ಬೆಂಗಳೂರು, (ಜನವರಿ 19): ನಿಗಮ ಮಂಡಳಿ ನೇಮಕಾತಿ (Karnataka corporation And board) ಪಟ್ಟಿ ಫೈನಲ್ ಆಗಿದ್ದು, ಇನ್ನೇನು ಪಟ್ಟಿ ಪ್ರಕಟವಾಗುವುದೊಂದೇ ಬಾಕಿ ಎನ್ನುವರಷ್ಟರಲ್ಲೇ ಮತ್ತೊಂದು ವಿಘ್ನ ಎದುರಾಗಿದೆ. ಕೆಲ ಕಾರ್ಯಕರ್ತರಿಗೆ ಹಂಚಿಕೆಯಾಗಿರುವ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಈ ಹಿನ್ನೆಲೆ ನಿಗಮ ಮಂಡಳಿಗೆ ಮತ್ತೆ ಬ್ರೇಕ್ ಬೀಳುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ನಿಗಮ ಮಂಡಳಿಗೆ ಮೊದಲ ಹಂತದಲ್ಲಿ ಶಾಸಕರನ್ನು ನೇಮಕ ಮಾಡಬೇಕೆಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ಆದ್ರೆ, ಡಿಸಿಎಂ ಡಿಕೆ ಶಿವಕುಮಾರ್, ಶಾಸಕರ ಜೊತೆಗೆ ಕಾರ್ಯಕರ್ತರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದ್ದರು. ಈ ಇಬ್ಬರ ನಾಯಕರ ಬೇಡಿಕೆಯೊಂದಿಗೆ ಹೈಕಮಾಂಡ್ , ನಿಗಮ ಮಂಡಳಿಗೆ ಶಾಸಕರು ಹಾಗೂ ಕಾರ್ಯಕರ್ತರನ್ನು ಪರಿಗಣಿಸಿ ಪಟ್ಟಿ ಫೈನಲ್ ಮಾಡಿತ್ತು. ಇನ್ನೇನು ಸಂಕ್ರಾಂತಿಗೆ ಬಿಡುಗಡೆ ಮಾಡಬೇಕು ಎನ್ನುವರಷ್ಟರಲ್ಲೇ ಮಾಧ್ಯಮಗಳಲ್ಲಿ ಪ್ರಕಟವಾದ ಪಟ್ಟಿಯನ್ನು ನೋಡಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ: ಇಂದಿನ ಸಭೆಯಲ್ಲಿ ಏನೆಲ್ಲ ಚರ್ಚೆ? ಸುರ್ಜೆವಾಲ ಹೇಳಿದ್ದಿಷ್ಟು
ಕೆಲವು ಕಾರ್ಯಕರ್ತರಿಗೆ ಹಂಚಿಕೆಯಾಗಿರುವ ಪಟ್ಟಿ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಕೆಲ ಮಾಧ್ಯಮಗಳಲ್ಲಿ ಪ್ರಕಟವಾದ ಪಟ್ಟಿಯ ಬಗ್ಗೆಯೂ ಮುಖಂಡರಲ್ಲಿ ಬೇಸರ ತರಿಸಿದ್ದು, ಪಟ್ಟಿ ಬದಲಾಯಿಸುವಂತೆ ಪಟ್ಟು ಹಿಡಿದಿದ್ದಾರೆ. ಈ ಹಿನ್ನಲೆಯಲ್ಲಿ ನಿಗಮ ಮಂಡಳಿ ನೇಮಕಾತಿಯಲ್ಲಿ ಮತ್ತೆ ಗೊಂದಲಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ ಶಾರ್ಟ್ ಲಿಸ್ಟ್ ಆಗಿರುವ ನಿಗಮ ಮಂಡಗಳ ಹಂಚಿಕೆಗೆ ತಾತ್ಕಾಲಿಕ ಬ್ರೇಕ್ ಬೀಳುವ ಸಾಧ್ಯತೆಗಳಿವೆ.
ಇನ್ನು ಕೇವಲ ಶಾಸಕರಿಗೆ ಮಾತ್ರ ನಿಗಮ ಮಂಡಳಿ ಹಂಚಿಕೆ ಮಾಡಿ ಕಾರ್ಯಕರ್ತರಿಗೆ ಎರಡನೇ ಹಂತದಲ್ಲಿ ಹಂಚಿಕೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆದ್ರೆ. ಶಾಸಕರು ಮತ್ತು ಕಾರ್ಯಕರ್ತರಿಗೆ ಒಟ್ಟಿಗೆ ನಿಗಮ ಮಂಡಳಿ ಹಂಚಿಕೆ ಮಾಡಿ ಎಂದು ಎಐಸಿಸಿಯ ಕೆಲ ನಾಯಕರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪಟ್ಟಿ ಬಿಡುಗಡೆ ಮಾಡಬೇಕಾ ಬೇಡ್ವಾ ಎನ್ನುವ ಚಿಂತನೆಯಲ್ಲಿ ರಾಜ್ಯ ನಾಯಕರು ತೊಡಗಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ