ಮನಸ್ಸು ಬದಲಿಸಿದ ಸದಾನಂದ ಗೌಡ, ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸುಳಿವು
ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಡಿವಿ ಸದಾನಂದ ಗೌಡ ಇದೀಗ ದಿಢೀರ್ ಮನಸ್ಸು ಬದಲಿಸಿದ್ದಾರೆ. ಅಲ್ಲದೇ ಈ ಬಾರಿ ಮತ್ತೊಮ್ಮೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಸುಳಿವು ಸಹ ಕೊಟ್ಟಿದ್ದಾರೆ. ಹಾಗಾದ್ರೆ, ಸದಾನಂದ ಗೌಡ್ರು ಏನು ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ ನೋಡಿ.
ಬೆಂಗಳೂರು, (ಡಿಸೆಂಬರ್ 28): ಮಾಜಿ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಡಿ.ವಿ ಸದಾನಂದ ಗೌಡ (DV Sadananda Gowda) ಅವರು ಈಗಾಗಲೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು. ಆದ್ರೆ, ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಯೂಟರ್ನ್ ಹೊಡೆದಿದ್ದು, ಈ ಬಾರಿಯೂ ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಸುಳಿವು ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಸದಾನಂದ ಗೌಡ, ಬೆಂಗಳೂರು ಉತ್ತರ ಕ್ಷೇತ್ರದಿಂದ ಮತ್ತೊಮ್ಮೆ ಸ್ಫರ್ಧೆಗೆ ಒತ್ತಡ ಹೆಚ್ಚಾಗಿದೆ. ನಿನ್ನೆ ನಮ್ಮ ಹಿರಿಯ ನಾಯಕರು ಮನೆಗೆ ಬಂದು ಸ್ಪರ್ಧೆ ಮಾಡಿ ಎಂದು ಮನವಿ ಮಾಡಿದ್ದಾರೆ. ಎಲ್ಲಾ ಶಾಸಕರು, ಮಾಜಿ ಮಂತ್ರಿಗಳು, ಕಾರ್ಯಕರ್ತರು ಕೂಡಾ ಹೇಳುತ್ತಿದ್ದಾರೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಶಾಸಕರಾದ ಎಸ್ಟಿ ಸೋಮಶೇಖರ್, ಮುನಿರಾಜು, ಬೈರತಿ ಬಸವರಾಜ ಸಹ ಈ ಬಾರಿ ಸ್ಪರ್ಧೆ ಮಾಡುವಂತೆ ಮನವಿ ಮಾಡಿದ್ದಾರೆ. ಅವರೆಲ್ಲರೂ ನನ್ನ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾರೆ. ಬೆಂಗಳೂರು ಉತ್ತರದ 8 ಕ್ಷೇತ್ರದಲ್ಲಿ ಯಾರೂ ನನ್ನ ವಿರೋಧಿಗಳಿಲ್ಲ. ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎನ್ನುವುದೇ ನನ್ನ ಆಸೆ. ಆದ್ರೆ, ನೀವೇ ಸ್ಫರ್ಧೆ ಮಾಡಿ ಎಂದು ಹಿಂಸೆ ಮಾಡುತ್ತಿದ್ದಾರೆ. ಮತ್ತೆ ಸ್ಪರ್ಧೆ ಕುರಿತು ಮನಸ್ಸು ಬದಲಿಸಿಕೊಳ್ಳುವ ಬಗ್ಗೆ ನೋಡೋಣ ಎಂದರು. ಈ ಮೂಲಕ ಪರೋಕ್ಷವಾಗಿ ಮನಸ್ಸು ಬದಲಿಸಿ ಮತ್ತೆ ಈ ಬಾರಿ ಲೋಕಸಭಾ ಅಖಾಡಕ್ಕಿಳಿಯುವ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: ಸದಾನಂದ ಗೌಡ ಚುನಾವಣಾ ರಾಜಕೀಯದಿಂದ ನಿವೃತ್ತಿ; ಹಾಸನದಲ್ಲಿ ಘೋಷಣೆ
ಇತ್ತೀಚೆಗೆ ಸದಾನಂದ ಗೌಡ ಅವರನ್ನು ಕೇಂದ್ರ ನಾಯಕರು ದಿಲ್ಲಿಗೆ ಕರೆಸಿಕೊಂಡಿದ್ದರು. ದಿಲ್ಲಿ ಭೇಟಿಯ ವೇಳೆ ಅವರನ್ನೇ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತಾರೆ ಎಂಬ ಸುದ್ದಿಯೂ ಹಬ್ಬಿತ್ತು. ಕೆಲವರು ರಾಜ್ಯದ ಸ್ಥಿತಿಗತಿ ಬಗ್ಗೆ ಅವರಿಂದ ಮಾಹಿತಿ ಪಡೆಯಲು ಕರೆಸಿಕೊಂಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಅಂತಿಮವಾಗಿ ಇದು ಮುಂದಿನ ಲೋಕಸಭಾ ಚುನಾವಣೆಯ ಕಣದಿಂದ ಹಿಂದೆ ಸರಿಯುವಂತೆ ಸೂಚನೆ ನೀಡಲು ಕರೆದಿದ್ದರು ಎಂಬ ಸುದ್ದಿ ಹಬ್ಬಿತ್ತು. ಆದ್ರೆ, ಇದೀಗ ಏಕಾಏಕಿ ಮನಸ್ಸು ಬದಲಿಸಿ ಚುನಾವಣೆಗೆ ನಿಲ್ಲುವ ಮಾತುಗಳನ್ನಾಡುತ್ತಿರುವುದು ಅಚ್ಚರಿಕೆ ಕಾರಣವಾಗಿದೆ.
ಅಂದು ಸದಾನಂದ ಗೌಡ್ರು ಹೇಳಿದ್ದೇನು?
ಇತ್ತೀಚೆಗಷ್ಟೇ ಬರ ಅಧ್ಯಯನಕ್ಕಾಗಿ ಹಾಸನ ಜಿಲ್ಲೆಗೆ ಭೇಟಿ ನೀಡಿದ್ದ ಸದಾನಂದ ಗೌಡ ಸುದ್ದಿಗಾರರೊಂದಿಗೆ ಮಾತನಾಡಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು. ಚುನಾವಣಾ ರಾಜಕೀಯದಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದೇನೆ. ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು 10 ವರ್ಷ ಶಾಸಕನಾಗಿ, 20 ವರ್ಷ ಸಂಸದನಾಗಿ, ಒಂದು ವರ್ಷ ಮುಖ್ಯಮಂತ್ರಿಯಾಗಿ, 4 ವರ್ಷ ರಾಜ್ಯ ಪಕ್ಷದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ‘ನರೇಂದ್ರ ಮೋದಿ ಸರ್ಕಾರದಲ್ಲಿ ಏಳು ವರ್ಷ ಸಂಪುಟ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಹೆಚ್ಚು ಆಸೆಪಟ್ಟರೆ, ನನ್ನನ್ನು ಸ್ವಾರ್ಥಿ ಎಂದು ಕರೆಯುತ್ತಾರೆʼʼ ಎಂದು ಸದಾನಂದ ಗೌಡ ಅವರು ಎಂದಿನ ತಮ್ಮ ಮುಗುಳು ನಗುವಿನೊಂದಿಗೇ ನಿರ್ಧಾರವನ್ನು ಹಂಚಿಕೊಂಡಿದ್ದರು.
ಒಟ್ಟಿನಲ್ಲಿ ಸದಾನಂದ ಗೌಡ್ರು ಚುನಾವಣೆ ರಾಜಕೀಯಕ್ಕೆ ನಿವೃತ್ತಿ ಘೋಷಿಸಿ ಇದೀಗ ಮನಸು ಬದಲಿಸಿ ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದ್ರೆ, ಹೈಕಮಾಂಡ್ ಟಿಕೆಟ್ ನೀಡುತ್ತಾ ಎನ್ನುವುದುನ್ನು ಕಾದುನೋಡಬೇಕಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ