ರಾಜ್ಯ ರಾಜಕಾರಣದ ಮೇಲೆ ಕಣ್ಣು: ಹೇಗಿದೆ ಗೊತ್ತಾ ನಿಖಿಲ್, ಪ್ರತಾಪ್, ಸುಮಲತಾ ಪ್ಲ್ಯಾನ್?
2028ರ ವಿಧಾನಸಭಾ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ, ಪ್ರತಾಪ್ ಸಿಂಹ ಮತ್ತು ಸುಮಲತಾ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ನಿಖಿಲ್ ಮಂಡ್ಯ ಅಥವಾ ಮದ್ದೂರಿನಿಂದ ಸ್ಪರ್ಧಿಸಲು ಯೋಜಿಸುತ್ತಿದ್ದರೆ, ಪ್ರತಾಪ್ ಮೈಸೂರಿನ ಚಾಮರಾಜ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಸುಮಲತಾ ಕೂಡ ರಾಜ್ಯ ರಾಜಕಾರಣ ಪ್ರವೇಶಿಸುವ ಇರಾದೆ ಹೊಂದಿದ್ದು, ತಮ್ಮ ಭವಿಷ್ಯದ ರಾಜಕೀಯ ತಂತ್ರಗಳ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸೋದಾಗಿ ತಿಳಿಸಿದ್ದಾರೆ.

ಬೆಂಗಳೂರು, ಜನವರಿ 09: 2028ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಹಲವು ನಾಯಕರು ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ . ಯಾವ ಕ್ಷೇತ್ರದಲ್ಲಿ ತಾವು ಚುನಾವಣೆಗೆ ಸ್ಪರ್ಧಿಸಿದ್ರೆ ಒಳಿತು, ರಣತಂತ್ರ ಹೇಗಿರಬೇಕು ಎಂಬ ಬಗ್ಗೆ ಲೆಕ್ಕಾಚಾರ ನಡೆಸುತ್ತಿದ್ದಾರೆ. ಈ ಸಾಲಿನಲ್ಲಿ ಈಗಾಗಲೇ ಬಿಜೆಪಿಯ ಪ್ರತಾಪ್ ಸಿಂಹ ಮತ್ತು ಸುಮಲತಾ ಹೆಸರು ಕೇಳಿಬಂದಿತ್ತು. ಇದಕ್ಕೀಗ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಹೆಸರೂ ಸೇರ್ಪಡೆಯಾಗಿದೆ. ಹ್ಯಾಟ್ರಿಕ್ ಸೋಲಿನ ಬಳಿಕ ಪುಟಿದೇಳಲು ಜೆಡಿಎಸ್ ಯುವ ನಾಯಕ ತೆರೆಮರೆಯ ತಯಾರಿ ನಡೆಸಿದ್ದಾರೆ.
ಮಂಡ್ಯ ಅಥವಾ ಮದ್ದೂರಿನಿಂದ ನಿಖಿಲ್ ಸ್ಪರ್ಧೆ?
2028ರ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ನಿಖಿಲ್, ಮಂಡ್ಯಕ್ಕೆ ಮತ್ತೆ ಎಂಟ್ರಿ ಕೊಡಲು ಪ್ಲ್ಯಾನ್ ಮಾಡಿದ್ದಾರೆ. 2019ರ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಿದ್ದ ನಿಖಿಲ್ ಪರಾಭವಗೊಂಡಿದ್ದರು. ಈ ನಡುವೆ ಇಲ್ಲಿಂದಲೇ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಇರಾದೆ ಇವರದ್ದು ಎನ್ನಲಾಗಿದೆ. ಹೀಗಾಗಿ ಮಂಡ್ಯದಲ್ಲೇ ಮನೆ ಮಾಡಲು ನಿಖಿಲ್ ಕುಮಾರಸ್ವಾಮಿ ಮುಂದಾಗಿದ್ದು, ಮಂಡ್ಯ ಅಥವಾ ಮದ್ದೂರು ವಿಧಾನಸಭಾ ಕ್ಷೇತ್ರದ ಮೇಲೆ ಒಲವು ಹೊಂದಿದ್ದಾರೆ ಎನ್ನಲಾಗಿದೆ. ರಾಮನಗರಕ್ಕಿಂತ ಮಂಡ್ಯವೇ ಸುಲಭ ಎಂಬುದು ಜೆಡಿಎಸ್ ಲೆಕ್ಕಾಚಾರವೂ ಆಗಿರುವ ಕಾರಣ ಮತ್ತೆ ಮಂಡ್ಯಕ್ಕೆ ಬರಲು ನಿಖಿಲ್ ಸಿದ್ಧತೆ ನಡೆಸಿದ್ದಾರೆ. ಸದ್ಯ ಮಂಡ್ಯದಲ್ಲಿ ಮನೆ ಹುಡುಕಲು ಬೆಂಬಲಿಗರಿಗೆ ನಿಖಿಲ್ ಸೂಚಿಸಿದ್ದು, ವಾರಕ್ಕೊಮ್ಮೆ ಮಂಡ್ಯದಲ್ಲೇ ಉಳಿಯಲು ನಿರ್ಧರಿಸಿದ್ದಾರಂತೆ. ಈ ಹಿಂದೆ ವಾರಕೊಮ್ಮೆ ಕ್ಷೇತ್ರಕ್ಕೆ ಬರುತ್ತೇನೆ ಎಂದು ಹೆಚ್ಡಿಕೆ ಹೇಳಿದ್ದರೂ ಅಪರೂಪಕ್ಕೊಮ್ಮೆ ಮಾತ್ರ ಮಂಡ್ಯ ಜಿಲ್ಲೆಗೆ ಬರುತ್ತಿದ್ದಾರೆ. ಕೇಂದ್ರ ಸಚಿವ ಜವಾಬ್ದಾರಿ, ಅನಾರೋಗ್ಯದಿಂದ ವಾರಕ್ಕೊಮ್ಮೆ ಭೇಟಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈಗ ಮಗನ ಮೂಲಕ ಜಿಲ್ಲೆ ಮೇಲೆ ಹಿಡಿತ ಸಾಧಿಸಲು HDK ಕೂಡ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕೇಂದ್ರದ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ ಸರ್ಕಾರ; ವಿಶೇಷ ಅಧಿವೇಶನ ಕರೆಯಲು ತೀರ್ಮಾನ
ಇನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿದ್ದಾರೆ. ಜನವರಿ 5ರಂದು ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಆಯೋಜಿಸಿದ್ದ ಸ್ನೇಹ ಬಳಗದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಬಳಿಕ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣದತ್ತ ಹೆಜ್ಜೆ ಇಡುವುದಾಗಿ ಪರೋಕ್ಷವಾಗಿ ಹೇಳಿದ್ದ ಪ್ರತಾಪ್ , ಚಾಮರಾಜ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗ್ತಿದೆ. ಮತ್ತೊಂದೆಡೆ ಮಾಜಿ ಸಂಸದೆ ಸುಮಲತಾ ಕೂಡ ರಾಜ್ಯ ರಾಜಕಾರಣದತ್ತ ಒಲವು ತೋರಿದ್ದು, ಮುಂದಿನ ಚುನಾವಣಾ ರಾಜಕೀಯದ ಬಗ್ಗೆ ನಮ್ಮ ಪಕ್ಷದ ನಾಯಕರ ಜೊತೆ ಚರ್ಚಿಸುವೆ ಎಂದಿದ್ದಾರೆ. ಆದರೆ ಅವರು ಯಾವ ಕ್ಷೇತ್ರದಿಂದ ಕಣಕ್ಕಿಳಿಯುವ ಇರಾದೆ ಹೊಂದಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:10 pm, Fri, 9 January 26
