ಬೆಂಗಳೂರು, ಜನವರಿ 17: ಹೈದರಾಬಾದ್ನಲ್ಲಿ ಮೈಸೂರು ಸ್ಯಾಂಡಲ್ (Mysore Sandal Soap) ನಕಲಿ ಸೋಪ್ ತಯಾರಿಕೆ ಘಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾರ್ಖಾನೆ ನಡೆಸುತ್ತಿದ್ದ ರಾಕೇಶ್ ಜೈನ್, ಮಹಾವೀರ್ ಜೈನ್ ಎಂಬುವವರ ಮೇಲೆ ಎಫ್ಐಆರ್ ದಾಖಲಾಗಿದೆ. ಆರೋಪಿತ ಜೈನ್ಗಳಿಬ್ಬರೂ ಕೂಡ ಬಿಜೆಪಿಯ ಸಕ್ರಿಯ ನಾಯಕರು, ಕಾರ್ಯಕರ್ತರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿಯ ರಾಜಾ ಸಿಂಗ್ ಜೊತೆಗೆ ನಿಕಟ ಸಂಪರ್ಕದಲ್ಲಿ ಇದ್ದಾರೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಎಂಬಿ ಪಾಟೀಲ್ ಅವರಿಗೆ ಅನಾಮಿಕನೊಬ್ಬ ಕರೆ ಮಾಡುತ್ತಾನೆ. ಮೈಸೂರು ಸ್ಯಾಂಡಲ್ ನಕಲಿ ಸೋಪ್ ಮಾರಾಟದ ಬಗ್ಗೆ ಮಾಹಿತಿ ನೀಡುತ್ತಾನೆ. ಎಂ.ಬಿ ಪಾಟೀಲ್ ಅವರು ಇಲ್ಲಿನ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟದ ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ನೀಡುತ್ತಾರೆ. ನಂತರ ನಮ್ಮ ಅಧಿಕಾರಿಗಳು ನಕಲಿ ಸೋಪ್ ತಯಾರಿಕೆ ಮತ್ತು ಮಾರಾಟ ಜಾಲ ಪತ್ತೆ ಹಚ್ಚಲು ಮುಂದಾದರು ಎಂದು ತಿಳಿಸಿದರು.
ಬಳಿಕ ನಮ್ಮ ಅಧಿಕಾರಿಗಳು ಹೈದರಾಬಾದ್ಗೆ ತೆರಳಿ 25 ಲಕ್ಷ ರೂ. ಆರ್ಡರ್ ಇದೆ ಅಂತ ಹೇಳುತ್ತಾರೆ. ಬಹಳ ದೊಡ್ಡ ಆರ್ಡರ್ ಇರುವುದರಿಂದ ಕಾರ್ಖಾನೆಗೆ ಬರುತ್ತೇವೆ ಎಂದು ನಮ್ಮ ಅಧಿಕಾರಿಗಳು ಹೇಳುತ್ತಾರೆ. ಬಹಳ ಸೂಕ್ಷ್ಮವಾಗಿ ಈ ಕಾರ್ಯಾಚರಣೆ ನಡೆಯುತ್ತದೆ. ನಕಲಿ ಎಂದು ಖಚಿತವಾದ ಮೇಲೆ, ನಮ್ಮ ಅಧಿಕಾರಿಗಳು ಕಾರ್ಖಾನೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ನಕಲಿ ಸೋಪ್ ಮತ್ತು ಕವರ್ಗಳು ಪತ್ತೆಯಾಗಿವೆ ಎಂದರು.
ಪ್ರಕರಣ ಸಂಬಂಧ ರಾಕೇಶ್ ಜೈನ್, ಮಹಾವೀರ್ ಜೈನ್ ಎಂಬುವವರ ಮೇಲೆ ಎಫ್ಐಆರ್ ದಾಖಲಾಗಿದೆ. ಚಿತ್ತಾಪುರದ ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ಹಾಗೂ ಮಾಜಿ ಶಾಸಕರ ಪುತ್ರನ ಜೊತೆ ಆರೋಪಿತರ ಸಂಪರ್ಕವಿದೆ. ಕಾರ್ಯಾಚರಣೆ ನಡೆದಿರುವುದು ರಾಜ್ಯದ ಆಸ್ತಿ ಉಳಿಸಿಕೊಳ್ಳುವುದಕ್ಕಾಗಿ. ಇದರಲ್ಲಿ ಬಿಜೆಪಿ ನಾಯಕರು ಶಾಮೀಲಾಗಿದ್ದಾರೆ. ಬಿಜೆಪಿಯವರು ದುಡ್ಡು ಮಾಡುವುದಕ್ಕೆ ಯಾವುದಕ್ಕೂ ಹೇಸುವುದಿಲ್ಲ ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕ ಪತ್ತೆ: ಸಚಿವ ಎಂಬಿ ಪಾಟೀಲ್ ಸುಳಿವು
ಬಿಜೆಪಿಯ ಎಂಎಲ್ಎಗಳ ಜೊತೆಗೆ ನಕಲಿ ಸೋಪ್ ತಯಾರಕ ಮಹಾವೀರ್ ಜೈನ್ ಇದ್ದಾನೆ. ಕನ್ನಡಿಗರು ಕಷ್ಟಪಟ್ಟು ಬೆವರು ಸುರಿಸಿ ಬಂಡವಾಳ ಹಾಕಿದ್ದನ್ನು ನಕಲಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಬಿಜೆಪಿಯ ಅಧಿಕೃತ ಪದಾಧಿಕಾರಿಗಳ ಜೊತೆಗೆ ಮಹಾವೀರ್ ಜೈನ್ ಇದ್ದಾನೆ. ಮಣಿಕಂಠ ರಾಥೋಡ್ಗೂ ನಕಲಿ ಸೋಪ್ ತಯಾರಿಕರಿಗೂ ಏನು ನಂಟು? ಪ್ರಥ್ವಿಸಿಂಗ್ ಸಲುವಾಗಿ ಎರಡು ದಿನ ಕಲಾಪ ಹಾಳು ಮಾಡಿದರು. ಈ ಪ್ರಥ್ವಿ ಸಿಂಗ್ ಪೊಲೀಸ್ ವಿಚಾರಣೆಗೆ ಹಾಜರಾಗುತ್ತಿಲ್ಲ. ಯಾಕೆ ಇವರೆಲ್ಲ ಬಿಜೆಪಿಯವರೇ ಸಿಗುತ್ತಾರೆ? ಎಂದು ಪ್ರಶ್ನಿಸಿದರು.
ಟಿಕೆಟ್ ಮಾರಾಟ ಮಾಡುತ್ತಿದ್ದಾರೆ ಎಂಬುದೆಲ್ಲ ಸತ್ಯ ಇರಬೇಕು. ರಾಜ್ಯದ ಆಸ್ತಿ ಮಾರಾಟ ಮಾಡುವವರುಗೆ ಬಿಜೆಪಿ ಟಿಕೆಟ್ ನೀಡುತ್ತದೆ. ಯಾದಗಿರಿಯಲ್ಲಿ 700 ಕ್ವಿಂಟಾಲ್ ಗರೀಬ್ ಕಲ್ಯಾಣ್ ಅಕ್ಕಿ ಬಿಜೆಪಿಯವರ ಗೋಡೌನ್ನಲ್ಲಿ ಸಿಕ್ಕಿದೆ. ಅಕ್ಕಿ ಕದ್ದವರನ್ನು ಪ್ರಧಾನಿ ಮೋದಿ ಪಕ್ಷದಲ್ಲಿ ಯಾಕೆ ಇಟ್ಕೊಂಡಿದ್ದೀರಿ? ಇವರ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ತೆಲಂಗಾಣ ಡಿಸಿಎಂ ಜೊತೆಗೆ ತನಿಖೆ ಮಾಡುವ ಬಗ್ಗೆ ಮಾತನಾಡಿದ್ದೇವೆ. ಆರೋಪಿತರ ತಪ್ಪಿಲ್ಲ ಅಂತ ಬಿಜೆಪಿಯವರು ಸಾಬೀತುಪಡಿಸಲಿ. ಎಂದು ಸವಾಲು ಎಸೆದರು.
ಬಿಜೆಪಿಯವರು ಯಾರೂ ರಾಮಾಯಣ ಓದಿಲ್ಲ. ಬಿಜೆಪಿಯವರಿಗೆ 4 ಸಾಲು ಹನುಮಾನ್ ಚಾಲೀಸಾ ಕೂಡ ಬರಲ್ಲ. ಬಿಜೆಪಿಯವರಿಗೆ ಪ್ರಾಣ ಪ್ರತಿಷ್ಠಾಪನೆಯ ಅರ್ಥವೇ ಗೊತ್ತಿಲ್ಲ. ಶಂಕರಾಚಾರ್ಯರ ಪೀಠದ ಶ್ರೀಗಳ ಪ್ರಶ್ನೆಗೆ ಉತ್ತರ ಕೊಡಲಿ ಸಾಕು. ಬಿಜೆಪಿ ನಾಯಕರಿಗೆ ಕಾಂಗ್ರೆಸ್ನವರು ಪ್ರಶ್ನೆ ಕೇಳುತ್ತಿಲ್ಲ. ಶಂಕರಾಚಾರ್ಯರು ಕೇಳಿದ ಪ್ರಶ್ನೆಗೆ ಬಿಜೆಪಿಯವರು ಉತ್ತರ ಕೊಡಲಿ ಎಂದರು.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ