3 ತಿಂಗಳ ಹಿಂದೆಯೇ ಪ್ರಜ್ವಲ್ ರೇವಣ್ಣ ವಿಡಿಯೋ ಗುಟ್ಟು ರಟ್ಟು ಮಾಡಿದ್ದ ಬಿಜೆಪಿ ನಾಯಕ
ಪ್ರಜ್ವಲ್ ರೇವಣ್ಣ ಅಶ್ಲೀಲ ವೈರಲ್ ವಿಡಿಯೋಗಳು ಮತ್ತು ರೇವಣ್ಣ ಮತ್ತು ಪ್ರಜ್ವಲ್ ವಿರುದ್ಧ ದಾಖಲಾದ ಲೈಂಗಿಕ ದೌರ್ಜನ್ಯದ FIR ರಾಷ್ಟ್ರಮಟ್ಟದಲ್ಲಿ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಅತಿದೊಡ್ಡ ಲೈಂಗಿಕ ಹಗರಣ ಅಂದಿರೋ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರ ಮೇಲೆ ಮುಗಿಬಿದ್ದಿದೆ. ಇನ್ನು ವಿಡಿಯೋ ಬಿಡುಗಡೆ ಮಾಡಿದ್ಯಾರು? ಸುಮಾರು 2 ಸಾವಿರಕ್ಕಿಂತಲೂ ಹೆಚ್ಚು ವಿಡಿಯೋಗಳ ಇದ್ದಾವೆ ಎಂದು ಖಚಿತವಾಗಿ ಅಂಕಿ-ಸಂಖ್ಯೆಗಳನ್ನು ಹೇಳಿದವರ್ಯಾರು ಎನ್ನುವುದೇ ನಿಗೂಢವಾಗಿದೆ. . ಇನ್ನು ಇದರ ಮಧ್ಯೆ ಪ್ರಜ್ವಲ್ ರೇವಣ್ಣ ಅವರದ್ದು ವಿಡಿಯೋಗಳು ಇವೆ ಎನ್ನುವ ಸುದ್ದಿಯನ್ನು ಕಳೆದ ಮೂರು ತಿಂಗಳ ಹಿಂದೆಯೇ ಬಿಜೆಪಿ ನಾಯಕರೊಬ್ಬರು ಬಹಿರಂಗಪಡಿಸಿದ್ದರು. ಹಾಗಾದ್ರೆ, ಶತ್ರುವಿನ ಶತ್ರು ಮಿತ್ರ ಈ ವಿಡಿಯೋಗಳನ್ನು ಬಿಡುಗಡೆ ಮಾಡಿದ್ರಾ? ಮೂರು ತಿಂಗಳ ಹಿಂದೆ ಅವರು ಕೊಟ್ಟ ಸುಳಿವು ಏನು? ಎಲ್ಲಾ ವಿವರ ಇಲ್ಲಿದೆ.
ಬೆಂಗಳೂರು/ಹಾಸನ, (ಏಪ್ರಿಲ್ 30): ಹಾಸನ (Hassan) ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೋ ಎನ್ನಲಾದ ಪೆನ್‌ಡ್ರೈವ್ ಪ್ರಕರಣ (Hassan Pen Drive Case) ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಪೆನ್‌ಡ್ರೈವ್ ಪ್ರಕರಣ ಭಾರಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಪ್ರಕರಣದ ತನಿಖೆಯನ್ನ ರಾಜ್ಯ ಸರ್ಕಾರ ನೇಮಿಸಿರೋ SIT ಹೊತ್ತುಕೊಂಡಿದೆ. ವಿಡಿಯೋಗಳ ಸತ್ಯಾಸತ್ಯತೆ ಸೇರಿದಂತೆ ಹಲವು ಆಯಾಮಗಳಲ್ಲಿ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ತನಿಖೆ ತೀವ್ರಗೊಂಡಿದೆ. ವಿಡಿಯೋ ಬಿಡುಗಡೆ ಮಾಡಿದ್ಯಾರು? ಮೊಬೈಲ್ನಿಂದ ಪೆನ್ಡ್ರೈವ್ಗೆ ಹೇಗೆ ಬಂದವು? ಹೀಗೆ ಹತ್ತಾರು ಆಯಾಮಗಳಲ್ಲಿ ಎಸ್ಐಟಿ ತನಿಖೆ ನಡೆಸುತ್ತಿದೆ. ಇದರ ಮಧ್ಯೆ ಪ್ರಜ್ವಲ್ ರೇವಣ್ಣ ಅವರದ್ದು ಅಶ್ಲೀಲ ವಿಡಿಯೋಗಳ ಇವೆ ಎನ್ನುವುದು ಗೊತ್ತಾಗಿದ್ದೆ ಕಳೆದ ಮೂರು ತಿಂಗಳ ಹಿಂದೆ. ಹೌದು…ಶತ್ರುವಿನ ಶತ್ರು ವಿತ್ರ ಎನ್ನುವಂತೆ ಬಿಜೆಪಿ ನಾಯಕ, ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಎಚ್ಡಿ ರೇವಣ್ಣ ವಿರುದ್ಧ ಸ್ಪರ್ಧಿಸಿ ಸೋಲುಕಂಡಿದ್ದ ವಕೀಲ ದೇವರಾಜೇಗೌಡ ಅವರೇ 2024, ಜನವರಿ 11ರಂದು ಸುದ್ದಿಗೋಷ್ಠಿ ನಡೆಸಿ ಪ್ರಜ್ವಲ್ ರೇವಣ್ಣ ಅವರ ವಿಡಿಯೋಗಳಿವೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆಂದು ಎಚ್ಡಿ ರೇವಣ್ಣ ಅವರಿಗೆ ಎಚ್ಚರಿಕೆ ನೀಡಿದ್ದರು.
ಬಿಜೆಪಿ ಮುಖಂಡ ದೇವರಾಜೇಗೌಡ ಅವರು ರೇವಣ್ಣ ಕುಟುಂಬದ ರಾಜಕೀಯ ವೈರಿಯಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ರೇವಣ್ಣ ವಿರುದ್ಧ ಸ್ಪರ್ಧಿಸಿ ಸೋಲುಕಂಡಿದ್ದರು. ಬಳಿಕ ಕಾರ್ಯಕ್ರಮವೊಂದರಲ್ಲಿ ದೇವರಾಜೇಗೌಡ ಅವರಿಗೆ ಸ್ಟೇಜ್ ಹತ್ತಲು ಬಿಡದೇ ಡರ್ಟಿ ಫೆಲೋ ಎಂದು ರೇವಣ್ಣ ನಿಂದಿಸಿದ್ದರು. ಇದರಿಂದ ಕೆರಳಿದ್ದ ದೇವರಾಜೇಗೌಡ, ನಿನ್ನ ಮಗ ಕೋರ್ಟ್ ನಲ್ಲಿ ತೆಗೆದುಕೊಂಡಿರುವ ಸ್ಟೇ ವೆಕೇಟ್ ಮಾಡಿಸಿ, ಮಹಿಳೆಯರ ಅನುಮತಿ ಕೊಡಿಸು ನಾನು ಎಲ್ ಇ ಡಿ ಪರದೆಯಲ್ಲಿ ಪ್ಲೇ ಮಾಡಿಸುತ್ತೆನೆ. ಆಗ ಯಾರು ಡರ್ಟಿ ಫೆಲೋ ಎಂದು ರೇವಣ್ಣ ಅವರಿಗೆ ತಿರುಗೇಟು ನೀಡಿದ್ದರು.
ಇಷ್ಟಕ್ಕೆ ಸುಮ್ಮನಾಗದ ದೇವರಾಜೇಗೌಡ, ಡರ್ಟಿ ಫೆಲೋ ಎಂದಿರುವ ವಿಚಾರವಾಗಿ ಜನವರಿ 11ರಂದು ಸುದ್ದಿಗೋಷ್ಠಿ ಕರೆದು ಎಚ್ಡಿ ರೇವಣ್ಣ ವಿರುದ್ಧ ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಇದೇ ವೇಳೆ ರೇವಣ್ಣ ಅವರ ಪುತ್ರ ಪ್ರಜ್ವಲ್ ಅವರ ವಿಡಿಯೋಗಳ ಬಗ್ಗೆಯೂ ಬಹಿರಂಗವಾಗಿಯೇ ಹೇಳಿದ್ದರು. ಅಂದೇ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಇವೆ ಎಂದು ಜಗಜ್ಜಾಹೀರಾಯ್ತು.
ಅಂದು ವಿಡಿಯೋ ಬಗ್ಗೆ ದೇವರಾಜೇಗೌಡ ಹೇಳಿದ್ದೇನು?
ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಕೆಲ ವಿಡಿಯೋ ದಾಖಲೆಗಳು ನನ್ನ ಬಳಿ ಇವೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದ ದೇವರಾಜೇಗೌಡ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಪ್ರದರ್ಶನ ಮಾಡದಂತೆ 2023ರ ಜುಲೈನಲ್ಲಿ ನ್ಯಾಯಾಲದ ಮೂಲಕ ಸ್ಟೇ ತಂದಿದ್ದಾರೆ ಎಂದು ಹೇಳಿದ್ದರು.
ಎಚ್ಡಿ ದೇವೇಗೌಡ ಹಾಗೂ ಎಚ್ಡಿ ಕುಮಾರಸ್ವಾಮಿ ಅವರ ಮೇಲೆ ಗೌರವ ಇರುವುದರಿಂದ ವಿಡಿಯೋ ಬಿಡುಗಡೆ ಮಾಡದೇ ಸುಮ್ಮನಿದ್ದೇನೆ. ಈ ಸಂಬಂಧ ನ್ಯಾಯಾಲದಲ್ಲಿ ಪ್ರಕರಣ ಇತ್ಯರ್ಥ ಆಗಬೇಕಿದ್ದು, ನಂತರ ಎಲ್ಲಾ ವಿಡಿಯೋಗಳನ್ನು ನಗರದ ಎನ್ಆರ್ ವೃತ್ತದಲ್ಲಿ ಪ್ರದರ್ಶನ ಮಾಡುತ್ತೇನೆ. ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ಸಂಬಂಧ ಎಲ್ಲ ದಾಖಲೆಗಳನ್ನು ಕೇಂದ್ರ ಬಿಜೆಪಿ ನಾಯಕರಿಗೂ ಸಲ್ಲಿಸಲಾಗಿದೆ. ರೇವಣ್ಣ ಅವರಂತೆ ನಾನು ಯಾವುದೇ ಅಕ್ರಮ ಎಸಗಿಲ್ಲ. ಹಾಗೇನಾದರೂ ನನ್ನ ಅಕ್ರಮಗಳ ಬಗ್ಗೆ ಅವರ ಬಳಿ ಮಾಹಿತಿ ಇದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದರು.
ದೇವರಾಜೇಗೌಡ್ರಿಗೆ ಪ್ರಜ್ವಲ್ ವಿಡಿಯೋ ಗೊತ್ತಾಗಿದ್ದೇಗೆ?
ಬಿಜೆಪಿ ಮುಖಂಡ ದೇವರಾಜೇಗೌಡ ಕೇವಲ ರಾಜಕಾರಣಿ ಅಲ್ಲ. ಅವರು ವಕೀಲರು ಸಹ ಹೌದು. ಹೀಗಾಗಿ ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕನ್ನಾಗಿದ್ದ ಕಾರ್ತಿಕ್ ಎನ್ನುವಾತ ರೇವಣ್ಣ ಕುಟುಂಬದ ಜೊತೆ ಗಲಾಟೆ ಮಾಡಿಕೊಂಡಿದ್ದರು. ಆಸ್ತಿ ಬರೆಯಿಸಿಕೊಂಡಿದ್ದಾರೆ. ಕಿಡ್ನಾಪ್ ಮಾಡಿದ್ದರು ಅಂತೆಲ್ಲಾ ಆರೋಪಗಳನ್ನು ಮಾಡಿದ್ದರು. ಇದಾದ ಬಳಿಕ ಕಾರ್ತಿಕ್ ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸಲು ಮುಂದಾದರು. ಆಗ ಕಾರ್ತಿಕ್ಗೆ ಸಿಕ್ಕಿದ್ದೆ ರೇವಣ್ಣ ಕುಟುಂಬದ ವೈರಿ ದೇವರಾಜೇಗೌಡ. ಶತ್ರುವಿನ ಶ್ರತು ಮಿತ್ರ ಎನ್ನುವಂತೆ ಕಾರ್ತಿಕ್, ರೇವಣ್ಣ ಅವರ ವಿರೋಧಿ ದೇವರಾಜೇಗೌಡ ಅವರ ಬಳಿ ಬಂದು ಕಾನೂನು ಹೋರಾಟದ ಬಗ್ಗೆ ಚರ್ಚಿಸಿದ್ದರು. ಆ ವೇಳೆ ದೇವರಾಜೇಗೌಡ ಅವರು ರೇವಣ್ಣ ಕುಟುಂಬ ಅಕ್ರಮಗಳ ದಾಖಲೆಗಳನ್ನು ಕಾರ್ತಿಕ್ನಿಂದ ಪಡೆದುಕೊಂಡಿದ್ದರು. ಅದೇ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳು ಇರುವ ಪೆನ್‌ಡ್ರೈವ್ ಸಹ ಕಾರ್ತಿಕ್, ದೇವರಾಜೇಗೌಡ ಅವರಿಗೆ ನೀಡಿದ್ದ. ಆಗ ಗೊತ್ತಾಗಿದ್ದು ಪ್ರಜ್ವಲ್ನ ಅಶ್ಲೀಲ ವಿಡಿಯೋಗಳು ಇವೆ ಎಂದು. ಬಳಿಕ ಆ ವಿಡಿಯೋಗಳನ್ನು ಇಟ್ಟುಕೊಂಡೇ ದೇವರಾಜೇಗೌಡ ಸುದ್ದಿಗೋಷ್ಠಿ ನಡೆಸಿ ಸಮಯ ಬಂದಾಗ ಪ್ರಜ್ವಲ್ ವಿಡಿಯೋಗಳನ್ನು ಬಿಡುಗಡೆ ಮಾಡುತ್ತೇನೆಂದು ರೇವಣ್ಣಗೆ ಎಚ್ಚರಿಕೆ ನೀಡಿದ್ದರು. ಬಳಿಕ ಪ್ರಜ್ವಲ್ ವಿಡಿಯೋಗಳ ಬಗ್ಗೆ ಎಲ್ಲೆಡೆ ಚರ್ಚೆಗಳು ಶುರುವಾದವು.
ಅಂತಿಮವಾಗಿ ಪ್ರಜ್ವಲ್ ವಿಡಿಯೋ ಬಿಡುಗಡೆ ಮಾಡಿದ್ಯಾರು?
ಪ್ರಜ್ವಲ್ ರೇವಣ್ಣ ಅವರ ವಿಡಿಯೋಗಳು ಇವೆ. ಸಮಯ ಬಂದಾಗ ಬಿಡುಗಡೆ ಮಾಡುವುದಾಗಿ ಕಳೆದ ಮೂರು ತಿಂಗಳ ಹಿಂದೆಯೇ ದೇವರಾಜೇಗೌಡ ಅವರೇ ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಲೋಕಸಭಾ ಚುನಾವಣೆಯಲ್ಲಿ ವಿಡಿಯೋ ಬಿಡುಗಡೆಯಾಗಿದ್ದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇದೀಗ ದೇವರಾಜೇಗೌಡ ಅವರೇ ವಿಡಿಯೋ ಬಿಡುಗಡೆ ಮಾಡಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ. ಅಲ್ಲದೇ ಕಾರ್ತಿಕ್ ಸಹ ನಾನು ಪೆನ್‌ಡ್ರೈವ್ ಯಾರಿಗೂ ಕೊಟ್ಟಿಲ್ಲ. ದೇವರಾಜೇಗೌಡ ಅವರಿಗೆ ಕೊಟ್ಟಿದ್ದೆ ಎಂದು ಹೇಳಿದ್ದಾರೆ. ಹೀಗಾಗಿ ಅವರೇ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದ್ರೆ, ಇದನ್ನು ದೇವರಾಜೇಗೌಡ ಅಲ್ಲಗಳೆಯುತ್ತಿದ್ದಾರೆ. ಕಾರ್ತಿಕ್ ನನ್ನ ಹತ್ತಿರ ಬರುವ ಮೊದಲೇ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಪೆನ್‌ಡ್ರೈವ್ ನೀಡಿದ್ದಾರೆ ಎಂದು ದೇವರಾಜೇಗೌಡ ಹೇಳುತ್ತಿದ್ದಾರೆ.
ಹಾಗಾಗಿ ವಿಡಿಯೋ ಬಿಡುಗಡೆ ಮಾಡಿದ್ಯಾರು ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಆದರೂ ಸಹ ದೇವರಾಜೇಗೌಡ ಅವರ ಮೇಲೆ ಅನುಮಾನಗಳು ವ್ಯಕ್ತವಾಗಿದ್ದು, ಈ ಬಗ್ಗೆ ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ. ಆಗ ವಿಡಿಯೋ ಬಿಡುಗಡೆ ಮಾಡಿದ್ಯಾರು ಎನ್ನುವುದು ಕ್ಲ್ಯಾರಿಟಿ ಸಿಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ