MVA Crisis: ಬಾಳಾಸಾಹೇಬರ ಹೆಸರು ಬಿಡಿ, ನಿಮ್ಮಪ್ಪನ ಹೆಸರು ಬಳಸಿಕೊಳ್ಳಿ: ಬಂಡಾಯ ಶಾಸಕರಿಗೆ ಸಂಜಯ್ ರಾವುತ್ ಸವಾಲು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 26, 2022 | 7:43 AM

Maharashtra Politics: ಎರಡೂ ಬಣಗಳು ಪರಸ್ಪರರ ಕಾಲೆಳೆಯುತ್ತಿದ್ದು, ಹಗ್ಗಜಗ್ಗಾಟ ಮುಂದುವರಿಸಿವೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಹೋರಾಟ ಮುಂದುವರಿಸಿವೆ.

MVA Crisis: ಬಾಳಾಸಾಹೇಬರ ಹೆಸರು ಬಿಡಿ, ನಿಮ್ಮಪ್ಪನ ಹೆಸರು ಬಳಸಿಕೊಳ್ಳಿ: ಬಂಡಾಯ ಶಾಸಕರಿಗೆ ಸಂಜಯ್ ರಾವುತ್ ಸವಾಲು
ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ
Follow us on

ಮುಂಬೈ: ಮಹಾರಾಷ್ಟ್ರದ ರಾಜಕಾರಣದ (Maharashtra Politics) ಬಿಕ್ಕಟ್ಟು ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸಂಖ್ಯೆಯ ದೃಷ್ಟಿಯಿಂದ ಹೆಚ್ಚು ಶಾಸಕರ ಬಲ ಪಡೆದಿರುವ ಏಕನಾಥ ಶಿಂಧೆ (Eknath Shinde) ಬಣವು ಇದೀಗ ಶಿವಸೇನೆಯ (Shiv Sena) ಸಂಸ್ಥಾಪಕ ಬಾಳಾಸಾಹೇಬರ (Balasaheb Thackery) ಹೆಸರು ಮತ್ತು ಪಕ್ಷದ ಚಿಹ್ನೆಯನ್ನು ತಾವೇ ಪಡೆದುಕೊಳ್ಳಬೇಕೆಂದು ಪ್ರಯತ್ನಿಸುತ್ತಿದೆ. ಆದರೆ ಶಿವಸೇನೆಯ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackery) ಇದಕ್ಕೆ ಒಪ್ಪುತ್ತಿಲ್ಲ. ಉದ್ಧವ್​ಗೆ ನಿಷ್ಠರಿರುವ ಇತರ ಶಾಸಕರು ಮತ್ತು ನಾಯಕರು ಸಹ ಬಾಳಾಸಾಹೇಬರ ಹೆಸರನ್ನು ಏಕನಾಥ್ ಶಿಂಧೆ ಬಣ ಬಳಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಎರಡೂ ಬಣಗಳು ಪರಸ್ಪರರ ಕಾಲೆಳೆಯುತ್ತಿದ್ದು, ಹಗ್ಗಜಗ್ಗಾಟ ಮುಂದುವರಿಸಿವೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಹೋರಾಟ ಮುಂದುವರಿಸಿವೆ.

ಬೇರೆ ಯಾವುದೇ ಗುಂಪು ಅಥವಾ ರಾಜಕೀಯ ಪಕ್ಷವು ತಮ್ಮ ಪಕ್ಷದೊಂದಿಗೆ ಶಿವಸೇನೆ ಪದವನ್ನಾಗಲೀ, ಬಾಳಾಸಾಹೇಬ ಠಾಕ್ರೆ ಅವರ ಹೆಸರನ್ನಾಗಲೀ ಬಳಸಬಾರದು ಎಂದು ಶಿವಸೇನೆಯ ರಾಷ್ಟ್ರೀಯ ಕಾರ್ಯಕಾರಿಣಿ ನಿರ್ಣಯ ಅಂಗೀಕರಿಸಿದೆ. ಇದಕ್ಕೆ ಸೆಡ್ಡು ಹೊಡೆದಿರುವ ಏಕನಾಥ್ ಶಿಂಧೆ ನೇತೃತ್ವದ ಬಣವು ‘ಶಿವಸೇನಾ (ಬಾಳಾಸಾಹೇಬ್‌)’ ಎಂದು ತಮ್ಮ ಬಣವನ್ನು ಘೋಷಿಸಿಕೊಂಡಿದೆ. ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಯತ್ನಿಸುವವರು, ಮತ ಪಡೆಯಲು ಇಚ್ಛಿಸುವ ನಾಯಕರು ಅವರ ಅಪ್ಪನ ಹೆಸರು ಬಳಸಿಕೊಳ್ಳಬೇಕೇ ಹೊರತು ಬಾಳಾಸಾಹೇಬರ ಹೆಸರು ಬಳಸಿಕೊಳ್ಳಬಾರದು ಎಂದು ಉದ್ಧವ್ ತಾಕೀತು ಮಾಡಿದ್ದಾರೆ. ತಮ್ಮ ನಾಯಕನ ಸ್ಪಷ್ಟ ನಿಲುವಿನ ಬಗ್ಗೆ ಚುನಾವಣಾ ಆಯೋಗಕ್ಕೂ ಪತ್ರ ಬರೆಯಲು ಶಿವಸೇನೆ ನಿರ್ಧರಿಸಿದೆ. ಆದರೆ ಬಂಡಾಯದ ಕಹಳೆ ಮೊಳಗಿಸಿರುವ ಏಕನಾಥ್ ಶಿಂಧೆ ವಿರುದ್ಧ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಈವರೆಗೆ ಶಿವಸೇನೆಯಲ್ಲಿ ಸಹಮತ ಮೂಡಿಲ್ಲ.

ಪ್ರಮುಖ ನಿರ್ಣಯಗಳು

ಇದನ್ನೂ ಓದಿ
ಬಂಡಾಯ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ಉದ್ಧವ್ ಠಾಕ್ರೆಗೆ ನೀಡಿ ನಿರ್ಣಯ ಅಂಗೀಕರಿಸಿದ ಶಿವಸೇನಾ
Maharashtra Political Analysis: ಶಿವಸೇನೆ ಪಕ್ಷದ ಇಬ್ಭಾಗ ಖಚಿತ; ಏಕನಾಥ್ ಶಿಂಧೆ ಬಣದ ಜೊತೆ ಸರ್ಕಾರ ರಚನೆಗೆ ಬಿಜೆಪಿ ಕಾತರ
ಮಹಾರಾಷ್ಟ್ರ ಸರ್ಕಾರದ ಇಂದಿನ ರಾಜಕೀಯ ಬಿಕ್ಕಟ್ಟಿಗೆ ಶಿವಸೇನೆಯ ಒಳಜಗಳವೇ ಕಾರಣ -ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಾಖ್ಯಾನ
MVA Crisis: ವಿಶ್ವಾಸಮತ ಯಾಚನೆಗೆ ಮೈತ್ರಿ ಸರ್ಕಾರದ ಸಿದ್ಧತೆ, ಶರದ್ ಪವಾರ್ ಉರುಳಿಸುವ ದಾಳದ ಬಗ್ಗೆ ಕುತೂಹಲ

ಬಂಡಾಯದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಂಬೈನಲ್ಲಿ ನಡೆದ ಶಿವಸೇನೆ ರಾಷ್ಟ್ರೀಯ ಕಾರ್ಯಕಾರಣಿ ಸಭೆಯು ಬಂಡಾಯದ ಬೆಳವಣಿಗೆಯನ್ನು ಖಂಡಿಸಿದೆ. ಉದ್ಧವ್ ಅವರಿಗೆ ನಿಷ್ಠೆ ವ್ಯಕ್ತಪಡಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವು ಸ್ಪರ್ಧಿಸಬೇಕು. ಯಾವುದೇ ಪಕ್ಷದೊಂದಿಗೆ ಶಿವಸೇನೆಯ ವಿಲೀನ ಸಲ್ಲದು ಎನ್ನುವುದೂ ಸೇರಿದಂತೆ ಆರು ನಿರ್ಣಯಗಳನ್ನು ಅಂಗೀಕರಿಸಿದೆ. ಆದರೆ ಬಂಡುಕೋರ ಬಣದ ನಾಯಕ ಏಕನಾಥ ಶಿಂಧೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಸ್ಪಷ್ಟ ಅಭಿಪ್ರಾಯ ಹೊರಹೊಮ್ಮಿಲ್ಲ.

ಸೈದ್ಧಾಂತಿಕ ನಿಲುವಿನ ಪುನರುಚ್ಚಾರ

ಶಿವಸೇನೆಯು ಹಿಂದುತ್ವ ಸಿದ್ಧಾಂತಕ್ಕೆ ಬದ್ಧರಿರುವ ಮರಾಠಿ ಮಣ್ಣಿನ ಮಕ್ಕಳು ನಾವು ಎನ್ನುವ ತನ್ನ ಸಿದ್ಧಾಂತಿಕ ನಿಲುವನ್ನು ಪುನರುಚ್ಚರಿಸಿದೆ. ಬಾಳಾಸಾಹೇಬರ ಆಶಯಗಳನ್ನು ಪ್ರತಿಪಾದಿಸುವುದರೊಂದಿಗೆ ಹಿಂದುತ್ವ ಸಿದ್ಧಾಂತದ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಶಿವಸೇನೆ ಕಾರ್ಯಕಾರಿಣಿಯು ಸ್ಪಷ್ಟಪಡಿಸಿದೆ.

ಅಮಾನತು ಕೋರಿ ಪತ್ರ

ಗುವಾಹತಿಗೆ ತೆರಳಿರುವ ಬಂಡಾಯ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಶಿವಸೇನೆಯ ಚೀಫ್ ವಿಪ್ ಸುನಿಲ್ ಪ್ರಭು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್​ಗೆ ಪತ್ರ ಬರೆದಿದ್ದಾರೆ. ಈ ಪತ್ರ ಆಧರಿಸಿ ಮಹಾರಾಷ್ಟ್ರ ವಿಧಾನಸಭೆಯು ಶಿವಸೇನೆಯ 16 ಶಾಸಕರಿಗೆ ನೊಟೀಸ್ ಜಾರಿ ಮಾಡಿದ್ದು, ಜೂನ್ 27ರ ಒಳಗೆ ಪ್ರತಿಕ್ರಿಯಸಬೇಕೆಂದು ಸೂಚಿಸಿದೆ.

ಅಂಕಿಅಂಶದ ಲೆಕ್ಕಾಚಾರ

ಮಹಾರಾಷ್ಟ್ರ ವಿಧಾನಸಭೆಯ ಒಟ್ಟು ಸದಸ್ಯ ಬಲವು 288. ಈ ಪೈಕಿ ಒಂದು ಸ್ಥಾನವು ತೆರವಾಗಿದೆ. ಹೀಗಾಗಿ ಸದ್ಯ 287 ಸದಸ್ಯರಿದ್ದಾರೆ. ಶಿವಸೇನೆಯ 55 ಸದಸ್ಯರಿದ್ದು, ಎನ್​ಸಿಪಿ 53, ಕಾಂಗ್ರೆಸ್ 44 ಸದಸ್ಯ ಬಲ ಹೊಂದಿದೆ. ಮೂರು ಸಣ್ಣ ಪಕ್ಷಗಳು ಮತ್ತು 9 ಪಕ್ಷೇತರರ ಬೆಂಬಲದೊಂದಿಗೆ ಮಹಾ ವಿಕಾಸ ಅಘಾಡಿ ಮೈತ್ರಿ 166 ಸದಸ್ಯ ಬಲದ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ. ಬಿಜೆಪಿ 106 ಸದಸ್ಯ ಬಲ ಹೊಂದಿದ್ದು, ಎರಡು ಮಿತ್ರ ಪಕ್ಷಗಳು ಮತ್ತು ನಾಲ್ವರ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ 112 ಮಂದಿ ತನ್ನ ಪರ ಇರುವುದಾಗಿ ಹೇಳಿದೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬೇಕಿರುವ ಸದಸ್ಯರ ಸಂಖ್ಯೆ 143. ಸದ್ಯ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಎನ್​ಡಿಎ ಮೈತ್ರಿಕೂಟ 113 ಸಂಖ್ಯಾಬಲ ಹೊಂದಿದೆ. ಇದೀಗ ಏಕನಾಥ ಶಿಂಧೆ ಬಣದಲ್ಲಿ ಪಕ್ಷೇತರ ಶಾಸಕರು ಸೇರಿದಂತೆ 48 ಶಾಸಕರು ಗುರುತಿಸಿಕೊಂಡಿದ್ದಾರೆ. ಇದರಿಂದಾಗಿ ಎನ್​​ಡಿಎ ಮತ್ತು ಏಕನಾಥ ಶಿಂಧೆ‌ ಬಣದ ಶಾಸಕರ ಸಂಖ್ಯೆ 161ಕ್ಕೆ ಹೆಚ್ಚಾಗಿದೆ. ಇದೇ ಹೊತ್ತಿಗೆ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಸಂಖ್ಯಾಬಲವು 124ಕ್ಕೆ ಕುಸಿತ ಕಂಡಿದೆ. ವಿಧಾನಸಭೆಯಲ್ಲಿ ಸಿಎಂ ಉದ್ಧವ್ ಠಾಕ್ರೆ ಬಹುಮತ ಕಳೆದುಕೊಳ್ಳುವ ಸಾಧ್ಯತೆ ನಿಚ್ಚಳ ಎನಿಸಿದೆ.