ಬಿಜೆಪಿ ಜನಸ್ಪಂದನಕ್ಕೆ ಸ್ಪಂದಿಸದ ಈಶ್ವರಪ್ಪ; ಸಮಾವೇಶದ ಕ್ರೆಡಿಟ್ ತಂದ ಕಿರಿಕಿರಿ!
ಸೆಪ್ಟೆಂಬರ್ 10 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪದನದಲ್ಲಿ ಭಾಗವಹಿಸಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
ಸೆಪ್ಟೆಂಬರ್ 10 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನ ಕಾರ್ಯಕ್ರಮ ಮಾಡಿತು. ಈ ಕಾರ್ಯಕ್ರಮಕ್ಕೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಭಾಗವಹಿಸಬೇಕಿತ್ತು. ಆದರೆ ಅವತ್ತು ಕೆ.ಎಸ್. ಈಶ್ವರಪ್ಪ ಬೆಂಗಳೂರಿನತ್ತ ಮುಖ ಹಾಕದೆ ಶಿವಮೊಗ್ಗದಲ್ಲೇ ಉಳಿದಿದ್ದರು. ವಾಸ್ತವವಾಗಿ ಈಶ್ವರಪ್ಪ ಈ ಸಮಾವೇಶದಲ್ಲಿ ಭಾಗವಹಿಸಿ ಅಬ್ಬರದ ಭಾಷಣವನ್ನೂ ಮಾಡಬೇಕಿತ್ತು. ಕುರುಬ ಸಮುದಾಯವನ್ನು ಕೇಂದ್ರೀಕರಿಸಿ ಸಮಾವೇಶದ ಉಸ್ತುವಾರಿ ವಹಿಸಿದ್ದ ಸಚಿವ ಡಾ. ಕೆ. ಸುಧಾಕರ್, ಈಶ್ವರಪ್ಪ ಅವರನ್ನು ಕರೆಸಲು ಸೆಪ್ಟೆಂಬರ್ 9 ರ ರಾತ್ರಿಯವರೆಗೂ ಸಿಕ್ಕಾಪಟ್ಟೆ ಸರ್ಕಸ್ ಮಾಡಿದ್ದರು.
ಈಶ್ವರಪ್ಪ ಅವರಿಗೆ ಕರೆಯ ಮೇಲೆ ಕರೆ ಮಾಡಿ ಸುಧಾಕರ್ ಸಮಾವೇಶಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದರು. ಸುಧಾಕರ್ ಕರೆ ಮಾಡಿದಾಗ ಬರುತ್ತೇನೆ ಎಂದು ಹೇಳಿ ಫೋನ್ ಇಟ್ಟಿದ್ದ ಈಶ್ವರಪ್ಪ, ತಾವು ಮತ್ತೆ ಸಚಿವರಾಗಲು ಸೂಕ್ತ ಸ್ಪಂದನೆಯೇ ಸಿಗುತ್ತಿಲ್ಲ ಎಂದು ಮುನಿಸಿಕೊಂಡಿದ್ದರು. ಹೀಗಾಗಿ ತಮಗೆ ಸ್ಪಂದನೆ ಸಿಗದ ಕಾರಣಕ್ಕೆ ಜನಸ್ಪಂದನಕ್ಕೆ ಹೋಗದೇ ಮೌನ ಪ್ರತಿಭಟನೆ ನಡೆಸಿದ್ದರು. ದೂರವಾಣಿ ಕರೆ ಮಾಡಿದಾಗ ಈಶ್ವರಪ್ಪ ಬರುತ್ತೇನೆ ಎಂದಿದ್ದರೂ ಬರಲ್ಲ ಎಂಬ ಡೌಟ್ ಸಚಿವ ಸುಧಾಕರ್ಗೆ ಸಿಕ್ಕಿತ್ತು. ಹೀಗಾಗಿ ತಮ್ಮ ಆಪ್ತ ಸಹಾಯಕರ ಮೂಲಕ ಕರೆ ಮಾಡಿಸಿ ನೆನಪಿಸುವ ಪ್ರಯತ್ನವನ್ನೂ ಮಾಡಿದ್ದರು. ಈ ಮಧ್ಯೆ ಜುಲೈ 28 ರಂದು ನಿಗದಿಯಾಗಿದ್ದ ಜನೋತ್ಸವ ಸಮಾವೇಶಕ್ಕೆ ರಸ್ತೆಯುದ್ದಕ್ಕೂ ಈಶ್ವರಪ್ಪನವರ ಫ್ಲೆಕ್ಸ್ಗಳು ರಾರಾಜಿಸಿದ್ದವು.
ಆದರೆ ಆಗಸ್ಟ್ 8 ಕ್ಕೆ ಮರು ನಿಗದಿಯಾದ ಜನೋತ್ಸವ ಸಮಾವೇಶಕ್ಕೆ ಈಶ್ವರಪ್ಪನವರ ಫ್ಲೆಕ್ಸ್ ಎಲ್ಲೂ ಕಾಣಿಸಿರಲಿಲ್ಲ. ಈ ಸೂಕ್ಷ್ಮವನ್ನು ಅರಿತ ಸಚಿವ ಸುಧಾಕರ್ ಮತ್ತೆ ಕರೆ ಮಾಡಿಸಿ ಫ್ಲೆಕ್ಸ್ ಹಾಕಿಸುವ ಬಗ್ಗೆಯೂ ಹೇಳಿಸಿದ್ದರು. ಆದರೂ ಕೂಡಾ ತಮಗೆ ಪಕ್ಷ ಸ್ಪಂದಿಸುತ್ತಿಲ್ಲ ಎಂಬ ಸಾತ್ವಿಕ ಸಿಟ್ಟನ್ನು ಕೆ.ಎಸ್. ಈಶ್ವರಪ್ಪ ಜನಸ್ಪಂದನಕ್ಕೆ ಗೈರಾಗಿ ತೋರಿಸಿಕೊಂಡರು.
ಜನಸ್ಪಂದನದ ಕ್ರೆಡಿಟ್ ಕಿರಿಕಿರಿ!
ಜನಸ್ಪಂದನ ಸಮಾವೇಶದಲ್ಲಿ ಹಾಗೂ ಹೀಗೂ ಕ್ರೆಡಿಟ್ ಸಚಿವ ಸುಧಾಕರ್ ಪಾಲಾಯ್ತು. ಆದರೆ ಸಮಾವೇಶಕ್ಕೆ ಜನ ಸೇರಿಸಿದ್ದ ಬೆಂಗಳೂರಿನ ಕೆಲವು ಶಾಸಕರಿಗೆ ಇದು ಸಹ್ಯವಾಗಿರಲಿಲ್ಲ. ಇದು ಕಳೆದ ವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಣ್ಣದಾಗಿ ಸ್ಫೋಟವಾಗಿತ್ತು. ಸಭೆಯಲ್ಲಿ ಜನಸ್ಪಂದನ ಯಶಸ್ಸಿನ ಬಗ್ಗೆ ಮಾತು ಬರುತ್ತಿದ್ದಂತೆಯೇ ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್, ಸಮಾವೇಶಕ್ಕೆ ಜನ ತುಂಬಿಸಿದ್ದು ನಾವು, ಕ್ರೆಡಿಟ್ ಮಾತ್ರ ಅವರಿಗೆ ಹೋಯ್ತು, ಇನ್ನು ಮುಂದೆ ನಾವು ನಮ್ಮ ನಮ್ಮ ಕ್ಷೇತ್ರಗಳಿಗಷ್ಟೇ ಸೀಮಿತವಾಗಿರುತ್ತೇವೆ ಅಷ್ಟೇ ಎಂದು ಕೊಂಚ ಗಡುಸಾಗಿ ಹೇಳಿ ಕುಳಿತುಬಿಟ್ಟಿದ್ದರು.
ಇದಾದ ನಂತರ ಬಿಜೆಪಿಯ ಯಾವ ನಾಯಕರು ಕೂಡಾ ಎಲ್ಲೂ ಜನಸ್ಪಂದನ ಸಮಾವೇಶದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ!. ನಳೀನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾದ ಬಳಿಕ ಬಿಜೆಪಿಯಲ್ಲಿ ಒಂದು ದೊಡ್ಡ ಕಾರ್ಯಕ್ರಮ ನಡೆದ ಬಳಿಕ ಕಾರ್ಯಕ್ರಮದ ಯಶಸ್ಸಿಗೆ ದುಡಿದ ಪಕ್ಷದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿ ಅಭಿನಂದಿಸುವ ಸಂಪ್ರದಾಯ ಹುಟ್ಟು ಹಾಕಿದ್ದರು. ಆದರೆ ಈ ಬಾರಿ ಜನಸ್ಪಂದನ ನಡೆದು ಒಂದು ವಾರ ಕಳೆದರೂ ಬಿಜೆಪಿ ರಾಜ್ಯಾಧ್ಯಕ್ಷರು ದೊಡ್ಡಬಳ್ಳಾಪುರದತ್ತ ತಲೆ ಹಾಕಿಲ್ಲ!
ಬಿಜೆಪಿಗೆ ನಿರೀಕ್ಷಿತ ಬೂಸ್ಟ್ ನೀಡದ ಜನಸ್ಪಂದನ!
ಜನಸ್ಪಂದನ ಸಮಾವೇಶ ಬೆಂಗಳೂರು ಗ್ರಾಮಾಂತರ, ಕೋಲಾರ ಭಾಗವನ್ನು ಕೇಂದ್ರೀಕರಿಸಿ ನಡೆಯಿತಾದರೂ ಅದು ರಾಜ್ಯ ಬಿಜೆಪಿಗೆ ಬಿಗ್ ಬೂಸ್ಟ್ ಆಗಬಹುದು ಎಂಬ ನಿರೀಕ್ಷೆ ಹೊಂದಲಾಗಿತ್ತು. ಆದರೆ ಜೆ.ಪಿ. ನಡ್ಡಾ ಜಾಗದಲ್ಲಿ ಬಂದ ಸ್ಮೃತಿ ಇರಾನಿ ಕೇವಲ ರಾಹುಲ್ ಗಾಂಧಿ ಅವರನ್ನು ಬೈಯುವುದಕ್ಕಾಗಿಯೇ ದೆಹಲಿಯಿಂದ ದೊಡ್ಡಬಳ್ಳಾಪುರಕ್ಕೆ ಬಂದಂತಾಗಿತ್ತು. ಹಾಗಾಗಿ ಸ್ಮೃತಿ ಇರಾನಿ ಭಾಷಣ ಕೂಡಾ ಕಾರ್ಯಕರ್ತರ ಸ್ಮೃತಿ ಪಟಲದಲ್ಲಿ ಹೆಚ್ಚು ಹೊತ್ತು ಉಳಿಯಲಿಲ್ಲ. ಮತ್ತೊಂದೆಡೆ ಎಲ್ಲಿ ಸಚಿವ ಸುಧಾಕರ್ ಯಶಸ್ಸಿನ ಕ್ರೆಡಿಟ್ ಅನ್ನು ಬಾಚಿಕೊಂಡುಬಿಡುತ್ತಾರೋ ಎಂಬ ಸಣ್ಣ ಆತಂಕ ಉಳಿದ ನಾಯಕರು ಸಮಾವೇಶದ ಬಗ್ಗೆ ಮಾತನಾಡದಂತೆಯೇ ಮಾಡಿಬಿಟ್ಟಿತ್ತು.
ಕಿರಣ್ ಹನಿಯಡ್ಕ