ಲೋಕಸಭೆ ಭದ್ರತಾ ಲೋಪ: ಸಂಸದ ಪ್ರತಾಪ್ ಸಿಂಹ ಅಮಾನತಿಗೆ ಕಾಂಗ್ರೆಸ್ ನಾಯಕರ ಆಗ್ರಹ

| Updated By: Ganapathi Sharma

Updated on: Dec 14, 2023 | 2:12 PM

ಲೋಕಸಭೆ ಭದ್ರತಾ ಉಲ್ಲಂಘನೆ ಮಾಡಿದ ಇಬ್ಬರು ವ್ಯಕ್ತಿಗಳಿಗೆ ಪಾಸ್ ನೀಡಿದ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ವಿಚಾರಣೆ ಮುಗಿಯುವ ವರೆಗೆ ಲೋಕಸಭೆಯಿಂದ ಅಮಾನತು ಮಾಡಬೇಕು ಎಂದು ಜಿ. ಪರಮೇಶ್ವರ, ಪ್ರಿಯಾಂಕ್ ಖರ್ಗೆ ಹಾಗೂ ಇತರ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

ಲೋಕಸಭೆ ಭದ್ರತಾ ಲೋಪ: ಸಂಸದ ಪ್ರತಾಪ್ ಸಿಂಹ ಅಮಾನತಿಗೆ ಕಾಂಗ್ರೆಸ್ ನಾಯಕರ ಆಗ್ರಹ
ಸಂಸದ ಪ್ರತಾಪ್ ಸಿಂಹ ಅಮಾನತಿಗೆ ಕಾಂಗ್ರೆಸ್ ನಾಯಕರ ಆಗ್ರಹ
Follow us on

ಬೆಂಗಳೂರು, ಡಿಸೆಂಬರ್ 14: ಲೋಕಸಭೆ ಭದ್ರತಾ ಉಲ್ಲಂಘನೆ (Lok Sabha security breach) ಮಾಡಿದ ಇಬ್ಬರು ವ್ಯಕ್ತಿಗಳಿಗೆ ಪಾಸ್ ನೀಡಿದ ಮೈಸೂರು ಬಿಜೆಪಿ (BJP) ಸಂಸದ ಪ್ರತಾಪ್ ಸಿಂಹ (Pratap Simha) ಅವರನ್ನು ಅಮಾನತುಗೊಳಿಸುವಂತೆ ಕರ್ನಾಟಕದ ಹಲವು ಸಚಿವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಗುರುವಾರ ಒತ್ತಾಯಿಸಿದ್ದಾರೆ. ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಜಿಗಿದ ಇಬ್ಬರು ವ್ಯಕ್ತಿಗಳಾದ ಮನೋರಂಜನ್ ಡಿ ಮತ್ತು ಸಾಗರ್ ಶರ್ಮಾ ಸದ್ಯ ದೆಹಲಿ ಪೊಲೀಸರ ವಶದಲ್ಲಿದ್ದು, ಅವರ ವಿಚಾರಣೆ ನಡೆಯುತ್ತಿದೆ.

ಗ್ಯಾಲರಿಯಿಂದ ಜಿಗಿದ ನಂತರ, ಇಬ್ಬರು ಹಳದಿ ಅನಿಲದಿಂದ ತುಂಬಿರುವ ಡಬ್ಬಿಗಳನ್ನು ತೆರೆದು ಸ್ಪ್ರೇ ಮಾಡಿದರು. ಅಷ್ಟರಲ್ಲಿ, ಲೋಕಸಭೆ ಸಂಸದರು ಅವರನ್ನು ಹಿಡಿದು ಭದ್ರತಾ ಸಿಬ್ಬಂದಿಗೆ ಒಪ್ಪಿಸಿದರು.

ಅವರಿಗೆ ಮೈಸೂರಿನ ಲೋಕಸಭಾ ಸಂಸದ ಪ್ರತಾಪಸಿಂಹ ಪಾಸ್‌ಗಳನ್ನು ನೀಡಿರುವುದು ತನಿಖೆಯ ವೇಳೆ ಪತ್ತೆಯಾಗಿದೆ. ಕರ್ನಾಟಕ ಕಾಂಗ್ರೆಸ್ ನಾಯಕರು ಪ್ರತಾಪ್ ಸಿಂಹ ಅವರನ್ನು ಲೋಕಸಭೆಯಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿದರು.

ಲೋಕಸಭೆಯಲ್ಲಿ ನಡೆದ ಘಟನೆಯನ್ನು ನಾನು ಖಂಡಿಸುತ್ತೇನೆ. ಆದರೆ, ಇದಕ್ಕೆ ಯಾರು ಹೊಣೆ? ಒಂದು ವೇಳೆ ಕಾಂಗ್ರೆಸ್ ಸಂಸದರು ಪಾಸ್‌ಗಳನ್ನು ನೀಡಿದ್ದರೆ ಬಿಜೆಪಿಯವರು ನಮಗೆ ದೇಶವಿರೋಧಿ ಟ್ಯಾಗ್ ನೀಡಿ ರಾತ್ರೋರಾತ್ರಿ ನಮ್ಮನ್ನು ಗಲ್ಲಿಗೇರಿಸುತ್ತಿದ್ದರು. ಪಾಸ್ ನೀಡಿದವರನ್ನು ಏಕೆ ವಿಚಾರಣೆಗೆ ಕರೆದಿಲ್ಲ? ಪ್ರತಾಪ್ ಸಿಂಹ ಹೇಳಿಕೆ ನೀಡಬೇಕು. ಜೇಮ್ಸ್ ಬಾಂಡ್ ಎಂದೇ ಕರೆಯಲ್ಪಡುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಏಕೆ ಸುಮ್ಮನಿದ್ದಾರೆ? ಭದ್ರತಾ ಲೋಪಗಳಿಗೆ ಅವರು ಉತ್ತರ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕರ್ನಾಟಕದ ಗೃಹ ಸಚಿವ ಡಾ.ಜಿ.ಪರಮೇಶ್ವರ ಕೂಡ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಲೋಕಸಭೆಯಲ್ಲಿ ಇಂತಹ ಘಟನೆ ನಡೆದಿರುವುದನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.

ಬುಧವಾರ ಲೋಕಸಭೆಯಲ್ಲಿ ಏನಾಯಿತು ಎಂಬುದನ್ನು ಇಡೀ ಜಗತ್ತು ನೋಡಿದೆ. ಇಬ್ಬರು ಯುವಕರು ಲೋಕಸಭೆಗೆ ಜಿಗಿದು ಗದ್ದಲ ಸೃಷ್ಟಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಪಾಸ್‌ಗಳನ್ನು ಮೈಸೂರಿನ ಲೋಕಸಭಾ ಸಂಸದ ಪ್ರತಾಪ್ ಸಿಂಹ ವಿತರಿಸಿದ್ದಾರೆ. ಸಂಸದರಿಗೆ ಯುವಕರ ಬಗ್ಗೆ ತಿಳಿದಿತ್ತು ಮತ್ತು ಪಾಸ್​ಗಳನ್ನು ನೀಡಿದ್ದರು. ಪ್ರತಾಪ್ ಸಿಂಹ ಅವರನ್ನು ಲೋಕಸಭೆಯಿಂದ ಅಮಾನತುಗೊಳಿಸಬೇಕು. ಘಟನೆಯ ಬಗ್ಗೆ ಪ್ರಧಾನಿ ಮತ್ತು ಗೃಹ ಸಚಿವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಆಶ್ಚರ್ಯಕರವಾಗಿದೆ ಎಂದು ಪರಮೇಶ್ವರ ಹೇಳಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಬೆಂಗಳೂರಿನ ವಿಧಾನಸೌಧದಲ್ಲಿಯೂ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈ ವಿಚಾರವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮಾಜಿ ಶಾಸಕ, ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಆರೋಪಿಸಿದ್ದಾರೆ.

ಇದನ್ನೂ ಓದಿ: ಸಂಸತ್ತಿನಲ್ಲಿ ಭದ್ರತಾ ಲೋಪ: ಆರೋಪಿಗಳ ಮೇಲೆ ಭಯೋತ್ಪಾದನಾ-ವಿರೋಧಿ ಕಾನೂನಿನಡಿ ಪ್ರಕರಣ ದಾಖಲು

ಇಡೀ ಘಟನೆಗೆ ಪ್ರತಾಪ್ ಸಿಂಹ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಮತ್ತು ವಿಚಾರಣೆ ಪೂರ್ಣಗೊಳ್ಳುವ ವರೆಗೆ ಲೋಕಸಭೆಯಿಂದ ಅಮಾನತುಗೊಳಿಸಬೇಕು. ಘಟನೆಯಲ್ಲಿ ತಮ್ಮ ಪಕ್ಷದ ಮುಖಂಡರೇ ಇರುವುದರಿಂದ ಬಿಜೆಪಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಏನೂ ಆಗಿಲ್ಲ ಎಂಬಂತೆ ಬಿಂಬಿಸುತ್ತಿರುದೆ. ಸಿಂಹ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯತೀಂದ್ರ ಆಗ್ರಹಿಸಿದ್ದಾರೆ.

ಲೋಕಸಭೆಯ ಎಂಟು ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಪ್ರಕರಣದಲ್ಲಿ ಬಂಧಿತರಾಗಿರುವ ಐದು ಜನರನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ