ಉಡುಪಿ: ರಾಜ್ಯದಲ್ಲಿ ನೆರೆ ಹಾನಿ ಬಂದು ಜನ ಕಷ್ಟದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ಬರಲಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಯಾಕೆ ಬರುತ್ತಿದ್ದಾರೆ. ಅವರ ಮುಖ ನಮ್ಮ ಕರ್ನಾಟಕಕ್ಕೆ ಯಾಕೆ ಬೇಕು, ಇಲ್ಲಿ ಆಡಳಿತ ನಡೆಸಿದವರ ಮುಖ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ರಾಜ್ಯ ಬಿಜೆಪಿಗೆ ಸವಾಲು ಹಾಕಿದ್ದಾರೆ. ಉಡುಪಿಯಲ್ಲಿ ನಡೆದ ಕಾಂಗ್ರೆಸ್ನ ಬಸ್ ಯಾತ್ರೆಯಲ್ಲಿ (Congress Bus Yatra) ಮಾತನಾಡಿದ ಅವರು, ರಾಜ್ಯಕ್ಕೆ ಕಳಂಕ ಬಂದಾಗ ಆರೋಪಗಳು ಬಂದಾಗ ನಿವಾರಣೆ ಮಾಡಲು ಮೋದಿ ರಾಜ್ಯಕ್ಕೆ ಬರಲಿಲ್ಲ. 25 ಸಂಸದರಿದ್ದಾರೆ, ಅವರನ್ನು ಕರೆಸಿ ಒಂದು ದಿನ ಸಭೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಮೋದಿಗೆ ಖಾತ್ರಿಯಾಗಿದೆ. ಇದನ್ನು ಏನಾದರೂ ಮ್ಯಾಚ್ ಅಪ್ ಮಾಡಲು ಆಗುತ್ತಾ ಎಂದು ನೋಡಲು ರಾಜ್ಯಕ್ಕೆ ಮೋದಿ ಬರುತ್ತಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ಮೊದಲು ಅಮಿತ್ ಶಾ ಘೋಷಿಸಿದ್ದರು. ಈಗ ಬೊಮ್ಮಾಯಿ ಕೈ ಬಿಟ್ಟು ಮೋದಿ ಅವರ ಮುಖ ತೋರಿಸಲು ಹೊರಟಿದ್ದಾರೆ ಎಂದರು.
ಇದನ್ನೂ ಓದಿ: ತ್ರಿಶೂಲ ಹಿಡ್ಕೊಂಡು ಬಿಜೆಪಿ ಕಾರ್ಯಕರ್ತರು ಸಾಯ್ತವ್ರೆ, ಯಾವ ಮಂತ್ರಿ ಮಗನೂ ಬಲಿಯಾಗಲ್ಲ: ಡಿ.ಕೆ.ಶಿವಕುಮಾರ್
ಬಿಜೆಪಿ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಎಲ್ಲಾ ವರದಿಗಳು ಬಿಜೆಪಿ ಸರ್ಕಾರ ಬರುವುದಿಲ್ಲ ಅಂತ ಹೇಳಿವೆ. ಕರ್ನಾಟಕದಲ್ಲಿ 65ಕ್ಕಿಂತ ಹೆಚ್ಚು ಸ್ಥಾನ ಬಿಜೆಪಿಗೆ ಬರುವುದಿಲ್ಲ ಎಂದು ನಮ್ಮ ಪಕ್ಷದ ಆಂತರಿಕ ವರದಿಗಳು ಹೇಳಿವೆ ಎಂದರು. ರಾಜ್ಯದಲ್ಲಿ ಇನ್ನು 60 ದಿನ ಅಷ್ಟೇ ಈ ಸರ್ಕಾರ ಇರುತ್ತದೆ. ಕೊನೆ ದಿನಗಳು ಬಂದಿವೆ, ಕೌಂಡ್ಡೌನ್ ಶುರುವಾಗಿದೆ. ಫೆಬ್ರವರಿ 28ರಂದು ಬಿಜೆಪಿ ಸರ್ಕಾರ ಕ್ಲೋಸ್ ಆಗುತ್ತದೆ. ಬಳಿಕ ರಾಜ್ಯದಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಾಗಲಿದೆ. ಮುಂದಿನ 40 ದಿನದಲ್ಲಿ ಬಿಜೆಪಿಯವರು ಪ್ಯಾಕ್ ಮಾಡಿಕೊಂಡು ಹೋಗುತ್ತಾರೆ ಎಂದರು.
ಡಿ.ಕೆ.ಶಿವಕುಮಾರ್ ಅವರು ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬರುತ್ತಿವೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಡಿಕೆಶಿ, ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಹ್ವಾನ ಬಂದಿದ್ದು ನಿಜ, ಇಲ್ಲ ಅಂತಾ ಹೇಳಲ್ಲ. ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಂಡ್ಯ, ಮದ್ದೂರು ಕಾರ್ಯಕರ್ತರು ನನ್ನ ಜೊತೆ ಮಾತನಾಡಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ನಾನು ಅವಕಾಶ ನೀಡಲ್ಲ ಎಂದರು. ಮಗಳು ಅಥವಾ ಅಳಿಯನ ಸ್ಪರ್ಧೆ ಬಗ್ಗೆ ಮಾತನಾಡಲು ನಿರಾಕರಿಸಿದರು. ಬಿಜೆಪಿಯ ಟಾರ್ಗೆಟ್ ಹಳೆ ಮೈಸೂರು ಬಗ್ಗೆ ಪ್ರತಿಕ್ರಿಯಿಸಿ ಮೊದಲು ಟಾರ್ಗೆಟ್ ಕನಕಪುರ ಮಾಡಲಿ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ