Lok Sabha Election: ಮಂಡ್ಯ ಟಿಕೆಟ್ ಸುಮಲತಾಗಾ, ಜೆಡಿಎಸ್​ಗಾ? ಇನ್ನೂ ಬಗೆಹರಿಯದ ಕಗ್ಗಂಟು

| Updated By: ಗಣಪತಿ ಶರ್ಮ

Updated on: Feb 27, 2024 | 6:44 AM

ಲೋಕಸಭೆ ಚುನಾವಣೆಗೆ ಬಿಜೆಪಿಯ ಸಿದ್ಧತೆ ಭರದಿಂದ ಸಾಗುತ್ತಿದೆ. ಈ ಮಧ್ಯೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ಎಂಬುದು ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಹಾಸನ ಕ್ಷೇತ್ರದ ಟಿಕೆಟ್ ಬಗ್ಗೆಯೂ ಕುತೂಹಲ ಸೃಷ್ಟಿಯಾಗಿದೆ. ಮತ್ತೊಂದೆಡೆ ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ವಿರುದ್ಧ ಅಭಿಯಾನ ಆರಂಭವಾಗಿದೆ. ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿಯ ಸಿದ್ಧತೆ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Lok Sabha Election: ಮಂಡ್ಯ ಟಿಕೆಟ್ ಸುಮಲತಾಗಾ, ಜೆಡಿಎಸ್​ಗಾ? ಇನ್ನೂ ಬಗೆಹರಿಯದ ಕಗ್ಗಂಟು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಫೆಬ್ರವರಿ 27: ರಾಜ್ಯದಲ್ಲಿ ಲೋಕಸಭೆ ಚುನಾವಣೆ (Lok Sabha Election) ಕಾವು ಹೆಚ್ಚಾಗತೊಡಗಿದೆ. ಅದರಲ್ಲೂ ಹೈವೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯ (Mandya) ಟಿಕೆಟ್ ಯಾರಿಗೆ ಸಿಗುತ್ತೆ ಎಂಬುದಾಗಿ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಪಾಳೆಯದಲ್ಲಿ ಮಿಲಿಯನ್ ಡಾಲರ್ ಪ್ರಶ್ನೆ ಎದುರಾಗಿದೆ. ಅತ್ತ ಚಿಕ್ಕಮಗಳೂರಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ‘ಗೋ ಬ್ಯಾಕ್’ ಅಭಿಯಾನದ ಬಿಸಿ ತಟ್ಟುತ್ತಿದೆ.

ಮಂಡ್ಯ ಅಖಾಡ ಕಳೆದ ಬಾರಿಯಂತೆಯೇ ರಂಗೇರುವ ಲಕ್ಷಣ ಕಾಣುತ್ತಿದೆ. ಯಾಕಂದರೆ, ಸುಮಲತಾ ಅಂಬರೀಶ್ ಮಂಡ್ಯದಲ್ಲೇ ಸ್ಪರ್ಧಿಸುವುದಾಗಿ ಪಟ್ಟು ಹಿಡಿದಿದ್ದಾರೆ. ಇದೇ ವಿಚಾರವಾಗಿ ಸೋಮವಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಧ್ಯಸ್ಥಿಕೆಯಲ್ಲಿ ಸಭೆ ಮಾಡಿ ಸಂದೇಶ ರವಾನಿಸಿದ್ದಾರೆ. ಆದರೆ, ಸುಮಲತಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಹೆಚ್​ಡಿ ಕುಮಾರಸ್ವಾಮಿ, ಸುಮಲತಾ ದೊಡ್ಡವರಿದ್ದಾರೆ. ನಮ್ಮದು ಸಣ್ಣ ಪಕ್ಷ, ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಹೀಗೆ ಹೇಳಿರುವ ಕುಮಾರಸ್ವಾಮಿ, ಅವರ (ಸುಮಲತಾ) ಹೇಳಿಕೆಗೆ ಪ್ರತಿಕ್ರಿಯೆ ಕೊಡಬೇಡಿ. ಅನಗತ್ಯ ವಿವಾದ ಸೃಷ್ಟಿಸಿಕೊಳ್ಳಬೇಡಿ ಎಂದು ಜೆಡಿಎಸ್ ಶಾಸಕರಿಗೂ ಪಾಠ ಮಾಡಿದ್ದಾರೆ ಎಂಬ ಮಾಹಿತಿ ಇದೆ.

ಅತ್ತ ಮಂಡ್ಯದಲ್ಲಿ ಟಿಕೆಟ್ ಫೈಟ್ ನಡೆಯುತ್ತಿದ್ದರೆ, ಇತ್ತ ಹಾಸನ ಟಿಕೆಟ್ ಸಹ ಕಗ್ಗಂಟಾಗಿದೆ. ಈ ಮಧ್ಯೆ ಹಾಸನ ಲೋಕಸಭಾ ಅಭ್ಯರ್ಥಿಯನ್ನು ನಮ್ಮ ತಾತ ನಿರ್ಧರಿಸುತ್ತಾರೆ ಎಂದು, ಜೆಡಿಎಸ್ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಶೋಭಾ ವಿರುದ್ಧ ಅಭಿಯಾನ: ಪೋಸ್ಟರ್​ ಪಾಲಿಟಿಕ್ಸ್!

ಚಿಕ್ಕಮಗಳೂರಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಗೋಬ್ಯಾಕ್ ಅಭಿಯಾನ ಶುರುವಾಗಿದೆ. ‘ಶೋಭಕ್ಕ ಎಲ್ಲಿದ್ದೀರಾ?’ ಎಂದು ಪೋಸ್ಟರ್ ಅಂಟಿಸಲಾಗಿದೆ. ಪೋಸ್ಟರ್ ಅಂಟಿಸಿ ಸಿಕ್ಕಿಹಾಕಿಕೊಂಡಿರುವ ನಾಲ್ವರು, ತಮಗೆ ಹಣ ನೀಡಿ ಪೋಸ್ಟರ್ ಅಂಟಿಸಲು ಹೇಳಿದ್ದರು ಎಂದು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಮತಗಳು ಕೊರತೆಯಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ಭರ್ಜರಿ ಪ್ಲ್ಯಾನ್; ಹೇಗಿದೆ ಗೊತ್ತಾ?

ತಮ್ಮ ವಿರುದ್ಧದ ಕ್ಯಾಂಪೇನ್ ಬಳಿಕ ಸಕ್ರಿಯರಾಗಿರುವ ಶೋಭಾ, ಕ್ಷೇತ್ರದಲ್ಲಿ ಸುತ್ತಾಟ ಶುರು ಮಾಡಿದ್ದಾರೆ. ಜನಸಂಪರ್ಕ ಸಭೆ, ಗ್ರಾಮ ವಾಸ್ತವ್ಯ ಎಂದೆಲ್ಲ ಆರಂಭಿಸಿದ್ದಾರೆ.

‘ಲೋಕ’ಸಮರಕ್ಕೆ ಬಿಜೆಪಿ ಭರದ ಸಿದ್ಧತೆ: ಕ್ಷೇತ್ರವಾರು ಮುಖಂಡರ ಸಭೆ!

ಅಲ್ಲಲ್ಲಿ ಟಿಕೆಟ್ ಸಮಸ್ಯೆಯ ನಡುವೆಯೂ, ಬಿಜೆಪಿ ನಾಯಕರು ಲೋಕಸಭಾ ಚುನಾವಣೆಗೆ ಭರದ ಸಿದ್ಧತೆ ನಡೆಸುತ್ತಿದ್ದಾರೆ. ಸೋಮವಾರ ಸಂಜೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕ್ಷೇತ್ರವಾರು ಮುಖಂಡರ ಸಭೆ ನಡೆಸಲಾಗಿದೆ. ಹೆಚ್ಚು ಆಕಾಂಕ್ಷಿಗಳಿರುವ, ಅಭ್ಯರ್ಥಿ ಆಯ್ಕೆ ಸಂಭಾವ್ಯ ಕಗ್ಗಂಟು ಇರುವಂತಹ ಕ್ಷೇತ್ರಗಳ ಮುಖಂಡರ ಜೊತೆ ಸಭೆ ನಡೆಸಲಾಗಿದೆ. ಬಿಜೆಪಿ ರಾಜ್ಯ ಲೋಕಸಭಾ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ನೇತೃತ್ವದಲ್ಲಿ ಬೀದರ್, ಕೋಲಾರ, ಚಿಕ್ಕಬಳ್ಳಾಪುರ, ಉತ್ತರಕನ್ನಡ ಕ್ಷೇತ್ರಗಳ ಮುಖಂಡರ ಸಭೆ ನಡೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ಉಪಸ್ಥಿತರಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:44 am, Tue, 27 February 24