಿತ್ತು. ಸತತ 18 ಗಂಟೆಗಳ ಕಾಲ ತಪಾಸಣೆ ನಡೆಸಿತ್ತು. ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಬಾಬು ಒಡೆತನದ ಬಂಗಲೆ, ಕಚೇರಿ ಸೇರಿ 7 ಕಡೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದರು.
Published On - 9:02 pm, Fri, 6 January 23