ಪ್ರಧಾನಿ ಮೋದಿ ಕೆಲಸ ನೋಡಿ ಬಿಜೆಪಿಗೆ ಬೆಂಬಲ ಕೊಟ್ಟಿದ್ದೇನೆ, ಈಗಲೂ ಬೆಂಬಲವಿದೆ: ಮಂಡ್ಯ ಸಂಸದೆ ಸುಮಲತಾ
ಬಿಜೆಪಿಯಲ್ಲಿ ಕೂಡ ಮಂಡ್ಯ ಬಿಟ್ಟು ಬೇರೆ ಕಡೆ ಟಿಕೆಟ್ ಕೊಟ್ಟರೆ ಸ್ಪರ್ಧಿಸಲು ನನಗೆ ಅಸಕ್ತಿ ಇಲ್ಲ. ನನಗೆ ಮಂಡ್ಯದ ಸೇವೆ ಮಾಡಬೇಕು ಎಂಬ ಹಂಬಲ ಇನ್ನೂ ಇದೆ ಎಂದು ಮಂಡ್ಯೆ ಸಂಸದೆ ಸುಮಲತಾ ಅಂಬರೀಷ್ ‘ಟಿವಿ9’ಗೆ ತಿಳಿಸಿದ್ದಾರೆ.
ಬೆಂಗಳೂರು, ಜನವರಿ 30: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಕೆಲಸಗಳನ್ನು ನೋಡಿ ನಾನು ಬಿಜೆಪಿಗೆ (BJP) ಬೆಂಬಲ ಕೊಟ್ಟಿದ್ದೇನೆ. ಜೆಪಿಯವರಿಗೆ ನನ್ನ ಬೆಂಬಲ ಈಗಲೂ ಇದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ತಿಳಿಸಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಬಳಿಕ ಲೋಕಸಭೆ ಚುನಾವಣೆಗೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಕುತೂಹಲ ಕೆರಳಿಸಿರುವ ಸಂದರ್ಭದಲ್ಲೇ ಅವರು ‘ಟಿವಿ9’ಗೆ ಎಕ್ಸ್‌ಕ್ಲೂಸಿವ್ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾದ ಮೇಲೆ ಯಾರ ಜೊತೆಗೂ ಚರ್ಚಿಸಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ನನಗೆ ಫೋನ್ ಮಾಡಿದ್ದರು. ಮಾತನಾಡಲು ಬರುತ್ತೇನೆ ಎಂದು ಅವರು ಹೇಳಿದ್ದರು. ಆದರೆ, ನಾಳೆಯಿಂದ ಸಂಸತ್‌ನಲ್ಲಿ ಅಧಿವೇಶನ ನಡೆಯಲಿದೆ. ಹೀಗಾಗಿ ಬುಧವಾರ ನಾನು ದೆಹಲಿಗೆ ಹೋಗುತ್ತಿದ್ದೇನೆ ಎಂದು ಸುಮಲತಾ ಹೇಳಿದ್ದಾರೆ.
ಬಿಜೆಪಿಯಲ್ಲಿ ಕೂಡ ಮಂಡ್ಯ ಬಿಟ್ಟು ಬೇರೆ ಕಡೆ ಟಿಕೆಟ್ ಕೊಟ್ಟರೆ ಸ್ಪರ್ಧಿಸಲು ನನಗೆ ಅಸಕ್ತಿ ಇಲ್ಲ. ನನಗೆ ಮಂಡ್ಯದ ಸೇವೆ ಮಾಡಬೇಕು ಎಂಬ ಹಂಬಲ ಇನ್ನೂ ಇದೆ. ಮಂಡ್ಯದ ಜನ ನನ್ನನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿಕೊಟ್ಟಿದ್ದಾರೆ. ನನ್ನ ಸ್ವಾರ್ಥಕ್ಕೆ ನಾನು ಮಂಡ್ಯದಿಂದ ದೂರ ಸರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.
ಜೆಡಿಎಸ್ ನಾಯಕರು ಬಂದರೆ ಸ್ವಾಗತಿಸುವೆ: ಸುಮಲತಾ
ಬಿಜೆಪಿಯಲ್ಲಿ ನನಗೆ ಪ್ರಧಾನಿ ಮೋದಿ ಒಳ್ಳೆಯ ಬೆಂಬಲ ಕೊಟ್ಟಿದ್ದಾರೆ. ನನ್ನ ಟ್ಯ್ರಾಕ್ ರೆಕಾರ್ಡ್ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿದೆ. ಹಾಗೆಂದು, ಜೆಡಿಎಸ್ ನಾಯಕರು ನಮ್ಮ ಮನೆಗೆ ಬಂದರೆ ಬೇಡ ಎನ್ನುವುದಿಲ್ಲ. ಹೆಚ್ಡಿ ಕುಮಾರಸ್ವಾಮಿಯವರು ನಮ್ಮ ಮನೆಗೆ ಸಾಕಷ್ಟು ಬಾರಿ ಬಂದಿದ್ದಾರೆ. ಅವರು ಬಂದರೆ ಗೌರವದಿಂದ ಸ್ವಾಗತಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಅಂಬರೀಷ್ ಕಾಂಗ್ರೆಸ್ ಪಕ್ಷದಲ್ಲಿ 25 ವರ್ಷ ಇದ್ದವರು. ಸುಮಾರು ಜನ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಹೇಳುತ್ತಿದ್ದಾರೆ. ಹಲವಾರು ನಾಯಕರು ಬೆಂಬಲ ಕೊಡುತ್ತೇವೆ ಬನ್ನಿ ಎಂದಿದ್ದಾರೆ. ನಮ್ಮ ಮನೆ ಬಾಗಿಲು ಎಲ್ಲರಿಗೂ ಮುಕ್ತವಾಗಿರಲಿದೆ. ಆದರೆ, ನನ್ನ ಮನಸು ಯಾವ ರೀತಿ ಹೇಳುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.
ಬೇರೆ ಕಡೆ ಟಿಕೆಟ್ ನೀಡಿದರೆ ರಾಜಕೀಯವೇ ಬೇಡವೆಂದಿದ್ದ ಸುಮಲತಾ
ಮಂಡ್ಯ ಬಿಜೆಪಿಯ ಕೆಲವು ನಾಯಕರು ಕಳೆದ ವಾರ ಸುಮಲತಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆ ಬಳಿಕ ಪತ್ರಿಕಾಗೋಷ್ಠಿ ನಡೆಸಿದ್ದ ಸುಮಲತಾ, ಮಂಡ್ಯ ಬಿಟ್ಟು ಬೇರೆ ಕಡೆ ಟಿಕೆಟ್ ನೀಡಿದರೆ ರಾಜಕೀಯವೇ ಬೇಡ ಎಂದು ಹೇಳಿದ್ದರು. ಎಲ್ಲೂ ನನ್ನ ಬಗ್ಗೆ ಕಳಂಕವಾಗಲಿ, ಕಪ್ಪು ಚುಕ್ಕೆಯಾಗಲೀ ಇಲ್ಲ. ಪಾರ್ಲಿಮೆಂಟ್ನಲ್ಲಿ ಮಾತನಾಡಿರುವುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯೇ ಮಂಡ್ಯ ಸೀಟು ಉಳಿಸಿಕೊಳ್ಳಬಹುದು ಎಂದು ಸುಮಲತಾ ಹೇಳಿದ್ದರು.
ಇದನ್ನೂ ಓದಿ: ಬಿಜೆಪಿಯಿಂದಲೇ ಸ್ಪರ್ಧೆಗೆ ತೀರ್ಮಾನ, ಮಂಡ್ಯ ಬಿಟ್ಟು ಬೇರೆ ಕಡೆ ಟಿಕೆಟ್ ನೀಡಿದ್ರೆ ರಾಜಕೀಯವೇ ಬೇಡವೆಂದ ಸುಮಲತಾ
ಬಿಜೆಪಿ ಜತೆಗಿನ ಮೈತ್ರಿ ಬಳಿಕ ಮಂಡ್ಯ ಕ್ಷೇತ್ರದ ಟಿಕೆಟ್ಗೆ ಜೆಡಿಎಸ್ ಬೇಡಿಕೆ ಮುಂದಿಟ್ಟಿದೆ ಎನ್ನಲಾಗಿದೆ. ಮಂಡ್ಯದಿಂದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರೇ ಕಣಕ್ಕಿಳಿಯುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸುಮಲತಾ ಬಿಜೆಪಿ ನಾಯಕರ ಜತೆ ಮಾತುಕತೆ ನಡೆಸಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ