ಕೋವಿಡ್​ ಸಂದರ್ಭದಲ್ಲಿ ಹಗರಣ ಆರೋಪ, ಸಾಬೀತಾದ್ರೆ ನನ್ನನ್ನು ಪಬ್ಲಿಕ್​ನಲ್ಲಿ ನೇಣು ಹಾಕಿ- ಸಚಿವ ಸುಧಾಕರ್​

| Updated By: ಗಂಗಾಧರ​ ಬ. ಸಾಬೋಜಿ

Updated on: Jan 25, 2023 | 3:57 PM

ಕೋವಿಡ್​ ಸಂದರ್ಭದಲ್ಲಿ ಏನಾದರೂ ಹಗರಣ ಮಾಡಿರುವುದು ಸಾಬೀತಾದರೆ ನನ್ನನ್ನು ಪಬ್ಲಿಕ್​ನಲ್ಲಿ ನೇಣು ಹಾಕಿ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಖಡಕ್​ ಆಗಿ ಹೇಳಿದರು.

ಕೋವಿಡ್​ ಸಂದರ್ಭದಲ್ಲಿ ಹಗರಣ ಆರೋಪ, ಸಾಬೀತಾದ್ರೆ ನನ್ನನ್ನು ಪಬ್ಲಿಕ್​ನಲ್ಲಿ ನೇಣು ಹಾಕಿ- ಸಚಿವ ಸುಧಾಕರ್​
ಆರೋಗ್ಯ ಸಚಿವ ಡಾ.ಕೆ.ಸುಧಾಕರ್
Image Credit source: deccanherald.com
Follow us on

ಕೋಲಾರ: ಕೋವಿಡ್​ (COVID-19) ಸಂದರ್ಭದಲ್ಲಿ ಏನಾದರೂ ಹಗರಣ ಮಾಡಿರುವುದು ಸಾಬೀತಾದರೆ ನನ್ನನ್ನು ಪಬ್ಲಿಕ್​ನಲ್ಲಿ ನೇಣು ಹಾಕಿ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (Sudhakar) ಖಡಕ್​ ಆಗಿ ಹೇಳಿದರು. ಮಾಜಿ ಸಿಎಂ ಸಿದ್ದರಾಮಯ್ಯ (siddaraaiah) ಆರೋಪಕ್ಕೆ ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಸಿದ್ದರಾಮಯ್ಯ ಅವರಿಗೆ ನನ್ನ ಬಗ್ಗೆ ಗೊತ್ತಿದೆ, ಹಣಕ್ಕಾಗಿ ನಾವು ಬಿಜೆಪಿ ಹೋಗಿಲ್ಲ ಅನ್ನೋದು. ಜೆಡಿಎಸ್​ ಜೊತೆಗಿನ ಅನೈತಿಕ ಸಂಬಂಧಕ್ಕೆ ಬೇಸತ್ತು ಬಿಜೆಪಿಗೆ ಹೋಗಿದ್ದು. ಈಗ ರಾಜಕೀಯಕ್ಕಾಗಿ ಸಿದ್ದರಾಮಯ್ಯ ಆರೋಪ ಮಾಡ್ತಾರೆ. ಆರೋಗ್ಯ ಇಲಾಖೆಯ ಖರ್ಚು ವೆಚ್ಚದ ಬಗ್ಗೆ ಲೆಕ್ಕ ಕೊಡುತ್ತೇವೆ. ಸಿಎಜಿ ವರದಿ ಏನು ಉಲ್ಲೇಖ ಮಾಡಿದೆ ಅನ್ನೋದನ್ನು ನಾಳೆ ಹೇಳುತ್ತೇನೆ. 2013ರಿಂದ 2018ರವರೆಗೆ 35 ಸಾವಿರ ಕೋಟಿ ಹಣ ವ್ಯತ್ಯಾಸ ಆಗಿದೆ ಎಂದು ಮಾಹಿತಿ ನೀಡಿದರು.

ಕೋವಿಡ್​ ವೇಳೆ 3 ಸಾವಿರ ಕೋಟಿ ಖರ್ಚು ಮಾಡಿಯೇ ಇಲ್ಲ. ಈ ಬಗ್ಗೆ ನಾನು ಶ್ವೇತಪತ್ರದಲ್ಲಿ ಬರೆದುಕೊಡಲು ನಾನು ಸಿದ್ಧ. ಸದನದಲ್ಲಿ ಇದರ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡಲಾಯ್ತು. ಆದರೆ ಸಿದ್ದರಾಮಯ್ಯ ಪಲಾಯನ ಮಾಡಿದರು ಎಂದು ಸಚಿವ ಡಾ.ಕೆ.ಸುಧಾಕರ್​ ಹೇಳಿದರು.

ಇದನ್ನೂ ಓದಿ: ಕೋಲಾರದಲ್ಲಿ ರಾಜಕೀಯ ಮೇಲಾಟ, ಟಗರು ಲೆಕ್ಕಾಚಾರ ಉಲ್ಟಾಪಲ್ಟಾ: ಸಿದ್ದರಾಮಯ್ಯಗೆ ಶುರುವಾಯ್ತು ಮತ್ತೊಂದು ಆತಂಕ

ಸಿದ್ದರಾಮಯ್ಯ ಅವರಿಗೆ ಕೋಲಾರ ಬಹಳ ಕಷ್ಟ

ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಸಿದ್ದು, ಕೋಲಾರ ಅವರಿಗೆ ಬಹಳ ಕಷ್ಟ, ಇಲ್ಲಿ ಕೆಲವು ನಾಯಕರುಗಳು ಸ್ಥಳೀಯವಾಗಿ ಸೋಲುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನ ಅಡ್ಡಿಟ್ಟುಕೊಂಡು ಗೆಲ್ಲಬೇಕೆಂದು ಇಲ್ಲಿ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಖೆಡ್ಡಾ ತೋಡುತ್ತಿದ್ದಾರೆ. ಬಹುಶ ಅವರು ಕೊನೆಗೆ ಇಲ್ಲಿ ಸ್ಪರ್ಧೆ ಮಾಡುವುದಿಲ್ಲ‌. ಬೌಲಿಂಗ್ ಕೋಲಾರದ ಕಡೆ ಹಾಕಿ, ರನ್ ವರಣ ಕಡೆ ಓಡುತ್ತಾರೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯನವರಷ್ಟು ನಾವು ಬುದ್ಧಿವಂತರಲ್ಲ

ಮಾಜಿ ಸಿಎಂ ಸಿದ್ದರಾಮಯ್ಯನವರಷ್ಟು ನಾವು ಬುದ್ಧಿವಂತರಲ್ಲ. ಆದರೆ ಅಷ್ಟೋ ಇಷ್ಟು ವಿದ್ಯಾವಂತರಾಗಿದ್ದೇವೆ. ಸಿಎಜಿ ವರದಿ ಓದಿಲ್ಲ ಎಂದಿದ್ದಕ್ಕೆ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು. ಹಾಗಾದ್ರೆ ರಾಹುಲ್‌ ಗಾಂಧಿ ಹೇಳಿದಂತೆ ಇವರು ಹೇಳ್ತಿದ್ದಾರಾ ಎಂದು ಪ್ರಶ್ನಿಸಿದರು. ಇಡೀ ಜೀವನ ಕಾಂಗ್ರೆಸ್‌ ಪಕ್ಷದವರಿಗೆ ಬೈದುಕೊಂಡು ಬಂದರು. ಈ ಹಿಂದೆ ಜೆಡಿಎಸ್​ನಲ್ಲಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗಿದ್ರೆ ಯಾಕೆ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದರು ಎಂದು ವಾಗ್ದಾಳಿ ಮಾಡಿದರು.

ನನ್ನ ಕ್ಷೇತ್ರದ ಜನರ ಮೇಲೆ ನಂಬಿಕೆ ಇಟ್ಟಿದ್ದೇನೆ

ಇನ್ನು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಳ್ಳೇ ಅಭ್ಯರ್ಥಿ ಹಾಕಿ ಸುಧಾಕರ್ ಸೋಲಿಸ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ನಾನು ಒಳ್ಳೆಯ ಬ್ಯಾಟ್ಸ್​​ಮನ್​. ಕ್ರಿಕೆಟ್​ನಲ್ಲಿ ಬ್ಯಾಟ್ಸ್​​ಮನ್​ ಯಾರು, ಬೌಲರ್​ ಯಾರು ಅಂತಾ ನೋಡಲ್ಲ. ಚೆಂಡಿನ ಗುಣಮಟ್ಟ ನೋಡಿ ಹೊಡೆಯುತ್ತಾರೆ. ನಾನೇನು ಸಣ್ಣ ಮಗು ಅಲ್ಲ, ಹೇಗೆ ಬೌಲಿಂಗ್ ಎದುರಿಸಬೇಕೆಂದು ಗೊತ್ತಿದೆ. ಮೂರು ಬಾರಿ ಗೆದ್ದಿದ್ದೇನೆ, ನನ್ನ ಕ್ಷೇತ್ರದ ಜನರ ಮೇಲೆ ನಂಬಿಕೆ ಇಟ್ಟಿದ್ದೇನೆ. ನಮ್ಮ ಮೇಲೆ ಸಿದ್ದರಾಮಯ್ಯಗೆ ಸ್ವಲ್ಪ ಪ್ರೀತಿ ಇತ್ತು ಎಂದುಕೊಂಡಿದ್ದೆ ಎಂದು ತಿರುಗೇಟು ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:49 pm, Wed, 25 January 23