ಗಾಲಿ ಜನಾರ್ದನ ರೆಡ್ಡಿ(Gali Janardhan Reddy).. ಈ ಹೆಸರು ಕರ್ನಾಟಕದ ರಾಜಕೀಯ (Karnataka Politics) ನಕಾಶೆಯನ್ನ ಗಣಿಧೂಳಿನಿಂದಲೇ ತಿದ್ದಿದ ಕಾಲವೊಂದಿತ್ತು. ಗಢಗಢಗಢನೆ ಸದ್ದು ಮಾಡುತ್ತಾ ರೆಡ್ಡಿ ಹೆಲಿಕಾಪ್ಟರ್ ಧರೆಗಿಳಿದ್ರೆ ಸಾಕು, ರಾಜಕಾರಣದ ಪಡಸಾಲೆ ಸಹ ಮೈ ಕೊಡವಿ ನಿಲ್ಲುತ್ತಿತ್ತು. ವಿಧಾನ ಸಭೆ ಅಧಿವೇಶನ ಊಟದ ವಿರಾಮ ಕೊಟ್ರೆ ಸಾಕು, ರೆಡ್ಡಿಯ ರುಕ್ಮಿಣಿ ಎಂಬ ಹೆಲಿಕಾಪ್ಟರ್ ಬಳ್ಳಾರಿಗೆ ಹಾರುತ್ತಿತ್ತು. ಯಡಿಯೂರಪ್ಪರಂತಹ ಯಡಿಯೂರನ್ನ ಅಧಿಕಾರಿಕ್ಕೇರಿದ ಆರು ತಿಂಗಳಲ್ಲಿ ಗರಗರನೆ ತಿರುಗಿಸಿ ಜಗದೇಕ ವೀರುಡು ಆಗಲು ಹೊಗಿದ್ದವರು ಇದೇ ರೆಡ್ಡಿ ಅಲಿಯಾಸ್ ಗಾಲಿ ಜನಾರ್ದನ ರೆಡ್ಡಿ. ಇಷ್ಟೆಲ್ಲಾ ಪೀಠಿಕೆ ಯಾಕೆ ಅಂದರೆ, ಈಗ ಕಾಲ ತಿರುಗಿದೆ. 2008ರಿಂದ ಇಂದಿನ ವರೆಗೆ ವಿಧಾನಸೌಧದ ಮೂರನೇ ಮಹಡಿ ಹಲವು ಮುಖ್ಯಮಂತ್ರಿಗಳನ್ನ ಕಂಡಿದೆ. ಅಂದು ಮುಖ್ಯಮಂತ್ರಿ ಯಾರಾಗ್ತಾರೆ ಎಂಬುವುದನ್ನ ನಾನೇ ಡಿಸೈಡ್ ಮಾಡುತ್ತೇನೆ ಎಂಬ ರೇಂಜ್ ನಲ್ಲಿದ್ದ ಜನಾರ್ದನ ರೆಡ್ಡಿ, ಇಂದು ಮುಖ್ಯಮಂತ್ರಿ ನಿವಾಸದಲ್ಲಿ ಬೊಕ್ಕೆ ಹಿಡಿದು ರಾಜ್ಯಸಭೆ ಬಗ್ಗೆ ಚರ್ಚೆ ಮಾಡಿದ್ದಾರೆ. ಅಂದಹಾಗೇ ಜನಾರ್ದನ ರೆಡ್ಡಿ ಬೊಕ್ಕೆ ಸ್ವೀಕರಿಸಿದವರು ಬೇರಾರು ಅಲ್ಲ ಅಂದು ಸದನದಲ್ಲಿ ರೆಡ್ಡಿ ಸೊಕ್ಕು ಮುರಿತೀವಿ ಎಂದು ತೊಡೆ ತಟ್ಟಿದ್ದ ಅಂದಿನ ವಿಪಕ್ಷ ನಾಯಕ ಹಾಗೂ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ.
ಸಿದ್ದರಾಮಯ್ಯ ಇಂದು ಮುಖ್ಯಮಂತ್ರಿಯಾಗಿದ್ದರೆ, ಅದಕ್ಕೆ ಜನಾರ್ದನ ರೆಡ್ಡಿ ಕೊಡುಗೆ ಖಂಡಿತ ಇದೆ. ಅಂದು ವಿಧಾನಸಭೆಯಲ್ಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲ ಅಳಿಯ ಶಾಸಕ ಸುರೇಶ್ ಬಾಬು ತಾಕತ್ತಿದ್ರೆ ಬಳ್ಳಾರಿಗೆ ಬನ್ರೀ ಎಂದು ಸವಾಲ್ ಹಾಕದೇ ಇದ್ರೆ, ಸಿದ್ದರಾಮಯ್ಯ ಅಪ್ಪನಾಣೆಗೂ ವಿಧಾನಸೌಧದ ಮೂರನೇ ಮಹಡಿಗೆ ಬರ್ತಾ ಇರಲಿಲ್ಲ. ಅಂದು ರೆಡ್ಡಿಯನ್ನ ಕಡು ಭ್ರಷ್ಟ, ಹಸಿ ಹಸಿ ಭ್ರಷ್ಟ ಎಂದು ಎದೆ ತುಂಬಿ ಬೈದಿದ್ದ ಸಿದ್ದರಾಮಯ್ಯ, ಐತಿಹಾಸಿಕ ಪಾದಯಾತ್ರೆ ಮೂಲಕ ರಾಜ್ಯದಲ್ಲಿ ಹೊಸದೊಂದು ರಾಜಕೀಯ ಅಲೆಯನ್ನ ಸೃಷ್ಠಿಸಿದ್ದರು. ಇಂದು ರೆಡ್ಡಿ ಜತೆ ನಿಂತಿದ್ದ ಡಿ.ಕೆ.ಶಿವಕುಮಾರ್ ಸಹ ವೇಗದ ಹೆಜ್ಜೆಗಳನ್ನಿಡುತ್ತಲೇ ಮುಂದೆ ಬರುವ ಕಾಂಗ್ರೆಸ್ ಸರ್ಕಾರದ ಸಂಪುಟದ ಬಗ್ಗೆ ಲೆಕ್ಕಾಹಾಕಿರಬಹುದೇನೋ. ಇನ್ನು ಸಿದ್ದರಾಮಯ್ಯ ರಿಪಬ್ಲಿಕ್ ಆಫ್ ಬಳ್ಳಾರಿಯನ್ನ ರಾಜಕೀವಾಗಿ ಸದೆಬಡಿದು ಹೆಡಿಮುರಿಕಟ್ಟುತ್ತೇವೆ ಎಂದು ಹೂಂಕರಿಸಿದಾಗ ಬಳ್ಳಾರಿಯ ಮೈದಾನದಲ್ಲಿ ಸೇರಿದ್ದ ಜನಸ್ಥೋಮದ ಜಯಘೋಷ ಮುಗಿಲು ಸೀಳಿತ್ತು. ಅಂದಿನಿಂದ ಜನಾರ್ದನ ರೆಡ್ಡಿ ಎಂಬ ಬಳ್ಳಾರಿಯ ಶೋ ಮ್ಯಾನ್ ರಾಜಕೀಯವಾಗಿ ಅಸ್ಪರ್ಶ್ಯ ರಾಗಿದ್ದರು. ಆದರೆ ರಾಜಕಾರಣ ಎನ್ನುವುದು ಸರಿಯಾದ ಸಮಯದಲ್ಲಿ ಸರಿಯಾದ ಕಡೆ ಇರುವುದು.
ಈಗ ರೆಡ್ಡಿ 12 ವರ್ಷಗಳ ರಾಜಕೀಯ ಅಸ್ಪೃಶ್ಯತೆ ನಿವಾರಿಸಿಕೊಂಡು ಪವಿತ್ರರಾಗೋ ಕಡೆಗೆ ಹೊರಟಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಕಿರುನಗೆ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಹೊಂಗಿರಣ ತರಬಹುದು ಎಂಬ ನಿರೀಕ್ಷೆ ರೆಡ್ಡಿಗಿರಬಹುದು. ಇನ್ನು ಡಿ.ಕೆ.ಶಿವಕುಮಾರ್ ಎಂಬ 24 ಇಂಟು ಸೆವೆನ್ ರಾಜಕಾರಣಿಗೆ ದಾಳ ಉರುಳಿಸೋದು ಗೊತ್ತು, ಕಾಯಿ ಹೊಡೆಯೋದು ಗೊತ್ತು. ಹೀಗಾಗಿ ವಿಧಾನಸಭೆಯೊಳೆಗ ತಮ್ಮ ಪಕ್ಕದ ಕುರ್ಚಿಯಲ್ಲೇ ಕೂರಿಸಿಕೊಂಡು ಮಾತಲ್ಲೇ ರೆಡ್ಡಿಗೆ ಆಪರೇಷನ್ ಮಾಡಿದ್ದಾರೆ. ಅತ್ತ ರೆಡ್ಡಿ ಕೂಡ ಒಳ್ಳೆಯವರಿಗೆ ಒಳ್ಳೆದಾಗುತ್ತೆ ಗೋವಿಂದ, ಕೆಟ್ಟವರಿಗೆ ಕೆಟ್ಟದಾಗುತ್ತೆ ಗೋವಿಂದ ಎಂಬ ತಮ್ಮ ಟ್ರೇಡ್ ಮಾರ್ಕ್ ಮಾತನ್ನೇ ಆಧರಿಸಿ, ಈಗ ಕಾಂಗ್ರೆಸ್ ನತ್ತ ವಾಲಿದ್ದಾರೆ.
ಶಾಸಕ ರಾಜಾ ವೆಂಕಟಪ್ಪ ನಾಯಕ್ ಸಾವು ರಾಜ್ಯ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಾಳಯಕ್ಕೆ ಬೇಕಿರುವ ಅಗತ್ಯ ಸಂಖ್ಯೆಯ ಏರಿಳಿತ ಕಾರಣವಾಗಬಹುದು. ಹೀಗಾಗಿ ಜನಾರ್ದನ ರೆಡ್ಡಿ ಅವರನ್ನ ಸಿಎಂ ಸಿದ್ದರಾಮಯ್ಯ ಮನೆಗೆ ಕರೆದು ಆತಿಥ್ಯ ನೀಡುವ ಮೂಲಕ ತಮ್ಮ ರಾಜಕೀಯದ ಹಳೇ ದುಷ್ಮನ್ ಅನ್ನು ದೋಸ್ತ್ ಮಾಡಿಕೊಂಡಿದ್ದಾರೆ. ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಇಷ್ಟಕ್ಕೆ ಸುಮ್ಮನಾಗಿದೇ ರಾಜ್ಯಸಭಾ ಚುನಾವಣೆಯಲ್ಲಿ ರೆಡ್ಡಿಯ ಕೆಆರ್ ಪಿ ಪಿ ಪಕ್ಷದ ಏಜೆಂಟ್ ಆಗಿ ತಮ್ಮ ಆಪ್ತ ಯೋಗಿಂದ್ರರನ್ನ ನೇಮಿಸಿದ್ದಾರೆ. ಈ ಮೂಲಕ ರೆಡ್ಡಿ ಕೈ ಕೊಡದಂತೆ ಚೆಕ್ ಇಟ್ಟಿದ್ದಾರೆ. ಇಷ್ಟೆಲ್ಲಾ ಆದರೂ ರೆಡ್ಡಿಗಾರು ಮಾತ್ರ ಇನ್ನೂ ಯಾವುದೇ ತೀರ್ಮಾನವಾಗಿಲ್ಲ ಅಂತಿದ್ದಾರೆ.
ಇನ್ನು ಈ ಎಲ್ಲಾ ಬೆಳವಣಿಗೆಯಿಂದ ಬಿಜೆಪಿ ನಾಯಕರೇ ಗೊಂದಲದಲ್ಲಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಮಂಡ್ಯದ ಕೆರೆಗೋಡು ಹನುಮಧ್ವಜ ವಿವಾದದ ವೇಳೆ, ಗ್ರಾಮಕ್ಕೆ ತೆರಳಿ ಏನಾದರೂ ಕೂಡ ದೇಶಕ್ಕೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು. ಅವರಬಿಟ್ರೆ ಬೇರೆಯಾರು ಕೂಡ ಇಲ್ಲ ಎನ್ನುವ ಮಾತುಗಳನ್ನಾಡಿದ್ದರು. ಅಲ್ಲದೇ ಬಿಜೆಪಿ ಜೊತೆ ಮೈತ್ರಿಗೆ ಸಿದ್ಧ ಎಂದು ಬಹಿರಂಗವಾಗಿಯೇ ಘೋಷಣೆ ಮಾಡಿದ್ದರು. ಆದ್ರೆ, ಈಗ ರೆಡ್ಡಿ ನಡೆ ಬದಲಾಗಿದೆ. ವಿಧಾನಸೌಧದ ಮೆಟ್ಟಿಲೇರುತ್ತಿದ್ದಂತೆ ಕೆಆರ್ ಪಿಪಿ ತಂದೆ ತಾಯಿ, ಸಿದ್ದರಾಮಯ್ಯ ನನ್ನ ಬಂದು ಬಳಗ, ಗ್ರ್ಯಾಂಟು ವೊಂದಿದ್ದರೆ ಸಾಕು, ಅದುವೆ ನನಗೆ ಶ್ರೀರಕ್ಷೆಯೂ ಎಂದು ಹೊಸ ಪುಣ್ಯಕೋಟಿ ಹಾಡು ಹಾಡ್ತಿದ್ದಾರಲ್ಲ ಎನ್ನುವುದು ಬಿಜೆಪಿಗರ ಮಾತು.
ಅಂದು ರಣರಂಪ ಮಾಡಿ, ರಾಜಕೀಯದ ಎಲ್ಲಾ ಎಲ್ಲೆ ಮೀರಿ, ಹೋರಾಡಿ, ಅಧಿಕಾರಕ್ಕೇರಿ ನೈತಿಕ ರಾಜಕಾರಣದ ಲಾಂಛನವೆಂಬಂತೆ ವರ್ತಿಸಿದ್ದ ರಾಜಕಾರಣಿಗಳು ಕಾಲ ಬದಲಾಗುತ್ತಿದ್ದಂತೆ ಮಿತ್ರರು ಹಾಗೂ ಶತ್ರುಗಳನ್ನ ತಮ್ಮಿಷ್ಟದಂತೆ ಬದಲಾಯಿಸುವುದು ನೋಡಿದ ಮೇಲೆ ಯಾರು ಮೂರ್ಖರು ಎಂಬುದನ್ನ ಮತದಾರರಾದ ನೀವೇ ಒಮ್ಮೆ ಊಹಿಸಿಕೊಳ್ಳಿ.
ಈ ಎಲ್ಲಾ ಬೆಳವಣಿಗೆ ನೋಡಿದ ಮೇಲೆ ನರಿ ಎಷ್ಟೇ ಕಚ್ಚಾಡಿದರೂ ಯಾವತ್ತು ಒಂದು ನರಿ ಇನ್ನೊಂದು ನರಿ ತಿನ್ನೋಲ್ಲ ಎಂಬ ಖ್ಯಾತ ಪತ್ರಕರ್ತರ ಮಾತುಗಳು ನೆನಪಾಗುತ್ತಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:16 pm, Mon, 26 February 24