ಬೆಂಗಳೂರು: ‘ನೆಹರು, ಗಾಂಧಿ ಕುಟುಂಬದ ಹೆಸರು ಹೇಳಿಕೊಂಡು ಮೂರ್ನಾಲ್ಕು ತಲೆಮಾರುಗಳಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದೇವೆ ಎನ್ನುವ ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ ಕುಮಾರ್ (Ramesh Kumar( ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಭಾರತದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಇದ್ದ 60 ವರ್ಷಗಳಲ್ಲಿ ಎಷ್ಟೆಲ್ಲಾ ಲೂಟಿ ನಡೆದಿದೆ ಎನ್ನುವುದಕ್ಕೆ ರಮೇಶ್ ಕುಮಾರ್ ಅವರ ಹೇಳಿಕೆಯೇ ಸಾಕ್ಷಿ ಎಂದು ಕಂದಾಯ ಸಚಿವ ಆರ್.ಅಶೋಕ್ (R Ashok) ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಮೇಶ್ ಕುಮಾರ್ ಸತ್ಯವನ್ನೇ ಹೇಳಿದ್ದಾರೆ. ಸೋನಿಯಾ ವಿಚಾರಣೆಗೆ ಪೂರಕ ದಾಖಲೆಯನ್ನು ತಮ್ಮ ಹೇಳಿಕೆಯ ಮೂಲಕ ಅವರೇ ಕೊಟ್ಟಿದ್ದಾರೆ ಎಂದರು. ಈ ಮೊದಲು ನಮ್ಮ ಸರ್ಕಾರದ ಮೇಲೆ 40 ಪರ್ಸೆಂಟ್ ಆರೋಪ ಮಾಡಿದ್ದ ನಾಯಕರು ಈಗ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಈ ಹೇಳಿಕೆಯ ಮೂಲಕ ಕಾಂಗ್ರೆಸ್ನ ಮಾನ-ಮರ್ಯಾದೆ ಬೀದಿಗೆ ಬಂದಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಅಧಿಕಾರ ಕಾಂಗ್ರೆಸ್ಗೆ ಇಲ್ಲ. ರಮೇಶ್ ಕುಮಾರ್ ಓಪನ್ ಆಗಿಯೇ ಎಲ್ಲವನ್ನೂ ಹೇಳಿದ್ದಾರೆ. ಈಗ ಡಿಬೇಟ್ ಆಗಬೇಕಾಗಿರೋದು ಡಿ.ಕೆ.ಶಿವಕುಮಾರ್ ಹಾಗೂ ರಮೇಶ್ ಕುಮಾರ್ ಮಧ್ಯೆ ಎಂದು ಅವರು ವ್ಯಂಗ್ಯವಾಡಿದರು. ಅವರ ಪಾರ್ಟಿಯಲ್ಲೇ ಬೆಂಕಿ ಹೊತ್ತಿ ಉರಿಯುತ್ತಿದೆ. ಅವರ ಪಾರ್ಟಿಯ ಹೊಡೆದಾಟ ಫೈನಲೈಸ್ ಮಾಡಿಕೊಳ್ಳಲಿ. ರಮೇಶ್ ಕುಮಾರ್ ಹೇಳಿರೋದು ಸತ್ಯ ಅಂತ ಒಪ್ಪಿಕೊಂಡು ಡಿ.ಕೆ.ಶಿವಕುಮಾರ್ ಬರಲಿ. ಆಗ ಬಿಜೆಪಿ ಡಿಬೇಟ್ ಮಾಡಲು ಸಿದ್ಧವಾಗಿದೆ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಆಡಳಿತದ 60 ವರ್ಷದ ನಿಜಬಣ್ಣವನ್ನು ರಮೇಶ್ ಕುಮಾರ್ ಹೊರಹಾಕಿದ್ದಾರೆ. ರಮೇಶ್ ಕುಮಾರ್ ಯಾವಾಗಲೂ ಸತ್ಯವನ್ನೇ ಹೇಳುತ್ತಾರೆ. ಮೂರ್ನಾಲ್ಕು ತಲೆಮಾರುಗಳಿಗೆ ಆಗುವಷ್ಟು ಆಸ್ತಿ ಮಾಡಿದ್ದಾರೆ. ಅವರ ಹೇಳಿಕೆಯ ಪ್ರಕಾರ ಮೂರ್ನಾಲ್ಕು ತಲೆಮಾರು ಎಂದು ಲೆಕ್ಕ ಹಾಕಿದರೆ ಅವರು ಶೇ 160ರಷ್ಟು ಕಮಿಷನ್ ಹೊಡೆದಿರುವುದು ಅರ್ಥವಾಗುತ್ತದೆ ಎಂದು ಹೇಳಿದರು.
ರಮೇಶ್ ಕುಮಾರ್ ಕಥೆಗಳು ನಿಮಗೆ ಗೊತ್ತಿಲ್ಲ: ಸುಧಾಕರ್
ಕಾಂಗ್ರೆಸ್ ನಾಯಕರು ಮಾಡಿಕೊಂಡಿರುವ ಆಸ್ತಿಯ ಬಗ್ಗೆ ರಮೇಶ್ ಕುಮಾರ್ ಸತ್ಯವನ್ನೇ ಹೇಳಿದ್ದಾರೆ. ಅವರು ಹೇಳಿರುವುದು ಸತ್ಯ, ಅವರು ಸತ್ಯವನ್ನೇ ಹೇಳುತ್ತಾರೆ ಎಂದು ಕೋಲಾರದಲ್ಲಿ ಎಲ್ಲರಿಗೂ ಗೊತ್ತು ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಹೇಳಿದರು. ರಮೇಶ್ ಕುಮಾರ್ ಅವರ ಹಿಂದಿನ ಕಥೆಗಳು ನಿಮಗೆ ಗೊತ್ತಿಲ್ಲ. ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ರಮೇಶ್ ಬಗ್ಗೆ ದ್ವಾರಕನಾಥ್ ‘ಮಾಯಲ ಮರಾಠಿ’ ರಮೇಶ್ ಕುಮಾರ್ ಎಂದು ಬರೆದಿದ್ದರು. ‘ಮಾಯಲ ಮರಾಠಿ’ ಎಂದರೆ ಮಂತ್ರವಾದಿ ಎಂದು ಅರ್ಥ. ರಮೇಶ್ ಕುಮಾರ್ ಅವರ ಬಗ್ಗೆ ಸಾಕಷ್ಟು ಕಥೆಗಳಿವೆ ಬಿಡಿ ಎಂದು ವ್ಯಂಗ್ಯವಾಡಿದರು.
ಈ ದೇಶದಲ್ಲಿ ಭ್ರಷ್ಟಾಚಾರ ಹುಟ್ಟುಹಾಕಿದ್ದೇ ಕಾಂಗ್ರೆಸ್ನವರು. ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ಗೆ ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ ವಿಚಾರಣೆ ಎದುರಿಸದೇ ಇಂದು ಪ್ರತಿಭಟನೆ ಮಾಡುತ್ತಿದೆ ಎಂದು ಹೇಳಿದರು. ರಮೇಶ್ ಕುಮಾರ್ ಈಹಿಂದೆ ಎಂತೆಂಥ ನಾಟಕಗಳನ್ನು ಆಡಿದ್ದರು ಎಂದು ನಾನು ಹಿಂದೆಯೇ ವಿವರಿಸಿದ್ದೇನೆ. ದೇಶದಲ್ಲಿ ಯಾವುದೇ ಸ್ಪೀಕರ್ ಮಾಡದಂಥ ಕೆಲಸ ರಮೇಶ್ ಕುಮಾರ್ ಮಾಡಿದ್ದರು ಎಂದು ಟೀಕಿಸಿದರು.
❌ We have looted enough wealth for 3-4 generations, let’s repay our debt to family.
❌ ED should have come to Sonia Gandhi’s place.
❌ Youth Congress sets car on fire in the name of protest.
Congress loyalty to nation or family❓
Is Cong President above law & Constitution❓ pic.twitter.com/EttjzM1AmE
— Dr Sudhakar K (@mla_sudhakar) July 21, 2022
ಸತ್ಯ ಒಪ್ಪಿಕೊಂಡಂತೆ ಆಯ್ತು: ಶಿವರಾಮ್ ಹೆಬ್ಬಾರ್
ರಮೇಶ್ ಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಶಿವರಾಂ ಹೆಬ್ಬಾರ್, ನನ್ನಷ್ಟು ಬುದ್ಧಿವಂತರು ಬೇರೆ ಯಾರೂ ಇಲ್ಲ ಅಂದುಕೊಂಡಿದ್ದಾರೆ. ಇಂಥ ಹೇಳಿಕೆ ನೀಡುವ ಮೂಲಕ ಆಸ್ತಿ ಮಾಡಿಕೊಂಡಿರುವುದು ಸತ್ಯ ಎಂದು ಅವರೇ ಒಪ್ಪಿಕೊಂಡಂತಾಯ್ತು. ಕಾಂಗ್ರೆಸ್ನ 3ನೇ ತಲೆಮಾರಿನ ನಾಯಕರಿಂದಲೇ ಇಂತಹ ಹೇಳಿಕೆ ಬಂದಿರುವುದರಿಂದ ಅದನ್ನು ನಂಬಲೇ ಬೇಕಾಗುತ್ತದೆ ಎಂದರು.