ಕೈ ಕುಟುಂಬ ಅವಾರ್ಡ್ಸ್: ಬೆಸ್ಟ್ ಹೊಡಿಮಗ ಹೊಡಿಮಗ ಅವಾರ್ಡ್ ನಾಮಿನೀಸ್ ಯಾರು?: ಬಿಜೆಪಿ ಟ್ವೀಟ್
ಈ ಹಿಂದೆ ಕಾಂಗ್ರೆಸ್ ನಾಯಕರು ಕಪಾಲಮೋಕ್ಷ ಮಾಡಿರುವ ವಿಡಿಯೋ ಕ್ಲಿಪ್ಗಳನ್ನು ಇಟ್ಟುಕೊಂಡು ಎಡಿಟ್ ಮಾಡಿ ಕೈ ಕುಟುಂಬ ಅವಾರ್ಡ್ಸ್ ಅಂತ ಟೈಟಲ್ ಕೊಡಲಾಗಿದೆ. ಈ ವಿಡಿಯೋವನ್ನು ಬಿಜೆಪಿ ಟ್ವಿಟರ್ನಲ್ಲಿ ಹಂಚಿಕೊಂಡು ಕಾಂಗ್ರೆಸ್ ಪಕ್ಷದ ಕಾಲೆಳೆದಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023 (Karnataka Assembly Election 2023) ಸಮೀಪಿಸುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಆರೋಪ ಪ್ರತ್ಯಾರೋಪಗಳನ್ನು ಮಾಡಲು ಆರಂಭಿಸಿವೆ. ಪ್ರತಿ ಬಾರಿ ಚುನಾವಣೆ ಸಮೀಪಿಸುತ್ತಿದ್ದಾಗ ರಾಜಕೀಯ ಪಕ್ಷಗಳ ಈ ಡೊಂಬರಾಟಗಳು ಕೆಲವೊಮ್ಮೆ ಮತದಾರರಿಗೆ ಸಖತ್ ಮನರಂಜನೆಯನ್ನು ನೀಡುತ್ತವೆ. ಇದೀಗ ರಾಜ್ಯ ಬಿಜೆಪಿ (BJP Karnataka) ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಸಿದ್ದರಾಮಯ್ಯ (Siddaramaiah), ಡಿ.ಕೆ.ಶಿವಕುಮಾರ್ (D.K.Shivakumar) ಸೇರಿದಂತೆ ಅನೇಕ ನಾಯಕರು ಕಾರ್ಯಕರ್ತರು ಮತ್ತು ಮುಖಂಡರ ಮೇಲೆ ಹಲ್ಲೆ ನಡೆಸುವುದನ್ನು ಕಾಣಬಹುದು. ಅಲ್ಲದೆ ವಿಡಿಯೋಗೆ ‘ಕೈ ಕುಟುಂಬ ಅವಾರ್ಡ್ಸ್’, ‘ಬೆಸ್ಟ್ ಹೊಡಿಮಗ ಹೊಡಿಮಗ ಅವಾರ್ಡ್’ ಅಂತ ಟೈಟಲ್ ಕೊಟ್ಟಿರುವುದು ನೆಟ್ಟಿಗರನ್ನು ನಗೆಪಾಟಲಿಗೆ ಎಳೆದೊಯ್ದಿದೆ.
ಟ್ವಿಟರ್ ಖಾತೆಯಲ್ಲಿ ಬಿಜೆಪಿ ಹಂಚಿಕೊಂಡಿರುವ 56 ಸೆಕೆಂಡ್ಗಳ ವಿಡಿಯೋ ‘ಕೈ ಕುಡುಂಬ ಅವಾರ್ಡ್ಸ್’ ಎಂಬ ಟೈಟಲ್ ಡಿಸ್ಪ್ಲೇ ಆಗುವುದರಿಂದ ಆರಂಭವಾಗುತ್ತದೆ. ನಂತರ ಬೆಸ್ಟ್ ಹೊಡಿಮಗ ಹೊಡಿಮಗ ಅವಾರ್ಡ್ ನಾಮಿನೀಸ್ ಅಂತ ಸಬ್ಟೈಟಲ್ ಕೊಡಲಾಗಿದೆ. ಇದು ಮುಕ್ತಾಯವಾಗುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿ ಹೋಗುತ್ತಿದ್ದಾಗ ಬಳಿ ಬಂದ ಮುಖಂಡರೊಬ್ಬರಿಗೆ ಮಾಜಿ ಮುಖ್ಯಮಂತ್ರಿಯೂ ಆಗಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೆನ್ನೆಗೆ ಬಾರಿಸಿ ಅವರನ್ನು ತಳ್ಳಿಕೊಂಡು ಹೋಗುವುದನ್ನು ಕಾಣಬಹುದು.
ಸಿದ್ದರಾಮಯ್ಯರ ಹಲ್ಲೆ ವಿಡಿಯೋ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿಡಿಯೋ ಕ್ಲಿಪ್ ಹಾಕಲಾಗಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಹತ್ತಿರದಲ್ಲಿದ್ದ ವ್ಯಕ್ತಿಗೆ ಡಿಕೆಶಿ ಕಪಾಲಮೋಕ್ಷ ನಡೆಸಿ ಗರಂ ಆಗುವುದನ್ನು ಕಾಣಬಹುದು. ನಂತರ ವ್ಯಕ್ತಿಯೊಬ್ಬರು ರಾಹುಲ್ ಗಾಂಧಿ ಜೊತೆ ಸಿಲ್ಫೀ ತೆಗೆಯಲು ಬಂದಾಗ ಸೆಲ್ಫೀಗೆ ನಿರಾಕರಿಸುವುದನ್ನು ತೋರಿಸಲಾಗಿದೆ.
ಬಳಿಕ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಭೀಕರವಾಗಿ ಹಲ್ಲೆ ನಡೆಸುವುದು, ವೆಂಕಟರಮಣಪ್ಪ ಅವರು ಯುವಕನ ಕೆನ್ನೆಗೆ ಬಾರಿಸುವುದನ್ನು ತೋರಿಸಲಾಗಿದೆ. ವಿಡಿಯೋದ ಕೊನೆಯಲ್ಲಿ ಆಂಡ್ ದ ವಿನ್ನರ್ ಈಸ್ (ವಿಜೇತರು) ಅಂತ ಬರೆದು ಕಾಮೆಂಟ್ ಮಾಡಿ ಎಂದು ಹೇಳಲಾಗಿದೆ.
ಕಾಂಗ್ರೆಸ್ ಓಲೈಕೆ ರಾಜಕಾರಣಕ್ಕೆ ಎಷ್ಟು ಪ್ರಸಿದ್ಧವೋ, ಹೊಡಿ ಬಡಿ ರಾಜಕಾರಣಕ್ಕೂ ಅಷ್ಟೇ ಜನಪ್ರಿಯ. ಹೇಳಿ ಕೇಳಿ ಕೈ ಪಕ್ಷ. ಮಾತಾಡುವ ಬದಲು ಕೈ ಎತ್ತುವುದೇ ಚಾಳಿ. #CriminalCongress pic.twitter.com/i4QMfpdwSD
— BJP Karnataka (@BJP4Karnataka) January 23, 2023
“ಕಾಂಗ್ರೆಸ್ ಓಲೈಕೆ ರಾಜಕಾರಣಕ್ಕೆ ಎಷ್ಟು ಪ್ರಸಿದ್ಧವೋ, ಹೊಡಿ ಬಡಿ ರಾಜಕಾರಣಕ್ಕೂ ಅಷ್ಟೇ ಜನಪ್ರಿಯ. ಹೇಳಿ ಕೇಳಿ ಕೈ ಪಕ್ಷ. ಮಾತಾಡುವ ಬದಲು ಕೈ ಎತ್ತುವುದೇ ಚಾಳಿ” ಎಂದು ಆರೋಪಿಸಿ ಬಿಜೆಪಿ ಈ ವಿಡಿಯೋವನ್ನು ಹಂಚಿಕೊಂಡಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:08 pm, Mon, 23 January 23