ಮಂಡ್ಯದಲ್ಲಿ ಬಿಗ್ ಆಪರೇಷನ್: ಕೊನೆಗೂ ಸಂಸದೆ ಸುಮಲತಾ ಅಂಬರೀಷ್ ಆಪ್ತನಿಗೆ ಗಾಳ ಹಾಕುವಲ್ಲಿ ಬಿಜೆಪಿ ಯಶಸ್ವಿ!
ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿರುವ ಬಿಜೆಪಿ, ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರ ಆಪ್ತನಿಗೆ ಗಾಳ ಹಾಕಿದ್ದು, ಸುಮಲತಾ ಬಿಜೆಪಿ ಸೇರ್ಪಡೆಗೆ ಇದು ಮುನ್ನುಡಿಯೇ?
ಮಂಡ್ಯ/ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಬಿಜೆಪಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬಾರಿ ಶತಾಯಗತಾಯವಾಗಿ ಅಧಿಕಾರಕ್ಕೇರಬೇಕೆಂದು ಇನ್ನಿಲ್ಲದ ಕಸರತ್ತು ನಡೆಸಿದೆ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದ್ದು, ಈಗಿನಿಂದಲೇ ಪಕ್ಷ ಸಂಘಟನೆ ಮಾಡಲು ಆಪರಮೇಷನ್‌ಗೆ ಇಳಿದೆ. ಇದಕ್ಕೆ ಪೂರಕವೆಂಬಂತೆ ಜೆಡಿಎಸ್ ಭದ್ರಕೋಟೆ ಸಕ್ಕರೆನಾಡು ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಷ್ ಆಪ್ತನನ್ನು ಬಿಜೆಪಿ ಬಿಗ್ ಆಪರೇಷನ್ ಮಾಡಿದೆ.
ಹೌದು… ಮಂಡ್ಯ ಸಂಸದೆ ಸುಮಲತಾ ಆಪ್ತ ಇಂಡವಾಳು ಸಚ್ಚಿದಾನಂದ ಅವರು ಕೊನೆಗೂ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ. ನಾಳೆ(ನವೆಂಬರ್ 28) ರಂದು ಬೆಂಗಳೂರಿನಲ್ಲಿ ಮಲ್ಲೇಶ್ವರಂ ಕೇಂದ್ರ ಕಚೇರಿಯಲ್ಲಿ ಸೇರ್ಪಡೆಯಾಗಲಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಚ್ಚಿದಾನಂದ ಅವರು ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ.
ಈ ಹಿಂದೆ ಇಂಡವಾಳು ಸಚ್ಚಿದಾನಂದ ಅವರು ಮೊದಲು ಬಿಜೆಪಿ ಸೇರ್ತಾರೆ. ಬಳಿಕ ಸಂಸದೆ ಸುಮಲತಾ ಅಂಬರೀಶ್ ಸಹ ಬಿಜೆಪಿ ಸೇರುತ್ತಾರೆ ಎನ್ನುವ ಚರ್ಚೆ ರಾಜ್ಯ ರಾಜಕಾರಣದಲ್ಲಿ ಜೋರಾಗಿತ್ತು. ಅದರಂತೆ ಇದೀಗ ಅಂತಿಮವಾಗಿ ಸುಮಲತಾ ಅಂಬರೀಶ್ ಅವರ ಆಪ್ತ ಇಂಡವಾಳು ಸಚ್ಚಿದಾನಂದ ಕಮಲ ಹಿಡಿಯಲು ಮುಹೂರ್ತ ಫಿಕ್ಸ್ ಆಗಿದ್ದು, ಮಂಡ್ಯ ಜಿಲ್ಲಾ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಅಲ್ಲದೇ ಸುಮಲತಾ ಅಂಬರೀಷ್ ಬಿಜೆಪಿ ಸೇರ್ಪಡೆಗೆ ಇದು ಮುನ್ನುಡಿಯೇ ಎನ್ನುವ ಚರ್ಚೆ, ಪ್ರಶ್ನೆಗಳು ಉದ್ಭವಿಸಿವೆ.
ಶ್ರೀರಂಗಪಟ್ಟಣದಿಂದ ಸ್ಪರ್ಧೆ ಸಾಧ್ಯತೆ
ಮುಂದಿನ ಚುನಾವಣೆಯಲ್ಲಿ ಇಂಡವಾಳು ಸಚ್ಚಿದಾನಂದ ಶ್ರೀರಂಗಪಟ್ಟಣದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮತ್ತೊಂದೆಡೆ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾಗಿರುವ ಕೆ. ಎಸ್. ನಂಜುಂಡೇಗೌಡ ಸಹ ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿದ್ದಾರೆ. ಆದ್ರೆ, ಟಿಕೆಟ್ ಭರವಸೆ ಸಿಕ್ಕಿದ್ದರಿಂದ ಇಂಡವಾಳು ಸಚ್ಚಿದಾನಂದ ಅವರು ಬಿಜೆಪಿ ಸೇರ್ಪಡೆಯಾಗೆ ಮುಂದಾಗಿದ್ದು, ಇವರಿಗೆ ಶ್ರೀರಂಗಪಟ್ಟಣದ ಟಿಕೆಟ್ ಫೈನಲ್ ಎನ್ನಲಾಗುತ್ತಿದೆ.
ಸಚ್ಚಿದಾನಂದ ಹುಟ್ಟುಹಬ್ಬಕ್ಕೆ, ಶುಭಕೋರಿದ್ದ ಬಿಜೆಪಿ ನಾಯಕರು
ಇತ್ತೀಚೆಗೆ ಇಂಡುವಾಳು ಸಚ್ಚಿದಾನಂದ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇಂಡುವಾಳು ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಹಲವಾರು ಬಿಜೆಪಿ ನಾಯಕರ ಆಗಮಿಸಿ ಶುಭಕೋರಿದ್ದರು. ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸೇರಿದಂತೆ ರಾಜ್ಯ ಹಾಗೂ ಜಿಲ್ಲೆಯ ಬಿಜೆಪಿ ನಾಯಕರು ಸಚ್ಚಿದಾನಂದ ಮನೆಗೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಚ್ಚಿದಾನಂದ ಬಿಜೆಪಿ ಸೇರುವುದು ಖಚಿತವಾಗಿತ್ತು.
ಹಳೆ ಮೈಸೂರು ಭಾಗಕ್ಕೆ ಹೆಚ್ಚಿನ ಹೊತ್ತು
ಮಂಡ್ಯ ಹಾಗೂ ಮೈಸೂರು ಭಾಗದಲ್ಲಿ ಸ್ಥಳೀಯ ಪ್ರಮುಖ ನಾಯಕರನ್ನು ಸೆಳೆದು ಪಕ್ಷ ಸಂಘಟನೆ ಬಲಿಷ್ಠಗೊಳಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಈ ಹಿಂದೆ ಅಮಿತ್ ಶಾ ರಾಜ್ಯಕ್ಕೆ ಬಂದಾಗ ಹಳೇ ಮೈಸೂರು ಭಾಗಕ್ಕೆ ಹೆಚ್ಚಿನ ಹೊತ್ತುಕೊಂಡಿ ಎಂದು ರಾಜ್ಯ ನಾಯಕರಿಗೆ ಸೂಚಿಸಿದ್ದರು. ಅದಂತೆ ಇದೀಗ ಬೇರೆ ಪಕ್ಷದ ನಾಯಕರನ್ನು ಸೆಳೆದ ಕಮಲದ ಬೇರು ಗಟ್ಟಿಮಾಡಿಕೊಳ್ಳಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಈಗ ಸಚ್ಚಿದಾನಂದ ಅವರನ್ನು ಸೆಳೆಯಲು ಬಿಜೆಪಿ ಯಶಸ್ವಿಯಾಗಿದ್ದು, ಇನ್ನಷ್ಟು ನಾಯಕರ ಮೇಲೆ ಕಣ್ಣಿಟ್ಟಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:59 pm, Sun, 27 November 22