ಕೇಂದ್ರ ಸರ್ಕಾರ ನಯಾ ಪೈಸೆ ಜಿಎಸ್ಟಿ ಬಾಕಿ ಉಳಿಸಿಕೊಂಡಿಲ್ಲ: ಪ್ರಲ್ಹಾದ್ ಜೋಶಿ
ಕರ್ನಾಟಕಕ್ಕೆ ಬರಬೇಕಿದ್ದ ಅನುದಾನದಲ್ಲಿ ಕಡಿಮೆಯಾಗಿದೆ ಎಂದು ಆರೋಪಿಸಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್ ಸರ್ಕಾರ ನಾಳೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದೆ. ಈ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರ ಸರ್ಕಾರ ನಯಾ ಪೈಸೆ ಜಿಎಸ್ಟಿ ಬಾಕಿ ಉಳಿಸಿಕೊಂಡಿಲ್ಲ. ಒಟ್ಟಾರೆ ಕೇಂದ್ರ ಸರ್ಕಾರ ರಾಜ್ಯಕ್ಕೆ 2.36 ಲಕ್ಷ ಕೋಟಿ ನೀಡುತ್ತಿದೆ ಎಂದರು.
ನವದೆಹಲಿ, ಫೆ.6: ಕೇಂದ್ರ ಸರ್ಕಾರ ನಯಾ ಪೈಸೆ ಜಿಎಸ್ಟಿ ಬಾಕಿ ಉಳಿಸಿಕೊಂಡಿಲ್ಲ. ಒಟ್ಟಾರೆ ಕೇಂದ್ರ ಸರ್ಕಾರ ರಾಜ್ಯಕ್ಕೆ 2.36 ಲಕ್ಷ ಕೋಟಿ ನೀಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದರು.
ಹಣಕಾಸು ಆಯೋಗ ಮಾಡಿದ ಶಿಫಾರಸು ಅಂತಿಮವಾಗಿದೆ. ಕರ್ನಾಟಕಕ್ಕೆ ವಿಶೇಷ ಅನುದಾನಕ್ಕೆ ಎಲ್ಲೂ ಶಿಫಾರಸು ಮಾಡಿಲ್ಲ. ಅಂತರರಾಜ್ಯ ಜಿಎಸ್ಟಿ ಶೇಕಡಾ 50ರಷ್ಟು ರಾಜ್ಯಕ್ಕೆ ಹೋಗುತ್ತಿದೆ. ಈ ತೆರಿಗೆ ಪದ್ಧತಿ ನೆಹರೂ ಕಾಲದಿಂದಲೂ ಇದೆ ಕೇಂದ್ರ ಸರ್ಕಾರ ನಯಾ ಪೈಸೆ ಜಿಎಸ್ಟಿ ಬಾಕಿ ಉಳಿಸಿಕೊಂಡಿಲ್ಲ ಎಂದರು.
ರಾಜ್ಯಕ್ಕೆ 6,280 ಕೋಟಿ ಬಡ್ಡಿ ರಹಿತ ಸಾಲ ನೀಡಲಾಗಿದೆ. ರಾಜ್ಯಕ್ಕೆ 18,000 ಕೋಟಿ ರೂಪಾಯಿ ಅನುದಾನ ನೀಡಲಿದ್ದೇವೆ ಒಟ್ಟಾರೆ ಕೇಂದ್ರ ಸರ್ಕಾರ ರಾಜ್ಯಕ್ಕೆ 2.36 ಲಕ್ಷ ಕೋಟಿ ನೀಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಜನರ ದಾರಿ ತಪ್ಪಿಸಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದರು.
ರಸ್ತೆ, ರೈಲ್ವೆಗೆ ಯುಪಿಎ ಸರ್ಕಾರಕ್ಕಿಂತ 10 ಪಟ್ಟು ಹೆಚ್ಚು ಅನುದಾನ ಎನ್ಡಿಎ ಸರ್ಕಾರ ನೀಡಿದೆ. ಕೃಷ್ಣ ಮೇಲ್ದಂಡೆ ಯೋಜನೆ ಬಗ್ಗೆ ಕೆಲವು ಮಾಹಿತಿ ಕೇಳಿದೆ. ಮಾಹಿತಿ ಪೂರೈಸದ ಹಿನ್ನೆಲೆಯಲ್ಲಿ ಕೇಂದ್ರ ಅನುದಾನವನ್ನು ನೀಡಿಲ್ಲ. ಎಸ್‌ಡಿಆರ್‌ಎಫ್ ಹಣ ಬಳಸಿಕೊಂಡು ಕೆಲಸ ಆರಂಭಿಸಬೇಕು. ಈಗಾಗಲೇ ಎಸ್‌ಡಿಆರ್‌ಎಫ್‌ನಲ್ಲಿ ಶೇ.70 ರಷ್ಟು ಹಣ ನೀಡಿದೆ ಎಂದರು.
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಬಿಜೆಪಿಗೆ ಬರುವ ಬಗ್ಗೆ ಅನುಮಾನ ಮೂಡುತ್ತಿವೆ: ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯ
ದೆಹಲಿಯಲ್ಲಿ ನಾಳೆ ಕಾಂಗ್ರೆಸ್ ಶಾಸಕರಿಂದ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಜೋಶಿ, ಕಾಂಗ್ರೆಸ್ಸಿಗರು ಅನ್ಯಾಯ ಆಗಿದೆ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಕುಣಿಯಲು ಬರದಿದ್ದರೆ ನೆಲ ಡೊಂಕು ಎಂಬಂತಿದೆ ಸಿಎಂ ವರ್ತನೆ ಎಂದರು.
ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸ ಸಾಧ್ಯವಿಲ್ಲವೆಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದರು. ಕಾಂಗ್ರೆಸ ಶಾಸಕ ಬಸವರಾಜ ರಾಯರೆಡ್ಡಿ ಕೂಡ ಈ ಮಾತು ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ತಮ್ಮ ವೈಫಲ್ಯತೆಯನ್ನು ಮುಚ್ಚಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಪ್ಲ್ಯಾನ್ ಇಲ್ಲದೆ ಮನಬಂದಂತೆ ಗ್ಯಾರಂಟಿ ಘೋಷಣೆಯಿಂದ ಈ ಪರಿಸ್ಥಿತಿ ಉಂಟಾಗಿದೆ. ಗ್ಯಾರಂಟಿಯೂ ಸರಿಯಾಗಿ ಜಾರಿಯಾಗಿಲ್ಲ, ಅಭಿವೃದ್ದಿಯೂ ಆಗುತ್ತಿಲ್ಲ ಎಂದರು.
ಈವರೆಗೂ ರಾಜ್ಯ ಸರ್ಕಾರ ಒಂದು ಅಕ್ಕಿಕಾಳು ನೀಡಿಲ್ಲ. ನರೇಂದ್ರ ಮೋದಿ ಸರ್ಕಾರ ತಲಾ ಐದು ಕೆಜಿ ಅಕ್ಕಿಯನ್ನು ನೀಡುತ್ತಿದೆ. ಉತ್ತರ ಕರ್ನಾಟಕದಲ್ಲಿ ಬಸ್ ಕಡಿಮೆಯಾಗಿದೆ, ಅವ್ಯವಸ್ಥೆಯಾಗಿದೆ. ಬಸ್ ಫ್ರೀ ಎಂದರೂ, ಈಗ ಬಸ್ ಕಡಿಮೆಯಾಗಿದೆ. ಉತ್ತರ ಕರ್ನಾಟಕದಲ್ಲಿ ಬಸ್ ಕಡಿಮೆಯಾಗಿದೆ ಅವ್ಯವಸ್ಥೆಯಾಗಿದೆ. ಯುವನಿಧಿಯನ್ನು ನೀಡುತ್ತಿಲ್ಲ. ತಮ್ಮ ಕೈಯಲ್ಲಿ ಆಗದೆ ಗಮನ ಬೇರೆಡೆ ಸೇಳೆಯಲು ಮೋದಿ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ
ಅನುದಾನದ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಜೋಶಿ, ಇದು ಅತ್ಯಂತ ದುರ್ಬುದ್ಧಿಯ ರಾಜಕಾರಣ. ಅಧಿಕಾರಕ್ಕೆ ಬರಬೇಕೆಂಬ ಹುಚ್ಚಿನಲ್ಲಿ ಮನಬಂದಂತೆ ಘೋಷಣೆ ಮಾಡಿದ್ದರು. ಅಧಿಕಾರಕ್ಕೆ ಬಂದ ನಂತರ ವೈಫಲ್ಯ ಮುಚ್ಚಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದರು.
ಹೆಚ್.ಸಿ.ಬಾಲಕೃಷ್ಣ ಹೇಳಿಕೆಗೆ ಜೋಶಿ ತಿರುಗೇಟು
ಬಿಜೆಪಿ ಸಂಸದರು ಗಂಡಸರಲ್ಲವೆಂದು ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿಕೆಗೆ ತಿರುಗೇಟು ನೀಡಿದ ಜೋಶಿ, ಇದು ಕೀಳುಮಟ್ಟದ ರಾಜಕೀಯ. ಗಂಡಸ್ತನ ಇಂತಹ ಮಾತುಗಳಿಗೆ ನಾನು ಉತ್ತರಿಸಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ