ಕಾಂಗ್ರೆಸ್​​ನಲ್ಲೇ ಅಭ್ಯರ್ಥಿ ಇದ್ದಾರೆ, ಸುಮಲತಾ ಜತೆ ಮಾತುಕತೆ ಬಗ್ಗೆ ಗೊತ್ತಿಲ್ಲ: ಚಲುವರಾಯಸ್ವಾಮಿ

| Updated By: Ganapathi Sharma

Updated on: Jan 30, 2024 | 1:08 PM

ಸಂಸದೆ ಸುಮಲತಾ ಯಾರ ಜೊತೆ ಮಾತನಾಡಿದ್ದಾರೆ ನನಗೆ ಗೊತ್ತಿಲ್ಲ. ಬಿಜೆಪಿ ಜತೆಗಿದದ್ದೇನೆ, ಆ ಪಕ್ಷಕ್ಕೇ ಬೆಂಬಲ ಎಂದು ಸುಮಲತಾ ಘೋಷಣೆ ಮಾಡಿಕೊಂಡಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್​​ನಲ್ಲೇ ಅಭ್ಯರ್ಥಿ ಇದ್ದಾರೆ, ಸುಮಲತಾ ಜತೆ ಮಾತುಕತೆ ಬಗ್ಗೆ ಗೊತ್ತಿಲ್ಲ: ಚಲುವರಾಯಸ್ವಾಮಿ
ಚಲುವರಾಯಸ್ವಾಮಿ
Follow us on

ಮಂಡ್ಯ, ಜನವರಿ 30: ಮುಂಬರುವ ಲೋಕಸಭೆ ಚುನಾವಣೆ (Lok Sabha Elections) ದೃಷ್ಟಿಯಿಂದ ಕಾಂಗ್ರೆಸ್ ನಾಯಕರ ಜತೆ ಮಂಡ್ಯ ಸಂಸದೆ ಸುಮಲತಾ (Sumalatha Ambareesh) ಮಾತನಾಡಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Chaluvaraya Swamy) ಮಂಗಳವಾರ ಹೇಳಿದ್ದಾರೆ. ಸುಮಲತಾ ಜತೆ ಕಾಂಗ್ರೆಸ್ ನಾಯಕರು ಮಾತನಾಡಿದ್ದಾರೆ ಎನ್ನಲಾದ ವರದಿಗಳ ಕುರಿತು ಮಂಡ್ಯದಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್​​ನಲ್ಲೇ ಸೂಕ್ತವಾದ ಅಭ್ಯರ್ಥಿ ಇದ್ದಾರೆ ಎಂದು ಹೇಳಿದ್ದಾರೆ.

ಸಂಸದೆ ಸುಮಲತಾ ಯಾರ ಜೊತೆ ಮಾತನಾಡಿದ್ದಾರೆ ನನಗೆ ಗೊತ್ತಿಲ್ಲ. ಬಿಜೆಪಿ ಜತೆಗಿದದ್ದೇನೆ, ಆ ಪಕ್ಷಕ್ಕೇ ಬೆಂಬಲ ಎಂದು ಸುಮಲತಾ ಘೋಷಣೆ ಮಾಡಿಕೊಂಡಿದ್ದಾರೆ. ಸಂಸದೆ ಸುಮಲತಾ ಬಗ್ಗೆ ನಾನು ಯಾವತ್ತೂ ಲಘುವಾಗಿ ಮಾತನಾಡಿಲ್ಲ. ಬಿಜೆಪಿ ಟಿಕೆಟ್ ಕೇಳಿರುವ ಸುಮಲತಾ ಬಗ್ಗೆ ಮಾತನಾಡಿದರೆ ಏನು ಅರ್ಥವಿದೆ. ನಮ್ಮಲ್ಲೇ ಉತ್ತಮ ಅಭ್ಯರ್ಥಿ ಇದ್ದಾರೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಸುಮಲತಾ ಅವರು ಕಾಂಗ್ರೆಸ್ ನಾಯಕರ ಜತೆ ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಸಂಸದೆ ಸುಮಲತಾ ಹೇಳಿದ್ದೇನು?

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ವಿಚಾರವಾಗಿ ‘ಟಿವಿ9’ ಜತೆ ಮಾತನಾಡಿದ್ದ ಸಂಸದೆ ಸುಮಲತಾ, ಪ್ರಧಾನಿ ನರೇಂದ್ರ ಮೋದಿಯವರ ಕೆಲಸಗಳನ್ನು ನೋಡಿ ನಾನು ಬಿಜೆಪಿಗೆ ಬೆಂಬಲ ಕೊಟ್ಟಿದ್ದೇನೆ. ಜೆಪಿಯವರಿಗೆ ನನ್ನ ಬೆಂಬಲ ಈಗಲೂ ಇದೆ ಎಂದು ಹೇಳಿದ್ದರು. ಮುಂದುವರಿದು, ಹೆಚ್​ಡಿ ಕುಮಾರಸ್ವಾಮಿಯವರು ನಮ್ಮ ಮನೆಗೆ ಸಾಕಷ್ಟು ಬಾರಿ ಬಂದಿದ್ದಾರೆ. ಅವರು ಬಂದರೆ ಗೌರವದಿಂದ ಸ್ವಾಗತಿಸುತ್ತೇನೆ.

ಇದನ್ನೂ ಓದಿ: ಪ್ರಧಾನಿ ಮೋದಿ ಕೆಲಸ ನೋಡಿ ಬಿಜೆಪಿಗೆ ಬೆಂಬಲ ಕೊಟ್ಟಿದ್ದೇನೆ, ಈಗಲೂ ಬೆಂಬಲವಿದೆ: ಮಂಡ್ಯ ಸಂಸದೆ ಸುಮಲತಾ

ಅಂಬರೀಷ್ ಕಾಂಗ್ರೆಸ್‌ ಪಕ್ಷದಲ್ಲಿ 25 ವರ್ಷ ಇದ್ದವರು. ಸುಮಾರು ಜನ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಹೇಳುತ್ತಿದ್ದಾರೆ. ಹಲವಾರು ನಾಯಕರು ಬೆಂಬಲ ಕೊಡುತ್ತೇವೆ ಬನ್ನಿ ಎಂದಿದ್ದಾರೆ. ನಮ್ಮ ಮನೆ ಬಾಗಿಲು ಎಲ್ಲರಿಗೂ ಮುಕ್ತವಾಗಿರಲಿದೆ. ಆದರೆ, ನನ್ನ ಮನಸು ಯಾವ ರೀತಿ ಹೇಳುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಸುಮಲತಾ ಹೇಳಿದ್ದರು.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡ ನಂತರ ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲದೊಂದಿಗೆ ಸುಮಲತಾ ಜೆಡಿಎಸ್​​ನ ನಿಖಿಲ್ ವಿರುದ್ಧ ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿ ರಾಜಕೀಯ ಚಿತ್ರಣವೇ ಬದಲಾಗಿದೆ. ಮಂಡ್ಯ ಕ್ಷೇತ್ರಕ್ಕೆ ಜೆಡಿಎಸ್ ಪಟ್ಟುಹಿಡಿದಿದೆ ಎನ್ನಲಾಗಿದೆ. ಈ ಮಧ್ಯೆ, ಮಂಡ್ಯ ಬಿಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಸುಮಲತಾ ಹೇಳಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ