AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾಭಿಮಾನ ಮುಂದೆ HDK ಸೇರಿ JDSನ ಯಾರಿಗೂ ಸುಮಲತಾ ಗೆಲುವು ತಡೆಯಲಾಗಲಿಲ್ಲ: ಮಾಯಾಂಗನೆ ಎಂದಿದ್ದ ಶಿವರಾಮೇಗೌಡ್ರ ಬಾಯಲ್ಲೇ ಈ ಮಾತು

2019ರ ಲೋಕಸಭೆ ಚುನಾವಣೆ ಸ್ವಾಭಿಮಾನದ ಹೆಸರಿನಲ್ಲಿ ದಳಪತಿಗಳ​ ವಿರುದ್ಧ ಸುಮಲತಾ ಅಂಬರೀಶ್ ಗೆದ್ದು ಬೀಗಿದ್ದರು. ಇದೀಗ ಅವರ ಹಾದಿಯನ್ನೇ ಮಾಜಿ ಜೆಡಿಎಸ್​ ನಾಯಕ ತುಳಿದಿದ್ದಾರೆ.

ಸ್ವಾಭಿಮಾನ ಮುಂದೆ HDK ಸೇರಿ JDSನ ಯಾರಿಗೂ ಸುಮಲತಾ ಗೆಲುವು ತಡೆಯಲಾಗಲಿಲ್ಲ: ಮಾಯಾಂಗನೆ ಎಂದಿದ್ದ ಶಿವರಾಮೇಗೌಡ್ರ ಬಾಯಲ್ಲೇ ಈ ಮಾತು
ಎಲ್.ಆರ್.ಶಿವರಾಮೇಗೌಡ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Jan 22, 2023 | 7:10 PM

Share

ಮಂಡ್ಯ: ಅಂದು ಮಂಡ್ಯ (Mandya) ಲೋಕಸಭೆ ಚುನಾವಣೆ ವೇಳೆ ಸುಮಲತಾ ಅಂಬರೀಶ್ (Sumalatha Ambareesh) ಗೌಡ್ತಿ ಅಲ್ಲ. ಅಂಬರೀಶ್ ನಮ್ಮ ಗೌಡ್ರು ಓಕೆ, ಆದ್ರೆ ಸುಮಲತಾ ನಾಯ್ಡು ಜನಾಂಗಕ್ಕೆ ಸೇರಿದವರು. ಜಾತಿ ಬಿಟ್ಟು ಜಾತಿಯವರನ್ನ ಮದುವೆ ಆದಮೇಲೆ ಹೇಗೆ ಗೌಡ್ತಿ ಆಗುತ್ತಾರೆ ಎಂದು ಮಾಜಿ ಸಂಸದ ಎಲ್​.ಆರ್. ಶಿವರಾಮೇಗೌಡ (LR Shivarame Gowda) ಪ್ರಶ್ನೆ ಮಾಡಿದ್ದರು. ಅಲ್ಲದೇ ಸುಮಮಲತಾಗೆ ಮಾಯಾಂಗನೆ ಎಂದು ಜರಿದಿದ್ದರು. ಆದ್ರೆ, ಇದೀಗ ಇದೇ ಶಿವರಾಮೇಗೌಡ ಅವರು ಸ್ವಾಭಿಮಾನ, ಅನುಕಂಪದ ಮುಂದೆ ಯಾವ ದುಡ್ಡು, ಅಧಿಕಾರ ನಡೆಯಲ್ಲ ಎಂದು ಸುಮಲತಾ ಅಂಬರೀಶ್ ಅವರನ್ನು ಉದಾಹರಣೆ ಕೊಟ್ಟು ಜೆಡಿಎಸ್​ (JDS)ನಾಯಕರಿಗೆ ತಿವಿದಿದ್ದಾರೆ.

ಇದನ್ನೂ ಓದಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡ್ತಾರಾ? ಮೌನ ಮುರಿದ ಸಂಸದೆ

ಹೌದು…ಜೆಡಿಎಸ್​ನಿಂದ ಉಚ್ಛಾಟನೆಗೊಂಡಿರುವ ಎಲ್.ಆರ್ ಶಿವರಾಮೇಗೌಡ ಅವರು ಸ್ವಾಭಿಮಾನಿಯಾಗಿ ನಾಗಮಂಗಲ ಕ್ಷೇತ್ರದ ಜನರ ಮತ ಕೇಳುತ್ತಿದ್ದಾರೆ. ಅದರಂತೆ ಇಂದು(ಜನವರಿ 22) ಮಂಡ್ಯ ಜಿಲ್ಲೆ ಮದ್ದೂರಿನ ಕೊಪ್ಪದಲ್ಲಿ ಸ್ವಾಭಿಮಾನಿ ಪರ್ವ ಸಮಾವೇಶದಲ್ಲಿ ಮಾತನಾಡಿದ ಶಿವರಾಮೇಗೌಡ, ನಿಖಿಲ್ ಕುಮಾರಸ್ವಾಮಿ ಸೋಲಿನ ಬಗ್ಗೆ ಪ್ರಸ್ತಾಪ ಮಾಡಿದರು. ಅಲ್ಲದೇ ಸುಮಲತಾ ಅಂಬರೀಶ್ ಅವರನ್ನು ಉದಾಹರಣೆ ಕೊಟ್ಟು ದಳಪತಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಸಂಸತ್ ಚುನಾವಣೆಯಲ್ಲಿ ಜೆಡಿಎಸ್‌ನ ದಿಗ್ಗಜರು ಕೂಗಿ ಅರಚುತ್ತಿದ್ದರು. ಅಂಬಿ ಅಣ್ಣನ ಹೆಂಡತಿ ಸುಮಲತಾ ಬಂದು ಸ್ವಾಭಿಮಾನ ಮತ ಕೇಳಿದ್ರು. ಕುಮಾರಸ್ವಾಮಿ ಸೇರಿ ಜೆಡಿಎಸ್​ನ ಯಾರಿಗೂ ಸುಮಲತಾ ಗೆಲುವು ತಡೆಯಲಾಗಲಿಲ್ಲ. ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಎನ್ನುವುದು ಕಿತ್ಕೊಂಡು ಹೋಯ್ತು. ಸ್ವಾಭಿಮಾನ, ಅನುಕಂಪದ ಮುಂದೆ ಯಾವ ದುಡ್ಡು, ಅಧಿಕಾರ ನಡೆಯಲ್ಲ ಎಂದು ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದರು.

ದಿ.ಜಿ ಮಾದೇಗೌಡ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಮೇಲೆ ಎಲ್​.ಆರ್. ಶಿವರಾಮೇಗೌಡ ಅವರನ್ನು ಕಳೆದ ವರ್ಷ ಜೆಡಿಎಸ್​ನಿಂದ ಉಚ್ಛಾಟನೆ ಮಾಡಲಾಗಿತ್ತು. ನಂತರ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸುಮಲಾತಾ ಅಂಬರೀಶ್ ಅವರ ಮಾದರಿಯಲ್ಲಿ ಸ್ವಾಭಿಮಾನದ ಹೆಸರಿನಲ್ಲಿ ಮತ ಬೇಟೆಗೆ ಮುಂದಾಗಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನದ ಹೆಸರಿನಲ್ಲಿ ನನಗೆ ಮತ ನೀಡಿ ಎಂದು ಸೆರಗೊಡ್ಡಿ ಸಂಸದೆ ಸುಮಲತಾ ಅಂಬರೀಶ್ ಜೆಡಿಎಸ್‌‌ನ್ನು ಮಣಿಸಿದ್ದರು. ಇದೀಗ ಇದೇ ಸ್ವಾಭಿಮಾನದ ಹೆಸರಿನಲ್ಲಿ ಜೆಡಿಎಸ್ ಮೇಲೆ ಸೇಡು ತೀರಿಸಿಕೊಳ್ಳಲು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಮುಂದಾಗಿದ್ದಾರೆ. ಈ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಸ್ವಾಭಿಮಾನದ ಕದನಕ್ಕೆ ರಂಗ ಸಿದ್ಧವಾಗುತ್ತಿದೆ.