Belagavi News: ಸಚಿವಗಿರಿ ಮಿಸ್, ನನಗೆ ತಾಳ್ಮೆ ದೂರದೃಷ್ಟಿ ಇದೆ ಎಂದ ಶಾಸಕ ಲಕ್ಷ್ಮಣ್ ಸವದಿ
ಬಿಜೆಪಿ ವಿರುದ್ಧ ಸಿಡಿದೆದ್ದು ಕಾಂಗ್ರೆಸ್ ಪಾಳಯ ಸೇರಿ ಸ್ವಾಭಿಮಾನದ ಯುದ್ಧ ಸಾರಿದ್ದ ಲಕ್ಷ್ಮಣ್ ಸವದಿ ಚುನಾವಣೆಯಲ್ಲಿ ಗೆದ್ದು ಬೀಗಿದ್ದರು. ಸಿದ್ದರಾಮಯ್ಯಗೆ ಕೊಟ್ಟ ಮಾತಿನಂತೆ ಅಥಣಿ ಜೊತೆ ಕಾಗವಾಡ ಕುಡಚಿ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ತಂದಿದ್ದ ಲಕ್ಷ್ಮಣ್ ಸವದಿ, ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಲತುಂಬಿದ್ದರು. ಇಷ್ಟಾದರೂ ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಸಚಿವ ಸ್ಥಾನ ಸಿಗದೇ ಇರೋದಕ್ಕೆ ಕಾರಣ ನೀಡಿರುವ ಅವರು ‘ಹೊಸಪುಸ್ತಕದಲ್ಲಿ ಶ್ರೀಕಾರ ಬರೆದಿದ್ದೇನೆ ಎಂದಿದ್ದಾರೆ.
ಬೆಳಗಾವಿ: ಬಿಜೆಪಿ ವಿರುದ್ಧ ಸಿಡಿದೆದ್ದು ಕೈ ಪಾಳಯ ಸೇರಿ ಕಾಂಗ್ರೆಸ್(Congress)ಗೆ ಬಲತುಂಬಿದ್ದ ಲಕ್ಷ್ಮಣ್ ಸವದಿ(Laxman Savadi)ಗೆ ಸಚಿವ ಸ್ಥಾನ ಮಿಸ್ ಆಗಿತ್ತು. ಬಳಿಕ ಅವರ ಅಭಿಮಾನಿಗಳು ಸವದಿಗೆ ಸಚಿವಸ್ಥಾನ ನೀಡಬೇಕಿತ್ತು ಎಂದ ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಣ್ ಸವದಿ ‘ಇನ್ನು ಐದು ವರ್ಷ ಇದೆ, ಇದು ಅಂತ್ಯವಲ್ಲ ಆರಂಭ. ರಾಜಕಾರಣದಲ್ಲಿ ತಾಳ್ಮೆ ಹಾಗೂ ದೂರದೃಷ್ಟಿ ಇರಬೇಕು. ಅವರೆಡು ನನಗಿದೆ ಎಂದು ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು ‘ನನಗೆ ಮಂತ್ರಿ ಸ್ಥಾನ ಕೊಡಬೇಕೆಂದು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕೇಳಿ ಬರುತ್ತೆ. ಆದ್ರೆ, ಹೈಕಮಾಂಡ್‌ಗೂ, ರಾಜ್ಯದ ಮುಖಂಡರಿಗೂ ಅನಿವಾರ್ಯ ಸಂದರ್ಭವಿದು. ಬಹಳಷ್ಟು ಜನ ಕಾಂಗ್ರೆಸ್‌ನಿಂದ ಆಯ್ಕೆಯಾಗಿ ಬಂದಿರುವುದರಿಂದ ಎಲ್ಲರಿಗೂ ಪ್ರಾತಿನಿಧ್ಯ ನೀಡೋದು ಅನಿವಾರ್ಯ ಎಂದಿದ್ದಾರೆ.
ಇನ್ನು ಸಚಿವ ಸ್ಥಾನ ತಪ್ಪಲು ಯಾರಾದರೂ ಕುತಂತ್ರ ನಡೆಸಿದ್ದಾರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಣ್ ಸವದಿ ‘ಅದರ ಬಗ್ಗೆ ಸಂಶಯ, ಊಹಾಪೋಹಗಳಿಗೆ ಹೆಚ್ಚು ಒತ್ತು ಕೊಡೋದು ಸರಿಯಲ್ಲ. ರಾಜಕೀಯ ಧ್ರುವೀಕರಣದಿಂದ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ವೀರಶೈವ ಲಿಂಗಾಯತ ಸಮಾಜ ಕಾಂಗ್ರೆಸ್‌ಗೆ ಒಲವು ತೋರಿಸಿದ್ದಾರೆ. ಬಿಜೆಪಿ ಇಂದು ಬಹಳಷ್ಟು ನಿಷ್ಠಾವಂತ ಕಾರ್ಯಕರ್ತರನ್ನ ಕಳೆದುಕೊಂಡಿದೆ. ಈ ಗೆಲುವಿನಲ್ಲಿ ಅದು ಒಂದು ಪಾಲು ಸೇರಿದೆ ಎಂದಿದ್ದಾರೆ. ಮತ್ತು ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸಂಘಟನೆ ಮಾಡೋದಾಗಿ ತಿಳಿಸಿದರು. ತಾವು ಯಾವುದೇ ಪಕ್ಷದಲ್ಲಿ ಇದ್ದರೂ ಖಾಲಿ ಕೂರುವ ವ್ಯಕ್ತಿ ಅಲ್ಲ. ಬಿಜೆಪಿಯಲ್ಲಿದ್ದಾಗ ಕೊನೆಹಂತದಲ್ಲಿ 48 ಕ್ಷೇತ್ರಗಳಲ್ಲಿ ಸಂಚಾರ ಮಾಡಿ ಸಂಘಟನೆ ಮಾಡಿದ್ದೆ. ಈಗ ಹೊಸ ಪುಸ್ತಕ ತಗೆದುಕೊಂಡು ಹೊಸದಾಗಿ ಶ್ರೀಕಾರ ಬರೆದು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಡಿಕೆ ಶಿವಕುಮಾರ್ ಭೇಟಿಯಾದ ಜಗನ್ ಮೋಹನ್ ರೆಡ್ಡಿ ಸಹೋದರಿ ಶರ್ಮಿಳಾ: ಹಿಂದಿನ ರಾಜಕೀಯ ಮರ್ಮವೇನು?
ಗೋಕಾಕ್ ಸಾಹುಕಾರ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಸವದಿ
ಇನ್ನು ಚುನಾವಣಾ ಫಲಿತಾಂಶ ಬಳಿಕ ರಮೇಶ್ ಜಾರಕಿಹೊಳಿ ಸೈಲೆಂಟ್ ಆಗಿರುವ ವಿಚಾರ ‘ಚುನಾವಣೆಯಲ್ಲಿ ಬಹಳ ಓಡಾಡುತ್ತಿದ್ದರಲ್ಲ, ಈಗೇಕೆ ಸೈಲೆಂಟ್ ಆಗಿದ್ದೀರಿ ಅಂತಾ ಅವರನ್ನೇ ಕೇಳಬೇಕು ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಚುನಾವಣಾ ಫಲಿತಾಂಶ ಬಳಿಕ ಕೆಲವೊಂದಿಷ್ಟು ಬೆಳಗಾವಿ ಜಿಲ್ಲೆಯ ಪರಾಜಿತ ಅಭ್ಯರ್ಥಿಗಳು ಲಕ್ಷ್ಮಣ್ ಸವದಿ ಭೇಟಿಯಾಗುತ್ತಿದ್ದಾರಂತೆ. ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿರುವ ನಾಯಕತ್ವದ ಕೊರತೆಯನ್ನೇ ಲಕ್ಷ್ಮಣ್ ಸವದಿ ಅಸ್ತ್ರವಾಗಿ ಮಾಡಿಕೊಳ್ಳುತ್ತಿದ್ದು, ಇದಕ್ಕೆ ಬಿಜೆಪಿ ನಾಯಕರು ಯಾವ ರೀತಿ ಪ್ರತಿತಂತ್ರ ಹೂಡ್ತಾರೆ ಅನ್ನೂದನ್ನ ಕಾದು ನೋಡಬೇಕು.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:32 am, Wed, 31 May 23