ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭೇಟಿಯಾಗಲಿದ್ದಾರೆ ಹೆಚ್​​ಡಿ ಕುಮಾರಸ್ವಾಮಿ; ಕಾರಣ ಇಲ್ಲಿದೆ

ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಶುಕ್ರವಾರ ಪಶ್ಚಿಮ ಬಂಗಾಳಕ್ಕೆ ಭೇಟಿ ತೆರಳಲಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭೇಟಿಯಾಗಲಿದ್ದಾರೆ ಹೆಚ್​​ಡಿ ಕುಮಾರಸ್ವಾಮಿ; ಕಾರಣ ಇಲ್ಲಿದೆ
ಮಮತಾ ಬ್ಯಾನರ್ಜಿ ಹಾಗೂ ಹೆಚ್​ಡಿ ಕುಮಾರಸ್ವಾಮಿ (ಸಂಗ್ರಹ ಚಿತ್ರ)

Updated on: Mar 22, 2023 | 9:25 PM

ಕೋಲ್ಕತ್ತ: ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಶುಕ್ರವಾರ ಪಶ್ಚಿಮ ಬಂಗಾಳಕ್ಕೆ ಭೇಟಿ ತೆರಳಲಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕಳೆದ ವಾರವಷ್ಟೇ ಮಮತಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಕುಮಾರಸ್ವಾಮಿ ಅವರು ಭವಾನಿಪುರದಲ್ಲಿರುವ ಮಮತಾ ಅವರ ನಿವಾಸಕ್ಕೆ ತೆರಳಲಿದ್ದಾರೆ. ಅಲ್ಲಿಯೇ ಮಾತುಕತೆ ನಿಗದಿಯಾಗಿದೆ ಎಂದು ತೃಣಮೂಲ ಕಾಂಗ್ರೆಸ್ (TMC) ಮೂಲಗಳು ‘ಪಿಟಿಐ’ ಸುದ್ದಿಸಂಸ್ಥೆಗೆ ತಿಳಿಸಿವೆ. ದೇಶದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ದಾರಿಗಳ ಬಗ್ಗೆಯೂ ಮಾತುಕತೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್ಸೇತರ ಹಾಗೂ ಬಿಜೆಪಿಯೇತರ ಪ್ರಾದೇಶಿಕ ಪಕ್ಷಗಳಲ್ಲಿ ಒಮ್ಮತ ರೂಪಿಸುವ ತಂತ್ರಗಾರಿಕೆಯ ಭಾಗವಾಗಿ ಈ ಮಾತುಕತೆಗಳು ನಡೆಯುತ್ತಿದೆ ಎಂದು ಟಿಎಂಸಿ ನಾಯಕರು ತಿಳಿಸಿದ್ದಾರೆ.

2019 ರ ಲೋಕಸಭೆ ಚುನಾವಣೆಗೂ ಮುನ್ನ 2019 ರ ಜನವರಿಯಲ್ಲಿ ಮಮತಾ ಬ್ಯಾನರ್ಜಿ ಅವರು ಕರೆದಿದ್ದ ವಿರೋಧ ಪಕ್ಷಗಳ ಸಭೆಯಲ್ಲಿ ಕುಮಾರಸ್ವಾಮಿ ಭಾಗವಹಿಸಿದ್ದರು. ಬಿಜೆಪಿಯೇತರ, ಕಾಂಗ್ರೆಸ್ಸೇತರ ನಾಯಕರ ಜತೆ ಇತ್ತೀಚೆಗೆ ಮಮತಾ ಅವರ ನಡೆಸುತ್ತಿರುವ ನಾಲ್ಕನೇ ಮಾತುಕತೆಯಾಗಲಿದೆ ಶುಕ್ರವಾರದ ಭೇಟಿ ಎಂದು ಟಿಎಂಸಿ ನಾಯಕರು ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಸೋಲುವಂತಾಗಲು ಅವರ ಪಕ್ಷದವರೇ ಒಂದು ಷಡ್ಯಂತ್ರ ರೂಪಿಸಿ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ

ಮಮತಾ ಬ್ಯಾನರ್ಜಿ ಅವರು ಗುರುವಾರ ಒಡಿಶಾಕ್ಕೆ ತೆರಳಲಿದ್ದು, ಅಲ್ಲಿನ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಲಿದ್ದಾರೆ.

ಕಳೆದ ವಾರ ಅಖಿಲೇಶ್ ಯಾದವ್ ಮತ್ತು ಮಮತಾ ಬ್ಯಾನರ್ಜಿ ನಡುವಣ ಮಾತುಕತೆಯ ನಂತರ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಸಮಾನ ಅಂತರವನ್ನು ಕಾಯ್ದುಕೊಳ್ಳುವುದಾಗಿ ಸಮಾಜವಾದಿ ಪಕ್ಷ ಮತ್ತು ಟಿಎಂಸಿ ಹೇಳಿದ್ದವು. ಜತೆಗೆ, ಪ್ರಾದೇಶಿಕ ಪಕ್ಷಗಳ ಒಗ್ಗೂಡುವಿಕೆ ನಿಟ್ಟಿನಲ್ಲಿ ಶ್ರಮಿಸುವುದಾಗಿಯೂ ಹೇಳಿದ್ದವು.

ಈ ಮಧ್ಯೆ, ಕರ್ನಾಟಕ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಹಾಗೂ ಕುಮಾರಸ್ವಾಮಿ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಚುನಾವಣಾ ಪ್ರಚಾರದ ಭರಾಟೆಯ ನಡುವೆಯೂ ಬಿಡುವುದ ಮಾಡಿಕೊಂಡು ಕುಮಾರಸ್ವಾಮಿ ಪಶ್ಚಿಮ ಬಂಗಾಳಕ್ಕೆ ತೆರಳಿ ಮಮತಾ ಬ್ಯಾನರ್ಜಿ ಜತೆ ಮಾತುಕತೆ ನಡೆಸಲಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us