ಪ್ರಜ್ವಲ್ ವಿಡಿಯೋ ಪ್ರಕರಣ: ದೇವೇಗೌಡರ ಕುಟುಂಬದ ವರ್ಚಸ್ಸು ಹಾಳು ಮಾಡಲು ಯತ್ನ, ಕಾಂಗ್ರೆಸ್ ನಾಯಕರ ವಿರುದ್ಧ ಕುಮಾರಸ್ವಾಮಿ ಕಿಡಿ

|

Updated on: Apr 30, 2024 | 2:16 PM

JDS Core Committee meeting: ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳುಳ್ಳ ಪೆನ್​​ಡ್ರೈವ್ ಬಹಿರಂಗ ವಿಚಾರಕ್ಕೆ ಸಂಬಂಧಿಸಿ ಹಾಗೂ ಇತರ ವಿಚಾರಗಳ ಬಗ್ಗೆ ಮಂಗಳವಾರ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಯಿತು. ನಂತರ ಮಾತನಾಡಿದ ಜೆಡಿಎಸ್ ರಾಜ್ಯಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ ಆ ಬಗ್ಗೆ ಮಾಹಿತಿ ನೀಡಿದರು.

ಪ್ರಜ್ವಲ್ ವಿಡಿಯೋ ಪ್ರಕರಣ: ದೇವೇಗೌಡರ ಕುಟುಂಬದ ವರ್ಚಸ್ಸು ಹಾಳು ಮಾಡಲು ಯತ್ನ, ಕಾಂಗ್ರೆಸ್ ನಾಯಕರ ವಿರುದ್ಧ ಕುಮಾರಸ್ವಾಮಿ ಕಿಡಿ
ಹೆಚ್​ಡಿ ಕುಮಾರಸ್ವಾಮಿ
Follow us on

ಬೆಂಗಳೂರು, ಏಪ್ರಿಲ್ 30: ಅಶ್ಲೀಲ ವಿಡಿಯೋಗಳುಳ್ಳ ಪೆನ್​ಡ್ರೈವ್ ಬಹಿರಂಗ ವಿಚಾರಕ್ಕೆ ಸಂಬಂಧಿಸಿ ಹಾಸನ (Hassan) ಸಂಸದ ಪ್ರಜ್ವಲ್ ರೇವಣ್ಣರನ್ನು (Prajwal Revanna) ಪಕ್ಷದಿಂದ ಅಮಾನತುಗೊಳಿಸಲು ಶಿಫಾರಸು ಮಾಡಲಾಗಿದೆ. ಅಪರಾಧ ಸಾಬೀತಾದರೆ ನಂತರ ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು. ಹುಬ್ಬಳ್ಳಿಯಲ್ಲಿ ನಡೆದ ಜೆಡಿಎಸ್​ ಕೋರ್​ ಕಮಿಟಿ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಕರಣದ ಹಿಂದೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಕುಟುಂಬಕ್ಕೆ ಕಳಂಕ ತರುವಂತೆ ಮಾಡಬೇಕೆಂಬ ಹುನ್ನಾರವಿದೆ. ಹಳೆಯ ಪ್ರಕರಣವನ್ನು ಈಗ ಚುನಾವಣೆ ಸಮಯದಲ್ಲಿ ಮುನ್ನೆಲೆಗೆ ತಂದಿದ್ದಾರೆ. ಈ ಪ್ರಕರಣಕ್ಕೂ ಪ್ರಧಾನಿ ಮೋದಿ ಅವರಿಗೂ ಕಾಂಗ್ರೆಸ್ ನಾಯಕರು ತಳಕು ಹಾಕಿದ್ದಾರೆ. ಇದಕ್ಕೂ ಮೋದಿಗೂ ಏನು ಸಂಬಂಧ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಮಹಿಳೆಯರ ಮೇಲೆ ದೌರ್ಜನ್ಯ ಆಗಿದ್ದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಲಿ. ಅದನ್ನು ಸ್ವಾಗತಿಸುತ್ತೇವೆ. ಹಾಗೆಂದು ಸಂತ್ರಸ್ತೆಯರು ದೂರು ನೀಡುವ ಮುನ್ನವೇ ಸಿಎಂ ಸಿದ್ದರಾಮಯ್ಯ ತನಿಖೆಗೆ ಆಸಕ್ತಿ ವಹಿಸಿದ್ದು ಹೇಗೆ ಎಂದು ಪ್ರಶ್ನಿಸಿದರು.

ಮೈತ್ರಿಗೆ ಸೋಲು ತರಬೇಕೆಂದು ಕುತಂತ್ರ ಮಾಡಿದ್ದಾರೆ. ಯಾವ ಸಂತ್ರಸ್ತೆಯೂ ದೂರು ಕೊಟ್ಟಿರಲಿಲ್ಲ. ಮಹಿಳಾ ಆಯೋಗದ ಅಧ್ಯಕ್ಷರ ಹೇಳಿಕೆ ಬೆನ್ನಲ್ಲೇ ಎಸ್​​ಐಟಿ ರಚಿಸಿರೋದಾಗಿ ಸಿಎಂ ಹೇಳಿದ್ದಾರೆ. ಹೆಣ್ಣುಮಗಳ ಕೈಲಿ ಬರೆಸಿಕೊಂಡಿದ್ದಾರೆ. 2012-13 ರಲ್ಲಿ ರೇವಣ್ಣ ಅವರ ಮನೆಯಲ್ಲಿ ಕೆಲಸಕ್ಕೆ ಬಂದಿದ್ದಳು. ಆಗ ನಡೆದ ಘಟನೆಗೆ ಈಗ ಯಾಕೆ ದೂರು ಕೊಟ್ಟರು? ಮೈತ್ರಿಗೆ ಸೋಲು ತರಬೇಕೆಂದು ಕುತಂತ್ರ ಮಾಡಿದ್ದಾರೆ. ದೂರು ನೀಡುವುದಕ್ಕೂ ಮುನ್ನವೇ ಎಸ್ಐಟಿ ರಚನೆ ಮಾಡಿದ್ದಾರೆ. ಹಿರಿಯ ಪೊಲೀಸ್ ಆಧಿಕಾರಿಗಳು ಹಾಸನದಲ್ಲಿಯೇ ಠಿಕಾಣಿ ಹೂಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಮಹಿಳೆಯರ ಮುಖ ಬ್ಲರ್ ಕೂಡ ಮಾಡದೇ ವಿಕೃತಿ: ಹೆಚ್​ಡಿಕೆ

ಅಶ್ಲೀಲ ವಿಡಿಯೋವನ್ನು ಬಹಿರಂಗ ಮಾಡುವಾಗ ಕನಿಷ್ಠಪಕ್ಷ ಸಂತ್ರಸ್ತೆಯರ ಮುಖವನ್ನೂ ಬ್ಲರ್ ಮಾಡಲಿಲ್ಲ. ಇದರಿಂದಲೇ ಗೊತ್ತಾಗುವುದಿಲ್ಲವೇ ಅವರ ಮಹಿಳಾ ಪರ ಕಳಕಳಿ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು. ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, 2 ಸಾವಿರ ವಿಡಿಯೋ ಇದೆ ಎನ್ನುತ್ತೀರಿ? ಇದೆಲ್ಲ ಯಾವ ಫ್ಯಾಕ್ಟರಿಯಲ್ಲಿ ಸಿದ್ಧವಾಯ್ತು? ಅಷ್ಟೊಂದು ವಿಡಿಯೋ ಸಿದ್ಧವಾಗಬೇಕಿದ್ದರೆ ಆತ ಸಂಸದನಾಗಿ ಐದು ವರ್ಷ ಅದೇ ಕೆಲಸ ಮಾಡಿದನೋ? ಅನುಮಾನ ಬರುವುದಿಲ್ಲವೇ ಎಂದು ಪ್ರಶ್ನಿಸಿದರು.

ಸಂತ್ರಸ್ತೆಯರ ವಿವರ ಬಹಿರಂಗ ಮಾಡಿ ನಾಳೆ ಅವರಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ? ನಾಳೆ ಅವರೇನಾದರೂ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಯಾರು ಹೊಣೆಗಾರರಾಗುತ್ತಾರೆ ಸಿದ್ದರಾಮಯ್ಯನವರೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ನಿಮ್ಮ ಕುಟುಂಬದ ಮಾನ ರಕ್ಷಿಸಿದ್ದ ಮೋದಿಗೆ ತಳಕು ಹಾಕುತ್ತೀರಾ?

ನಿಮ್ಮ ಕುಟುಂಬದಲ್ಲಿ ನಡೆದಿದ್ದ ಆ ದುರ್ಘಟನೆ ವೇಳೆ ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪ್ರಧಾನಿ ಮೋದಿ ಕಾಪಾಡಿದ್ದರಲ್ಲವೇ? ಇದೀಗ ಈ ಘಟನೆಯನ್ನು ಮೋದಿ ಅವರಿಗೆ ಏಕೆ ತಳಕು ಹಾಕುತ್ತೀರಿ? ನಿಮ್ಮ ಕುಟುಂಬದ ಘಟನೆ ನೆನಪಿಟ್ಟುಕೊಳ್ಳಿ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಇದಕ್ಕೂ ಮುನ್ನ ಮಾತನಾಡಿದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ, ಪ್ರಜ್ವಲ್ ಮೇಲೆ ಬಂದ ಆರೋಪದ ಹಿನ್ನೆಲೆಯಲ್ಲಿ ಕೈಗೊಂಡ ಎಸ್​​ಐಟಿ ತನಿಖೆಗೆ ಸ್ವಾಗತವಿದೆ. ಅದಕ್ಕೆ ವಿರುದ್ಧದ ಹೇಳಿಕೆ ಕೊಡಲ್ಲ. ತನಿಖೆಗೆ ಸಂಪೂರ್ಣ ಸಹಕಾರ ಕೊಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮಹಿಳೆಯರಿಗೆ ಅಪಮಾನ ವಿಚಾರದಿಂದ ಬಂದಿದೆ. ಹೀಗಾಗಿ ಪ್ರಜ್ವಲ್ ರೇವಣ್ಣರನ್ನು ಪಕ್ಷದಿಂದ ಅಮಾನತುಗೊಳಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್​ಡಿ ದೇವೇಗೌಡರಿಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಅಶ್ಲೀಲ ವಿಡಿಯೋ ಪೆನ್​ಡ್ರೈವ್ ಬಹಿರಂಗಕ್ಕೆ ಬಿಗ್ ಟ್ವಿಸ್ಟ್: ದೇವರಾಜೇಗೌಡಗಷ್ಟೇ ಕೊಟ್ಟಿದ್ದೆ ಎಂದ ಪ್ರಜ್ವಲ್ ಮಾಜಿ ಕಾರು ಚಾಲಕ

ಮೇ 7 ರಂದು ನಡೆಯಲಿರುವ ಲೋಕಸಭೆ ಚುನಾವಣೆಗೆ ನಮ್ಮ ಪಕ್ಷದ ಮೈತ್ರಿ ನಾಯಕರ ಸಭೆಯನ್ನು ಮಾಡುತ್ತೇವೆ. ರಾಜ್ಯದಲ್ಲಿ ನಡೆಯೋ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ತೀರ್ಮಾನಿಸಲಾಗಿದೆ. ಏನಾದ್ರೂ ಕುಂದುಕೊರತೆ ಇದ್ದಲ್ಲಿ ಸರಿಪಡಿಸಲಾಗುತ್ತದೆ. ಎಲ್ಲ ಸ್ಥಾನಗಳಲ್ಲಿ ಗೆದ್ದು ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂಬ ಗುರಿ ನಮ್ಮದು. ಈ ವಿಷಯಗಳನ್ನು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿದ್ದೇವೆ ಎಂದು ಜಿಟಿ ದೇವೇಗೌಡ ತಿಳಿಸಿದರು.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:47 pm, Tue, 30 April 24