ಮಂಡ್ಯ: ಜಾತಿ ವಿಚಾರ ಬಂದಾಗ ಮಾತನಾಡುವುದನ್ನ ನಾವು ಕಡಿಮೆ ಮಾಡಬೇಕು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರಿಗೆ ನಾನು ಈ ಬಗ್ಗೆ ಮನವಿ ಮಾಡುತ್ತೇನೆ ಎಂದು ಮದ್ದೂರು ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ (MLA D.C.Thammanna) ಹೇಳಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ಪ್ರಲ್ಹಾದ್ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡಲು ಆರ್ಎಸ್ಎಸ್ ಹುನ್ನಾರ ನಡೆಸುತ್ತಿದೆ ಎಂದು ಕುಮಾರಸ್ವಾಮಿ ಅವರು ನೀಡಿದ ಹೇಳಿಕೆ ಬಗ್ಗೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿದ ಅವರು, ಬ್ರಾಹ್ಮಣರು ಸುಸಂಸ್ಕೃತರು ಈ ದೇಶಕ್ಕೆ ಸಂಸ್ಕೃತಿ ಸಂಸ್ಕಾರ ಕೊಟ್ಟಿದ್ದಾರೆ ಎಂದರು.
ಕುಮಾರಸ್ವಾಮಿಯವರು ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ನಾನಂತು ಬ್ರಾಹ್ಮಣರ ವಿರೋಧಿಯಂತು ಅಲ್ವೇ ಅಲ್ಲಾ. ಜಾತಿ ವಿಚಾರ ಬಂದಾಗ ಮಾತನಾಡುವುದನ್ನ ನಾವು ಕಡಿಮೆ ಮಾಡಬೇಕು. ಈ ಬಗ್ಗೆ ಕುಮಾರಸ್ವಾಮಿಯವರಿಗೂ ನಾನು ಮನವಿ ಮಾಡುತ್ತೇನೆ. ಬ್ರಾಹ್ಮಣರ ಸಂಸ್ಕೃತಿಯನ್ನ ಬಹಳ ಇಷ್ಟ ಪಡುವವನು ನಾನು. ಬ್ರಾಹ್ಮಣ ಅಂದರೆ ಒಂದು ಜಾತಿಗೆ ಸೀಮಿತ ಅಲ್ಲ, ಯಾರು ಬ್ರಾಹ್ಮಣತ್ವವನ್ನ ನಿಜವಾಗಿ ಪಾಲಿಸುತ್ತಾರೋ ಅವರು ಬ್ರಾಹ್ಮಣರು. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವರಲ್ಲೇ ಬ್ರಾಹ್ಮಣರಲ್ಲ. ಕೆಳ ಜಾತಿಯಲ್ಲಿ ಹುಟ್ಟಿದ ಋಷಿ ಮುನಿಗಳು ಬ್ರಾಹ್ಮಣತ್ವ ಪಡೆದು ವಿಶ್ವಕ್ಕೆ ಆದರ್ಶವಾಗಿದ್ದಾರೆ. ಹೀಗಾಗಿ ಬ್ರಾಹ್ಮಣ ಜಾತಿನೇ ಬೇರೆ ಬ್ರಾಹ್ಮಣತ್ವವೇ ಬೇರೆ ಎಂದು ಶಾಸಕ ತಮ್ಮಣ್ಣ ಹೇಳಿದ್ದಾರೆ.
ಕುಮಾರಸ್ವಾಮಿ ಅವರ ಹೇಳಿಕೆ ವಿರುದ್ಧ ಬಿಜೆಪಿ ಹಾಗೂ ಬ್ರಾಹ್ಮಣ ಸಮುದಾಯ ಸಿಡಿದೆದ್ದಿದೆ. ಜಾತ್ಯಾತೀತ ಜನತಾದಳ ಎಂದು ಹೆಸರಿಟ್ಟುಕೊಂಡು ಜಾತಿ ರಾಜಕಾರಣ ಮಾಡುತ್ತಿರುವುದು ನೀವು ಕೂಡಲೇ ಕ್ಷಮೆ ಕೋರಬೇಕು ಎಂದು ಹೆಚ್.ಎಸ್.ಸಚ್ಚಿದಾನಂದಮೂರ್ತಿ ಆಗ್ರಹಿಸಿದ್ದರು. ಯಾಕೆ ಬ್ರಾಹ್ಮಣ ಸಮುದಾಯದವರು ಸಿಎಂ ಆಗಬಾರದಾ? ಬ್ರಾಹ್ಮಣರು ಭಾರತದ ಪ್ರಜೆಗಳು ಅಲ್ಲವೇ? ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ಎಷ್ಟು ಶಾಸಕರು ಇದ್ದಾರೆ? ಸಮುದಾಯದ ಎಷ್ಟು ಜನರಿಗೆ ಟಿಕೆಟ್ ನೀಡಿದ್ದಾರೆ ಎಂದು ಸಾಲು ಸಾಲು ಪ್ರಶ್ನೆಗಳನ್ನಿಟ್ಟ ಉಡುಪಿ ಪೇಜಾವರ ಶ್ರೀಗಳು, ಒಂದು ವೇಳೆ ಬ್ರಾಹ್ಮಣರು ಸಿಎಂ ಆಗುವುದಾದರೆ ಆಗಲಿ ಎಂದಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯಗೆ ಜಾತೀಯತೆ ಬೇಕು, ಹೀಗಾಗಿ ಚುನಾವಣೆಯಲ್ಲಿ ಪರಮೇಶ್ವರ್ರನ್ನು ಸೋಲಿಸಿದರು: ಸಿ.ಟಿ.ರವಿ
ಇನ್ನು, ತಮ್ಮ ಹೇಳಿಕೆ ವಿರುದ್ಧ ಬ್ರಾಹ್ಮಣ ಸುಮುದಾಯ ಸಿಡಿದೆದ್ದ ಬೆನ್ನಲ್ಲೆ ಎಚ್ಚೆತ್ತುಕೊಂಡ ಕುಮಾರಸ್ವಾಮಿ, ನಾನು ಕೊಟ್ಟ ಹೇಳಿಕೆ ಬಗ್ಗೆ ಹಲವಾರು ಪ್ರತಿಕ್ರಿಯೆ ಬಂದಿದೆ. ನಾನು ಒಂದು ಸಮಾಜದ ಬಗ್ಗೆ ಅಗೌರವ ತೋರಿಸಿಲ್ಲ. ಈ ದೇಶದ ಇತಿಹಾಸದಲ್ಲಿ ನಡೆದ ಬೆಳವಣಿಗೆ ಬಗ್ಗೆ ಹೇಳಿದ್ದೇನೆ. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಬೆಳವಣಿಗೆಯನ್ನು ನಾವು ಕಾಣುತ್ತಿದ್ದೇವೆ. ಬ್ರಾಹ್ಮಣ ಸಮಾಜದ ಬಗ್ಗೆ ಅಪಾಮಾನ ಮಾಡಿದ್ದೇನೆ ಎನ್ನುತ್ತಿದ್ದಾರೆ. ಹಳೆ ಕರ್ನಾಟಕ ಭಾಗದ ಬ್ರಾಹ್ಮಣ ಸಮಾಜ ಅತ್ಯಂತ ಗೌರವ ಸಮಾಜ ಎಂದು ಹೇಳಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪುಸ್ತಕದಲ್ಲಿ ಅನೇಕ ತಿರುಚುವ ಕೆಲಸ ಆಯ್ತು. ಇಂಥಹ ವ್ಯಕ್ತಿಗಳ ಬಗ್ಗೆ ಎಚ್ಚರ ಇರಲಿ ಅಂತ ಹೇಳಿದ್ದು ಎಂದು ಹೇಳುವ ಮೂಲಕ ಹೇಳಿಕೆಗೆ ತೇಪೆ ಹಚ್ಚುವ ಕೆಲಸ ಮಾಡಿದ್ದರು.
ಅಲ್ಲದೆ, ಚಂದ್ರಮೌಳಿ ಕಡವಿದವರಾರು, ಗಾಂಧೀಜಿಯವರನ್ನ ಕೊಂದಿದ್ಯಾರು, ಶವಾಜಿ ಕೊಂದಿದ್ದ ಯಾರು ಎಂದು ಪ್ರಶ್ನಿಸಿದ್ದರು. ಆ ಡಿಎನ್ಎ ಇರುವ ವ್ಯಕ್ತಿಯನ್ನ ಸಿಎಂ ಮಾಡಲು ಹೊರಟಿದ್ದಾರೆ ಅಂತ ನಾನು ಹೇಳಿದ್ದು. ಅದಕ್ಕೆ ಯಾಕೆ ಇಷ್ಟು ಗಾಬರಿ. ಈ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ, ಈ ಭಾಗದ ಬ್ರಾಹ್ಮಣರು ಸರ್ವೇ ಜನಃ ಸುಕಿನೋ ಭವಂತು ಅಂತಾರೆ. ಪೇಶ್ವೆ ಸಮಾಜ, ಸರ್ವೇ ಜನೋ ನಾಶೋ ಭವಂತು ಅಂತಾರೆ. ಇದು ಅವರ ಪಾಲಿಸಿ ಅಂತ ಕುಮಾರಸ್ವಾಮಿ ಹೇಳಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ