ಬಿಜೆಪಿಗೆ ಆಡಳಿತ ನಡೆಸಲು ಆಗಲ್ಲ, ವಿಪಕ್ಷದಲ್ಲಿರಲು ಸೂಕ್ತ: ಚಿತ್ರದುರ್ಗದಲ್ಲಿ ಡಿ.ಕೆ.ಶಿವಕುಮಾರ್ ಹೇಳಿಕೆ
ಚಿತ್ರದುರ್ಗ ನಗರದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ 12 ಮಂದಿ ಟಿಕೆಟ್ ಆಕಾಂಕ್ಷಿಗಳು ಉಪಸ್ಥಿತರಿದ್ದರು. ಮಾಜಿ ಎಂಎಲ್‌ಸಿ ರಘು ಆಚಾರ್ ಸಮಾವೇಶಕ್ಕೆ ಗೈರಾಗಿದ್ದಾರೆ. ಸಮಾವೇಶದಲ್ಲಿದ್ದ ಅಲ್ಲಾ ಟಿಕೆಟ್ ಆಕಾಂಕ್ಷಿಗಳಿಗೆ ಡಿ.ಕೆ.ಶಿವಕುಮಾರ್ ಅವರು ಪ್ರತಿಜ್ಞೆ ಬೋಧಿಸಿದರು.
ಚಿತ್ರದುರ್ಗ: ಬಿಜೆಪಿ ಪಕ್ಷ ಆಡಳಿತ ನಡೆಸಲು ಆಗಲ್ಲ, ವಿರೋಧ ಪಕ್ಷದ ಸ್ಥಾನದಲ್ಲಿ ನಿಲ್ಲಲು ಸೂಕ್ತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿದ್ದಾರೆ. ನಗರದ ಹಳೇ ಮಾಧ್ಯಮಿಕ ಶಾಲೆ ಮೈದಾನದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಕತ್ತರಿ ತಯಾರಿಸುತ್ತದೆ, ನಾವು ಸೂಜಿ ತಯಾರಿಸುತ್ತೇವೆ. ಬಿಜೆಪಿ ಕತ್ತರಿಸುವ ಕೆಲಸ ಮಾಡುತ್ತೆ, ನಾವು ಒಲಿಯುವ ಕೆಲಸ ಮಾಡುತ್ತೇವೆ ಎಂದರು. ಅಲ್ಲದೆ, ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಈ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಹೇಳಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ (Narendra Modi) ನೋಡಿ ಮತ ನೀಡಿ ಎಂದು ಶಾ ಹೇಳುತ್ತಿದ್ದಾರೆ. ಬಿಜೆಪಿ ನಾಯಕರು ಭಾವನೆಗಳ ಮೇಲೆ ಮತ ಕೇಳುತ್ತಿದ್ದಾರೆ. ಆದರೆ ನಾವು ಬದುಕಿನ ಮೇಲೆ ಮತ ಕೇಳುತ್ತೇವೆ.
ಇನ್ನು ಭಾಷಣದ ವೇಳೆ ವೇದಿಕೆ ಮೇಲೆ ನಿಂತಿದ್ದ ಕಾರ್ಯಕರ್ತರನ್ನು ಕೆಳಗಿಳಿಯಲು ಸೂಚನೆ ನೀಡಿದ ಡಿ.ಕೆ.ಶಿವಕುಮಾರ್, ನಾವು ಕುರ್ಚಿಗಾಗಿ ಕಾಯುತ್ತಿದ್ದೇವೆ, ಇವರು ಕುರ್ಚಿ ಇದ್ದರೂ ನಿಂತಿದ್ದಾರೆ ಎಂದು ಕಿಚಾಯಿಸಿದರು. ಮುಂದುವರೆದ ಭಾಷಣ ಮಾಡಿದ ಅವರು, ಬಿಜೆಪಿ ಜಾತಿ, ಧರ್ಮದ ಸಂಘರ್ಷ ಹುಟ್ಟು ಹಾಕುತ್ತದೆ. ಬಿಜೆಪಿ ವಿರೋಧ ಪಕ್ಷದಲ್ಲಿ ಇರಲು ಸೂಕ್ತವಾಗಿದೆ. ಬಿಜೆಪಿಗೆ ಆಡಳಿತ ನಡೆಸಲು ಆಗುವುದಿಲ್ಲ. ಜನರಿಗಾಗಿ ಅಭಿವೃದ್ಧಿ ಮಾಡಲು ಬಿಜೆಪಿಗೆ ಆಗಲ್ಲ ಎಂದು ವಾಗ್ದಾಳಿ ನಡೆಸಿದರು.
ಸಮಾವೇಶಕ್ಕೆ ಕಾಂಗ್ರೆಸ್ ಎಂಎಲ್‌ಸಿ ರಘು ಆಚಾರ್ ಗೈರು
ಸಮಾವೇಶದಲ್ಲಿ ಕ್ಷೇತ್ರದ 12 ಟಿಕೆಟ್ ಆಕಾಂಕ್ಷಿಗಳು ಭಾಗಿಯಾಗಿದ್ದಾರೆ. 2018ರಲ್ಲಿ ಪರಾಜಿತಗೊಂಡಿದ್ದ ಹನುಮಲಿ ಷಣ್ಮುಕಪ್ಪ, ನಟ ದೊಡ್ಡಣ್ಣ ಅಳಿಯ, ಉದ್ಯಮಿ ಕೆ.ಸಿ.ವಿರೇಂದ್ರ (ಪಪ್ಪಿ), ಮಾಜಿ ಶಾಸಕ ಎಸ್.ಕೆ ಬಸವರಾಜನ್ ಸೇರಿ ಇತರೆ ಕೈ ಟಿಕೆಟ್ ಆಕಾಂಕ್ಷಿಗಳು ಉಪಸ್ಥಿತರಿದ್ದರು. ಆದರೆ ಕಾಂಗ್ರೆಸ್ ಎಂಎಲ್‌ಸಿ ರಘು ಆಚಾರ್ ಮಾತ್ರ ಗೈರು ಆಗಿದ್ದಾರೆ. ಅದಾಗ್ಯೂ, ಪಕ್ಷ ಟಿಕೆಟ್ ನೀಡಿದವರ ಗೆಲುವಿಗೆ ಶ್ರಮಿಸುತ್ತೇವೆಂದು ಎಂದು ಟಿಕೆಟ್ ಆಕಾಂಕ್ಷಿಗಳಿಗೆ ಪಕ್ಷದ ರಾಜ್ಯಾಧ್ಯಕ್ಷಕರು ಪ್ರತಿಜ್ಞೆ ಬೋಧಿಸಿದರು.
ಇದನ್ನೂ ಓದಿ: DK Shivakumar: ನನ್ನ ಮಗಳ ಫೀಸ್ ಬಗ್ಗೆ ಮಾಹಿತಿ ಬೇಕಂತೆ; ಸಿಬಿಐಗೆ ಬುದ್ಧಿ ಹೇಳುತ್ತೇನೆ ಎಂದ ಡಿಕೆ ಶಿವಕುಮಾರ್
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೆ.ಸಿ.ವೀರೇಂದ್ರಗೆ ಡಿಕೆಶಿ ವಾರ್ನಿಂಗ್
ಸಮಾವೇಶದಲ್ಲಿ ಕೆ.ಸಿ.ವೀರೇಂದ್ರ ಬೆಂಬಲಿಗರು ಭಿತ್ತಿಪತ್ರ ಪ್ರದರ್ಶಿಸುತ್ತಿದ್ದರು. ಇದನ್ನು ಗಮನಿಸಿದ ಡಿ.ಕೆ.ಶಿವಕುಮಾರ್ ಅವರು, ಬೆಂಬಲಿಗರಿಂದ ಭಿತ್ತಿಪತ್ರ ಪ್ರದರ್ಶನ ತಡೆಯುವಂತೆ ವೀರೇಂದ್ರ ಅವರಿಗೆ ಸೂಚನೆ ನೀಡಿದರು. ಡಿ.ಕೆ.ಶಿವಕುಮಾರ್ ಅವರು ಸೂಚಿಸುತ್ತಿದ್ದಂತೆ ವೀರೇಂದ್ರ ಅವರ ಬೆಂಬಲಿಗರ ಬಳಿ ಇದ್ದ ಭಿತ್ತಿಪತ್ರಗಳನ್ನು ತೆರವುಗೊಳಿಸಲಾಯಿತು.
ಕಾಂಗ್ರೆಸ್ ಸಮಾವೇಶದಲ್ಲಿ ಕುರ್ಚಿಗಳು ಖಾಲಿ ಖಾಲಿ
ಸಮಾವೇಶದಲ್ಲಿ ಪಕ್ಷದ ನಾಯಕರು ನಿರೀಕ್ಷಿಸಿದಂತೆ ಜನರು ಸೇರಿಸಲ್ಲ ಎಂಬುದನ್ನು ಖಾಲಿ ಕುರ್ಚಿಗಳು ತೋರಿಸುತ್ತಿದ್ದವು. ಅಂದರೆ, ಒಂದಷ್ಟು ಖುರ್ಚಿಗಳು ಖಾಲಿ ಖಾಲಿಯಾಗಿದ್ದವು. ಸಮಾವೇಶದ ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯಾದ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಹೆಚ್.ಆಂಜನೇಯ, ಡಿ.ಸುಧಾಕರ್ ಸೇರಿ ಮುಖಂಡರ ಉಪಸ್ಥಿತರಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:52 pm, Thu, 9 February 23