ಅಂಗನವಾಡಿಗಳಿಗೆ ಬಾಡಿಗೆ ಕಟ್ಟಲು ಯೋಗ್ಯತೆ ಇಲ್ಲದ ರಾಜ್ಯ ಸರ್ಕಾರ: ಆರ್ ಅಶೋಕ್ ಕಿಡಿ

| Updated By: Rakesh Nayak Manchi

Updated on: Jan 24, 2024 | 1:07 PM

ರಾಯಚೂರು ಜಿಲ್ಲೆಯಲ್ಲಿ 2856 ಅಂಗನವಾಡಿ ಕೇಂದ್ರಗಳ ಪೈಕಿ ಒಟ್ಟು 808 ಬಾಡಿಗೆ ಕಟ್ಟಡಗಳ ಕೋಟ್ಯಂತರ ರೂಪಾಯಿ ಬಾಡಿಗೆಯನ್ನು ಬಿಡುಗಡೆ ಮಾಡದೆ ರಾಜ್ಯ ಸರ್ಕಾರ ಬಾಕಿ ಉಳಿಸಿದೆ. ಖಾಸಗಿ ಕಟ್ಟಡದಲ್ಲಿರುವ ಕೆಲವು ಅಂಗನವಾಡಿ ಕೇಂದ್ರಗಳ ಎಂಟು ತಿಂಗಳ ಬಾಡಿಗೆ ಬಾಕಿ ಉಳಿಸಿದ್ದು, ಇನ್ನೂ ಕೆಲವು ಅಂಗನವಾಡಿ ಕೇಂದ್ರಗಳ ನಾಲ್ಕು ತಿಂಗಳ ಬಾಡಿಗೆ ಬಾಕಿ ಉಳಿಸಿದೆ. ಈ ಬಗ್ಗೆ ಟ್ವೀಟ್ ಮೂಲಕ ಆರ್ ಅಶೋಕ್ ಅವರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಅಂಗನವಾಡಿಗಳಿಗೆ ಬಾಡಿಗೆ ಕಟ್ಟಲು ಯೋಗ್ಯತೆ ಇಲ್ಲದ ರಾಜ್ಯ ಸರ್ಕಾರ: ಆರ್ ಅಶೋಕ್ ಕಿಡಿ
ಆರ್ ಅಶೋಕ್ ಮತ್ತು ಸಿದ್ದರಾಮಯ್ಯ
Follow us on

ರಾಯಚೂರು, ಜ.24: ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಕಟ್ಟಲು ಯೋಗ್ಯತೆ ಇಲ್ಲದ ಸರ್ಕಾರ ಇದ್ದರೆಷ್ಟು ಸತ್ತರೆಷ್ಟು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಆಕ್ರೋಶ ಹೊರಹಾಕಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ 2856 ಅಂಗನವಾಡಿ ಕೇಂದ್ರಗಳ ಪೈಕಿ ಒಟ್ಟು 808 ಬಾಡಿಗೆ ಕಟ್ಟಡಗಳ ಕೋಟ್ಯಂತರ ರೂಪಾಯಿ ಬಾಡಿಗೆಯನ್ನು ಬಿಡುಗಡೆ ಮಾಡದೆ ರಾಜ್ಯ ಸರ್ಕಾರ ಬಾಕಿ ಉಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿದ ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

“ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಕಟ್ಟಲೂ ಯೋಗ್ಯತೆ ಇಲ್ಲದ ಕಾಂಗ್ರೆಸ್ ಸರ್ಕಾರ, ಅಂಗನವಾಡಿ ಕಾರ್ಯಕರ್ತೆಯರು ಬಡ್ಡಿಗೆ ಸಾಲ ತಂದು ಕಟ್ಟಡದ ಬಾಡಿಗೆ ಕಟ್ಟುವ ಪರಿಸ್ಥಿತಿ ತಂದಿಟ್ಟಿದೆ. ಗ್ರಾಮೀಣ ಭಾಗದ ಬಡ ಕುಟುಂಬದ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆ ಅಂಗನವಾಡಿಯಲ್ಲಿ ಸಿಗುವ ಬಿಸಿಯೂಟ, ಪೌಷ್ಠಿಕ ಆಹಾರವೇ ಜೀವನಾಧಾರ” ಎಂದರು.

“ಬಡವರ ಪಾಲಿನ ಆಸರೆಯಾದ ಅಂಗನವಾಡಿಗಳಿಗೆ ಬಾಡಿಗೆ ಕಟ್ಟಲೂ ಯೋಗ್ಯತೆ ಇಲ್ಲದ ನಿಮ್ಮ ಸರ್ಕಾರ ಇದ್ದರೆಷ್ಟು ಸತ್ತರೆಷ್ಟು ಸಿಎಂ ಸಿದ್ದರಾಮಯ್ಯನವರೇ” ಎಂದು ಅಶೋಕ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ: ಎಂಟು ತಿಂಗಳಿಂದ ಬಾಡಿಗೆ ಬಾಕಿ ಇರಿಸಿದ ರಾಜ್ಯ ಸರ್ಕಾರ; ಸಂಕಷ್ಟದಲ್ಲಿ ರಾಯಚೂರು ಜಿಲ್ಲೆಯ ಅಂಗನವಾಡಿ ಕೇಂದ್ರಗಳು

ರಾಯಚೂರು ಜಿಲ್ಲೆಯ ಅಂಗನವಾಡಿಗಳಿಗೆ ರಾಜ್ಯ ಸರ್ಕಾರ ಕಳೆದ 6-8 ತಿಂಗಳುಗಳಿನಿಂದ ಬಾಡಿಗೆ ಹಣ ಬಿಡುಗಡೆ ಮಾಡದೆ ಬಾಕಿ ಇರಿಸಿಕೊಂಡಿದೆ. ಇದರಿಂದಾಗಿ ಬಾಡಿಗೆ ಕಟ್ಟಲು ಆಗದೆ ಅಂಗನವಾಡಿ ಕಾರ್ಯಕರ್ತೆಯರು ಗೋಳಾಡುತ್ತಿದ್ದಾರೆ. ಕೆಲವರು ಬಡ್ಡಿಗೆ ಸಾಲ ತಂದು ಬಾಡಿಗೆ ಕಟ್ಟುತ್ತಿದ್ದು, ಇನ್ನು ಕೆಲವರು ಪತಿ ದುಡಿದ ಹಣದಿಂದ ಬಾಡಿಗೆ ಪಾವತಿಸಿ ಅಂಗನವಾಡಿ ಕೇಂದ್ರಗಳನ್ನು ತೆರೆಯುತ್ತಿದ್ದಾರೆ.

ನಗರದಲ್ಲಿರುವ ಅಂಗನವಾಡಿ ಕಟ್ಟಡಕ್ಕೆ 4000 ಸಾವಿರ ರೂಪಾಯಿ ಬಾಡಿಗೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಟ್ಟಡಕ್ಕೆ 2000 ಸಾವಿರ ರೂಪಾಯಿ ಬಾಡಿಗೆ ನೀಡಬೇಕು. ಒಟ್ಟು 2,856 ಅಂಗನವಾಡಿಗಳ ಪೈಕಿ 808 ಬಾಡಿಗೆ ಕಟ್ಟಡಗಳ 4 ತಿಂದ 8 ತಿಂಗಳ ಬಾಡಿಗೆ ಹಣವನ್ನು ಬಾಕಿ ಇರಿಸಲಾಗಿದೆ. ಈ ಬಗ್ಗೆ ಟಿವಿ9 ವರದಿ ಮಾಡಿತ್ತು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ