ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನ ಗೆಲ್ಲಲು ಸಾಧ್ಯನಾ?: ಸಿದ್ದರಾಮಯ್ಯ ಪ್ರಶ್ನೆ
ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಲೋಕಸಭಾ ಚುನಾವಣೆ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾವು ರಾಜ್ಯದಲ್ಲಿ 20 ಸ್ಥಾನ ಗೆಲ್ಲುತ್ತೇವೆ. ಹೀಗಿದ್ದಾಗ ಬಿಜೆಪಿಗೆ 28 ಸ್ಥಾನಗಳೂ ಗೆಲ್ಲಲು ಸಾಧ್ಯನಾ ಎಂದು ನಾನು ಕೇಳುತ್ತೇನೆ ಎಂದರು. ಅಲ್ಲದೆ, ನಮ್ಮ ಸರ್ಕಾರ ಕೊಟ್ಟ ಭರವಸೆಯಂತೆ ಕೆಲಸ ಮಾಡಿದೆ. ಉಪಕಾರ ಮಾಡಿದವರನ್ನು ಮರೆಯುತ್ತೀರಾ ಎಂದು ಕೇಳಿದರು.
ಮಂಡ್ಯ, ಫೆ.18: ಜಿಲ್ಲೆಯ ಮಳವಳ್ಳಿಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಸಮಾವೇಶ (Congress Guarantee Schemes Convention) ನಡೆಯಿತು. ಸಮಾವೇಶದಲ್ಲಿ ಲೋಕಸಭಾ ಚುನಾವಣೆ (Lok Sabha Elections) ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಚುನಾವಣೆಯಲ್ಲಿ ರಾಜ್ಯದಲ್ಲಿ 28 ಸ್ಥಾನ ಗೆಲ್ಲೋದಾಗಿ ಬಿಜೆಪಿ (BJP) ಹೇಳಿದೆ. 28 ಸ್ಥಾನಗಳೂ ಗೆಲ್ಲಲು ಸಾಧ್ಯನಾ ಅಂತಾ ಬಿಜೆಪಿಗೆ ಕೇಳುತ್ತೇನೆ. ನಾವು ರಾಜ್ಯದಲ್ಲಿ 20 ಸ್ಥಾನ ಗೆಲ್ಲುತ್ತೇವೆ ಎಂದರು.
ಉಪಕಾರ ಮಾಡಿದವರನ್ನು ಮರೆಯುತ್ತೀರಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನಮ್ಮ ಸರ್ಕಾರ ಕೊಟ್ಟ ಭರವಸೆಯಂತೆ ಕೆಲಸ ಮಾಡಿದೆ. ಹೆಚ್ಡಿ ದೇವೇಗೌಡರು, ಹೆಚ್ಡಿ ಕುಮಾರಸ್ವಾಮಿ ಇಂತಹ ಯೋಜನೆ ತಂದಿದ್ದಾರಾ? ಅನ್ನಭಾಗ್ಯ ಯೋಜನೆ ನೀಡಿದ್ದು ನಮ್ಮ ಸರ್ಕಾರ. 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ನಾವು ಭರವಸೆ ನೀಡಿದ್ದೆವು. ಹಣ ನೀಡುತ್ತೇವೆ ಉಳಿದ ಹೆಚ್ಚುವರಿ 5 ಕೆಜಿ ಅಕ್ಕಿ ಕೊಡಿ ಎಂದಿದ್ದೆವು. ಮೊದಲು ಕೊಡುತ್ತೇವೆ ಎಂದಿದ್ದ ಕೇಂದ್ರ ಮತ್ತೆ ತಿರಸ್ಕರಿಸಿತು. ಇಂತಹ ಬಿಜೆಪಿಯವರಿಗೆ ಮತ ಹಾಕಬೇಕಾ. ಬಡವರಿಗೆ ಅಕ್ಕಿ ಕೊಡದ ಬಿಜೆಪಿಗೆ ಮತ ಹಾಕಬಾರದು ಎಂದರು.
ನಾವು ಬಿಜೆಪಿ, ಜೆಡಿಎಸ್ನಂತೆ ಕೊಟ್ಟ ಮಾತಿಗೆ ತಪ್ಪಿಸಿಕೊಳ್ಳವವರು ಅಲ್ಲ. ನಾವು ಅಧಿಕಾರಕ್ಕೆ ಬಂದ 8 ತಿಂಗಳಲ್ಲೇ 5 ಗ್ಯಾರಂಟಿ ಜಾರಿ ಮಾಡಿದ್ದೇವೆ. 155 ಕೋಟಿ ಜನರು ಇಲ್ಲಿಯವರೆಗೂ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದೀಗ ಕುಮಾರಸ್ವಾಮಿ ಅಶೋಕ ಜೊತೆ ಆಗಿದ್ದಾರೆ. ಕೋಮುವಾದಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ ಎಂದರು.
ಹಿಂದೆ ದೇವೇಗೌಡರು ನಾನು ಮುಸ್ಲಿಮನಾಗಿ ಹುಟ್ಟುವೆ ಎಂದಿದ್ದರು. ಈಗ ಚುನಾವಣೆಗಾಗಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಈಗ ಜಾತ್ಯತೀತೆ ಬಗ್ಗೆ ಮಾತಾಡುವ ನೈತಿಕ ಹಕ್ಕು ನಿಮಗೆ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ಗೆ ಮತ ಹಾಕಬೇಡಿ. ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದರು.
ಇದನ್ನೂ ಓದಿ: ಬಜೆಟ್‌ಗೆ ವಿಪಕ್ಷಗಳ ಟೀಕೆ ವಿಚಾರ; ಬಡವರ ವಿರೋಧಿಗಳಿಗೆ ಬಜೆಟ್ ಅರ್ಥ ಆಗಲ್ಲ-ಸಿಎಂ ಸಿದ್ದರಾಮಯ್ಯ
ನಾವು ಅಧಿಕಾರಕ್ಕೆ ಬಂದ ನಂತರ ನುಡಿದಂತೆ ನಡೆದಿದ್ದೇವೆ. ಬಿಜೆಪಿ, ಜೆಡಿಎಸ್ ರೀತಿ ಕೊಟ್ಟ ಮಾತಿಗೆ ತಪ್ಪಿಸಿಕೊಳ್ಳುವವರು ಅಲ್ಲ. ನಾವು ನೂರಕ್ಕೆ ನೂರು ಭರವಸೆಗಳನ್ನು ಈಡೇರುತ್ತೇವೆ. ನಾನೇ ಬಂದು ಹನಿ ನೀರಾವರಿ ಯೋಜನೆ ಉದ್ಘಾಟನೆ ಮಾಡುತ್ತೇನೆ ಎಂದರು.
ಸಿದ್ದರಾಮಯ್ಯ ಭಾಷಣದ ವೇಳೆ ಊಟಕ್ಕೆ ಹೋದ ಜನರು
ಸಿದ್ದರಾಮಯ್ಯ ಭಾಷಣದ ವೇಳೆ ಜನರು ಊಟಕ್ಕೆ ಹೋದ ಹಿನ್ನೆಲೆ ಜನರನ್ನು ವಾಪಸ್ ಬರುವಂತೆ ಮನವಿ ಮಾಡಿದರು. ಊಟಕ್ಕೆ ಹೋಗಿರುವವರನ್ನ ಬರುವುದಕ್ಕೆ ಹೇಳಿ. ನೀವು ಅರ್ಧಗಂಟೆ ಕುಳಿತರೇ ನಾನು ಭಾಷಣ ಮಾಡುತ್ತೇನೆ. ಇಲ್ಲ ನಾನು ಮಾತು ನಿಲ್ಲಿಸುತ್ತೇನೆ ಎಂದರು.
ಅಶೋಕ್, ಬೊಮ್ಮಾಯಿ ಬಜೆಟ್ ಪುಸ್ತಕವನ್ನು ಓದಲಿ
ಗ್ಯಾರಂಟಿ ಯೋಜನೆ ಜಾರಿ ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದರು. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗುತ್ತೆ ಎಂದಿದ್ದರು. ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ನಿಲ್ಲಿಸುತ್ತಾರೆ ಎಂದಿದ್ದರು. ಆದರೆ, ನಾವು ಈ ಬಾರಿಯ ಬಜೆಟ್ನಲ್ಲಿ 5 ಗ್ಯಾರಂಟಿಗಾಗಿ 55 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದೇವೆ. ಅಶೋಕ್, ಬೊಮ್ಮಾಯಿಯವರು ಬಜೆಟ್ ಪುಸ್ತಕವನ್ನು ಓದಲಿ ಎಂದರು.
ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 19 ಸ್ಥಾನ ಗೆದ್ದಿತ್ತು. ಪಕ್ಷ ಖಾಲಿ ಆಗುತ್ತೆ ಎಂದು ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಜೆಡಿಎಸ್ ತೊರೆಯಲು ಹಲವು ಶಾಸಕರು ಮುಂದಾಗಿದ್ದರು. ಹೀಗಾಗಿ ದೇವೇಗೌಡ, ಕುಮಾರಸ್ವಾಮಿ ಸೇರಿ ನಾಟಕ ಆಡಿದ್ದಾರೆ. ಜಾತ್ಯತೀತ ಎಂದು ಹೇಳಿಕೊಂಡು ಕೋಮುವಾದಿ ಜೊತೆ ಸೇರಿದ್ದಾರೆ ಎಂದರು.
ಮಂಡ್ಯ ಮತ್ತೊಮ್ಮೆ ಕಾಂಗ್ರೆಸ್ ತೆಕ್ಕೆಗೆ ಬರುತ್ತದೆ. ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ. ಹಿಂದಿನ ಬಾರಿ ನಾವು ಮಾಡಿದ ಯೋಜನೆಗಳನ್ನ ಜನರಿಗೆ ತಿಳಿಸುವ ಕೆಲಸ ಮಾಡಲಿಲ್ಲ. ಹೀಗಾಗಿ ನಮಗೆ ಸೋಲು ಆಯಿತು. ಅದರೆ ಈ ಬಾರಿ ಹಾಗೆ ಆಗಲ್ಲ. ಕುಮಾರಸ್ವಾಮಿ ಅವರೇ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೀರಿ. ದೇವೇಗೌಡರು ಕೂಡ ಆಗಿದ್ದರು. ಮಳವಳ್ಳಿಗೆ ನಿಮ್ಮ ಕೊಡುಗೆ ಏನು? ಏನು ಕೊಡುಗೆ ಕೊಟ್ಟಿದ್ದೀರಿ ಹೇಳಿ, ಯಾಕೆ ನಿಮಗೆ ಮತ ಹಾಕಬೇಕು? ಎಂದು ಪ್ರಶ್ನಿಸಿದರು.
ನಮ್ಮ ದೇಶದ ಪ್ರಧಾನಿ ಬರಿ ಸುಳ್ಳೇ ಹೇಳುವುದು. ಬಿಜೆಪಿಗೆ ಇನ್ನೊಂದು ಅನ್ವರ್ಥ ನಾಮ ಸುಳ್ಳಿನ ಪಾರ್ಟಿ. ಮೋದಿ ಅಷ್ಟು ಸುಳ್ಳು ಹೇಳಿದ ಪ್ರಧಾನಿ ಇಲ್ಲಿಯವರೆಗೂ ಬಂದಿಲ್ಲ. ಅಚ್ಚೇ ದಿನ್ ಅಯೇಂಗೇ ಅಂತಾ ಹೇಳಿದ್ದರು. ಬಂತಾ? ನಾವು ಎಲ್ಲರಿಗೂ ನಮ್ಮ ಗ್ಯಾರಂಟಿ ಕೊಡುತ್ತಿದ್ದೇವೆ. ಬಿಜೆಪಿ ಅವರಿಗೂ ಕೊಡುತ್ತಿದ್ದೇವೆ ಎಂದರು.
ತೆರಿಗೆ ಕೇಳಬೇಕಾ ಬೆಡವೇ? ನಾವು ನೂರು ರೂಪಾಯಿ ತೆರಿಗೆ ಕೊಟ್ಟರೆ ನಮಗೆ 13 ರೂಪಾಯಿ ಮಾತ್ರ ಬರುತ್ತಿದೆ. ಇದು ಅನ್ಯಾಯ ಅಲ್ವಾ? 50257 ಕೋಟಿ ತೆರಿಗೆ ಮಾತ್ರ ಬರುತ್ತದೆ. ದೇಶದಲ್ಲಿ ಹೆಚ್ಚು ತೆರಿಗೆ ಕಟ್ಟುವ ಎರಡನೇ ರಾಜ್ಯ. ನಾವು ಪ್ರತಿಭಟನೆ ಮಾಡಿದರೆ ಬಿಜೆಪಿ ಅವರು ಟೀಕೆ ಮಾಡುತ್ತಾರೆ. ಇದು ದ್ರೋಹ ಅಲ್ವಾ? ಹೀಗಾಗಿ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಿ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ