ಸರ್ಕಾರ ಕೆಡವುದರಲ್ಲಿ ಬಿಜೆಪಿಯವರು ಅನುಭವಿಗಳು, 5 ಸಾವಿರ ಕೋಟಿಗೆ 500 ಶಾಸಕರ ಖರೀದಿ: ಸಂತೋಷ್ ಲಾಡ್ ಆರೋಪ
ಸಚಿವರು, ಶಾಸಕರ ನಡುವೆ ಹೊಂದಾಣಿಕೆಯ ಕೊರತೆ, ಅಸಮಾಧಾನ ಇತ್ಯಾದಿಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸಂತೋಷ್ ಲಾಡ್, ಸರ್ಕಾರವನ್ನು ಕೆಡವುವಲ್ಲಿ ಬಿಜೆಪಿಯವರು ಅನುಭವಿಗಳು ಎಂದಿದ್ದಾರೆ.
ಮಂಗಳೂರು, ನ.20: ಸಚಿವರು, ಶಾಸಕರ ನಡುವೆ ಹೊಂದಾಣಿಕೆಯ ಕೊರತೆ, ಅಸಮಾಧಾನ ಇತ್ಯಾದಿಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸಂತೋಷ್ ಲಾಡ್ (Santosh Lad), ಸರ್ಕಾರವನ್ನು ಕೆಡವುವಲ್ಲಿ ಬಿಜೆಪಿಯವರು ಅನುಭವಿಗಳು ಎಂದಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ಬೀಳುತ್ತದೆ ಎಂಬಂತಹ ಹೇಳಿಕೆ ನೀಡುವುದು ಬಿಜೆಪಿಯವರ ಅಭ್ಯಾಸ. ಅವರಿಗೆ ತಮ್ಮ ವಿರುದ್ಧವಾಗಿ ಪ್ರಜಾಸತ್ತಾತ್ಮಕವಾಗಿ ಪಕ್ಷವೊಂದು ಅಧಿಕಾರಕ್ಕೆ ಬರಬಾರದು. ಆ ಸರ್ಕಾರವನ್ನು ಕೆಡವುವಲ್ಲಿ ಅವರು ಅನುಭವಿಗಳು. ಇಲ್ಲಿವರೆಗೆ ಒಂಬತ್ತು ರಾಜ್ಯಗಳನ್ನು ಬೀಳಿಸಿದ್ದಾರೆ. 5 ಸಾವಿರ ಕೋಟಿ ಖರ್ಚು ಮಾಡಿ ಈವರೆಗೆ 500 ಶಾಸಕರನ್ನು ಖರೀದಿ ಮಾಡಿದ್ದಾರೆ. ಈ ರೀತಿಯ ವ್ಯವಹಾರ ಮಾಡಿ ಅವರಿಗೆ ಅಭ್ಯಾಸವಿದೆ. ಈ ಭರವಸೆ ಮೇಲೆ ಬಿಜೆಪಿಯವರಿದ್ದಾರೆ ಎಂದರು.
ಕಳೆದ ಬಾರಿ 16 ಶಾಸಕರನ್ನು ಹೇಗೆ ಕರೆದುಕೊಂಡರು? ಅವರಿಗೆ ರೊಕ್ಕ ನೀಡಿ ಸರ್ಕಾರ ಬೀಳಿಸಿ ಅವರನ್ನು ಮಂತ್ರಿ ಮಾಡಿದರು. ಈ ಟ್ಯಾಲೆಂಟ್, ದುಡ್ಡು ಮೇಲೆ ಅವರಿಗೆ ನಂಬಿಕೆಯಿದೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರುವ ಅನುಭವ ಬಿಜೆಪಿಯವರಿಗಿದೆ. 136 ಶಾಸಕರು ಆಯ್ಕೆಯಾಗಿರುವ ಪಾರ್ಟಿಯ ಸರ್ಕಾರವನ್ನು ಬೀಳಿಸುತ್ತೇವೆ ಅಂತಿದ್ದಾರೆ. ಆರು ತಿಂಗಳಿಂದ ಇದನ್ನು ನಾವು ಕೇಳುತ್ತಿದ್ದೇವೆ. ಇದು ಬಿಟ್ಟು ಅವರಿಗೆ ಬೇರೇನೂ ಗೊತ್ತಿಲ್ವ ಎಂದು ಕೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಪೋಸ್ಟರ್ ವಾರ್ ಆರಂಭಿಸಿದ ಚಿಕ್ಕಮಗಳೂರು ಬಿಜೆಪಿ ಕಾರ್ಯಕರ್ತರು
ಇದು ಬಿಟ್ಟು ಮೋದಿಯವರ 10 ವರ್ಷದ ರಿಪೋರ್ಟ್ ಕೇಳಲಿ. ಶ್ರೀರಾಮುಲು, ಅಶೋಕ್ ಸಾಹೇಬ್ರು ಈ ಬಗ್ಗೆ ಮಾತನಾಡಲಿ. ಇದರ ಬಗ್ಗೆ ಚರ್ಚೆಯಾಗಲಿ ಎಂಬುದು ನಮ್ಮ ಉದ್ದೇಶ. 2024 ನೇ ಲೋಕಸಭಾ ಚುನಾವಣೆಯಲ್ಲಿ ಮೋದಿ ಸಾಹೇಬ್ರು ಮನೆಗೆ ಹೋಗುತ್ತಾರೆ. ಈಗ 16 ರಾಜ್ಯಗಳಲ್ಲಿ ಅವರು ಅಧಿಕಾರದಲ್ಲಿಲ್ಲ. ದಕ್ಷಿಣ ಭಾರತದ ಯಾವುದೇ ರಾಜ್ಯದಲ್ಲಿ ಅಧಿಕಾರದಲ್ಲಿಲ್ಲ ಎಂದರು.
ಮೋದಿ ವಿರುದ್ಧ ನಮಗೆ ವೈಯಕ್ತಿಕ ಯಾವುದೇ ಅಜೆಂಡಾ ಇಲ್ಲ. ಅವರಲ್ಲಿ ಕ್ಯಾಬಿನೆಟ್ ರಿವ್ಯೂ ಮೀಟಿಂಗ್ ಏನಾದರೂ ಆಗಿದೆಯಾ? ಏನು ನಡೆದಿದೆ ಎಂದು ಯಾರಾದರೂ ಮಾತನಾಡಿದ್ದಾರಾ? ವನ್ ಮ್ಯಾನ್ ಶೋ ನಡೆಯುತ್ತಿದೆ. ಗ್ರಾಮ ಪಂಚಾಯತಿಯಲ್ಲಿ ನೀರು ಬಂದರೆ ಮೋದಿ ಬಿಟ್ಟಂಗೆ. ಗ್ರಾಮ ಪಂಚಾಯತಿಯಲ್ಲಿ ನೀರು ಬಂದಿಲ್ಲ ಅಂದರೆ ಗ್ರಾಮ ಪಂಚಾಯತ್ ಸದಸ್ಯನ ತಪ್ಪು. ಈ ರೀತಿ ಬಿಂಬಿಸುವುದು ಆಗುತ್ತಿದೆ ಎಂದರು.
ಆಪ್ತರ ಜೊತೆ ಸಚಿವ ಸತೀಶ್ ಜಾರಕಿಹೊಳಿ ದುಬೈ ಪ್ರವಾಸ ಕೈಗೊಂಡಿರುವ ವಿಚಾರವಾಗಿ ಮಾತನಾಡಿದ ಸಂತೋಷ್ ಲಾಡ್, ದುಬೈಗೆ ಹೋಗಿರುವುದರಲ್ಲಿ ತಪ್ಪೇನಿದೆ? ವಿರಾಮಕ್ಕಾಗಿ ಹೋಗಿರಬಹುದು. ಶಿಸ್ತಿನ ರಾಜಕಾರಣಿಗಳಲ್ಲಿ ಸತೀಶ್ ಜಾರಕಿಹೊಳಿ ಒಬ್ಬರು. ಏನೇ ಮಾಡಿದರು ಬಹಳ ಅರ್ಥಪೂರ್ಣವಾಗಿ ಮಾಡುತ್ತಾರೆ. ಯಾವುದೇ ಸಂಶಯ ಬೇಡ. ಸತೀಶ್ ಜಾರಕಿಹೊಳಿ ನಿಜವಾದ ಕಾಂಗ್ರೇಸಿಗ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ