ಮೈಸೂರು: ‘ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಇಬ್ಭಾಗವಾಗಲಿದೆ’; ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

| Updated By: shivaprasad.hs

Updated on: Oct 03, 2021 | 10:02 AM

K.S.Eshwarappa: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮೈಸೂರಿನಲ್ಲಿ ಕಾಂಗ್ರೆಸ್ ಹಾಗೂ ಸಿದ್ಧರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಅವರು ಮುಂದಿನ ಚುನಾವಣೆಯೊಳಗೆ ಕಾಂಗ್ರೆಸ್ ಎರಡು ಭಾಗವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಮೈಸೂರು: ‘ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಇಬ್ಭಾಗವಾಗಲಿದೆ’; ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ
ಸಚಿವ ಕೆ.ಎಸ್.ಈಶ್ವರಪ್ಪ (ಸಂಗ್ರಹ ಚಿತ್ರ)
Follow us on

ಮೈಸೂರು: ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಇಬ್ಭಾಗವಾಗುತ್ತದೆ. ಇದರಲ್ಲಿ ಯಾವುದೇ ರೀತಿಯ ಅನುಮಾನ ಬೇಡ ಎಂದು ಮೈಸೂರಿನಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರಿಗೂ ಅಧಿಕಾರ ಬೇಕು. ಆದ್ದರಿಂದಲೇ ಕಾಂಗ್ರೆಸ್ ಪಕ್ಷ ಇಬ್ಬಾಗವಾಗಲಿದೆ ಎಂದು ಅವರು ಹೇಳಿದ್ದಾರೆ. 

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವ ಹುಚ್ಚು ಕನಸು ಕಾಣುತ್ತಿದ್ದಾರೆ. ಸಿಎಂ ಆಗುವುದಿರಲಿ, ಮೊದಲು ಚುನಾವಣೆಯಲ್ಲಿ ಗೆಲ್ಲಲಿ ಎಂದು ಈಶ್ವರಪ್ಪ ಸವಾಲು ಹಾಕಿದ್ದಾರೆ. ಕಳೆದ ಚುನಾವಣೆಯಲ್ಲಿ ಮೈಸೂರಿನಲ್ಲಿ ಸಿದ್ಧರಾಮಯ್ಯ ಸೋತಿದ್ದನ್ನು ಉಲ್ಲೇಖಿಸಿದ ಈಶ್ವರಪ್ಪ, ‘‘ಚಾಮುಂಡೇಶ್ವರಿಯಲ್ಲಿ ಸೋತಿದ್ದು ಏಕೆ ಎಂಬುದನ್ನು ಮೊದಲು ಹೇಳಿ, ನಂತರ ಕನಸು ಕಾಣಿ’’ ಎಂದಿದ್ದಾರೆ.

ಸದನದಲ್ಲಿ ಜಾತಿ ಗಣತಿ ವರದಿ ಬಗ್ಗೆ ಏಕೆ ಮಾತನಾಡಿಲ್ಲ ಎಂದು ಇದೇ ವೇಳೆ ಪ್ರಶ್ನಿಸಿದ ಈಶ್ವರಪ್ಪ, ಸಿದ್ದರಾಮಯ್ಯನವರಿಗೆ ಅಧಿಕಾರವೊಂದೇ ಗುರಿ ಎಂದು ಹರಿಹಾಯ್ದಿದ್ದಾರೆ. ‘‘ಸಿದ್ದರಾಮಯ್ಯನವರು ಸಂಘಟನೆ ಮಾಡಲು ಅಡ್ಡ ದಾರಿ ತುಳಿದಿದ್ದಾರೆ. ಸದನದಲ್ಲಿ ಜಾತಿಗಣತಿ ಬಗ್ಗೆ ಏಕೆ ಮಾತಾನಾಡಲಿಲ್ಲ? ಸದನದಲ್ಲಿ ಜಾತಿಗಣತಿಯ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದರು. ಆದರೆ ಅದರ ಬಗ್ಗೆ ಮಾತನಾಡಲೇ ಇಲ್ಲ. ಹಿಂದುಳಿದಿರುವವರು, ಅಲ್ಪಸಂಖ್ಯಾತರು ನಿಮಗೆ ಹೆಸರಿಗೆ ಮಾತ್ರವೇ?’’ ಎಂದು ಈಶ್ವರಪ್ಪ ಕುಟುಕಿದ್ದಾರೆ.

ಮೈತ್ರಿ ಸರ್ಕಾರದ ಸಂದರ್ಭದಲ್ಲಿಯೇ ಜಾತಿಗಣತಿ ವರದಿ ಸಿದ್ಧವಾಗಿದ್ದರೂ, ಆಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಏಕೆ ಮಂಡಿಸಲಿಲ್ಲ ಎಂದು ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ. ‘‘ಅವರು ಮಂಡಿಸದಿದ್ದಾಗ ಸಿದ್ಧರಾಮಯ್ಯನವರು ತಮ್ಮ ಬೆಂಬಲ ವಾಪಸ್ ಪಡೆಯಬೇಕಿತ್ತು. ಆದರೆ ಏಕೆ ತೆಗೆದುಕೊಳ್ಳಲಿಲ್ಲ? ಇವರಿಗೆ ಬೇಕಾಗಿರುವುದು ಅಧಿಕಾರ ಮಾತ್ರ. ಕಾಂಗ್ರೆಸ್​ನಲ್ಲಿ ಡಿ.ಕೆ.ಶಿವಕುಮಾರ್​​ ಅವರಿಗೂ ಅಧಿಕಾರ ಬೇಕು. ಸಿದ್ಧರಾಮಯ್ಯನವರಿಗೂ ಅಧಿಕಾರ ಬೇಕು. ಆದ್ದರಿಂದಲೇ ಮುಂದಿನ ಚುನಾವಣೆಗೆ ಮೊದಲೇ ಕಾಂಗ್ರೆಸ್ ಎರಡು ಭಾಗವಾಗಲಿದೆ’’ ಎಂದು ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ಸೈಕಲ್ ಜಾಥಾ: ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟನೆ:

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಅಂಗವಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾದ ವತಿಯಿಂದ ಸೈಕಲ್ ಜಾಥಾವನ್ನು ಏರ್ಪಡಿಸಲಾಗಿದೆ. ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ಕೋಟಾ ಶ್ರೀನಿವಾಸ್ ಪೂಜಾರಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು. ನಗರದ ಗನ್ ಹೌಸ್ ವೃತ್ತದಿಂದ ಕೋಟೆ ಆಂಜನೇಯಸ್ವಾಮಿ ದೇವಾಲಯದವರೆಗೂ ಜಾಥಾ ನಡೆಯಲಿದೆ. ಇದೇ ವೇಳೆ, ಮೋದಿ ಆಶಯದಂತೆ ಕೆಲಸ ಮಾಡಲು ಬಿಜೆಪಿ ಕಾರ್ಯಕರ್ತರು ಹಾಗೂ ಸಚಿವರಿಂದ ಪ್ರಮಾಣ ವಚನ ಸ್ವೀಕರಿಸಲಾಗಿದೆ.

ಇದನ್ನೂ ಓದಿ:

ಡ್ರಗ್ಸ್​ ಪಾರ್ಟಿ: ಎನ್​ಸಿಬಿ ಬಲೆಗೆ ಬಿದ್ದ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​?

ಬೆಳಗಾವಿ: 140 ಅಡಿ ಕಂದಕಕ್ಕೆ ಉರುಳಿ ಬಿದ್ದರೂ ಬದುಕಿ ಬಂದ ಯುವಕ; ಗೋಕಾಕ್ ಫಾಲ್ಸ್‌ನಲ್ಲಿ ಅಚ್ಚರಿ ಘಟನೆ

ಪೊಲೀಸರೆಂದು ಹೆದರಿಸಿ ಹಣ ವಸೂಲಿ! ಕೊಪ್ಪಳದಲ್ಲಿ ಇಬ್ಬರು ಬಂಧನ

Published On - 9:51 am, Sun, 3 October 21