ಲೋಕಸಭೆ ಚುನಾವಣೆ: ಕರ್ನಾಟಕದ ಕೆಲವೆಡೆ ಅಖಾಡಕ್ಕಿಳಿಯಲಿದ್ದಾರೆ ಕೇಂದ್ರ ಸಚಿವರು
ಬೆಂಗಳೂರು ದಕ್ಷಿಣ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಕನಿಷ್ಠ ಎರಡು ಅಥವಾ ಮೂರು ಕ್ಷೇತ್ರಗಳಲ್ಲಿ, ಈಗ ರಾಜ್ಯಸಭಾ ಸದಸ್ಯರಾಗಿರುವ ಕೇಂದ್ರ ಸಚಿವರನ್ನು ಅಭ್ಯರ್ಥಿಗಳನ್ನಾಗಿಸುವ ಬಗ್ಗೆ ರಾಜ್ಯ ಘಟಕಕ್ಕೆ ಪ್ರಾಥಮಿಕ ಮಾಹಿತಿ ರವಾನಿಸಲಾಗಿದೆ.
ಬೆಂಗಳೂರು, ಜನವರಿ 12: ರಾಜ್ಯಸಭೆ ಚುನಾವಣೆಯಲ್ಲಿ ಬೇರೆ ರಾಜ್ಯದ ಅಭ್ಯರ್ಥಿಗಳನ್ನು ಕರ್ನಾಟಕದಿಂದ ಗೆಲ್ಲಿಸಿಕೊಂಡು ಹೋಗಿದ್ದ ಬಿಜೆಪಿ (BJP) ಹೈಕಮಾಂಡ್ ಇದೀಗ ಲೋಕಸಭೆ ಚುನಾವಣೆಯಲ್ಲಿಯೂ (Lok Sabha Elections 2024) ಅದೇ ರೀತಿ ಮಾಡಲು ಮುಂದಾಗಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಕೇಂದ್ರ ಸಚಿವರನ್ನು ಕಣಕ್ಕಿಳಿಸಲು ಚಿಂತನೆ ಮಾಡಿರುವ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯ ಘಟಕಕ್ಕೆ ಈಗಾಗಲೇ ಪ್ರಾಥಮಿಕ ಮಾಹಿತಿ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ರಾಜ್ಯಕ್ಕೆ ಬಂದಿದ್ದ ವೇಳೆ ಕೇಂದ್ರ ಸಚಿವರ ಸ್ಪರ್ಧೆ ಸಾಧ್ಯತೆ ಬಗ್ಗೆ ಅರುಣ್ ಸಿಂಗ್ ಮಾಹಿತಿ ನೀಡಿದ್ದಾರೆ. ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಅಭಿಪ್ರಾಯ ಸಂಗ್ರಹದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜಿಲ್ಲಾ ಪ್ರಮುಖರಿಗೆ ಈ ವಿಚಾರವನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.
ಬೆಂಗಳೂರು ದಕ್ಷಿಣ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಕನಿಷ್ಠ ಎರಡು ಅಥವಾ ಮೂರು ಕ್ಷೇತ್ರಗಳಲ್ಲಿ, ಈಗ ರಾಜ್ಯಸಭಾ ಸದಸ್ಯರಾಗಿರುವ ಕೇಂದ್ರ ಸಚಿವರನ್ನು ಅಭ್ಯರ್ಥಿಗಳನ್ನಾಗಿಸುವ ಬಗ್ಗೆ ರಾಜ್ಯ ಘಟಕಕ್ಕೆ ಪ್ರಾಥಮಿಕ ಮಾಹಿತಿ ರವಾನಿಸಲಾಗಿದೆ. ಹೀಗಾಗಿ ಲೋಕಸಭಾ ಚುನಾವಣಾ ಅಭ್ಯರ್ಥಿ ಸಂಗ್ರಹದ ಸಭೆಯಲ್ಲಿ ಯಾವುದೇ ಹಾಲಿ ಸಂಸದರ ಪರ ಅಥವಾ ವಿರೋಧವಾಗಿ ನೇರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಿರಲಿಲ್ಲ. ಹಾಲಿ ಸಂಸದರ ಬಗ್ಗೆ ಭಿನ್ನ ಅಭಿಪ್ರಾಯ ಇದ್ದಲ್ಲಿ ಸಭೆಯಲ್ಲಿ ಬಹಿರಂಗವಾಗಿ ಹೇಳದೇ ಖಾಸಗಿಯಾಗಿ ಹೇಳುವಂತೆ 28 ಲೋಕಸಭಾ ಕ್ಷೇತ್ರಗಳ ಪ್ರಮುಖರಿಗೆ ಆರಂಭದಲ್ಲೇ ರಾಜ್ಯಾಧ್ಯಕ್ಷ ವಿಜಯೇಂದ್ರ ಸೂಚಿಸಿದ್ದರು.
ಕೇಂದ್ರ ಸಚಿವರು ಕಣಕ್ಕಿಳಿಯುವ ಸಂಭಾವ್ಯ ಕ್ಷೇತ್ರಗಳಿವು
ಹಾಲಿ ಸಂಸದರನ್ನು ಬದಲಾಯಿಸಿದರೆ ವಿರೋಧ ವ್ಯಕ್ತವಾಗದ ಕ್ಷೇತ್ರಗಳನ್ನೇ ಕೇಂದ್ರ ಸಚಿವರನ್ನು ಕಣಕ್ಕಿಳಿಸಲು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ. ಪಕ್ಷದ ಭದ್ರಕೋಟೆಯಾಗಿರುವ ಕ್ಷೇತ್ರಗಳಲ್ಲೇ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಈ ಮಧ್ಯೆ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಎಸ್. ಜೈಶಂಕರ್ ಸ್ಪರ್ಧೆ ಮಾಡುವ ಬಗ್ಗೆ ವದಂತಿ ಕೇಳಿ ಬಂದಿದೆ.
ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ಬಳಿಕ ಅಯೋಧ್ಯೆಗೆ ಭೇಟಿ ನೀಡುತ್ತೇನೆ: ಸಿದ್ದರಾಮಯ್ಯ
ಬೆಂಗಳೂರು ಗ್ಲೋಬಲ್ ಹಬ್ ಆಗಿರುವ ಕಾರಣ ವಿದೇಶಾಂಗ ಸಚಿವರಾಗಿರುವ ಜೈಶಂಕರ್ ಅವರನ್ನು ಕ್ಷೇತ್ರಕ್ಕೆ ಪರಿಚಯಿಸಬೇಕಾದ ಅಗತ್ಯವಿಲ್ಲ. ಜೈಶಂಕರ್ ಈಗಾಗಲೇ ಬೆಂಗಳೂರಿನಲ್ಲಿ ಹಲವು ಬಾರಿ ಬಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಎರಡು ಬಾರಿ ರಾಜ್ಯದಿಂದಲೇ ರಾಜ್ಯಸಭಾ ಸದಸ್ಯರಾಗಿದ್ದಾರೆ. ಜತೆಗೆ, ಬೆಂಗಳೂರಿನಲ್ಲೇ ಮನೆ ಇರುವ ಕಾರಣ ರಾಜ್ಯದವರೇ ಎಂಬ ಅಭಿಪ್ರಾಯವೂ ಇದೆ. ಈ ಎಲ್ಲ ವಿಚಾರಗಳನ್ನು ಬಿಜೆಪಿ ಗಮನದಲ್ಲಿಟ್ಟುಕೊಂಡಿದೆ ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:22 pm, Fri, 12 January 24