ಸಂವಿಧಾನ ಬದಲಾವಣೆ ಆದ್ರೆ ನನ್ನ ತಲೆ ಕತ್ತರಿಸಿ ರಾಮಲಿಂಗೇಶ್ವರನಿಗೆ ಅರ್ಪಿಸಿ: ಬಿಜೆಪಿ ಶಾಸಕ ಶಿವರಾಜ್​ ಪಾಟೀಲ್​

| Updated By: ವಿವೇಕ ಬಿರಾದಾರ

Updated on: May 03, 2024 | 8:01 AM

Constitution Chang: ಬಿಜೆಪಿ ಸಂಸದ ಅನಂತಕುಮಾರ್​ ಹೆಗಡೆ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಇವರ ಸಂವಿಧಾನ ಬದಲಾವಣೆ ಹೇಳಿಕೆ ಬಿಜೆಪಿಗೆ ಮುಳುವಾಗಿದೆ. ಕಾಂಗ್ರೆಸ್​ಗೆ ಅಸ್ತ್ರವಾಗಿದೆ. ಸಂವಿಧಾನ ಬದಲಾವಣೆ ಹೇಳಕೆ ವಿಚಾರವಾಗಿ ಬಿಜೆಪಿ ಶಾಸಕ ಡಾ. ಶಿವರಾಜ್​ ಪಾಟೀಲ್​ ಮಾತನಾಡಿ, ರಾಮಲಿಂಗೇಶ್ವರ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ ನಾವು ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ರಾಯಚೂರು, ಮೇ 03: ಭಾರತೀಯ ಜನತಾ ಪಾರ್ಟಿ (BJP) ಅಧಿಕಾರಕ್ಕೆ ಬಂದರೆ ಸಂವಿಧಾನ (Indian Constitution) ಬದಲಾವಣೆ ಮಾಡುತ್ತಾರೆ ಅಂತ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ರಾಮಲಿಂಗೇಶ್ವರ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ, ನಮ್ಮ ‌ಬಿಜೆಪಿ ಸರ್ಕಾರ ಸಂವಿಧಾನ ಮುಟ್ಟುವುದಿಕಲ್ಲ, ಸಂವಿಧಾನ ಬದಲಾವಣೆ ಮಾಡುವುದಿಲ್ಲ. ಸಂವಿಧಾನ ಬದಲಾವಣೆ ಆದರೆ ನನ್ನ ತಲೆ ಕತ್ತರಿಸಿ ರಾಮಲಿಂಗೇಶ್ವರನಿಗೆ ಅರ್ಪಿಸಿ ಎಂದು ಬಿಜೆಪಿ ಶಾಸಕ ಡಾ. ಶಿವರಾಜ್​ ಪಾಟೀಲ್​ (Shivaraj Patil) ಹೇಳಿದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಗುರುವಾರ (ಮೇ 02) ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಯಾ ಒಬ್ಬ ನಾಯಕರು ಕೂಡ ಸಂವಿಧಾನ ಬದಲಾವಣೆ ಮಾಡಲ್ಲ ಎಂದರು.

ಕಾಂಗ್ರೆಸ್​​ನವರು ಬರೀ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ‌ಬಂದರೆ ನಿಮ್ಮನ್ನು ದೇಶದಲ್ಲಿ ಇರಲು ಬಡಲ್ಲ ಅಂತ ಕಾಂಗ್ರೆಸ್​ ಮುಸ್ಲಿಮರಿಗೆ ಹೆದರಿಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೇ ಸಂವಿಧಾನ ಬದಲಾವಣೆ ಮಾಡುತ್ತಾರೆ ಅಂತ ನನ್ನ ದಲಿತ ಬಂಧುಗಳಿಗೆ ಹೇಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷದಿಂದ ಆಡಳಿತ ನಡೆಸುತ್ತಿದ್ದಾರೆ, ಸಂವಿಧಾನ ‌ಬದಲಾವಣೆ ಮಾಡಿದ್ದಾರಾ? ಕಾಂಗ್ರೆಸ್​ನವರು ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಯಾರು ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಅನಂತಕುಮಾರ್ ಹೊತ್ತಿಸಿದ ಸಂವಿಧಾನ ಬದಲಾವಣೆ ಜ್ವಾಲೆ

ಬಿಜೆಪಿ ಸಂಸದ ಅನಂತಕುಮಾರ್​ ಹೆಗಡೆ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಇವರ ವಿವಾದಾತ್ಮಕ ಹೇಳಿಕೆಗಳಿಂದ ಪಕ್ಷ ಹಲವು ಬಾರಿ ಮುಜುಗರಕ್ಕೆ ಒಳಗಾಗಿದೆ. ಈ ಕಾರಣದಿಂದಲೇ ಈ ಬಾರಿ ಅನಂತಕುಮಾರ್​ ಹೆಗಡೆ ಅವರಿಗೆ ಟಿಕೆಟ್​ ಕೈ ತಪ್ಪಿದೆ ಎನ್ನಬಹುದು. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಕ್ರಿಯರಾಗಿದ್ದ ಅನಂತಕುಮಾರ್​ ಹೆಗಡೆ ಅಬ್ಬರದ ಭಾಷಣದ ವೇಳೆ ಸಂವಿಧಾನಕ್ಕೆ ಕೈ ಹಾಕಿದ್ದರು.\

ಇದನ್ನೂ ಓದಿ: PM Modi Interview: 370ನೇ ವಿಧಿ ರದ್ದುಪಡಿಸಿ ಸಂವಿಧಾನಕ್ಕೆ ಶ್ರೇಷ್ಟ ಸೇವೆ ಸಲ್ಲಿಸಿದ್ದೇನೆ; ಪ್ರಧಾನಿ ಮೋದಿ

ಹಿಂದೂಗಳನ್ನು ಹತ್ತಿಕ್ಕಲು ಕಾಂಗ್ರೆಸ್‌ ಸಂವಿಧಾನವನ್ನು ಬದಲಾಯಿಸಿದೆ. ಸಂವಿಧಾನವನ್ನು ತಿದ್ದುಪಡಿ ಮಾಡಬೇಕಾಗಿದೆ. ಕಾಂಗ್ರೆಸ್ ಇದರಲ್ಲಿ ಅನಗತ್ಯವಾದ ವಿಷಯಗಳನ್ನು ತುರುಕುವ ಮೂಲಕ ಸಂವಿಧಾನವನ್ನು ವಿರೂಪಗೊಳಿಸಿದೆ. ಹಿಂದೂ ಸಮಾಜವನ್ನು ಹತ್ತಿಕ್ಕುವ ಉದ್ದೇಶದಿಂದಲೇ ಈ ಕಾನೂನುಗಳನ್ನು ತಂದಿದೆ.

ಶಾಸಕ ಶಿವರಾಜ್​ ಪಾಟೀಲ್​

ಇವೆಲ್ಲವನ್ನೂ ಬದಲಾಯಿಸಬೇಕಾದರೆ ಈಗಿರುವ ಬಹುಮತದಿಂದ ಸಾಧ್ಯವಿಲ್ಲ, 543 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ 400 ಸ್ಥಾನಗಳನ್ನು ಗೆಲ್ಲಬೇಕು. ಪಕ್ಷಕ್ಕೆ ರಾಜ್ಯಸಭೆ ಮತ್ತು ರಾಜ್ಯಗಳಲ್ಲೂ ಮೂರನೇ ಎರಡರಷ್ಟು ಬಹುಮತ ಬೇಕು ಎಂದು ಹೇಳಿದ್ದರು. ಇದು ಬಿಜೆಪಿಗೆ ಮುಳುವಾಗಿದ್ದು, ಕಾಂಗ್ರೆಸ್​ ಇದನ್ನೇ ಅಸ್ತ್ರ ಮಾಡಿಕೊಂಡಿದೆ.

ಕಾಂಗ್ರೆಸ್​ಗೆ ಅಸ್ತ್ರ

ಸಂವಿಧಾನ ಬದಲಾವಣೆ ಆಗಬೇಕಿದೆ ಎಂಬ ಸಂಸದ ಅನಂತಕುಮಾರ್ ಹೆಗಡೆ ಅವರ ಮಾತು ಕಾಂಗ್ರೆಸ್​ಗೆ ಅಸ್ತ್ರವಾಯಿತು. ಅನಂತಕುಮಾರ್ ಹೆಗಡೆ ಹೇಳಿಕೆಯನ್ನು ತನ್ನ ಪ್ರಚಾರ ಸಭೆಗಳಲ್ಲಿ ಪ್ರಸ್ತಾಪಿಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತದೆ. ಇದರಿಂದ ದಲಿತರಿಗೆ ಮತ್ತು ಮುಸ್ಲಿಮರಿಗೆ ಅನ್ಯಾಯವಾಗುತ್ತದೆ ಎಂದು ಹೇಳುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ