ನಮ್ಮ ನಾಯಕ ಮುರುಗೇಶ್ ನಿರಾಣಿ ಆದಷ್ಟು ಬೇಗ ಸಿಎಂ ಆಗುತ್ತಾರೆ: ಕೆಎಸ್ ಈಶ್ವರಪ್ಪ ಹೇಳಿಕೆ
KS Eshwarappa: ಸೋಲು ಅಂದ್ರೆ ಇವತ್ತು ಕಾಂಗ್ರೆಸ್ ಪಕ್ಷ ಎಂಬಂತಾಗಿದೆ. ಹೀಗಿದ್ದರೂ ಅವರಿಗೆ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆ ಇದೆ ಎಂದು ಬಾಗಲಕೋಟೆಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆ: ನಮ್ಮ ನಾಯಕ ಮುರುಗೇಶ್ ನಿರಾಣಿ ಆದಷ್ಟು ಬೇಗ ಸಿಎಂ ಆಗುತ್ತಾರೆ. ಯಾವ ಸಂದರ್ಭದಲ್ಲಿ ಸಿಎಂ ಆಗ್ತಾರೆಂದು ನನಗೆ ಗೊತ್ತಿಲ್ಲ. ನಾಳೇನೆ ಆಗ್ತಾರಾ?, ಬೊಮ್ಮಾಯಿಯನ್ನು ಕೆಳಗಿಳಿಸುತ್ತಾರಾ? ಹೀಗೆಂದು ಮಾಧ್ಯಮದವ್ರು ಬರಬೇಡಿ. ನಿರಾಣಿಗೆ ಸಿಎಂ ಆಗುವ ಶಕ್ತಿ ಇದೆ, ಇವತ್ತಲ್ಲ ನಾಳೆ ಆಗುತ್ತಾರೆ. ಇಡೀ ರಾಜ್ಯದ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡುವಂಥ ಸಿಎಂ ಆಗಬೇಕು ಎಂದು ಬಾಗಲಕೋಟೆ ಜಿಲ್ಲೆ ಬೀಳಗಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಇಂದು (ನವೆಂಬರ್ 28) ಹೇಳಿದ್ದಾರೆ. ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡ್ತಿಯೇನಪ್ಪಾ ಎಂದು ಸಚಿವ ನಿರಾಣಿರನ್ನು ವೇದಿಕೆ ಮೇಲೇಯೇ ಈಶ್ವರಪ್ಪ ಕೇಳಿದ್ದಾರೆ. ಥಂಬ್ಸಪ್ ಮಾಡಿ ನಗುತ್ತಲೇ ಮುರುಗೇಶ್ ನಿರಾಣಿ ಓಕೆ ಎಂದಿದ್ದಾರೆ.
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ಗೆ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿದೆ. ಹಗಲಲ್ಲ 24 ಗಂಟೆಯೂ ಸಿಎಂ ಸ್ಥಾನದ ಮೇಲೆಯೇ ಕಣ್ಣು ಇದೆ. ಚುನಾವಣೆಗೆ ಇನ್ನು ಒಂದೂವರೆ ವರ್ಷ ಬಾಕಿ ಇದೆ. ಈಗಿನ ಎಲ್ಲ ಚುನಾವಣೆಯಲ್ಲಿ ಸೋತರೂ ಬುದ್ಧಿ ಬಂದಿಲ್ಲ. ಸೋಲು ಅಂದ್ರೆ ಇವತ್ತು ಕಾಂಗ್ರೆಸ್ ಪಕ್ಷ ಎಂಬಂತಾಗಿದೆ. ಹೀಗಿದ್ದರೂ ಅವರಿಗೆ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆ ಇದೆ ಎಂದು ಬಾಗಲಕೋಟೆಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ರಾಜಕಾರಣ ಇರುವ ತನಕ ಈ ಪಕ್ಷಾಂತರ ವ್ಯವಸ್ಥೆ ಇದ್ದಿದ್ದೇ. ಅಧಿಕಾರಕ್ಕೆ ಬರುವ ಪಕ್ಷ ಆಯಸ್ಕಾಂತದಂತೆ ಸೆಳೆಯುತ್ತೆ. ಒಳ್ಳೆಯ ನಾಯಕರು ಆಯಸ್ಕಾಂತದಂತೆ ಆಕರ್ಷಿಸುತ್ತಾರೆ. ಆ ದಿಕ್ಕಿನಲ್ಲಿ ವರ್ತೂರು ಪ್ರಕಾಶ್ ಬೆಂಬಲ ನೀಡಬಹುದು. ಇಂದು ಸಚಿವ ಸುಧಾಕರ್, ಮುನಿರತ್ನ ಭೇಟಿಯಾಗಿದ್ದಾರೆ. ಅವರ ಬೆಂಬಲಿಗರು ಬಿಜೆಪಿ ಬೆಂಬಲಿಸುವ ವಿಶ್ವಾಸವಿದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.
ಮುಖ್ಯಮಂತ್ರಿ ಆಗಲು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನಡುವೆ ಪೈಪೋಟಿ ಇದೆ ಸರ್ಕಾರ ವಜಾಗೊಳಿಸುವಂತೆ ಸಿದ್ದರಾಮಯ್ಯ ಆಗ್ರಹ ವಿಚಾರವಾಗಿ ಅವರು ಮಾತನಾಡಿದ್ದಾರೆ. ಯಾವುದೇ ಕುರ್ಚಿ ಮೇಲೆ ಕುಳಿತರೂ ಮುಳ್ಳು ಚುಚ್ಚಿದಂತಾಗ್ತಿದೆ. ಹಾಗಾಗಿ ಸಿಎಂ ಸ್ಥಾನವೇ ಬೇಕು ಎಂದು ಅವರಿಗೆ ಅನಿಸುತ್ತದೆ. ಸಿದ್ದರಾಮಯ್ಯನವರಿಗೆ ಅದೊಂದೇ ಮೆತ್ತಗೆ ಅನಿಸುವ ಕುರ್ಚಿ. ಆದಷ್ಟು ಬೇಗ ಸಿಎಂ ಆಗಬೇಕು ಎಂಬ ಭ್ರಮೆಯಲ್ಲಿ ಇದ್ದಾರೆ. ಶಿಷ್ಯಂದಿರ ಕಡೆಯಿಂದ ಘೋಷಣೆಗಳನ್ನ ಕೂಗಿಸಿಕೊಳ್ಳುವುದು, ಮುಂದಿನ ಸಿಎಂ ಸಿದ್ದರಾಮಯ್ಯ ಅಂತ ಹೇಳಿಸಿಕೊಳ್ಳುವುದು. ಪಾಪ ಡಿಕೆಶಿ ಸುಮ್ಮನಿರುತ್ತಾರಾ, ಅವರೂ ಕೂಗಿಸಿಕೊಳ್ಳುತ್ತಾರೆ. ಬಳಿಕ ಕೂಗಕೂಡದು ಅಂತ ಡಿಕೆಶಿ ಬೊಗಳೆ ಹೇಳಿಕೆ ಕೊಡ್ತಾರೆ. ಮುಖ್ಯಮಂತ್ರಿ ಆಗಲು ಇಬ್ಬರ ನಡುವೆ ಪೈಪೋಟಿಯಿದೆ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಭಯೋತ್ಪಾದನೆಗೆ ಬಡ್ತಿ ನೀಡುತ್ತಿದೆ ಎಂಬ ನಳಿನ್ ಕುಮಾರ್ ಕಟೀಲು ಹೇಳಿಕೆಗೆ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಗೂಂಡಾ ಭಾಷೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಅಭ್ಯಾಸ. ಸಿದ್ದರಾಮಯ್ಯ ಮೋದಿರನ್ನೇ ಏಕವಚನದಲ್ಲಿ ಕರೆಯುತ್ತಾರೆ. ಇಂತಹವರಿಗೆ ಯಾವ ಪದ ಬಳಸಬೇಕೋ ನನಗೆ ಗೊತ್ತಿಲ್ಲ. ಕಟೀಲು ಯಾವ ಪದ ಬಳಸುತ್ತಾರೆ ಎಂಬುದು ವಿಶೇಷವಲ್ಲ. ಸಿದ್ದರಾಮಯ್ಯಗೆ ಅವರ ಪಕ್ಷದಲ್ಲೇ ಏನೆಂದು ಕರೆಯುತ್ತಿದ್ದಾರೆ. ಇನ್ನು ನಾಲ್ಕು ದಿನ ಆಗಲಿ ಗೊತ್ತಾಗುತ್ತದೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಇದನ್ನೂ ಓದಿ: ನಳಿನ್ ಕುಮಾರ್ ಕಟೀಲು ಓರ್ವ ಭಯೋತ್ಪಾದಕ: ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ
ಇದನ್ನೂ ಓದಿ: ಕಾಂಗ್ರೆಸ್ ಬರ್ಬಾದ್ ಯಾತ್ರೆ; ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಈಶ್ವರಪ್ಪ ತಿರುಗೇಟು