ವ್ಯಕ್ತಿ ಪ್ರತಿಷ್ಠೆಗೆ ಸಾಕ್ಷಿಯಾಗಲಿದೆ ಸಂಡೂರು ಉಪಚುನಾವಣೆ: ಯಾರಿಗೆ ಟಿಕೆಟ್​​?

|

Updated on: Oct 18, 2024 | 9:23 AM

ಕರ್ನಾಟಕದ ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್​ 13 ರಂದು ಉಪಚುನಾವಣೆ ನಡೆಯಲಿದೆ. ಸಂಡೂರು ವಿಧಾನಸಭಾ ಕ್ಷೇತ್ರ ಅಖಾಡ ರಂಗೇರಿದೆ. ಸಂಡೂರು ಕ್ಷೇತ್ರ ಉಪಚುನಾವಣೆ ವ್ಯಕ್ತಿ ಪ್ರತಿಷ್ಠೆಗೆ ಸಾಕ್ಷಿಯಾಗಲಿದೆ.

ವ್ಯಕ್ತಿ ಪ್ರತಿಷ್ಠೆಗೆ ಸಾಕ್ಷಿಯಾಗಲಿದೆ ಸಂಡೂರು ಉಪಚುನಾವಣೆ: ಯಾರಿಗೆ ಟಿಕೆಟ್​​?
ಬಿ ನಾಗೇಂದ್ರ, ಜನಾರ್ದನ ರೆಡ್ಡಿ, ಶ್ರೀರಾಮುಲು
Follow us on

ಬಳ್ಳಾರಿ, ಅಕ್ಟೋಬರ್​ 18: ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್​ 13 ರಂದು ಉಪಚುನಾವಣೆ (Karnataka By-Election) ನಡೆಯಲಿದೆ. ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ (Sandur By-Election) ಉಪಚುನಾವಣೆ ನಡೆಯಲಿದೆ. ಮೂರು ಕ್ಷೇತ್ರಗಳ ಉಪಚುನಾವಣೆ ವ್ಯಕ್ತಿ ಪ್ರತಿಷ್ಠೆಗೆ ಸಾಕ್ಷಿಯಾಗಲಿವೆ. ಅದರಲ್ಲಂತೂ ಸಂಡೂರು ವಿಧಾನಸಭಾ ಕ್ಷೇತ್ರ ಅಖಾಡ ರಂಗೇರಿದೆ. ಬಿಜೆಪಿ ಮತ್ತು ಕಾಂಗ್ರೆಸ್​​ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ.

ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಶ್ರೀರಾಮುಲು ಮತ್ತು ಬಿ ನಾಗೇಂದ್ರ ಸಂಡೂರು ಉಪಚುನಾವಣೆಯನ್ನು ವರ್ಚಸ್ಸಾಗಿ ತೆಗೆದುಕೊಂಡಿದ್ದಾರೆ. ಕಳೆದ ವಿಧಾಸನಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಶ್ರೀರಾಮುಲು ಅವರಿಗೆ ಸೋಲಾಗಿತ್ತು. ಈ ಸೋಲಿನಿಂದ ಶ್ರೀರಾಮುಲುಗೆ ಮುಖಭಂಗವಾಗಿದೆ. ಈ ಸೋಲಿನ ಸೇಡನ್ನು ತೇರಿಸಿಕೊಳ್ಳಲು ಶ್ರೀರಾಮುಲು ಹವಣಿಸುತ್ತಿದ್ದಾರೆ. ಹೀಗಾಗಿ ಶ್ರೀರಾಮುಲು ಅವರಿಗೆ ಸಂಡೂರು ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಚೆ ಇದೆ ಎಂದು ಹೇಳಲಾಗುತ್ತಿದೆ.

ಆದರೆ, ಆಪ್ತ ಸ್ನೇಹಿತನಾದ ಜನಾರ್ಧನ ರೆಡ್ಡಿ ಬೆಂಬಲ ಸಿಗುತ್ತಾ ಕಾದು ನೋಡಬೇಕಿದೆ. ಹೌದು, ಜನಾರ್ಧನ ರೆಡ್ಡಿ ಬಿಜೆಪಿ ಸೇರಿ, ಶ್ರೀರಾಮುಲು ಜೊತೆ ಮತ್ತೆ ಹಳೇ ದೋಸ್ತಿ ಮುಂದುವರೆಸುವ ಮಾತುಗಳನ್ನು ಆಡಿದ್ದಾರೆ. ಆದರೆ, ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ನಡುವೆ ಎಲ್ಲವೂ ಸರಿ ಇಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ರೆಡ್ಡಿ ಶ್ರೀರಾಮುಲುಗೆ ಬೆಂಬಲ ನೀಡುತ್ತಾರಾ ಕಾದುನೋಡಬೇಕಿದೆ.

ಇನ್ನು, ಸಂಡೂರು ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಶ್ರೀರಾಮುಲು ಸೇರಿದಂತೆ 19 ಜನ ಆಕಾಂಕ್ಷಿಗಳಿದ್ದಾರೆ. ಬಿಜೆಪಿಯಿಂದ ಬಂಗಾರು ಹನುಮಂತು, ಕೆ‌ಎಸ್ ದಿವಾಕರ್, ದೇವೇಂದ್ರಪ್ಪ, ಶ್ರೀರಾಮುಲು ಟಿಕೆಟ್‌ಗಾಗಿ ಪೈಪೋಟಿಯಲ್ಲಿದ್ದಾರೆ. ಆದರೆ, ಯಾರಿಗೆ ಟಿಕೆಟ್​ ಸಿಗುತ್ತೆ ಕಾದುನೋಡಬೇಕಿದೆ. ಟಿಕೆಟ್​ ಯಾರಿಗೇ ಸಿಕ್ಕರೂ ನೇತೃತ್ವ ಬಹಳ ಮುಖ್ಯಪಾತ್ರ ವಹಿಸುತ್ತದೆ. ಮೇಲ್ನೋಟಕ್ಕೆ ಸಂಡೂರು ಚುನಾವಣೆಯ ನೇತೃತ್ವವನ್ನು ಬಿಜೆಪಿ ಜನಾರ್ದನ ರೆಡ್ಡಿಗೆ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಉಪ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಭರದ ಸಿದ್ಧತೆ: ಡಿಕೆ ಸುರೇಶ್​ ಹೆಸರಿನಲ್ಲಿ ಮಾಜಿ ಶಾಸಕರಿಂದ ಚಂಡಿಕಾಯಾಗ

ಮಾಜಿ ಸಚಿವ ಬಿ ನಾಗೇಂದ್ರ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದು, ಸಂಡೂರು ಚುನಾವಣೆಯಲ್ಲಿ ಧುಮುಕಿದ್ದಾರೆ. ಬಿಜೆಪಿ ಮತ್ತು ಗಣಿ ಧಣಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ನಾನಾ ತಂತ್ರ ಹೆಣೆಯುತ್ತಿದ್ದಾರೆ. ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್​ ಅಹ್ಮದ್​ ಈಗಾಗಲೇ ಸಂಡೂರು ಚುನಾವಣೆ ಉಸ್ತುವಾರಿ ಬಿ ನಾಗೇಂದ್ರ ಎಂದು ಘೋಷಿಸಿದ್ದಾರೆ. ಈ ಮೂಲಕ ಹಾಲಿ ​ಮತ್ತು ಮಾಜಿ ಸಚಿವರ ಸಾರಥ್ಯದಲ್ಲಿ ಸಂಡೂರು ಚುನಾವಣೆ ಎದುರಿಸಲು ಕಾಂಗ್ರೆಸ್​ ಸಿದ್ದವಾಗಿದೆ.

ಕಾಂಗ್ರೆಸ್​ನಿಂದ ಸಂಸದ ಇ ತುಕಾರಾಂ ಪತ್ನಿ ಅನ್ನಪೂರ್ಣ ತುಕಾರಾಂ ಅಥವಾ ಪುತ್ರಿ ಚೈತನ್ಯ ತುಕಾರಾಂ, ತುಮಟಿ ಲಕ್ಷ್ಮಣ, ಸಂದೀಪ ಪೈಪೋಟಿಯಲ್ಲಿದ್ದಾರೆ. ಕಾಂಗ್ರೆಸ್​ ಹೈಕಮಾಂಡ್​ ಇ ತುಕಾರಾಂ ಅವರ ಕುಟುಂಬದವರಿಗೆನೇ ಟಿಕೆಟ್​ ನೀಡಲು ಇಚ್ಛೆ ಹೊಂದಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಶಾಸಕರಾಗಿದ್ದ ಇ ತುಕಾರಾಂ ಹೈಕಮಾಂಡ್​ ಸೂಚನೆ ಮೇರೆಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಘಟಾನುಘಟಿ ನಾಯಕ ಶ್ರೀರಾಮುಲು ವಿರುದ್ಧ ಕಣಕ್ಕೆ ಇಳಿದು, ಅದೃಷ್ಟ ಪರೀಕ್ಷೆ ಮುಂದಾಗಿದ್ದರು. ಕೊನೆಗೆ ಗೆಲವು ಸಾಧಿಸಿದರು. ಪಕ್ಷ ನಿಷ್ಠೆಯ ಕಾರಣಕ್ಕೆ ಇ ತುಕಾರಂ ಅವರ ಕುಟುಂಬದವರಿಗೆ ಟಿಕೆಟ್​ ನೀಡಲು ಹೈಕಮಾಂಡ್​ ಮನಸ್ಸು ಮಾಡಿದೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಸಂಡೂರು ಕ್ಷೇತ್ರ ಗೆಲ್ಲಲು ಎರಡೂ ರಾಷ್ಟ್ರೀಯ ಪಕ್ಷಗಳು ತಂತ್ರ-ಪ್ರತಿತಂತ್ರ ಹೆಣೆಯುತ್ತಿವೆ. ಆದರೆ, ಮೊದಲು ಎರಡೂ ಪಕ್ಷದಲ್ಲಿರುವ ಭಿನ್ನಮತ ಶಮನವಾಗಬೇಕಿದೆ. ಜನಾರ್ದನ ರೆಡ್ಡಿ ಮತ್ತು ಬಿ ನಾಗೇಂದ್ರ ಗುರು ಶಿಷ್ಯರ ರಾಜಕೀಯ ಕಾದಾಟಕ್ಕೆ ಸಂಡೂರು ಉಚುನಾವಣೆ ಸಾಕ್ಷಿಯಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:18 am, Fri, 18 October 24