ಡ್ರಗ್ಸ್ ಪಾರ್ಟಿ: ಎನ್ಸಿಬಿ ಬಲೆಗೆ ಬಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್
ಐಷಾರಾಮಿ ಹಡಗಿನಲ್ಲಿ ಈ ಪಾರ್ಟಿ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಎನ್ಸಿಬಿ ಅಧಿಕಾರಿಗಳ ಬಲೆಗೆ ಹೈಪ್ರೊಫೈಲ್ ವ್ಯಕ್ತಿಗಳ ಮಕ್ಕಳು ಸಿಕ್ಕಿ ಬಿದ್ದಿದ್ದಾರೆ. ಪಾರ್ಟಿ ನಡೆದ ಸ್ಥಳದಲ್ಲಿ ಮಾದಕ ವಸ್ತುಗಳು ಕೂಡ ಪತ್ತೆ ಆಗಿವೆ.
ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರು ಮಾದಕ ವಸ್ತು ನಿಯಂತ್ರಣ ಮಂಡಳಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಬಗ್ಗೆ ಮಾಹಿತಿ ಕೇಳಿಬಂದಿದೆ. ಮುಂಬೈನ ಸಮುದ್ರ ತೀರದಲ್ಲಿ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ರೇವ್ ಪಾರ್ಟಿ ನಡೆಯುತ್ತಿತ್ತು. ಆ ವೇಳೆ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಬಾಲಿವುಡ್ನ ಒಬ್ಬ ಸ್ಟಾರ್ ನಟನ ಮಗನನ್ನು ವಶಕ್ಕೆ ಪಡೆದ ಬಗ್ಗೆ ವರದಿ ಆಗಿತ್ತು. ಅದು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಎಂದು ಈಗ ಹೇಳಲಾಗುತ್ತಿದೆ.
ಆರ್ಯನ್ ಖಾನ್ ಮೊಬೈಲ್ ಫೋನ್ಅನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅದರಲ್ಲಿನ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ. ಡ್ರಗ್ಸ್ ಪಾರ್ಟಿ ಆಯೋಜಕರ ಜೊತೆ ಆರ್ಯನ್ ಯಾವ ರೀತಿ ಸಂಪರ್ಕದಲ್ಲಿ ಇದ್ದರು? ಯಾವ ಸಂದೇಶಗಳು ರವಾನೆ ಆಗಿವೆ ಎಂಬಿತ್ಯಾದಿ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಈವರೆಗೂ ಆರ್ಯನ್ ಮೇಲೆ ಯಾವುದೇ ಕೇಸ್ ದಾಖಲಾಗಿಲ್ಲ. ವಶಕ್ಕೆ ಪಡೆದು ವಿಚಾರಣೆಯಷ್ಟೇ ಮಾಡಲಾಗುತ್ತಿದೆ.
ಪಾರ್ಟಿ ನಡೆದ ಸ್ಥಳದಲ್ಲಿ ಮಾದಕ ವಸ್ತುಗಳು ಕೂಡ ಪತ್ತೆ ಆಗಿವೆ. ಆದರೆ ಎಷ್ಟು ಪ್ರಮಾಣದ ಡ್ರಗ್ಸ್ ಸಿಕ್ಕಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ. ವಶಕ್ಕೆ ಪಡೆದವರನ್ನು ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ. ಬಾಲಿವುಡ್ನಲ್ಲಿ ಹರಡಿರುವ ಡ್ರಗ್ಸ್ ಜಾಲವನ್ನು ಭೇದಿಸಲು ಈ ದಾಳಿ ಹೆಚ್ಚು ಸಹಕಾರಿ ಆಗಲಿದೆ.
ತಮಗೆ ಸಿಕ್ಕ ಸುಳಿವು ಆಧರಿಸಿ ಎನ್ಸಿಬಿ ಅಧಿಕಾರಿಗಳು ಈ ಕಾರ್ಯಾಚರಣೆ ಆರಂಭಿಸಿದ್ದರು. ಅವರು ಪ್ರಯಾಣಿಕರ ರೀತಿ ಹಡಗಿನಲ್ಲಿ ಸೇರಿಕೊಂಡಿದ್ದರು. ಆ ಹಡಗು ಮಧ್ಯ ಸಮುದ್ರ ಸೇರುತ್ತಿದ್ದಂತೆಯೇ ರೇವ್ ಪಾರ್ಟಿ ಪ್ರಾರಂಭ ಆಗಿರುವುದು ಅವರ ಗಮನಕ್ಕೆ ಬಂತು. ಕೂಡಲೇ ದಾಳಿ ನಡೆಸಿದ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಯಶಸ್ವಿ ಆಗಿದ್ದಾರೆ.
ಆರ್ಯನ್ ಮಾತ್ರವಲ್ಲದೇ ಮತ್ತೋರ್ವ ಸ್ಟಾರ್ ನಟನ ಪುತ್ರ ಕೂಡ ಈ ದಾಳಿ ವೇಳೆ ಸಿಕ್ಕಿಬಿದ್ದಿರುವ ಬಗ್ಗೆ ಸುದ್ದಿ ಕೇಳಿಬರುತ್ತಿದೆ. ಆದರೆ ಅವರು ಯಾರೆಂಬುದು ಇನ್ನೂ ತಿಳಿದುಬಂದಿಲ್ಲ. ಆರ್ಯನ್ ಅವರನ್ನು ಎನ್ಸಿಬಿ ವಶಕ್ಕೆ ಪಡೆದ ಬಳಿಕ ಶಾರುಖ್ ಖಾನ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ:
ಸೋತು ಸುಣ್ಣವಾದ ಶಾರುಖ್ಗೆ ಈಗ ಓಟಿಟಿ ಅನಿವಾರ್ಯ; ಸತ್ಯ ಒಪ್ಪಿಕೊಂಡು ವಿಡಿಯೋ ಶೇರ್ ಮಾಡಿದ ನಟ
ನಟಿಯರ ಜೊತೆ ಬಿಗ್ ಬಾಸ್ ಸ್ಪರ್ಧಿಯ ಡ್ರಗ್ಸ್ ಪಾರ್ಟಿ; ಪೊಲೀಸರ ಬಲೆಗೆ ಬಿದ್ದ 22 ಮಂದಿ
Published On - 9:42 am, Sun, 3 October 21