Ramesh Kumar: ಗಾಂಧಿ ಕುಟುಂಬದ ಹೆಸರು ಹೇಳಿಕೊಂಡು ತಲೆಮಾರುಗಳಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದೇವೆ: ರಮೇಶ್ ಕುಮಾರ್
ನಾನು ಏನು ಆಡಿದ್ದೇನೆಯೋ ಅದಕ್ಕೆ ಬದ್ಧನಾಗಿದ್ದೇನೆ. ನನ್ನ ಹೇಳಿಕೆಗಳು ಸದಾ ನೇರವಾಗಿರುತ್ತವೆ. ಯಾರಿಗೂ ಹೆದರುವುದಿಲ್ಲ ಎಂದು ರಮೇಶ್ ಕುಮಾರ್ ಸ್ಪಷ್ಟಪಡಿಸಿದರು.
ಬೆಂಗಳೂರು: ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ (KR Ramesh Kumar) ಅವರು ನೀಡಿರುವ ಹೇಳಿಕೆಯೊಂದು ದೇಶವ್ಯಾಪಿ ಸುದ್ದಿಯಾಗಿ ಕಾಂಗ್ರೆಸ್ ಪಕ್ಷಕ್ಕೆ (Congress Party) ಮುಜುಗರ ತಂದಿದೆ. ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಆಸ್ತಿಗಳಿಕೆ ಬಗ್ಗೆ ನೀಡಿರುವ ಹೇಳಿಕೆಯು ಬಿಜೆಪಿಯ ಕೈಗೆ ಅಸ್ತ್ರ ಒದಗಿಸಿದಂತೆ ಮಾಡಿದೆ. ಸಹಜವಾಗಿಯೇ ಬಿಜೆಪಿಯ ನಾಯಕರು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಲು ರಮೇಶ್ ಕುಮಾರ್ ಹೇಳಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ವಿಧಾನಸಭೆಯಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಕೀಳಾಗಿ ಮಾತನಾಡಿ ಕಾಂಗ್ರೆಸ್ ನಾಯಕರಿಂದ ಕ್ಷಮೆ ಕೇಳುವಂತೆ ಸೂಚನೆ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ನಾಯಕಿ, ಎಐಸಿಸಿ ಹಂಗಾಮಿ ಅಧ್ಯಕ್ಷ ಸೋನಿಯಾ ಗಾಂಧಿ ವಿರುದ್ಧ ನಡೆಸುತ್ತಿರುವ ವಿಚಾರಣೆ ವಿರೋಧಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಮೇಶ್ ಕುಮಾರ್, ‘ನಾವು ನೆಹರು, ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಹೆಸರು ಹೇಳಿಕೊಂಡು ಮೂರ್ನಾಲ್ಕು ತಲೆಮಾರುಗಳಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದೇವೆ. ಈಗ ಅವರಿಗಾಗಿ ನಾವು ಒಂದಿಷ್ಟು ತ್ಯಾಗಗಳನ್ನು ಮಾಡಬೇಕಿದೆ’ ಎಂದು ಹೇಳಿದರು.
‘ಸೋನಿಯಾಗಾಂಧಿ ಅವರು ಇದೀಗ ಕಷ್ಟಕಾಲದಲ್ಲಿದ್ದಾರೆ. ಅವರು ತಮ್ಮ ಅತ್ತೆ ಮತ್ತು ಗಂಡನನ್ನು ಕಳೆದುಕೊಂಡವರು. ನಾವು ಅವರ ಪರವಾಗಿ ದೃಢವಾಗಿ ನಿಲ್ಲಬೇಕಿದೆ. ಕಳೆದ 60ಕ್ಕೂ ಹೆಚ್ಚು ವರ್ಷಗಳಿಂದ ನೆಹರು, ಇಂದಿರಾ ಮತ್ತು ಸೋನಿಯಾ ಅವರ ಹೆಸರು ಹೇಳಿಕೊಂಡು ಮೂರ್ನಾಲ್ಕು ತಲೆಮಾರುಗಳಿಗೆ ಆಗುವಷ್ಟು ಆಸ್ತಿ ಸಂಪಾದಿಸಿದ್ದೇವೆ. ನಾವು ಈಗ ಸೋನಿಯಾ ಪರವಾಗಿ ನಿಲ್ಲದಿದ್ದರೆ ನಮ್ಮ ತಟ್ಟೆಗಳಲ್ಲಿ ಹುಳುಗಳು ಬೀಳುತ್ತವೆ’ ಎಂದು ರಮೇಶ್ ಕುಮಾರ್ ಹೇಳಿದರು.
ಆಸ್ತಿ ಕುರಿತ ರಮೇಶ್ಕುಮಾರ್ ಅವರ ಮಾತು ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಹೇಳಿಕೆ ಹಿಂಪಡೆಯುವಂತೆ ಕಾರ್ಯಕರ್ತರು ಮನವಿ ಮಾಡಿದರು. ಆದರೆ ಈ ಮನವಿ ತಳ್ಳಿ ಹಾಕಿದ ರಮೇಶ್ ಕುಮಾರ್, ‘ನಾನು ಏನು ಆಡಿದ್ದೇನೆಯೋ ಅದಕ್ಕೆ ಬದ್ಧನಾಗಿದ್ದೇನೆ. ನನ್ನ ಹೇಳಿಕೆಗಳು ಸದಾ ನೇರವಾಗಿರುತ್ತವೆ. ಯಾರಿಗೂ ಹೆದರುವುದಿಲ್ಲ. ಗಾಂಧಿ ಕುಟುಂಬದಿಂದ ನಮಗೆ ಲಾಭವಾಗಿದೆ. ಈಗ ನಾವು ಗಾಂಧಿ ಕುಟುಂಬದ ಪರವಾಗಿ ನಿಲ್ಲಬೇಕು’ ಎಂದು ತಮ್ಮ ನಿಲುವನ್ನು ಪುನರುಚ್ಚರಿಸಿದರು.
ಇದಕ್ಕೂ ಮೊದಲು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ಕಾರ್ಯಕರ್ತರು ಬೃಹತ್ ಜಾಥಾ ನಡೆಸಿದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕಾನೂನಿನ ಎದುರು ಎಲ್ಲರೂ ಸಮಾನರು. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಲೇಬೇಕು. ಆದರೆ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ವಿರೋಧ ಪಕ್ಷಗಳ ನಾಯಕರಿಗೆ ಕಿರುಕುಳ ಕೊಡುತ್ತಿದೆ ಎಂದು ಆರೋಪಿಸಿದರು.
ಹೇಳಿಕೆ ಸಮರ್ಥಿಸಿಕೊಂಡ ರಮೇಶ್ ಕುಮಾರ್
ಎರಡು ಮೂರು ತಲೆಮಾರಿಗಾಗುವಷ್ಟು ಮಾಡಿಕೊಂಡಿದ್ದಾರೆ ಎಂಬ ಹೇಳಿಕೆ ದೊಡ್ಡ ವಿವಾದವಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ‘ಕಾಂಗ್ರೆಸ್ ನಲ್ಲಿ ಫಲಾನುಭವಿಗಳು ಸಾಕಷ್ಟು ಜನ ಇದೀವಿ. ಸ್ಥಾನಗಳನ್ನು ಪಡೆದುಕೊಂಡಿದ್ದೇವೆ, ಸಂಪನ್ಮೂಲ ಸಹ ಪಡೆದಿದ್ದೇವೆ’ ಎಂದು ವಿವರಿಸಿದರು. ’ನಾನು ರಾಜಕೀಯ ಹಿನ್ನೆಲೆಯಿಂದ ಬಂದಿರುವ ಕುಟುಂಬದವನಲ್ಲ. ಆದರೂ ನಾನು ಎರಡು ಬಾರಿ ಸ್ಪೀಕರ್ ಆಗಿದ್ದೇನೆ. ಹಾಗಾಗಿ ನಾನು ಋಣ ತೀರಿಸಿಕೊಳ್ಳಿ ಎಂದು ನಿನ್ನೆ ಹೇಳಿದ್ದೇನೆ ಅಷ್ಟೇ. ನೀವು ಇದನ್ನು ಅರ್ಥೈಸಿಕೊಳ್ಳದೆ ಏನೇನೋ ಪ್ರಶ್ನೆ ಕೇಳ್ತೀರಿ’ ಎಂದು ಮಾಧ್ಯಮಗಳ ವಿರುದ್ಧ ಕೆಂಡಮಂಡಲವಾಗಿ ಹರಿಹಾಯ್ದರು.
Published On - 1:02 pm, Fri, 22 July 22