ನಮ್ಮ ತೆರಿಗೆ ನಮ್ಮ ಹಕ್ಕು ಅಭಿಯಾನ ಓಕೆ: ಆಗದಿರಲಿ ಭಾರತದ ಸಮಗ್ರತೆಗೆ ಧಕ್ಕೆ

ಸ್ವಲ್ಪ ನೆನಪು ಮಾಡಿಕೊಳ್ಳಿ. 2018 ವಿಧಾನಸಭೆ ಚುನಾವಣೆಗೆ 10 ತಿಂಗಳು ಸಮಯ ಇದೆ ಎನ್ನುವಾಗ ನಡೆದ ಆ ಚರ್ಚೆ. ಆಗ ಚರ್ಚೆಗೆ ರಾಜ್ಯದಲ್ಲಿ ದೊಡ್ಡ ರಾಜಕೀಯ ವಿಷಯ ಇರಲಿಲ್ಲ. ಆಡಳಿತರೂಢ ಕಾಂಗ್ರೆಸ್ ವಿರೋಧಿ ಅಲೆ ಹುಟ್ಟುವ ಲಕ್ಷಣ ಇತ್ತು. ಆಗ ಮುಖ್ಯಮಂತ್ರಿ ಆಗಿದ್ದ, ಕರ್ನಾಟಕದ ಇಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಮ್ಮಿಂದೊಮ್ಮೆಲೆ ಹಿಂದಿ-ವಿರೋಧಿ ಚಳವಳಿಯ ತಿದಿ ಒತ್ತಿದರು. ಒಮ್ಮೆಲೆ ಎಲ್ಲೆಲ್ಲೂ ಚರ್ಚೆ ಮೊಳಗಿತು. ಕನ್ನಡದ ಅಸ್ಮಿತೆ ಉಳಿಸಿ ಎಂಬ ಉದ್ಘೋಷ ಎಲ್ಲೆಲ್ಲೂ ಹರಡಿತು. ಬೆಂಗಳೂರಿನಲ್ಲಿ ಕೆಲವರು ರಸ್ತೆಗೆ ಇಳಿದರು, ಮೆಟ್ರೋ ಸ್ಟೇಶನ್​ಗೆ ಮುತ್ತಿಗೆ ಹಾಕಿ, ಹಿಂದಿಯಲ್ಲಿದ್ದ ಬೋರ್ಡ್​ಗಳಿಗೆ ಕಪ್ಪು ಮಸಿ ಬಳಿದರು. ನಾವೆಲ್ಲ ಖುಷಿ ಪಟ್ಟೆವು. ಪ್ರಧಾನಿ ನರೇಂದ್ರ ಮೋದಿಯನ್ನು ಸಿದ್ಧರಾಮಯ್ಯ ಹಿಗ್ಗಾಮುಗ್ಗಾ ಬಯ್ದರು. ಆಗ ಎಲ್ಲ ಅಂದು ಕೊಂಡಿದ್ದು-ಮೋದಿ ಎದುರಿಸಲು ಎದೆಗಾರಿಕೆ ಇರುವ ಏಕೈಕ ನಾಯಕ ಸಿದ್ಧರಾಮಯ್ಯ ಎಂದು. ಬಿಜೆಪಿ ಹಿಂದಿ ಪರ, ಕಾಂಗ್ರೆಸ್ ಹಿಂದಿ ಹೇರಿಕೆ ವಿರುದ್ಧ ಎಂದು ರಾಷ್ಟ್ರೀಯ ಟಿವಿ ಚಾನೆಲ್​ಗಳಲ್ಲಿ ಕೂಡ ಬಿಂಬಿತವಾಯ್ತು. ಅದು 2019 ರ ಚುನಾವಣೆವರೆಗೆ ಮುಂದುವರಿಯಿತು.

ನಮ್ಮ ತೆರಿಗೆ ನಮ್ಮ ಹಕ್ಕು ಅಭಿಯಾನ ಓಕೆ: ಆಗದಿರಲಿ ಭಾರತದ ಸಮಗ್ರತೆಗೆ ಧಕ್ಕೆ
Follow us
ಡಾ. ಭಾಸ್ಕರ ಹೆಗಡೆ
| Updated By: ರಮೇಶ್ ಬಿ. ಜವಳಗೇರಾ

Updated on: Feb 06, 2024 | 8:18 PM

ಈಗ ನೇರವಾಗಿ 2024 ಫೆಬ್ರವರಿಗೆ ಬರೋಣ. ನಮ್ಮ ತೆರಿಗೆ ನಮ್ಮ ಹಕ್ಕು (Our Tax our Rights ) ಎಂಬ ಉದ್ಘೋಷದೊಂದಿಗೆ ಮತ್ತೆ ಸಿದ್ದರಾಮಯ್ಯ (Siddaramaiah) ತಯಾರಾಗಿ ನಿಂತಿದ್ದಾರೆ. ಈ ಬಾರಿ ಈ ವಿಚಾರ ಬರೀ ಹೇಳಿಕೆಯಲ್ಲಿ ಮುಗಿಯುತ್ತಿಲ್ಲ. ಇದೇ ವಿಷಯ ಇಟ್ಟುಕೊಂಡು ಅವರು ಮತ್ತು ಅವರ ಮಂತ್ರಿಮಂಡಲದ ಸದಸ್ಯರು ದೆಹಲಿಯ ಜಂತರ್ ಮಂತರ್ನಲ್ಲಿ ‘ಗಾಂಧಿಗಿರಿ’ ನಡೆಸಲಿದ್ದಾರೆ. ಗಾಂಧೀಜಿಯೊಂದಿಗೆ ಸಿದ್ದು ಮತ್ತು ಇತರೇ ಮಂತ್ರಿಗಳು ದೆಹಲಿಯತ್ತ ಹೊರಟ ಜಾಹೀರಾತು ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ಹೋರಾಟಕ್ಕೆ ಗಾಂಧೀಜಿಯನ್ನು ಕರೆ ತಂದಿದ್ದಾಯ್ತು. ಕೇಂದ್ರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿರುವ ಅವರು, ವಿರೋಧ ಪಕ್ಷಗಳ ನಾಯಕರುಗಳಿಗೆ ಪತ್ರ ಬರೆದು ನೀವು ಬನ್ನಿ, ನಿಮ್ಮವರನ್ನು ಕರೆತನ್ನಿ ಎಂಬ ಆಹ್ವಾನ ಕೂಡ ನೀಡಿದ್ದಾರೆ.

ಬುಧವಾರ, ದೆಹಲಿಯ ಅಖಾಡದಲ್ಲಿ ಮೋದಿ ವಿರುದ್ಧ ತೊಡೆ ತಟ್ಟಲಿರುವ ಸಿದ್ಧರಾಮಯ್ಯ ಅವರಿಗೆ ಈ ಹೋರಾಟದ ಮೂಲಕ ಹಣ ಪಡೆಯಲು ಸಾಧ್ಯ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಚುನಾವಣೆಗೆ ಎರಡು ತಿಂಗಳು ಮೊದಲು ಈ ವಿಷಯವನ್ನು ಅವರು ಎತ್ತಿಕೊಂಡಿರುವುದನ್ನು ನೋಡಿದರೆ 2024ರ ಲೋಕಸಭೆ ಚುನಾವಣೆಗೆ ಇದನ್ನೇ ಅಸ್ತ್ರ ಮಾಡಿಕೊಳ್ಳಲಿದ್ದಾರೆ ಎಂಬುದು ನಿಶ್ಚಿತ. ಪಕ್ಕದ ತಮಿಳುನಾಡು ಮತ್ತು ಕೇರಳ ಕೂಡ ಎಚ್ಚೆತ್ತುಕೊಂಡು ಫೆಬ್ರವರಿ 8 ರಂದು ದೆಹಲಿಯಲ್ಲಿ ಧರಣಿಗೆ ತಯಾರಾಗಿದ್ದಾರೆ. ಅವರದೂ ಇದೇ ತಂತ್ರ. ಬೇರೆ ಏನೂ ಅಲ್ಲ.

ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ಶಾಸಕರಿಂದ ಜಂತರ್ ಮಂತರ್​ನಲ್ಲಿ ಪ್ರತಿಭಟನೆ: ಅರ್ಧ ಗಂಟೆ ಅವಕಾಶ ನೀಡಿದ ದಿಲ್ಲಿ ಪೊಲೀಸ್

15 ನೇ ಹಣಕಾಸು ಆಯೋಗದ ಶಿಫಾರ್ಸಿನ ಆಧಾರದ ಮೇಲೆ ಕೇಂದ್ರ ಸರಕಾರ ರಾಜ್ಯಗಳಿಗೆ ನೇರವಾಗಿ ನೀಡುವ ಹಣ ಕಡಿಮೆ ಆಗಿದೆ. ಇದು ಅನ್ಯಾಯ ಎಂಬುದು ದಕ್ಷಿಣ ರಾಜ್ಯಗಳ ನಾಯಕರುಗಳ ವಾದ. ಖಂಡಿತವಾಗಿ ಅವರು ಸತ್ಯವನ್ನೇ ಹೇಳಿದ್ದಾರೆ. 2020 ರ ತನಕ ಹಳೆಯ ಸೂತ್ರ ಅಂದರೆ 1970 ರ ಜನಸಂಖ್ಯೆ ಆಧರಿಸಿ ನೀಡುವ ಮಾರ್ಗಸೂಚಿಯಡಿಯಲ್ಲಿ ಕೇಂದ್ರ ಸರಕಾರ ಆಯಾ ರಾಜ್ಯಗಳಿಗೆ ಹಣ ನೀಡುತ್ತಿತ್ತು. ಸ್ವಾಭಾವಿಕವಾಗಿ ಎಲ್ಲ ರಾಜ್ಯಗಳಿಗೂ ಹೆಚ್ಚಿನ ಹಣ ಬರುತ್ತಿತ್ತು. ಆದರೆ 15 ನೇ ಹಣಕಾಸು ಆಯೋಗ 2011 ರ ಜನಸಂಖ್ಯೆ ಆಧರಿಸಿ ಹಣ ನೀಡುವ ಸೂತ್ರ ನೀಡಿದಾಗ ಅಲ್ಲಿ ಒಂದು ಎಡವಟ್ಟಾಗಿತ್ತು. ಜನಸಂಖ್ಯೆ ಬೆಳವಣಿಗೆ ದರ ತುಂಬಾ ಕಡಿಮೆ ಇರುವ ದಕ್ಷಿಣದ ರಾಜ್ಯಗಳಿಗೆ ಕಡಿಮೆ ಹಣ ನಿರ್ಧಾರ ಆಯ್ತು. ಆಗ ಅನ್ಯಾಯದ ಹುಯ್ಯಿಲೆದ್ದಿತು. ಜನಸಂಖ್ಯೆ ದರ ಹೆಚ್ಚಿರುವ ಉತ್ತರದ ರಾಜ್ಯಗಳಿಗೆ ಈ ಸೂತ್ರ ಅನುಕೂಲ ಮಾಡಿಕೊಟ್ಟಿತು. ಇತ್ತೀಚೆಗೆ ಕೇಂದ್ರ ಸರಕಾರ 16ನೇ ಹಣಕಾಸು ಆಯೋಗವನ್ನು ಸೃಜಿಸಿ ಸರಕಾರಿ ಆದೇಶ ಹೊರಡಿಸಿದೆ. ಖ್ಯಾತ ಆರ್ಥಿಕ ತಜ್ಞ ಅರವಿಂದ ಪನಗರಿಯಾ ಅವರು ಇದರ ನೇತೃತ್ವ ಹೊತ್ತಿದ್ದಾರೆ. ಎಲ್ಲಾ ರಾಜ್ಯಗಳ ಜೊತೆ ಮಾತಾಡಿ ಅವರು ಕೇಂದ್ರ ಸರಕಾರಕ್ಕೆ ಹೊಸ ಸೂತ್ರ ಕೊಟ್ಟು ಅದು ಜಾರಿಗೆ ಬರುವ ತನಕ ಈ ‘ಅನ್ಯಾಯ’ ಮುಂದುವರಿಯಲಿದೆ.

ಮೊನ್ನೆ ಮೊನ್ನೆವರೆಗೆ ರಾಜಸ್ಥಾನ, ಛತ್ತೀಸಗಢದಲ್ಲಿ ಕಾಂಗ್ರೆಸ್ ಸರಕಾರ ಇತ್ತು. ಅವರು ತೆರಿಗೆ ಹಣ ಕಡಿಮೆ ಆಗಿದೆ, ಬರುತ್ತಿಲ್ಲ ಎಂದು ತುಟಿ ಪಿಟಕ್ ಎಂದಿರಲಿಲ್ಲ. ಅವರು ಹೇಳಿದ್ದು ದನಿ ಎತ್ತಿದ್ದು ಬರೀ ಇಡಿ ದಾಳಿ ಬಗ್ಗೆ. ಇದನ್ನು ನೋಡಿದಾಗ ಒಂದು ಗೊತ್ತಾಗುತ್ತೆ- ಬಿಜೆಪಿಯೇತರ ರಾಜ್ಯಗಳಿಗೆ ಕೇಂದ್ರ ಸರಕಾರ ಅನ್ಯಾಯ ಮಾಡುತ್ತಿದೆ ಎಂಬ ಸಿದ್ಧರಾಮಯ್ಯ ಅವರ ಹೇಳಿಕೆಯಲ್ಲಿ ಮಾಹಿತಿ ಕೊರತೆ ಇದೆ ಎಂದು.

‘ಉತ್ತರ ಕರ್ನಾಟಕದ ಅಭಿವೃದ್ಧಿ ಆಗುತ್ತಿಲ್ಲ. ಇದನ್ನ ಬಹುದಿನ ಸಹಿಸಿಕೊಳ್ಳಲು ಆಗಲ್ಲ. ಇದಕ್ಕೆ ಒಂದೇ ದಾರಿ ಉತ್ತರ ಕರ್ನಾಟಕವನ್ನು ಬೇರೆ ರಾಜ್ಯ ಮಾಡೋದು’. ಹೀಗೆ ಹೇಳಿದ್ದ ಉಮೇಶ ಕತ್ತಿ ಈಗಿಲ್ಲ. ಬೇರೆ ರಾಜ್ಯದ ಮಾತೆತ್ತಿದರು ಎಂದು, ಅವರನ್ನು ಕಾಂಗ್ರೆಸ್ ನಾಯಕರು ಹಿಗ್ಗಾಮುಗ್ಗಾ ಬಯ್ದು ಖಳನಾಯನನ್ನಾಗಿ ಬಿಂಬಿಸಿದರು. ಈಗ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಹೀಗೆ ಮುಂದುವರಿದರೆ ಬೇರೆ ದೇಶ ಕೇಳಬೇಕಾಗಿ ಬರಬಹುದು ಎಂಬ ವಿಚಾರವನ್ನು ಆಡಳಿತ ಪಕ್ಷದ ಓರ್ವ ಎಮ್ಪಿ ಹೇಳಿದಾಗ ಆ ರೀತಿಯ ಪ್ರತಿಕ್ರಿಯೆ ಸಿದ್ಧರಾಮಯ್ಯ ಅವರಿಂದ ಬರಲಿಲ್ಲ.

‘ನಮ್ಮ ರಾಜ್ಯದಲ್ಲಿ ಆಗುವ ಒಟ್ಟೂ ಉತ್ಪನ್ನದ 40 ಪ್ರತಿಶತವನ್ನು ಬೆಂಗಳೂರು ಕೊಡುತ್ತೆ. ಹಾಗಾಗಿ ಆ ಅನುಪಾತದಲ್ಲಿ ಬೆಂಗಳೂರು ಅಭಿವೃದ್ಧಿಗೆ ಹಣ ನೀಡಿ’ ಎಂದು ಐಟಿ ಉದ್ಯಮದ ನಾಯಕರು ಹೇಳಿದಾಗ ಸಿದ್ಧರಾಮಯ್ಯ ಮತ್ತು ಅವರ ತಂಡ ಹೇಳಿದ್ದೇನು? ರಾಜ್ಯದ ಬಡವರ ಬಗ್ಗೆ ಕನಿಕರ ಇರಬೇಕು. ಪುಕ್ಕಟೆ ನೀರು ವಿದ್ಯುತ್ ಪಡೆದು ಈಗ ಬೆಳೆದು ನಿಂತಿರುವ ಈ ಶ್ರೀಮಂತ ವರ್ಗ ರಾಜ್ಯದ ಉತ್ತರ ಕರ್ನಾಟಕದ ಬಗ್ಗೆ ಕನಿಕರ ತೋರಿಸದಿದ್ದರೆ ಹೇಗೆ? ಮಾನವೀಯತೆ ಇಲ್ಲದಿದ್ದರೆ? ಹೀಗೆ ಎಷ್ಟೆಲ್ಲ ಟೀಕೆ ಟಿಪ್ಪಣಿಗಳು ಬಂದವು.

ರಾಷ್ಟ್ರದ ತೆರಿಗೆ ಹಣ ಹಂಚಿಕೆ ವಿಚಾರ ಬಂದಾಗ ನಮ್ಮ ತೆರಿಗೆಯ ಅನುಪಾತದಲ್ಲಿ ತಿರುಗಿ ನಮಗೆ ಹಣ ನೀಡಬೇಕು ಎಂಬ ವಾದ ಸರಿ. ಆದರೆ, ಬೆಂಗಳೂರಿಗೆ ನೀಡುವ ಹಣದ ವಿಚಾರ ಬಂದಾಗ ಈ ವಾದ ತಪ್ಪಾಗುತ್ತದೆ. ಹೇಗೆ? ಕರ್ನಾಟಕದ ಒಳಗೆ ಹಣ ಹಂಚುವಾಗ, ಬಡತನ, ಹಿಂದುಳಿದಿರುವಿಕೆ ಮಾನದಂಡ. ಆದರೆ, ರಾಷ್ಟ್ರ ಮಟ್ಟದಲ್ಲಿ ಕೂಡ ಅದೇ ಮಾನದಂಡ ಇರಬಹುದಲ್ಲ? ಉತ್ತರ ಭಾರತ ಅಭಿವೃದ್ಧಿ ಆಗಿಲ್ಲ. ಅಲ್ಲಿ ಒಂದು ಹೊತ್ತಿನ ಊಟ ಸಿಗದ ಎಷ್ಟೋ ಕುಟುಂಬಗಳಿವೆ. ಅವುಗಳಿಗೆ ಅನುಕೂಲ ಆಗಬಹುದು. ಅದನ್ನು ಒಪ್ಪೋಣ ಆದರೆ, ನಮಗೆ ನಮ್ಮ ಪಾಲು ಕೊಡಿ ಅಷ್ಟೆ!

ಇನ್ನೊಂದು ಮೂಲಭೂತ ಪ್ರಶ್ನೆ: ತೆರಿಗೆ ಹಣವನ್ನು ನೇರವಾಗಿ ಆಯಾ ರಾಜ್ಯ ಸರಕಾರಕ್ಕೆ ನೀಡುವ ಮಾದರಿ ಒಂದು. ತೆರಿಗೆ ಹಣದಲ್ಲಿ ಎಲ್ಲಾ ರಾಜ್ಯಗಳಲ್ಲಿ ಮೆಟ್ರೋ ರೈಲು, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ- ಹೀಗೆ ಮೂಲಭೂತ ಸೌಕರ್ಯ ಹುಟ್ಟು ಹಾಕುವ ಕಾರ್ಯವನ್ನು ಕೇಂದ್ರ ಸರಕಾರ ಮಾಡುತ್ತಲಿದೆ. ಎಲ್ಲಾ ರಾಜ್ಯಗಳಿಗೆ ಬರುವ ಈ ಹಣ ರಾಜ್ಯದ ಅಧಿಕಾರ ನಡೆಸುವವರ ಕೈಗೆ ಸಿಗಲ್ಲ. ನೇರವಾಗಿ ಆಯಾ ಯೋಜನಾ ಪ್ರಾಧಿಕಾರಕ್ಕೆ ಹೋಗುವ ವಿಧಾನವನ್ನು ರಾಜಕೀಯ ನಾಯಕರು ಸಹಿಸುತ್ತಿಲ್ಲ.

ಇನ್ನೊಂದು ಮಾತು: ರಾಜಕಾರಣಿಗಳಿಗೆ ಒಡೆಯೋದು ಇಷ್ಟ. ಆದರೆ ಜನ ವಿವೇಚನೆಯಿಂದ ವಿಚಾರ ಮಾಡಬೇಕು. ಇವತ್ತಿಗೂ ನಮ್ಮ ಥರ್ಮಲ್ ವಿದ್ಯುತ್ ಕಾರ್ಖಾನೆಗಳಿಗೆ ಬರುವ ಕಲ್ಲಿದ್ದಲಿನಲ್ಲಿ ಉತ್ತರ ಭಾರತದ ಪಾಲು ಇದೆ. ದಕ್ಷಿಣ ಭಾರತದಲ್ಲಿರುವ ಅನೇಕ ಕಾರ್ಖಾನೆಗಳಿಗೆ ಬರುವ ಕಚ್ಛಾ ಸಾಮಗ್ರಿ ಉತ್ತರ ಭಾರತದ್ದು. ಕೇವಲ ಕಚ್ಚಾ ವಸ್ತುಗಳ ಕೊಡುಕೊಳ್ಳುವಿಕೆ ಮಾತ್ರವಲ್ಲದೇ ಉತ್ತರ ಭಾರತದ ಬಹಳಷ್ಟು ಜನರು ಬೆಂಗಳೂರು ಸೇರಿದಂತೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಅವರು ಮಾಡುತ್ತಿರುವ ಕೆಲಸಗಳನ್ನು ಬಿಟ್ಟು ಹೋದರೆ ನಮ್ಮ ಕತೆ ಏನು? ಅವರು ಮಾಡುವ ಕೆಲಸಗಳು ನಮ್ಮವರು ಮಾಡುವವರೇ. ಅದು ಸಾಧ್ಯನಾ?. ನಮ್ಮ ತೆರಿಗೆ ನಮ್ಮ ಹಕ್ಕು ಅಂತ ಚುನಾವಣೆ ಈಗ ಸಮಯದಲ್ಲಿ ಮೈಕೊಡವಿ ಹೋರಾಡೋದು ಮೇಲ್ನೋಟಕ್ಕೆ ಕನ್ನಡ ಅಸ್ಮಿತೆಯ ಭಾಗವಾಗಿ ಕಂಡರೆ ತಪ್ಪಿಲ್ಲ. ಆದರೆ ಇದು ಬರೀ ಬಿಜೆಪಿಯೇತರ ಸರಕಾರಗಳಿಗೆ ಆದ ಅನ್ಯಾಯ ಎಂದು ಬಿಂಬಿಸಿ, ದೇಶ ಒಡೆಯುವ ಹುನ್ನಾರಕ್ಕೆ ಹಾಕುವ ಬೀಜ ಆದರೆ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತೆ.

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ