ಕರಾವಳಿಯ ಕೋಮು ದ್ವೇಷಕ್ಕೆ ಉತ್ತರ ಕೊಡುವ ಕಾಲ ಬಂದಿದೆ: ರಣದೀಪ್ ಸಿಂಗ್ ಸುರ್ಜೇವಾಲ
Bus Yatra In Mangaluru: ಉಡುಪಿಯಲ್ಲಿ ಪ್ರಜಾಧ್ವನಿ ಯಾತ್ರೆ ಮುಗಿಸಿದ ಕಾಂಗ್ರೆಸ್, ಮಂಗಳೂರಿಗೆ ಎಂಟ್ರಿಕೊಟ್ಟು ಅಬ್ಬರಿಸುತ್ತದೆ. ಮಂಗಳೂರಿನ ಕರಾವಳಿ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ, ಹಿರಿಯ ಮುಖಂಡ ಜನಾರ್ಧನ ಪೂಜಾರಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಯು.ಟಿ.ಖಾದರ್ ಮತ್ತಿತರರು ಭಾಗಿಯಾದರು.

ಮಂಗಳೂರು: ಕರಾವಳಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೋಮು ದ್ವೇಷ ಬಿತ್ತಲಾಗಿದೆ. ಅಂತಹ ಮನಸ್ಥಿತಿಗೆ ಈ ಬಾರಿ ಉತ್ತರ ಕೊಡುವ ಕಾಲ ಬಂದಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕರಾವಳಿ ಮೈದಾನದಲ್ಲಿ ನಡೆಯುತ್ತಿರುವ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಂದ ದೌರ್ಜನ್ಯ ನಡೆಯುತ್ತಿದೆ ಎಂದರು.
ಕರಾವಳಿ ಭಾಗದಲ್ಲಿ ಹಿಂದುತ್ವ ಅಮಲು ಬಿತ್ತಲಾಗಿದೆ. ವೇದ ಉಪನಿಷತ್ ಮತ್ತು ಭಗವದ್ಗೀತೆಯಲ್ಲೂ ಹಿಂದುತ್ವ ಪದದ ಉಲ್ಲೇಖವಿಲ್ಲ. ಹಿಂದುತ್ವ ಎನ್ನುವ ಪದ ಆರ್ಎಸ್ಎಸ್ ಮುಖ್ಯಕಚೇರಿಯಲ್ಲಿ ಉದ್ಭವವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಹಂಕಾರದ ವ್ಯಕ್ತಿತ್ವ ಹೊಂದಿದ್ದು, ಬಿಜೆಪಿಯವರ ಆಲೋಚನೆ, ಕ್ರಿಯೆ ಎಲ್ಲವೂ ಅಹಂಕಾರದಿಂದ ಕೂಡಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Congress Manifesto: ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ ಘೋಷಿಸಿದ ಕಾಂಗ್ರೆಸ್: ಪ್ರಣಾಳಿಕೆಯ 10 ಅಂಶಗಳು ಇಂತಿವೆ
ಚುನಾವಣೆ ವೇಳೆ ನೀಡಿದ ಯಾವ ಭರವಸೆಯನ್ನೂ ಬಿಜೆಪಿ ಈಡೇರಿಸಿಲ್ಲ. ಅಂತಹ ಮೂರ್ಖರು ಇಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾರೆ. ಈ ಪ್ರಜಾಧ್ವನಿ ಯಾತ್ರೆ ಮೂಲಕ ಬದಲಾವಣೆ ಗಾಳಿ ಬೀಸಬೇಕಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಕಿತ್ತು ಒಗೆಯುವ ಕಾಲ ಬಂದಿದೆ ಎಂದರು. ಅಲ್ಲದೆ ಮಂಗಳೂರಿನಲ್ಲಿ ಇತಿಹಾಸ ರಚಿತವಾಗಲಿದೆ. ಕರಾವಳಿಯ ಅಭಿವೃದಿಗೆ 11 ಅಂಶದ ಯೋಜನೆಯ ಅನಾವಣಗೊಳಿಸಲಾಗಿದೆ ಎಂದರು.
ಬಿಜೆಪಿಯವರು ನಿಮ್ಮನ್ನು ಭಾವನೆಗಳ ಮೇಲೆ ಕೆರಳಿಸುತ್ತಾರೆ: ಡಿಕೆಶಿ
ಬಿಜೆಪಿಯವರು ನಿಮ್ಮನ್ನು ಭಾವನೆಗಳ ಮೇಲೆ ಕೆರಳಿಸುತ್ತಾರೆ. ಆದರೆ ನಮ್ಮದು ಭಾವನೆ ಇಲ್ಲ, ನಮ್ಮದೇನಿದ್ದರೂ ಬದುಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಪಕ್ಷ ನೀಡಿದ ಎಲ್ಲ ಭರವಸೆ ಈಡೇರಿಸುತ್ತೇವೆ. ಕರಾವಳಿ ಅಭಿವೃದ್ಧಿಗೆ ಅಥಾರಿಟಿ ಮಾಡಿ ಎರಡೂವರೆ ಸಾವಿರ ಕೋಟಿ ಕೊಡುತ್ತೇವೆ ಎಂದರು.
ಟಿಕೆಟ್ಗಾಗಿ ಅರ್ಜಿ ಹಾಕಿದವರೆಲ್ಲರೂ ಶಾಸಕನಾಗಲು ಆಗಲ್ಲ, ಒಬ್ಬರಿಗೆ ಟಿಕೆಟ್ ಕೊಡುತ್ತೇವೆ. ಆದರೆ ಟಿಕೆಟ್ ಮುಖ್ಯ ಅಲ್ಲ, ಕಾಂಗ್ರೆಸ್ ಪಕ್ಷ ನಮಗೆ ಮುಖ್ಯ. ಹಾಸನ ಮತ್ತು ನನಗೆ ಮೊದಲಿನಿಂದಲೂ ಜಂಗೀ ಕುಸ್ತಿ ಇದೆ. ಅಂತಹ ಜಾಗದಲ್ಲೇ ನಿನ್ನೆ ಐವತ್ತು ಸಾವಿರ ಜನ ಸೇರಿದ್ದರು. ಈ ಮೂಲಕ ಬದಲಾವಣೆ ಆಗುತ್ತಾ ಇದೆ ಎಂಬ ಭರವಸೆ ನಮಗಿದೆ ಎಂದರು.
ನಿಮ್ಮಲ್ಲೊಬ್ಬ ಪವರ್ ಮಿನಿಸ್ಟರ್ ಇದ್ದಾನೆ, 200 ಯುನಿಟ್ ಉಚಿತ ವಿದ್ಯುತ್ ಹೇಗೆ ಕೊಡುತ್ತೀರಿ ಎಂದು ಪ್ರಶ್ನಿಸುತ್ತಿದ್ದಾನೆ. ಹತ್ತು ಸಾವಿರ ಮೆಗಾ ವ್ಯಾಟ್ ಇತ್ತು ಮಿಸ್ಟರ್ ಸುನೀಲ್. ನಾನು ಅಧಿಕಾರ ಬಿಡುವಾಗ 20 ಸಾವಿರ ಮೆಗಾ ವ್ಯಾಟ್ ಮಾಡಿದ್ದೇನೆ. ಅತೀ ದೊಡ್ಡ ಸೋಲಾರ್ ಪಾರ್ಕ್ ಕೂಡ ಮಾಡಿದ್ದೇನೆ ಎಂದರು. ಪುತ್ತೂರಿನಿಂದ ಬಿಜೆಪಿಯ ಅಶೋಕ್ ರೈ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಮುಂದೆಯೂ ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್ಗೆ ಬರುತ್ತಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:58 pm, Sun, 22 January 23