ಚಿನ್ನದ ದರ ಏರಿಕೆಯಿಂದ ಹೆಣ್ಮಕ್ಕಳು ಮಾಂಗಲ್ಯ ಸರ ಕಟ್ಟಿಕೊಳ್ಳಲು ಆಗುತ್ತಿಲ್ಲ: ಡಿಕೆಶಿ

ಕೇಂದ್ರ ಸರ್ಕಾರದಿಂದ ಚಿನ್ನ ಮತ್ತು ಇತರ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಅವರು ಚಿನ್ನದ ಬೆಲೆ ಏರಿಕೆಯಿಂದ ಮಹಿಳೆಯರು ಮಾಂಗಲ್ಯ ಸರ ಕಟ್ಟಿಕೊಳ್ಳಲು ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇದಲ್ಲದೆ, ಅಡುಗೆ ಅನಿಲ ಮತ್ತು ಇತರ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯನ್ನು ಕೂಡಾ ಖಂಡಿಸಿದ್ದಾರೆ. ರಾಜ್ಯ ಸರ್ಕಾರ ರೈತರ ಹಿತದೃಷ್ಟಿಯಿಂದ ಹಾಲಿನ ಬೆಲೆಯನ್ನು ಏರಿಸಿದೆ ಎಂದೂ ಅವರು ಹೇಳಿದ್ದಾರೆ.

ಚಿನ್ನದ ದರ ಏರಿಕೆಯಿಂದ ಹೆಣ್ಮಕ್ಕಳು ಮಾಂಗಲ್ಯ ಸರ ಕಟ್ಟಿಕೊಳ್ಳಲು ಆಗುತ್ತಿಲ್ಲ: ಡಿಕೆಶಿ
ಡಿಕೆ ಶಿವಕುಮಾರ್
Updated By: ವಿವೇಕ ಬಿರಾದಾರ

Updated on: Apr 17, 2025 | 3:02 PM

ಬೆಂಗಳೂರು, ಏಪ್ರಿಲ್​ 17: ಕೇಂದ್ರ ಸರ್ಕಾರ ಚಿನ್ನದ ಬೆಲೆಯನ್ನು ಏರಿಕೆ ಮಾಡಿದೆ. ಇದರಿಂದ ಕಳೆದ 11 ವರ್ಷಗಳಿಂದ ಹೆಣ್ಣುಮಕ್ಕಳು ಮಾಂಗಲ್ಯ ಸರ ಕಟ್ಟಿಕೊಳ್ಳಲು ಆಗುತ್ತಿಲ್ಲ. ಗ್ರಾಮ್​ಗೆ 40 ಸಾವಿರ ರೂ. ಇದ್ದ ಚಿನ್ನದ ಬೆಲೆ 90 ಸಾವಿರ ರೂ. ಆಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)​ ಕೇಂದ್ರ ಸರ್ಕಾರದ (Central Government) ವಿರುದ್ಧ ವಾಗ್ದಾಳಿ ಮಾಡಿದರು.

ಕೇಂದ್ರ ಸರ್ಕಾರ ಗ್ಯಾಸ್​ ಬೆಲೆ ಏರಿಕೆ ಮಾಡಿದ್ದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್​ ನಾಯಕರು ಬೆಂಗಳೂರಿನ ಫ್ರೀಡಂಪಾರ್ಕ್​ನಲ್ಲಿ ‘ಕೈ’ ನಾಯಕರ ಪ್ರತಿಭಟನೆ ನಡೆಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, 10 ಸಾವಿರ ರೂ. ಇದ್ದ ಒಂದು ಮೊಬೈಲ್​ ಬೆಲೆ 30 ಸಾವಿರ ರೂ. ಆಗಿದೆ. ಹಾಗೇ ಸಿಮೆಂಟ್​ ಮತ್ತು ಉಸುಕಿನ ಬೆಲೆಯನ್ನೂ ಏರಿಕೆ ಮಾಡಿದೆ. ಟೂತ್ ಪೇಸ್ಟ್ 5 ರೂಪಾಯಿ ಇದ್ದದ್ದು 15 ರೂ. ಆಗಿದೆ. 268 ರೂ. ಇದ್ದ ಒಂದು ಮೂಟೆ ಸಿಮೆಂಟ್ ಬೆಲೆ 460 ರೂ. ಆಗಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ರಾಹುಲ್‌ ಗಾಂಧಿ ಅವರು ಭಾರತ್ ಜೊಡೋ ಯಾತ್ರೆ ಮಾಡಿದರು. ವಿಧಾನಸಭೆ ಚುನಾವಣೆಯಲ್ಲಿ ನಾವು 136 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಅಂತ ಹೇಳ್ಳಿದ್ದೆ. ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಅಂದಿದ್ದೆ. ಅದರಂತೆ ಆಯ್ತು. ಮಾಜಿ ಮುಖ್ಯಮಂತ್ರಿಗಳನ್ನೇ ಸೋಲಿಸಿದ್ದೇವೆ ಎಂದರು.

ನಮ್ಮದು ರೈತರು, ಕಾರ್ಮಿಕರ ಪರವಾಗಿ ಇರುವ ಸರ್ಕಾರ. ರೈತರಿಗಾಗಿ ನಾವು ಹಾಲಿನ ದರ 4 ರೂ. ಏರಿಕೆ ಮಾಡಿದ್ದೇವೆ. ಹರಿಯಾಣ, ಅಸ್ಸಾಂ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಪಂಜಾಬ್​ಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ ಎಂದು ತಿಳಿಸಿದರು.

ಇದನ್ನೂ ಓದಿ: ಸಿಲಿಂಡರ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ಬಿಜೆಪಿ ಜನಾಕ್ರೋಶ ಯಾತ್ರೆಗೆ ‘ಕೈ’ ಕೌಂಟರ್

ಕಾಂಗ್ರೆಸ್​ ಮಹಿಳೆಯರ ಮಾಂಗಲ್ಯ ಸರ ಕಿತ್ತುಕೊಳ್ಳುತ್ತೆ: ಮೋದಿ

ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ಕಾರ್ಯಕ್ರಮದಲ್ಲಿ, ಕಾಂಗ್ರೆಸ್​ ಅಧಿಕಾರಕ್ಕೆ ಬಂದ್ರೆ ಮಾಂಗಲ್ಯ ಸರ ಕಿತ್ತುಕೊಳ್ಳುತ್ತದೆ ಎಂದು ವಾಗ್ದಾಳಿ ಮಾಡಿದ್ದರು. ಪ್ರಧಾನಿ ಮೋದಿಯವರ ಈ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಕೇಂದ್ರ ಸರ್ಕಾರ ಚಿನ್ನದ ಬೆಲೆಯನ್ನು ಏರಿಸಿದೆ. ಇದರಿಂದ ಮಹಿಳೆಯರು ಮಾಂಗಲ್ಯ ಸರ ಕಟ್ಟಿಕೊಳ್ಳಲು ಆಗುತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Thu, 17 April 25