ವಿಧಾನ ಪರಿಷತ್ ಚುನಾವಣೆ: ಹಳೇ ಮೈಸೂರು ಭಾಗದಲ್ಲಿಯೇ ಜೆಡಿಎಸ್​ಗೆ ತೀವ್ರ ಹಿನ್ನಡೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 14, 2021 | 4:02 PM

ಮೈಸೂರು, ಕೋಲಾರ, ತುಮಕೂರು, ಮಂಡ್ಯ ಜಿಲ್ಲೆಗಳಲ್ಲಿ ಜೆಡಿಎಸ್ ಸೋತಿದೆ. ಕಳೆದ ಬಾರಿ ಸೋತಿದ್ದ ಹಾಸನದಲ್ಲಿ ಈ ಬಾರಿ ಗೆಲುವು ಸಾಧಿಸಿದೆ.

ವಿಧಾನ ಪರಿಷತ್ ಚುನಾವಣೆ: ಹಳೇ ಮೈಸೂರು ಭಾಗದಲ್ಲಿಯೇ ಜೆಡಿಎಸ್​ಗೆ ತೀವ್ರ ಹಿನ್ನಡೆ
ಜೆಡಿಎಸ್​ನಿಂದ ಗೆಲುವು ಸಾಧಿಸಿರುವ ಸೂರಜ್ ರೇವಣ್ಣ
Follow us on

ಬೆಂಗಳೂರು: ಕರ್ನಾಟಕದಲ್ಲಿ ಮಂಗಳವಾರ ಪ್ರಕಟವಾದ ವಿಧಾನ ಪರಿಷತ್ ಚುನಾವಣಾ ಫಲಿತಾಂಶದಲ್ಲಿ (Karnataka Legislative Council Election – MLC) ಜಾತ್ಯತೀತ ಜನತಾ ದಳ (Janata Dal Secular – JDS) ಪಕ್ಷವು ತೀವ್ರ ಹಿನ್ನಡೆ ಅನುಭವಿಸಿದೆ. ಹಳೇ ಮೈಸೂರು ಭಾಗದಲ್ಲೇ ಜೆಿಡಿಎಸ್‌ ಮುಖಭಂಗ ಅನುಭವಿಸಿದೆ. ತೀವ್ರ ಹಿನ್ನಡೆಯ ನಡುವೆಯೂ ದೇವೇಗೌಡ ಕುಟುಂಬದ ಮತ್ತೊಂದು ಕುಡಿ ರಾಜಕಾರಣ ಪ್ರವೇಶಿಸಿದೆ. ಹಾಸನ ವಿಧಾನ ಪರಿಷತ್ ಕ್ಷೇತ್ರದಲ್ಲಿ ಶಾಸಕ ಎಚ್​.ಡಿ.ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ ಈ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ವಿಧಾನಸೌಧ ಪ್ರವೇಶಿಸಿದ್ದಾರೆ. ಕಳೆದ ಬಾರಿ ಗೆದ್ದಿದ್ದ ಮೈಸೂರು, ಕೋಲಾರ, ತುಮಕೂರು, ಮಂಡ್ಯ ಜಿಲ್ಲೆಗಳಲ್ಲಿ ಜೆಡಿಎಸ್ ಸೋತಿದೆ. ಕಳೆದ ಬಾರಿ ಸೋತಿದ್ದ ಹಾಸನದಲ್ಲಿ ಈ ಬಾರಿ ಗೆಲುವು ಸಾಧಿಸಿದೆ. ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣಗೆ 2,281 ಮತಗಳು ಸಿಕ್ಕಿದ್ದರೆ, ಕಾಂಗ್ರೆಸ್​ನ ಎಂ.ಶಂಕರ್ ಅವರಿಗೆ 748, ಬಿಜೆಪಿಯ ಎಚ್​.ಎಂ.ವಿಶ್ವನಾಥ್ ಅವರಿಗೆ 421 ಮತಗಳು ಸಿಕ್ಕಿವೆ. ಸೂರಜ್ ರೇವಣ್ಣ 1533 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 103 ಮತಗಳು ತಿರಸ್ಕೃತಗೊಂಡಿವೆ.

ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್​.ಡಿ.ಕುಮಾರಸ್ವಾಮಿ, ಹಣ ಬಲ, ಜನ ಬಲದ ಹೋರಾಟದಲ್ಲಿ ಜನ ಬಲಕ್ಕೆ ಸೋಲುಂಟಾಗಿದೆ. ರಾಷ್ಟ್ರೀಯ ಪಕ್ಷಗಳ ಹಣದ ಅಬ್ಬರದಲ್ಲಿ ಜೆಡಿಎಸ್‌ಗೆ ಹಿನ್ನಡೆ ಆಗಿದೆ. ದೊಡ್ಡ ಪಕ್ಷಗಳ ಕಾಂಚಾಣ ಹಂಚಿಕೆಯಿಂದ ನಾವು ಹಿಂದೆ ಬಿದ್ದಿದ್ದೇವೆ. ಆಣೆ, ಪ್ರಮಾಣಗಳ ನಡುವೆಯೂ ನೈತಿಕ ನೆಲೆಯಲ್ಲಿ ಹೋರಾಟ ಮುಂದುವರಿಸಲಿದ್ದೇವೆ. ಹಣ ಬಲದಿಂದ ಎದುರಾಗುವ ಸೋಲಿಗೆ ಜೆಡಿಎಸ್ ಧೃತಿಗೆಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

2023ರ ವಿಧಾನಸಭೆ ಚುನಾವಣೆಯೇ ನಮ್ಮ ಗುರಿ ಎಂದು ಹಿಂದೆಯೇ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಆ ನಿಟ್ಟಿನಲ್ಲಿ ನಮ್ಮ ತಯಾರಿ ನಡೆದಿದೆ. ಈ ಚುನಾವಣೆಯಲ್ಲಿಯೂ ಗೆಲುವಿಗೆ ಅಗತ್ಯ ಪ್ರಯತ್ನ ಮಾಡಿದ್ದೇವೆ. ಚುನಾವಣೆ ಎಂದರೆ ಸೋಲು-ಗೆಲುವು ಸಹಜ. ಗೆಲುವಿಗಾಗಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ನಮ್ಮ ಕಾರ್ಯಕರ್ತರೇ ನಮ್ಮ ಶಕ್ತಿ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು. ಈಗ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದೇನೆ. ಹಣಬಲದಿಂದ ಎದುರಾಗುವ ಇಂಥ ಸೋಲುಗಳಿಗೆ ಜೆಡಿಎಸ್‌ ಎಂದೂ ಧೃತಿಗೆಡುವುದಿಲ್ಲ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಈ ಚುನಾವಣೆಯ ಮತದಾರರು. ಜನರೇ ನೇರವಾಗಿ ಹಕ್ಕು ಚಲಾಯಿಸುವ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಶಕ್ತಿ ಏನೆಂಬುದು ತಿಳಿಯಲಿದೆ. ಪಕ್ಷ ಮತ್ತೆ ಪುಟಿದೆದ್ದು ಬರಲಿದೆ. ಜನರಲ್ಲಿ ಜೆಡಿಎಸ್‌ ಬಗೆಗಿನ ವಿಶ್ವಾಸವನ್ನು ಅಳಿಸಲಾಗದು. ಈ ಚುನಾವಣೆಯಲ್ಲಿ ಜಯ ಗಳಿಸಿದ ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗೆ ನನ್ನ ಶುಭಾಶಯಗಳು ಎಂದು ಹೇಳಿದ್ದಾರೆ.

ಇದನ್ನೂ ಓದಿ: Karnataka MLC Election Results 2021: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗ ಸೂರಜ್ ರೇವಣ್ಣಗೆ ಭರ್ಜರಿ ಗೆಲುವು
ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಗೆ ಮತ ಹಾಕಿ, ಫೇಸ್​ಬುಕ್​​ನಲ್ಲಿ ಪೋಸ್ಟ್ ಮಾಡಿದ ಸಂಸದ ಜಾಧವ್! ವಾಸ್ತು ನೋಡಿ ಹಕ್ಕು ಚಲಾಯಿಸಿದ ರೇವಣ್ಣ!

Published On - 4:01 pm, Tue, 14 December 21