ಶಿವಮೊಗ್ಗ, ಏಪ್ರಿಲ್ 30: ಹಿಂದುಳಿದವರಿಗೆ, ಅತಿ ಹಿಂದುಳಿದವರಿಗೆ ನ್ಯಾಯ ಸಿಗಬೇಕು ಅಂತ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ (Rayanna Brigade) ಪ್ರಾರಂಭಿಸಿದ್ದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸಬೇಕು ಅಂತ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಕೇಂದ್ರ ಸಚಿವ ಅಮಿತ್ ಶಾ (Amit Shah) ಹೇಳಿದರು. ಮರು ಮಾತನಾಡದೆ ನಿಲ್ಲಿಸಿದೆ. ಆ ಸಂಘಟನೆ ಈಗ ಇದ್ದಿದ್ದರೆ ಹಿಂದುಳಿದವರಿಗೆ ನ್ಯಾಯ ಸಿಗುತ್ತಿತ್ತೇನೋ. ನಾನು ಯಾವಾಗಲೂ ಹಿರಿಯರ ಮಾತು ಮೀರಿರಲಿಲ್ಲ ಹೀಗಾಗಿ ಕೈಬಿಟ್ಟೆ. ನಾನು ಆವಾಗಲೇ ಅವರ ಮಾತು ಮೀರಿದ್ದರೆ ಸರಿ ಹೋಗುತಿತ್ತು. ಚುನಾವಣೆ ಮುಗಿದ ನಂತರ ಹಿಂದುಳಿದವರ, ದಲಿತರ ರಾಜ್ಯ ಮಟ್ಟದ ಸಭೆ ಕರೆಯುತ್ತೇನೆ ಎಂದು ಮಾಜಿ ಸಚಿವ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆಎಸ್ ಈಶ್ವರಪ್ಪ (KS Ehswarappa) ಹೇಳಿದರು. (ಹೀಗೆ ಹೇಳುವ ಮೂಲಕ ಕೆಎಸ್ ಈಶ್ವರಪ್ಪ ಅವರು ಮತ್ತೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆರಂಭಿಸುವ ಸುಳಿವು ನೀಡಿದ್ದಾರೆ).
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದುಳಿದವರಿಗೆ, ದಲಿತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ. ಬಿಜೆಪಿ ನನ್ನ ಮಾತೃ ಸಂಸ್ಥೆ, ಈ ಚುನಾವಣೆಯಲ್ಲಿ ಗೆದ್ದು ಮತ್ತೆ ಬಿಜೆಪಿಗೆ ಹೋಗುತ್ತೇನೆ. ಕ್ಷೇತ್ರದಲ್ಲಿ ನನಗೆ ದಿನದಿಂದ ದಿನಕ್ಕೆ ಬೆಂಬಲ ಹೆಚ್ಚಾಗುತ್ತಿದೆ. ಜನ ನಿರೀಕ್ಷೆಗೆ ಮೀರಿ ಬೆಂಬಲ ಕೊಡುತ್ತಿದ್ದಾರೆ ಎಂದು ತಿಳಿಸಿದರು.
ಬಗರ್ ಹುಕಂ ಜಮೀನು ಸಮಸ್ಯೆ ಇನ್ನೂ ಹಾಗೆ ಇದೆ. ಸಾವಿರಾರು ಸಂತ್ರಸ್ತರಿಗೆ ಈವರೆಗೂ ಹಕ್ಕುಪತ್ರ ಸಿಕ್ಕಿಲ್ಲ. ಮಲೆನಾಡು ರೈತ ಹೋರಾಟ ಸಮಿತಿ ನನಗೆ ಬೆಂಬಲ ನೀಡಿದೆ. ಇವರ ಹೋರಾಟಕ್ಕೆ ನಾನು ಸಹ ಸಾಥ್ ನೀಡುತ್ತೇನೆ. ಚುನಾವಣೆ ಬಳಿಕವೂ ನನ್ನ ಹೋರಾಟ ಮುಂದುವರಿಯುತ್ತೆ. ಚುನಾವಣೆ ಬಳಿಕ ರಾಜ್ಯಮಟ್ಟದ ಸಭೆ ಮಾಡುತ್ತೇನೆ ಎಂದರು.
ಇದನ್ನೂ ಓದಿ: ಮಾವ ಈಶ್ವರಪ್ಪಗಾಗಿ ಮನೆಮನೆ ತಿರುಗಿ ಕರಪತ್ರ ಹಂಚುತ್ತಾ ವೋಟು ಕೇಳುತ್ತಿರುವ ಶಾಲಿನಿ ಕಾಂತೇಶ್!
ಪಕ್ಷ ರಾಜಕಾರಣದಲ್ಲಿ ಅವರ ಅಸ್ತಿತ್ವ ಅಲುಗಾಡಿದಾಗ, ಬಿಜೆಪಿಗೆ ಹಿಂದುಳಿದ ವರ್ಗಗಳ ನಾಯಕರೊಬ್ಬರ ಅಗತ್ಯ ಉದ್ಭವಿಸಿದಾಗ, ಕಾಂಗ್ರೆಸ್ನ ಹಿಂದುಳಿದ ವರ್ಗಗಳ, ಮುಖ್ಯವಾಗಿ ಕುರುಬ ಸಮುದಾಯದ ಸಿದ್ದರಾಮಯ್ಯನವರಿಗೆ ಪರ್ಯಾಯ ನಾಯಕತ್ವಕ್ಕಾಗಿ ಈಶ್ವರಪ್ಪ ಕಂಡುಕೊಂಡ ದಾರಿ ರಾಯಣ್ಣ ಬ್ರಿಗೇಡ್. 2016ರ ಡಿಸೆಂಬರ್ನಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ಮಾಜಿ ಸಚಿವ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆರಂಭಿಸಿದರು. 2018ರ ವಿಧಾನಸಭೆ ಚುನಾವಣೆಗೂ ಮುಂಚೆ ರಾಯಣ್ಣ ಬ್ರಿಗೇಡ್ ಆಂಭವಾಗಿದ್ದು, ಬಿಜೆಪಿಗೆ ಮಗ್ಗಲು ಮುಳ್ಳಾಗಿತ್ತು.
ಈಗ ಮತ್ತೆ ಈಶ್ವರಪ್ಪನವರ ರಾಜಕೀಯ ಭವಿಷ್ಯ ಡೋಲಾಯಮಾನವಾಗಿರುವ ಸಂದರ್ಭದಲ್ಲಿ ಮತ್ತೆ ರಾಯಣ್ಣನ ಮೊರೆ ಹೋಗಿದ್ದಾರೆ. ಹೀಗಾಗಿ ಈಶ್ವರಪ್ಪ ಅವರು ರಾಯಣ್ಣ ಬ್ರಿಗೇಡ್ಗೆ ಮರುಜೀವ ನೀಡಲು ಯತ್ನಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ