ಕಾರವಾರ, ಜನವರಿ 16: ಕಾಂಗ್ರೆಸ್ (Congress) ನಾಯಕರು ಎಲ್ಲರೂ ನನ್ನ ಮುಂದೆ ಬಂದು ಸಂಸ್ಕೃತಿ ಬಗ್ಗೆ ಚರ್ಚೆ ಮಾಡಲಿ. ಸಭ್ಯತೆ ಅಂದರೇ ಏನು ಅಂತ ನಾನು ಪಾಠ ಮಾಡುತ್ತೇನೆ. ಸಂಸ್ಕೃತಿ ಬಗ್ಗೆ ಸಿದ್ದರಾಮಯ್ಯ (Siddaramaiah) ನನ್ನ ಎದುರು ಬಂದು ಮಾತನಾಡಲಿ. ಏನೂ ಮಾತನಾಡಬೇಕು ಅಂತ ನಾನು ಹೇಳುತ್ತೇನೆ. ಯಾರಿಗೆ ಯಾವ ಭಾಷೆಯಲ್ಲಿ ಹೇಗೆ ಮಾತಾಡಬೇಕು ಹಾಗೆ ಮಾತಾಡಬೇಕು. ಸಭ್ಯತೆ ಅಂದರೇ ಏನು ಎಂಬುವುದನ್ನು ಮೊದಲು ನೀವು ತಿಳಿದುಕೊಳ್ಳಿ ಎಂದು ಉತ್ತರ ಕನ್ನಡ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ (Ananth Kumar Hegde) ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರಿಗೆ ಏಕವಚನದಲ್ಲಿ ಮಾಸ್ ಮರ್ಡರ್ ಎಂದು ಕರೆದರು. ಅವರಿಗೊಂದು ನ್ಯಾಯ ನಮಗೊಂದು ನ್ಯಾಯನಾ..? ಅದೆಲ್ಲ ನಮಗೆ ಗೊತ್ತಿಲ್ಲ ಯಾರಿಗೆ ಹೇಗೆ ಮಾತಾಡಬೇಕು ನಮಗೆ ಗೊತ್ತು. ಇದರ ಎಲ್ಲದರ ಬಗ್ಗೆ ಜನರ ಮುಂದೆ ಚರ್ಚೆ ಮಾಡೋಣ. ಎಲ್ಲೊ ಕೂತುಕೊಂಡು ಸಭೆಯಲ್ಲಿ ಮಾತನಾಡುವುದು ಸರಿ ಅಲ್ಲ ಎಂದರು.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತಾವು (ಅನಂತ ಕುಮಾರ್ ಹೆಗಡೆ) ಏಕವಚನ ಪ್ರಯೋಗ ಮಾಡಿದ ವಿಚಾರವಾಗಿ ಮಾತನಾಡಿ, ನನ್ನ ಹೇಳಿಕೆಯನ್ನ ಖಂಡಿಸುವುದು ಸಹಜ. ಇದು ನನ್ನ ಹೇಳಿಕೆ ಇದು ಪಕ್ಷದ ಹೇಳಿಕೆ ಅಲ್ಲ. ಇದು ನನ್ನ ವೈಯಕ್ತಿಕ ಹೇಳಿಕೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿರುವ ಮಾತು ಸರಿ ಇದೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಪ್ರಧಾನಿ ಮೋದಿಯವರ ಮತ್ತು ನಮ್ಮ ದೇವಸ್ಥಾನಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅಸಭ್ಯವಾಗಿ ಮೊದಲು ಮಾತನಾಡಿದ್ದಾರೆ. ನಮ್ಮ ದೇವಸ್ಥಾನದ ಬಗ್ಗೆ ಅಷ್ಟು ಕೀಳಾಗಿ ಮಾತನಾಡುವುದು ಯಾಕೆ ಬೇಕಿತ್ತು? ನಮ್ಮ ಪ್ರಧಾನಿ ಮೋದಿ, ಅಮಿತ ಶಾ ಬಗ್ಗೆ ಯಾರೆಲ್ಲ ಏನು ಏನು ಮಾತನಾಡಿದ್ದಾರೆ ಹೇಳಬೇಕಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಅನಂತಕುಮಾರ ಹೆಗಡೆಯನ್ನು ಸಮರ್ಥಿಸುವ ಪ್ರಲ್ಹಾದ್ ಜೋಶಿ ಸಹ ಅದೇ ಸಂಸ್ಕೃತಿಯವರು: ಸಿದ್ದರಾಮಯ್ಯ
ಸಲ್ಮಾನ ಖುರ್ಷದ ಕಪ್ಪೆ, ಮಂಗ, ನಪಸುಂಕ ಎಂದು ಕರೆದರು. ಶರದ್ ಪವಾರ ಮೋದಿಯರನ್ನು ಹಿಟ್ಲರ್ ಅಂತಾ ಕರೆದರು. ಕಾಂಗ್ರೆಸ್ ಬಹುತೇಕ ನಾಯಕರು ಇವರನ್ನ ಹಿಟ್ಲರ್ ಅಂತ ಕರೆದರು. ದಿಗ್ವಿಜಯ ಸಿಂಗ್ ಮೋದಿಯವರನ್ನ ರಾವಣ ಅಂತ, ಜಯರಾಂ ರಮೇಶ್ ಭಸ್ಮಾಸೂರ ಅಂತ, ಮಣಿ ಅಯ್ಯರ್ ವಿಷಸರ್ಪ ಅಂತ ಕರೆದರು. ಇದಕ್ಕೆಲ್ಲ ಮಾಧ್ಯಮದ ದಾಖಲೆಗಳು ಇವೆ. ನನ್ನ ಪ್ರಧಾನಿ, ನನ್ನ ದೇಶ ಮತ್ತು ನನ್ನ ಧರ್ಮದ ಬಗ್ಗೆ ಹೇಳಿಕೆ ನೀಡುವಾಗ ಇವರಿಗೆ ಸಭ್ಯತೆ ನೆನಪಾಗುವುದಿಲ್ಲ. ಕಾಂಗ್ರೆಸ್ನವರಿಗೆ, ಸಿದ್ಧರಾಮಯ್ಯ ಅವರಿಗೆ ಇಲ್ಲದ ಸಭ್ಯತೆ ಬಿಜೆಪಿಯವರಿಗೆ ಏಕೆ? ಎಂದು ಪ್ರಶ್ನಿಸಿದರು.
ರಾಮ ಮಂದಿರ ಬಗ್ಗೆ ಎಷ್ಟ ಅವಹೇಳನಕಾರಿಯಾಗಿ ಮಾತಾಡಿದರು. ಹಿಂದೂ ಸಮಾಜದ ಬಗ್ಗೆ ಎಷ್ಟು ಕೀಳಾಗಿ ಮಾತನಾಡಿದರು. ಹಿಂದೂ ಸಮಾಜ ಅಂದರೇ ಬೇವರ್ಸಿ ಸಮಾಜಾನಾ..? ಶೇ20 ರಷ್ಟು ಇರುವ ಜನರ ಮತಕ್ಕಾಗಿ ಎಷ್ಟೊಂದು ಜ್ವಲ್ಲೂ ಸುರಿಸಿ ಮಾತನಾಡುತ್ತಾರೆ. ಶೇ80 ರಿಂದ 85 ರಷ್ಟು ಇರುವ ಹಿಂದೂ ಸಮಾಜದ ಬಗ್ಗೆ ನಿಮಗೆ ಗೌರವ ಯಾಕಿಲ್ಲ? ಏಕವಚನದಲ್ಲಿ ನೀವೂ ಮಾತನಾಡಿದ್ದೂ ಸರಿ ಅನ್ನುವುದಾರೇ, ನಾನು ಮಾತನಾಡಿದ್ದೂ ಕೂಡ ಸರಿ. ಯಾರು ಒಪ್ಪಿಕೊಳ್ಳುತ್ತಾರೆ, ಬಿಡುತ್ತಾರೆ ಗೊತ್ತಿಲ್ಲ. ಆ ದೇವರು ಒಪ್ಪಿಕೊಳ್ಳುತ್ತಾನೆ. ಹಿಂದೂ ಸಮಾಜದ ಜನರು ಒಪ್ಪಿಕೊಳ್ಳುತ್ತಾರೆ ಎಂದರು.
ಸಾಮಾಜಿಕ ಜಾಲತಾಣದಲ್ಲಿನ ಚರ್ಚೆ ನೋಡಲಿ ಯಾರೂ ಏನು ಅಂದ್ರು ಅಂತ ಗೊತ್ತಾಗುತ್ತದೆ. ಸಂಸ್ಕೃತಿ ಬಗ್ಗೆ ಮಾತನಾಡುವವ ಸಿದ್ಧರಾಮಯ್ಯನವರೆ ನನ್ನ ಮುಂದೆ ಬರಲಿ. ಲೈವ್ ಡಿಬೆಟ್ ಮಾಡೋಣ ರಾಜ್ಯದ ಜನರಿಗೆ ಗೊತ್ತಾಗಲಿ ಎಂದು ಸವಾಲ್ ಎಸೆದರು.
ಅನಂತ್ ಕುಮಾರ್ ನಾಲ್ಕುವರೆ ವರ್ಷ ಎಲ್ಲಿದ್ದರು? ಕುಂಭಕರ್ಣ ಎಂಬ ಕಾಂಗ್ರೆಸ್ ಟಿಕೆ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು ಅದಕ್ಕೆಲ್ಲ ನಾನು ಮುಂದಿನ ದಿನಗಳಲ್ಲಿ ಉತ್ತರ ಕೊಡುತ್ತೇನೆ. ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಯಾವುದಕ್ಕೂ ಬಡ್ಡಿ ಇಟ್ಟಿಕೊಳ್ಳುವ ಪ್ರಶ್ನೆ ಇಲ್ಲ ಎಂದು ತಿಳಿಸಿದರು.
ಆರೋಗ್ಯ ಸರಿ ನೋಡಿಕೊಳ್ಳಿ ಎಂಬ ಡಿಕೆ ಶಿವಕುಮಾರ ಹೇಳಿಕೆ ವಿಚಾರವಾಗಿ ಮಾತನಾಡಿ, ನನ್ನ ಆರೋಗ್ಯ ಅತ್ಯಂತ ಚೆನ್ನಾಗಿದೆ. ಆರೋಗ್ಯದಲ್ಲಿ ಯಾವುದೆ ಸಂಶಯ ಇಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ. ಗೆಲ್ಲಿಸುತ್ತೇನೆ. ನನ್ನ ಟಿಕೆಟ್ ಬಗ್ಗೆ ಬೇರೇಯವರಿಗೆ ಯಾಕೆ ಚಿಂತೆ. ನನ್ನ ಟಿಕೆಟ್ ಬಗ್ಗೆ ನನಗೆ ಚಿಂತೆ ಆಗಬೇಕು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:57 am, Tue, 16 January 24